spot_img
spot_img

ಇಂದು ಕನ್ನಡದ ಖ್ಯಾತ ಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿಯವರು ಜನಿಸಿದ ದಿನ

Must Read

- Advertisement -

ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.

ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,‌ ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.

ಡಾ.ಜಯಂತ್ ಕಾಯ್ಕಿಣಿ

ಜನನ:೨೪ ಜನವರಿ , ೧೯೫೫
ಗೋಕರ್ಣ, ಕಾರವಾರ, ಉತ್ತರ ಕನ್ನಡ, ಕರ್ನಾಟಕ

- Advertisement -

ವೃತ್ತಿ: ಬರಹಗಾರ, ಚಲನಚಿತ್ರ ಸಾಹಿತಿ

ಪ್ರಮುಖ ಪ್ರಶಸ್ತಿ(ಗಳು)

  • ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ

ಪ್ರಭಾವಗಳು

  • ಮಂಗೇಶ್ ವಿ. ನಾಡ್ಕರ್ಣಿ
  • ಸುಬ್ಬಣ್ಣ ಎಕ್ಕುಂಡಿ
  • ಗೌರೀಶ್ ಕಾಯ್ಕಿಣಿ
  • ಯಶವಂತ ಚಿತ್ತಾಲ್

ಮೊದಲ ದಿನಗಳು

ಜಯಂತ್, ಗೌರೀಶ ಕಾಯ್ಕಿಣಿ ‘ಶ್ರೀಮತಿ ಶಾಂತಾ ಕಾಯ್ಕಿಣಿ’ ದಂಪತಿಗಳ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ೨೪ ಜನವರಿ ೧೯೫೫ ರಂದು ಜನಿಸಿದರು. ಅವರ ತಂದೆ ಹೆಸರಾಂತ ಸಾಹಿತಿ, ವೃತ್ತಿಯಲ್ಲಿ ಅಧ್ಯಾಪಕರು ಕೂಡ.

ತಾಯಿಯವರು ಒಬ್ಬ ಅಧ್ಯಾಪಕಿ, ಹಾಗೂ ಸಮಾಜಸೇವಕಿ. ಜಯಂತ ಕಾಯ್ಕಿಣಿಯವರು ತಮ್ಮ ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಶಿಕ್ಷಣವನ್ನು ಗೋಕರ್ಣದ “ಭದ್ರಕಾಳಿ ವಿದ್ಯಾಸಂಸ್ಥೆ”ಯಲ್ಲಿ ಪೂರೈಸಿದರು. ಕಾಲೇಜಿನ ಬಿ.ಎಸ್ಸಿ. ತನಕದ ಪದವಿ ಶಿಕ್ಷಣವನ್ನು ಕುಮಟಾದ “ಬಾಳಿಗ ವಿದ್ಯಾಸಂಸ್ಥೆ”ಯಲ್ಲಿ ಪಡೆದುಕೊಂಡರು.

- Advertisement -

ಅ ನಂತರದ ಉನ್ನತ ಶಿಕ್ಷಣವನ್ನು ‘ಎಂ.ಎಸ್ಸಿ ಬಯೋಕೆಮಿಸ್ಟ್ರಿ’ಯಲ್ಲಿ, ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಚಿನ್ನದ ಪದಕ ಗಳಿಸುವುದರೊಂದಿಗೆ ೧೯೭೬ರಲ್ಲಿ ಪೂರೈಸಿದರು.”ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು”, “ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ”, “ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ”, “ಮಧುವನ ಕರೆದರೆ ತನು ಮನ ಸೆಳೆದರೆ”, “ನಿಂತಲ್ಲೆ ಹಾಳಾದೆ ನಿನ್ನಿಂದಲೇ”, ಎನ್ನುತ್ತಾ ೨೦೦೬ ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟ ಕವಿಯಾಗಿ ಪ್ರಖ್ಯಾತರಾಗಿದ್ದಾರೆ.

