spot_img
spot_img

ಅಕ್ಟೋಬರ್ 2, ಗಾಂಧಿ ಜಯಂತಿ ವಿಶೇಷ ಚಿಂತನ

Must Read

- Advertisement -

ಸತ್ಯ ಪಥದ ನಿತ್ಯ ಸಂತ ಇಂಟ್ರೋ ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಅತ್ಯಂತ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ನವ್ಯಜಗದ ಸಂತನೇ ಈ ಮಹಾತ್ಮಗಾಂಧೀಜಿ.

ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ ಎಂಬ ಹೆಗ್ಗಳಿಕೆ ಪಾತ್ರರಾದ ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಮಾತ್ರವಲ್ಲದೆ, ವಿಶ್ವದ ದೃಷ್ಟಿಯಲ್ಲಿಯೂ ಒಬ್ಬ ಅಸಾಮಾನ್ಯ ಮಹಾಪುರುಷರೆನಿಸಿಕೊಂಡಿದ್ದಾರೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ದೇಶಕ್ಕಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಇವರು ನಡೆಸಿದ ಅವಿರತ ಹೋರಾಟ, ಕೈಗೊಂಡ ನಿಲುವುಗಳು, ದೂರದೃಷ್ಟಿ ದೇಶದ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲು ಯೋಗ್ಯವೆನಿಸಿವೆ. ಸಮಾಜ, ರಾಜನೀತಿ, ಆರ್ಥಿಕ ವಿಚಾರಗಳು, ಸಂಸ್ಕøತಿ, ಜನಜೀವನ, ಸಾಹಿತ್ಯ ಹೀಗೆ ಒಂದಲ್ಲ ಹತ್ತು ಹಲವಾರು ವಿಷಯಗಳಲ್ಲಿ ಇವರ ಜಿಜ್ಞಾಸೆ ಪರಿಪಕ್ವಗೊಂಡು ಅವುಗಳ ಫಲಶೃತಿ ಭವ್ಯ ಭಾರತ ನಿರ್ಮಾಣದಲ್ಲಿ ಸಾರ್ಥಕವೆನಿಸಿವೆ.

ಭಾರತದ ಯುವಜನಾಂಗ ಗಾಂಧೀ ವಿಚಾರಧಾರೆಗಳಿಂದ ದೂರ ಸರಿಯುತ್ತ, ಪಾಶ್ಚಾತ್ಯ ಸಂಸ್ಕೃತಿಯ ದಾಸಾನುದಾಸರಾಗಿ, ನೆಲೆ ತಪ್ಪಿದ ಹಕ್ಕಿಗಳಂತೆ ಪರಿತಪಿಸುತ್ತಿರುವುದು ಹೆಚ್ಚಾಗುತ್ತಿರುವಂತೆಯೇ ಗಾಂಧೀವಾದ ಹಿಂದೆಂಗಿಂತ ಹೆಚ್ಚು ಪ್ರಸ್ತುತವಾಗುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿ ಕಂಡುಬರುತ್ತಿದೆ. ನಗರೀಕರಣ, ಆಧುನೀಕರಣ, ಖಾಸಗೀಕರಣ, ಜಾಗತೀಕರಣಗಳಲ್ಲಿ ಬೆಂದು ಬಸವಳಿದ ಪಾಶ್ಚಾತ್ಯರಿಗೆ ಗಾಂಧೀ ಚಿಂತನೆಗಳು ಮಂತ್ರದಂಡದಂತೆಯೂ ಗಾಂಧೀಜಿ ಆರಾಧ್ಯದೈವದಂತೆಯೂ ಗೋಚರಿಸತೊಡಗಿದ್ದಾರೆ.

- Advertisement -

‘ಹಿತ್ತಲ ಗಿಡ ಮದ್ದಲ್ಲ’ ಎನ್ನುವುದನ್ನು ಕಂಡು ನಿಷ್ಠೆಯಿಂದ ನಂಬಿ ಅನುಸರಿಸಿಕೊಂಡು ಬರುತ್ತಿರುವ, ಶಂಖದಿಂದ ಬಂದರೆ ಮಾತ್ರ ತೀರ್ಥ ಎಂದು ಕೈಯೊಡ್ಡಿ ನಮ್ಮಿಂದ ಅಲ್ಲಿಗೆ ಹೋಗಿ, ಅಲ್ಲಿಂದ ಬರುತ್ತಿರುವುದನ್ನು ಭಯಭಕ್ತಿಯಿಂದ ಸ್ವೀಕರಿಸಲು ಸಿದ್ಧರಾಗಿರುವ ನಾವು ಇನ್ನಾದರೂ ಗಾಂಧೀಜಿ ಮತ್ತು ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ಪ್ರಾಮಾಣಿಕತೆಯನ್ನೂ ವಿವೇಕವನ್ನೂ ತೋರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗಾಂಧೀಜಿಯವರ ಬರಹಗಳೇ ದೀವಟಿಗೆಗಳಾಗಿ ನಮಗೆ ದಾರಿ ತೋರಬೇಕಾಗಿದೆ.