ವೃತ್ತಿಜೀವನ

‘ಜಯಂತ್,’ ತಮ್ಮ ಎಂ.ಎಸ್ಸಿ ಪದವಿಯ ನಂತರ ಮುಂಬಯಿಯಲ್ಲಿ ಫಾರ್ಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ, ಪ್ರಾಕ್ಟರ್-ಗ್ಯಾಂಬಲ್ ಮತ್ತು ಹೂಸ್ಟ್( Hoechst) ಎಂಬ ಕಂಪನಿಗಳಲ್ಲಿ ೧೯೭೭ ರಿಂದ ೧೯೯೭ರ ವರೆಗೆ ವೃತ್ತಿಕೆಲಸ ಮಾಡಿದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ, ಕನ್ನಡ ಸಾಹಿತ್ಯಸೇವೆಯನ್ನಂತೂ ಅವರು ಬಿಡಲಿಲ್ಲ.

  • ೧೯೮೨ರಲ್ಲಿ “ಕೋಟಿತೀರ್ಥ” ಎಂಬ ಕವನ ಸಂಕಲನ
    “ತೆರೆದಷ್ಟೆ ಬಾಗಿಲು” ಹಾಗೂ “ಗಾಳ” ಎಂಬ ಸಣ್ಣ ಕಥೆಗಳ ಎರಡು ಸಂಕಲನಗಳನ್ನೂ ಪ್ರಕಟಿಸಲಾಯಿತು.
  • ೧೯೮೭ರಲ್ಲಿ “ಶ್ರಾವಣ ಮಧ್ಯಾಹ್ನ” ಎಂಬ ಕವನ ಸಂಕಲನ
  • ೧೯೮೯ರಲ್ಲಿ “ದಗ್ಡೂ ಪರಬನ ಅಶ್ವಮೇಧ” ಎಂಬ ಸಣ್ಣ ಕಥಾಸಂಕಲನವನ್ನು ಪ್ರಕಟಿಸಲಾಯಿತು.
  • ೧೯೯೫ರಲ್ಲಿ “ಸೇವಂತಿ ಪ್ರಸಂಗ” ಎಂಬ ನಾಟಕ
  • ೧೯೯೬ರಲ್ಲಿ “ಅಮೃತಬಳ್ಳಿ ಕಷಾಯ” ಎಂಬ ಸಣ್ಣ ಕಥಾಸಂಕಲನ,
  • ೧೯೯೭ರಲ್ಲಿ “ನೀಲಿಮಳೆ” ಎಂಬ ಕವನ ಸಂಕಲನವನ್ನು ಪ್ರಕಟಿಸಲಾಯಿತು.
  • ೧೯೯೭ ರಿಂದ ೧೯೯೮ರ ವರೆಗೆ ಮುಂಬಯಿಯಲ್ಲಿ ಸ್ವತಂತ್ರ ಬರಹಗಾರನಾಗಿ (freelance copy writer) ‘ಲಿಂಟಾಸ್’, ‘ಮುದ್ರಾ’ ಮತ್ತು ‘ತ್ರಿಕಾಯ’ ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ೧೯೯೭ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಗಳನ್ನು ಚೀನಾ ದೇಶಕ್ಕೆ ಕಳುಹಿಸಿದಾಗ, ಅವರಲ್ಲೊಬ್ಬ ಪ್ರತಿನಿಧಿಯಾಗಿ, ಶ್ರೀ ಜಯಂತರವರನ್ನೂ ಆಯ್ಕೆ ಮಾಡಿ ಕಳುಹಿಸಿದ್ದರು. ಹೊರದೇಶಕ್ಕೂ ಆಗಿನ ಕಾಲದಲ್ಲಿಯೂ ಹೊಮ್ಮಿತ್ತು ನಮ್ಮ ಜಯಂತಣ್ಣನವರ ಪ್ರತಿಭೆಯ ಪ್ರಕಾಶ.
  • ೧೯೯೭ ರಿಂದ ೧೯೯೯ ರವರೆಗೆ ಈಟಿವಿ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ “ಬಣ್ಣದ ಕಾಲು” ಎಂಬ ಸಣ್ಣ ಕಥೆಗಳ ಸಂಕಲನವಿರುವ ಪುಸ್ತಕವನ್ನು ಪ್ರಕಟಿಸಲಾಯಿತು.

೨೦೦೦ ಬೆಂಗಳೂರಿನಲ್ಲಿ

ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದು, ವಿಜಯಕರ್ನಾಟಕ ಪಬ್ಲಿಕೇಷನ್ಸ್‍ರವರು ನಡೆಸುತ್ತಿದ್ದ “ಭಾವನಾ” ಎಂಬ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೮೪ರ ನವೆಂಬರ್ ೧೭ರಂದು ಅವರ ವಿವಾಹವಾಯಿತು.

ಪತ್ನಿ, ‘ಶ್ರೀಮತಿ ಸ್ಮಿತ’ರವರು ಮೂಲತಃ ಮುಂಬಯಿಯವರಾದರೂ, ಕನ್ನಡ ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಹೊಂದಿರುವರು. ಅವರೂ ಸಹ ವಿಶ್ಲೇಷಕ ರಸಾಯನ ಶಾಸ್ತ್ರದಲ್ಲಿ (analytical chemistry) ಚಿನ್ನದ ಪದಕ ಗಳಿಸಿದ ಬುದ್ಧಿವಂತೆ. ಆಕೆ ಮಿತಭಾಷಿ, ಸೌಮ್ಯ ಸ್ವಭಾವದವರು.

ಒಟ್ಟಿನಲ್ಲಿ ಹೇಳುವುದಾದರೆ, ಸಹೃದಯಿ ಶ್ರೀಜಯಂತರವರಿಗೆ ಅನುರೂಪಳಾದ ಪತ್ನಿ. ಅವರಿಗೆ “ಸೃಜನ” ಎಂಬ ಮಗಳು ಮತ್ತು “ಋತ್ವಿಕ್” ಎಂಬ ಇಬ್ಬರು ಮಕ್ಕಳು. ಮಗಳು ಈ ವರ್ಷದಲ್ಲಿ, ಅಂತಿಮ ಹಂತದ ವಾಸ್ತುಶಿಲ್ಪಶಾಸ್ತ್ರ ಇಂಜಿನಿಯರಿಂಗ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಅವರ ಮಗ ಪ್ರಥಮ ವರುಷದ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶ್ರೀ ಜಯಂತರವರು “ಭಾವನಾ” ಪತ್ರಿಕೆಗಾಗಿ ೨೦೦೧ರ ತನಕ ದುಡಿದರು. ಅಷ್ಟರಲ್ಲಿ ೨೦೦೧ರಲ್ಲಿ ಅವರಿಗೆ, ತಮ್ಮ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಬರಹಗಳಿಂದ, “ಋಜುವಾತು ಫೆಲೋಶಿಪ್” ದೊರಕಿತು. ೨೦೦೧ರಲ್ಲಿ ಅವರ “ಜತೆಗಿರುವನು ಚಂದಿರ” ಎಂಬ ನಾಟಕ ಮತ್ತು “ಬೊಗಸೆಯಲ್ಲಿ ಮಳೆ” ಎಂಬ ಆಂಕಣಗಳ ಸಂಗ್ರಹ(ಅವರೇ ಬರೆದಿರುವಂಥ ಹಲವು ಅಂಕಣಗಳನ್ನು ಒಟ್ಟು ಮಾಡಿ ಅಚ್ಚು ಹಾಕಿದ ಪುಸ್ತಕ)ಗಳನ್ನು ಪ್ರಕಟಿಸಲಾಯಿತು.