ಯಂತ್ರಯುಗದ ಭರಾಟೆಯಲ್ಲಿ ಬಸವಳಿದು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮಾನವನ ಮನಸ್ಸನ್ನು ಪುನಶ್ಚೇತನಗೊಳಿಸುವ ಮತ್ತು ಸನ್ಮಾರ್ಗದಲ್ಲಿ ಕೊಂಡೊಯ್ಯುವ ದಿಶೆಯಲ್ಲಿ ಗಾಂಧಿ ಚಿಂತನೆಗಳು ಯಶಸ್ವಿಯಾಗಿವೆ. ಇಂತಹ ಉದಾತ್ತ ಚಿಂತನೆಯಿಂದ ಮನುಕುಲದ ಭವಿಷ್ಯದ ಹಾದಿಯನ್ನು ತಮ್ಮ ಅಸಾಧಾರಣ ಸಾಧನೆಯಿಂದ ತೋರಿದವರು ಇವರು. ಗಾಂಧಿ ಚಿಂತನೆಯ ಜಿಜ್ಞಾಸೆ ಮತ್ತು ಅಧ್ಯಯನಶೀಲತೆ ಇಂದು ವಿಶ್ವವ್ಯಾಪ್ತಿಯಾಗಿ ಗರೆಗೆದರಿವೆ.

- Advertisement -

ಇಂದಿನ ಜನಾಂಗ ಅವರ ಮೌಲಿಕ ಚಿಂತನೆಗಳನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಗಾಂಧೀಜಿಯವರ ಬದುಕು ಮತ್ತು ಚಿಂತನೆಗಳ ಸಂಸರ್ಗದಿಂದ ನಾಗರಿಕರ ವಿವೇಚನಾ ಶಕ್ತಿ ಶ್ರೀಮಂತವಾದರೆ ಆಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಮಹಾತ್ಮಾ ಗಾಂಧಿ ಶ್ರೀಮಂತರ ಮಗನಾಗಿ ಹುಟ್ಟಿದ್ದು, ತಂದೆ ಕರಮಚಂದ ಗಾಂಧಿ ಸಂಸ್ಥಾನದ ದಿವಾನರಾಗಿದ್ದರೂ ಅವರಲ್ಲಿನ ಆ ರಾಜಕೀಯ ಮಹತ್ವಾಕಾಂಕ್ಷೆ ಬಾಲಕರಾದ ಗಾಂಧೀಜಿಯವರಲ್ಲಿ ಬಹಳ ನಿಧಾನವಾಗಿ ಪುನಃ ವ್ಯಕ್ತವಾಯಿತು.

ತಮ್ಮ ಬಾಲ್ಯದಲ್ಲಿ ವಿದ್ಯಾಭ್ಯಾಸದ ಅವಧಿಯಲ್ಲಿಯೇ ಅಂತರಂಗದ ಜೀವಸತ್ತ್ವಗಳಾದ ನ್ಯಾಯಕ್ಕಾಗಿ ಹೋರಾಟ, ಸತ್ಯನಿಷ್ಠೆ ಇವು ಅವ್ಯಕ್ತರೂಪದಲ್ಲಿಯೋ ಅಥವಾ ಪ್ರಜ್ಞಾವಸ್ಥೆಯಲ್ಲಿಯೋ ಗಾಂಧೀಜಿಯವರಲ್ಲಿ ವ್ಯಕ್ತವಾಗುತ್ತಿತ್ತು. ತುಂಬಾ ಕೀಳರಿಮೆ, ಭಯ ಇತ್ಯಾದಿ ವಯೋಸಹಜ ಲಕ್ಷಣಗಳು ಸ್ವತಃ ತಮ್ಮಲ್ಲಿ ಇದ್ದರೂ ಪ್ರಚಂಡ ಆತ್ಮವಿಶ್ವಾಸದಿಂದ ಅವುಗಳನ್ನು ಮೆಟ್ಟಿನಿಂತವರು ಮಹಾತ್ಮಾ ಗಾಂಧೀಜಿ.