ಈ ಟೀವಿಯಲ್ಲಿ

೨೦೦೨ ರಿಂದ ೨೦೦೩ರ ತನಕ ಈಟಿವಿ ಕನ್ನಡವಾಹಿನಿಯಲ್ಲಿ ದಿನನಿತ್ಯ ಬೆಳಗ್ಗಿನ ಹೊತ್ತು ಪ್ರಸಾರವಾಗುತ್ತಿದ್ದ “ನಮಸ್ಕಾರ” ಎಂಬ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದ ಅವರ ಅಭಿಮಾನಿಗಳಿಗೆ ನೂರಕ್ಕೆ ನೂರು ಪ್ರತಿಶತ ಖಂಡಿತವಾಗಿಯೂ ಆರ್ಥ ವಾದೀತು. ಬಹಳಷ್ಟು ಪ್ರಸಿದ್ಧಿಯನ್ನು, ಅಪಾರ ಅಭಿಮಾನಿ ಬಳಗವನ್ನೂ, ಶ್ರೀ ಕಾಯ್ಕಿಣಿಯವರು ಈ ಕಾರ್ಯಕ್ರಮದಿಂದ ಗಳಿಸಿದರು. ಅವರು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪ್ರತಿ ೩೦ ಕಂತುಗಳಲ್ಲಿ, ಶ್ರೀ ಕುವೆಂಪು, ಶ್ರೀ ಶಿವರಾಮಕಾರಂತ, ಶ್ರೀ ದ.ರಾ.ಬೇಂದ್ರೆ ಮತ್ತು ಶ್ರೀ ರಾಜ್‍ಕುಮಾರ್(ಇವರೆಲ್ಲರೂ ತಮ್ಮ ಅನುಪಮ ಪ್ರತಿಭೆಯಿಂದ ನಮ್ಮ ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಎಲ್ಲೆಡೆಗೂ ಪಸರಿಸಲು ಕಾರಣೀಭೂತರಾದ ಮಹನೀಯರು) ಮುಂತಾದವರ ಬಗ್ಗೆ ಸಂದರ್ಶನ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಈ ಸಂದರ್ಶನಗಳು “ರಸಋಷಿಗೆ ನಮಸ್ಕಾರ”, “ಕಡಲಭಾರ್ಗವನಿಗೆ ನಮಸ್ಕಾರ”, “ಬೇಂದ್ರೆ ಮಾಸ್ಟರ್ ‍ಗೆ ನಮಸ್ಕಾರ” ಮತ್ತು “ನಟಸಾರ್ವಭೌಮನಿಗೆ ನಮಸ್ಕಾರ” ಎಂದು ಪ್ರಸಾರವಾದವು. ಈ ಸಂದರ್ಶನಗಳು ಮೇಲೆ ಹೆಸರಿಸಿದ ವಿಖ್ಯಾತರ ಜೀವನ, ಅವರ ದೃಷ್ಟಿಕೋನ, ಕನ್ನಡದ ಬಗ್ಗೆ ಅವರಿಗಿದ್ದ ಭಾಷಾಭಿಮಾನ, ಕನ್ನಡವನ್ನು ಬೆಳೆಸುವಲ್ಲಿ ಅವರೆಲ್ಲರಿಗಿದ್ದ ಉತ್ಸಾಹ, ಕನ್ನಡವನ್ನು ಜನರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸುವಂತೆ ಮಾಡುವಲ್ಲಿ ಅವರೆಲ್ಲರಿಗಿದ್ದ ಕಾಳಜಿ, ಅವರ ಅನ್ವೇಷಣೆಗಳು, ಹವ್ಯಾಸಗಳು ಮುಂತಾದ ಹಲವಾರು ವಿಷಯಗಳನ್ನು ಅವರೆಲ್ಲರ ಒಡನಾಡಿಗಳ ಮೂಲಕ ಜನರಿಗೆ ತಿಳಿಯುವಂತೆ ಮಾಡಿದವು.

ಝೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿ

ಅವರು ೨೦೦೫ – ೨೦೦೬ ರವರೆಗೆ ಝೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿ (Programming Head) ತಮ್ಮ ವೃತ್ತಿಯನ್ನು ಮುಂದುವರಿಸಿದರು. ೨೦೦೪ರಲ್ಲಿ “ಎಡಕಲ್ಲು ಗುಡ್ದದ ಮೇಲೆ” ಎಂಬ ಪುಟ್ಟಣ್ಣನವರ ಪ್ರಖ್ಯಾತ ಕನ್ನಡ ಚಲನಚಿತ್ರದ ನಟ “ಚಂದ್ರಶೇಖರ”ರವರು ನಿರ್ದೇಶಿಸಿದ “ಪೂರ್ವಾಪರ” ಎಂಬ ಕನ್ನಡ ಭಾಷೆಯ ಚಲನಚಿತ್ರವೊಂದು ಬಿಡುಗಡೆಯಾಗಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸಿತ್ತು. ಆ ಚಿತ್ರವೇ ನಮ್ಮ ಜಯಂತಣ್ಣನವರು ಪ್ರಥಮ ಬಾರಿಗೆ ಚಲನಚಿತ್ರವೊಂದಕ್ಕೆ ಹಾಡಿನ ಸಾಹಿತ್ಯ ಮತ್ತು ಸಂಭಾಷಣೆ ಬರೆದ ಚಿತ್ರ.

ಇದರ ನಡುವೆಯೂ ಅವರು ತಮ್ಮ ಸಾಹಿತ್ಯಕೃಷಿಯನ್ನಂತೂ ಕೈ ಬಿಡಲಿಲ್ಲ. ೨೦೦೪ರಲ್ಲಿ “ಆಕಾಶ ಬುಟ್ಟಿ” ಎಂಬ ನಾಟಕಕೃತಿಯು ಪ್ರಕಟವಾಯಿತು. (ಇದಕ್ಕಿಂತಲೂ ಮೊದಲು ಶ್ರೀ ಜಯಂತರವರು ಹೆಸರಾಂತ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿ ೧೯೭೯ರಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ” ಮೂರು ದಾರಿಗಳು” ಎಂಬ ಸಿನೆಮಾದಲ್ಲಿ ಕೆಲಸ ಮಾಡಿದ್ದರು. “ಬೆಟ್ಟದ ಜೀವ” ಎಂಬ ಶಿವರಾಂ ಕಾರಂತರ ಕಾದಂಬರಿ ಆಧಾರಿತ ಸಿನೆಮಾ ತಯಾರಿಯಲ್ಲಿ ೧೯೯೦ರಲ್ಲಿ ಭಾಗಿಯಾಗಿದ್ದರು. ಆದರೆ ಆ ಸಿನೆಮಾ ತಯಾರಿಯ ಅರ್ಧದಲ್ಲಿ ನಿಂತು ಹೋಯಿತು.)

ನಿಮಗೆಲ್ಲರಿಗೂ ಬಹು ಪರಿಚಿತವಾದ “ಚಿಗುರಿದ ಕನಸು” ಸಿನೆಮಾ ೨೦೦೪ರಲ್ಲಿ ಪ್ರದರ್ಶಿತವಾಯಿತು. ಅ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳ ಸಾಹಿತ್ಯ ಬರೆದದ್ದು ನಮ್ಮ ಕಾಯ್ಕಿಣಿಯವರೇ. ಈ ಚಲನಚಿತ್ರದ ಉತ್ತಮ ಸಂಭಾಷಣೆಗಾಗಿ ೨೦೦೪ರಲ್ಲಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.

೨೦೦೬ ರಲ್ಲಿ

‘ಜಯಂತ್ ಕಾಯ್ಕಿಣಿ, “ಮುಂಗಾರು ಮಳೆ” ಚಲನಚಿತ್ರಕ್ಕಾಗಿ ಕೆಲವು ಹಾಡುಗಳ ಸಾಹಿತ್ಯ ಬರೆದರು. ಹೀಗೆ ಈಗ ಜಯಂತ ಕಾಯ್ಕಿಣಿಯವರ ಹೆಸರು ಹೇಳಿದರೆ ಅಬಾಲವೃದ್ಧರೆಲ್ಲರೂ ಮೊದಲು ನೆನಪಿಸಿಕೊಳ್ಳುವುದು, ೨೦೦೬ರಲ್ಲಿ ಜನಮನಗಳ ಮನದಲ್ಲಿ ಅಭಿಮಾನದ ಹೊಳೆಯನ್ನು ಹರಿಸಿದ ನಿರ್ದೇಶಕ “ಯೋಗರಾಜ್ ಭಟ್” ರವರ ಸಿನೆಮಾ “ಮುಂಗಾರು ಮಳೆ”ಯ ಹಾಡುಗಳ ಸಾಹಿತ್ಯವನ್ನು.