ಗಾಂಧೀಜಿಯವರು ಭಾರತ ದೇಶದಲ್ಲಿ ಜನಪ್ರಿಯರಾಗಲು ಪ್ರಮುಖವಾದ ಕಾರಣ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಶಾಂತಿ ಮತ್ತು ಅಹಿಂಸಾತ್ಮಕ ಚಳುವಳಿಗಳ ಮೂಲಕ. ಅದು ‘ತೆರಿಗೆ ನಿರಾಕರಣ ಹೋರಾಟ’ 250 ಮೈಲಿಗಳ ದಂಡಿಯ ಉಪ್ಪಿನ ಸತ್ಯಾಗ್ರಹವನ್ನು 1930ರ ಮಾರ್ಚ್‍ನಲ್ಲಿ ಹಾಗೂ 1942ರ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಈ ಎರಡು ಹೋರಾಟ ಇಡೀ ರಾಷ್ಟ್ರವೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿತ್ತು. ಗಾಂಧೀಜಿ ಅದೆಷ್ಟೋ ಬಾರಿ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಸೆರೆಮನೆ ವಾಸಗಳನ್ನು ಅನುಭವಿಸಿರುತ್ತಾರೆ. ಅದು ದಕ್ಷಿಣ ಆಫ್ರಿಕಾ ಇರಬಹುದು ಅಥವಾ ಭಾರತ ದೇಶ ಇರಬಹುದು.

ಮಹಾತ್ಮ ಗಾಂಧೀಜಿಯವರು ತಿಳಿದಿರುವಂತೆ ಶ್ರಮಿಕರ ಬದುಕು ನೈಜ ಬದುಕು. ಅರ್ಥಪೂರ್ಣ ಬದುಕು ಮತ್ತು ಸಾರ್ಥಕ ಬದುಕು. ಏಕೆಂದರೆ ಪ್ರಾಮಾಣಿಕವಾಗಿ ತನ್ನ ದೈಹಿಕ ಶ್ರಮವನ್ನು ತ್ಯಾಗಮಾಡಿ ತನ್ನ ಮತ್ತು ಸಂಸಾರದ ತುತ್ತಿಗಾಗಿ ಪ್ರಯತ್ನಿಸುವವನಾಗಿದ್ದಾನೆ. “ದುಡಿದು ತಿನ್ನು” ಎಂಬುದು ನೀತಿಶಾಸ್ತ್ರದ ಬೋಧನೆಯಾಗಿದೆ. ಸರ್ವೋದಯದ ಮುಖ್ಯ ಧ್ಯೇಯವಾದ “ಎಲ್ಲರ ಅಭ್ಯುದಯ” ಸಾಧಿಸಲ್ಪಟ್ಟಾಗ ಶ್ರಮಿಕನಿಗೆ ಕಲ್ಯಾಣ ಪ್ರಾಪ್ತಿಯಾಗುತ್ತದೆ. ಶ್ರಮಿಕ ಎಲ್ಲರಲ್ಲಿ ಒಬ್ಬ. ಎಲ್ಲಾ ಮಾನವರು ತನ್ನ ಜೀವನಕ್ಕೋಸ್ಕರ ದುಡಿದು ತಿನ್ನುವ ಹಕ್ಕುಳ್ಳವರಾಗಿದ್ದಾರೆ. ಅವರ ದೃಷ್ಠಿಯಲ್ಲಿ ಸರ್ವೋದಯ ನೈಜ ಪ್ರಜಾಪ್ರಭುತ್ಬ ಸೃಷ್ಠಿಗೆ ಕಾರಣವಾಗುತ್ತದೆ. ಆಗ ನಾವು ಜನರಲ್ಲಿ ಸಾಧುತ್ವ ಮತ್ತು ವಿವೇಕ ಸದ್ಗುಣಗಳನ್ನು ಕಾಣಬಹುದು ಮತ್ತು ಅವೆರಡು ಸದ್ಗುಣಗಳು ಸಮಾಜದ ಶ್ರೇಯೋಭಿವೃದ್ಧಿಗಾಗಿ ಕಾರ್ಯಾಚರಿಸಲು ಸಹಾಯವಾಗುವುವು. ಜನರ ಎಲ್ಲ ಚಟುವಟಿಕೆಗಳು ಅತ್ಯಂತ ಪವಿತ್ರದ ನೀತಿಯಾದ ಸತ್ಯವನ್ನು ಆಧರಿಸಿರಬೇಕು. ದೇಶದ ಎಲ್ಲಾ ಜನರ ಬದುಕು ನೀತಿ ಸ್ವದೇಶಿಯಾಗಿರಬೇಕು ‘ಭಾರತೀಯನಾಗಿರು ಸದಾ ದೇಶೀಯ ಉತ್ಪನ್ನಗಳನ್ನು ಬಳಸು’ ಎಂಬುದು ಮಹಾತ್ಮಾ ಗಾಂಧೀಜಿಯವರ ಉಪದೇಶವಾಗಿದೆ.