ಆ ಹಾಡುಗಳು ಇಂದಿಗೂ ಜನಪ್ರಿಯ. “ಅನಿಸುತಿದೆ ಯಾಕೋ ಇಂದು” ಎಂಬ ಹಾಡಂತೂ ಚಿತ್ರ ರಸಿಕರ ಮನಕ್ಕೆ ಈಗಲೂ ಲಗ್ಗೆ ಹಾಕಿದೆ.ಮುಂಗಾರು ಮಳೆ ಚಿತ್ರದ ಹಾಡುಗಳು ಕಾಯ್ಕಿಣಿಯವರಿಗೆ ಇನ್ನೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುವ ಸಂದರ್ಭಗಳನ್ನು ಒದಗಿಸಿದವು.

ಇವರ ಪ್ರಖ್ಯಾತಿಯ ಕಿರೀಟಕ್ಕೆ ಇನ್ನೂ ಹಲವಾರು ಪ್ರಶಸ್ತಿಯ ಗರಿಗಳು ಲಭಿಸಿದವು. ಮುಂಗಾರು ಮಳೆಯ “ಅನಿಸುತಿದೆ ಯಾಕೋ ಇಂದು” ಹಾಡಿನ ಉತ್ತಮ ಸಾಹಿತ್ಯಕ್ಕಾಗಿ ೨೦೦೬ರಲ್ಲಿ ಮತ್ತೊಮ್ಮೆ ಜಯಂತರವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯು ದೊರಕಿತು. ಹಾಗೂ ಅದೇ ಹಾಡಿಗೆ, ಅದೇ ವರ್ಷ ಪುನಃ ಈಟಿವಿ ಕನ್ನಡ ವಾಹಿನಿಯ “ಉತ್ತಮ ಸಿನೆಮಾ ಸಾಹಿತಿ (ಬೆಸ್ಟ್ ಲಿರಿಸಿಸ್ಟ್)” ಪ್ರಶಸ್ತಿಯೂ ದೊರಕಿತು. ಮೈಸೂರ್ ಅಸೋಸಿಯೇಷನ್, ಮುಂಬಯಿ ನ, ೨೦೧೬ ರ ಸಾಲಿನ ಬಂಗಾರದ ಹಬ್ಬದ ದತ್ತಿ ಉಪನ್ಯಾಸಮಾಲೆಯ ಆಹ್ವಾನಿತ ಉಪನ್ಯಾಸಕಾರರಾಗಿ ತಮ್ಮ ಕಾರ್ಯವನ್ನು ನಡೆಸಿಕೊಟ್ಟರು.

ಗೌರವಗಳು

ನವೆಂಬರ್ ೧೮ ರಿಂದ ೨೦ರ ವರೆಗೆ ನಡೆದ ಆಳ್ವಾಸ್ ನುಡಿಸಿರಿ ಸಮ್ಮೇಳನದ ಉದ್ಘಾಟಕರು.

ಪ್ರಶಸ್ತಿಗಳು

ಶ್ರೀ ಕಾಯ್ಕಿಣಿಯವರ ಬರಹದ ಆಸಕ್ತಿ ಶುರುವಾಗಿದ್ದು ೧೯೭೦ ರಿಂದ. ಆಗಲೇ ಅವರು ಕವಿ, ಸಣ್ಣ ಕಥೆಗಳ ಬರಹಗಾರ, ನಾಟಕಕಾರ ಮತ್ತು ಅಂಕಣಕಾರ ಹೀಗೆ ನಾನಾ ರೂಪಧಾರಿ. ಕನ್ನಡ ಸಾಹಿತ್ಯದಲ್ಲಿ ಮೇರು ಪ್ರಶಸ್ತಿಯೆಂದು ಹೆಸರಾದ “ರಾಜ್ಯ ಸಾಹಿತ್ಯ ಅಕಾಡೆಮಿ”ಯ ಪುರಸ್ಕಾರವು, ಶ್ರೀ ಜಯಂತರವರಿಗೆ, ತಮ್ಮ ೧೯ನೇಯ ವಯಸ್ಸಿನಲ್ಲಿಯೇ, “ರಂಗದಿಂದೊಂದಿಷ್ಟು ದೂರ” ಎಂಬ ಕವನಸಂಕಲನಕ್ಕೆ ೧೯೭೪ರಲ್ಲಿ ಪ್ರಥಮ ಬಾರಿಗೆ ದೊರಕಿತು. ಅಸಾಧಾರಣ, ಅಭಿಜಾತ ಪ್ರತಿಭೆ ಅವರದು.

ತಂದೆಯೇ ಅವರಿಗೆ ಆದರ್ಶಪ್ರಾಯ, ಅವರೊಂದಿಗೆ ಯಶವಂತ ಚಿತ್ತಾಲರವರೂ ಸಹ ಜಯಂತರ ಮೇಲೆ ಬಹಳ ಪ್ರಭಾವ ಬೀರಿರುವರು. ಜನಸಾಮಾನ್ಯರ ಆಡುಭಾಷೆಗಳಲ್ಲಿ ಬರುವ ಪದಗಳನ್ನು ಮುತ್ತಿನ ಮಣಿಗಳಂತೆ ಜೋಡಿಸಿ, ಜನರ ಮನಸ್ಸಿನ ಆಳಕ್ಕೆ ಇಳಿಯುವಂತೆ ಸುಂದರ ಪದಮಾಲೆಗಳನ್ನು ಕಟ್ಟುವುದರಲ್ಲಿ ಕಾಯ್ಕಿಣಿಯವರು ನಿಷ್ಣಾತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ, ಸಾಹಿತ್ಯಗಳಲ್ಲಿ ಇವರು ಬರೆಯದ ಪ್ರಕಾರಗಳಿಲ್ಲ. ತಮ್ಮ ಸಾಹಿತ್ಯ ರಚನೆಗಳಿಗಾಗಿ ಮೂರು ಸಲ ರಾಜ್ಯಪ್ರಶಸ್ತಿ ಗಳಿಸಿದರು.

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೪ ಬಾರಿ : ೧೯೭೪ (೧೯ ವರ್ಷದ ವಯಸ್ಸಿನಲ್ಲಿದ್ದಾಗ) ೧೯೮೨, ೧೯೮೯ ೧೯೯೬
  • ೨೦೧೦ ರಲ್ಲಿ ಕುಸುಮಾಗ್ರಜ್ ರಾಷ್ಟ್ರೀಯ ಪ್ರಶಸ್ತಿ,
  • ೧೯೮೨ರಲ್ಲಿ “ತೆರೆದಷ್ಟೆ ಬಾಗಿಲು” ಎಂಬ ಸಣ್ಣ ಕಥೆಗಳ ಸಂಗ್ರಹ ಪ್ರಶಸ್ತಿ,
  • ೧೯೮೯ರಲ್ಲಿ “ದಗ್ಡೂ ಪರಬನ ಅಶ್ವಮೇಧ” ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪ್ರಶಸ್ತಿ,
  • ೧೯೯೬ರಲ್ಲಿ “ಅಮೃತ ಬಳ್ಳಿ ಕಷಾಯ” ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪ್ರಶಸ್ತಿ,
  • ೧೯೯೬ ರಲ್ಲಿ “ಅಮೃತಬಳ್ಳಿ ಕಷಾಯ”ಕ್ಕೆ, ಉತ್ತಮ ಸೃಜನಾತ್ಮಕ ಕಥೆಗಳಿಗಾಗಿ ಮೀಸಲಾಗಿರುವ ‘ರಾಷ್ಟ್ರೀಯ ಕಥಾ ಪ್ರಶಸ್ತಿ’,
  • ೧೯೯೭ರಲ್ಲಿ ‘ಬಿ.ಎಚ್.ಶ್ರೀಧರ್ ಕಥಾ ಪ್ರಶಸ್ತಿ,’
  • ೧೯೯೮ರಲ್ಲಿ “ನೀಲಿಮಳೆ” ಕವನಸಂಕಲನಕ್ಕೆ ‘ದಿನಕರ ದೇಸಾಯಿ ಕವನ ಪ್ರಶಸ್ತಿ’ ದೊರಕಿತು.
  • ೨೦೧೧ ರಲ್ಲಿ ‘ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್’,
  • ೨೦೧೯ ರಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್ ನಿಂದ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-೨೦೧೯
  • 2019ರಲ್ಲಿ ‘No presents please’ ಪುಸ್ತಕಕ್ಕೆ ದಕ್ಷಿಣ ಏಶ್ಯಾ ಸಾಹಿತ್ಯದ DSC ಪ್ರಶಸ್ತಿ.
  • ಚಲನಚಿತ್ರ ಪ್ರಶಸ್ತಿ: ದಕ್ಷಿಣ ಭಾರತಿಯ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಜಯಂತ್‍ರವರ ಹೆಸರನ್ನು ಸೂಚಿಸಲಾಗಿತ್ತು.