ಜನರು ತಮ್ಮ ಬದುಕನ್ನು ಪವಿತ್ರ ಬದುಕನ್ನಾಗಿಸಬೇಕಾದರೆ ಮತ್ತು ತ್ಯಾಗ ವೈರಾಗ್ಯ, ಪರೋಪಕಾರ ಮನೋಭಾವನೆ ನಮ್ಮಲ್ಲಿ ರೂಪಿಸಿಕೊಳ್ಳಬೇಕಾದರೆ, ಮಾದಕ ಪಾನೀಯಗಳಿಂದ ಹಾಗೂ ಮಾಂಸಾಹಾರದಿಂದ ದೂರ ಉಳಿಯಬೇಕು ಎಂದು ಮಹಾತ್ಮಾ ಗಾಂಧೀಜಿಯವರು ನಾಲ್ಕು ಪ್ರಮುಖ ವಿಷಯಗಳಿಗೆ ಪ್ರಾತಿನಿಧ್ಯವನ್ನು ನೀಡುತ್ತಾರೆ. ಅವುಗಳೆಂದರೆ ಅಹಿಂಸಾ ಮಾರ್ಗ, ನೆರೆಹೊರೆಯವರೊಂದಿಗೆ ಸಹೋದರತಾ ಭಾವನೆ ಮತ್ತು ಅವರಿಗೆ ಕೈಲಾದ ಸೇವೆಯನ್ನು ಒದಗಿಸುವುದು, ಎಲ್ಲಾ ಧರ್ಮಗಳನ್ನು ಗೌರವದಿಂದ ಕಾಣುವುದು ಮತ್ತು ಅಸ್ಪøಶ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ತೊಡೆದುಹಾಕುವುದು. ಈ ನಾಲ್ಕು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನಿಸಿದಾಗ ದೇಶದ ಮಿಲಿಯನ್‍ಗಟ್ಟಲೆ ಜನರ ನಡುವೆ ಸಹಕಾರ ಭಾವನೆ ಸೃಷ್ಟಿಸಲು ಸಾಧ್ಯ ಮತ್ತು ಅದರ ಪ್ರಯೋಜನದಿಂದ ದೇಶದಲ್ಲಿ ಸ್ವಾತಂತ್ರ್ಯಕ್ಕೋಸ್ಕರ ಜನರಲ್ಲಿ ಒಗ್ಗಟ್ಟು ಮೂಡಿಸಬಹುದು ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ.

ಎಲ್ಲಾ ಸಾಮಾಜಿಕ, ಆರ್ಥಿಕ ಮತ್ತು ದಾರ್ಶನಿಕ ಚಿಂತನೆಗಳು ಮುಂದಿನ ಜನಮಾನಸದಲ್ಲಿ ಗಾಂಧಿವಾದಕ್ಕೆ ಹಾದಿಕಂಡವು. ಪ್ರಾಯಶಃ ಗಾಂಧೀಜಿಯವರ ಬದುಕಿನ ಮತ್ತು ಚಿಂತನೆಯ ಪ್ರಸ್ತುತತೆ ಅಂದಿಗಿಂತ ಇಂದು ಹೆಚ್ಚು ಮಹತ್ವ ಪೂರ್ಣವಾದುದ್ದೆಂಬುದನ್ನು ನಾವು ಮರೆಯಬಾರದು.

(ಇತ್ತೀಚೆಗೆ ಪ್ರಕಟಗೊಂಡ ಯುವ ಲೇಖಕಿ ಸುಮ ಚಂದ್ರಶೇಖರ್ ರವರ ಗಾಂಧಿ ವ್ಯಕ್ತಿತ್ವ ದರ್ಶನ ಸಂಕಲನದ ‘ಸತ್ಯ ಪಥದ ನಿತ್ಯ ಸಂತ’ ಕೃತಿಯಿಂದ ಆಯ್ದ ಲೇಖನ)

ಸುಮ ಚಂದ್ರಶೇಖರ್.
29/1,5ನೇ ಕ್ರಾಸ್, ಈಜುಕೊಳ ಬಡಾವಣೆ, ಮಲ್ಲೇಶ್ವರ,ಬೆಂಗಳೂರು-03
ಮೊ 98800 60354

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group