ಅತ್ಯುತ್ತಮ ಪತ್ಕಥಾ ಲೇಖಕ (೨೦೧೨) ‘ಅಣ್ಣ ಬಾಂಡ್ ಏನೆಂದು ಹೆಸರಿಡಲಿ’ – ಫಿಲ್ಮ್ಫೇರ್ ಪ್ರಶಸ್ತಿಗಳು :

ಅತ್ಯುತ್ತಮ ಪಟ್ಕಥಾ ಲೇಖಕ(೨೦೦೮) : ಗಾಳಿಪಟ–”ಮಿಂಚಾಗಿ ನೀನು ಬರಲು”

ಅತ್ಯುತ್ತಮ ಪಟ್ಕಥಾ ಲೇಖಕ (೨೦೦೯) : ಮನಸಾರೆ–”ಎಲ್ಲೋ ಮಳೆಯಾಗಿದೆ” – ನಾಮಾಂಕಿತವಾದ ಚಿತ್ರಗಳು :

ಅತ್ಯುತ್ತಮ ಪಟ್ಕಥಾ ಲೇಖಕ (೨೦೦೯) : ಮಳೆಯಲ್ಲಿ ಜೊತೆಯಲ್ಲಿ–”ನೀ ಸನಿಹಕೆ ಬಂದರೆ”

ಅತ್ಯುತ್ತಮ ಪಟ್ಕಥಾ ಲೇಖಕ (೨೦೧೦) : ಕೃಷ್ಣನ್ ಲವ್ ಸ್ಟೋರಿ– “ಹೃದಯವೆ”

ಕಲೆಕ್ಷನ್ ಆಫ್ ಮ್ಯುಸಿಂಗ್ಸ್ ಸಂಪಾದಿಸಿ ೨೦೦೬ರಲ್ಲಿ ಅವರ “ಶಬ್ದ ತೀರ್ಥ” ಎಂಬ ಅಂಕಣಗಳ ಸಂಗ್ರಹ ಪುಸ್ತಕವೂ(ಕಲೆಕ್ಷನ್ ಆಫ್ ಮ್ಯುಸಿಂಗ್ಸ್) ಪ್ರಕಟಗೊಂಡಿತು. “ದ್ವೀಪ” ಮತ್ತು “ರಮ್ಯಚೈತ್ರಕಾಲ” ಕನ್ನಡ ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ, “ಮಿಲನ”, “ಗೆಳೆಯ”, “ಈ ಬಂಧನ”, “ಗಾಳಿಪಟ”, “ಹುಡುಗಾಟ”, ನಾವು ಸ್ನೇಹಿತರೆಲ್ಲಾ ಜೊತೆ ಸೇರಿ ನಿರ್ಮಿಸಿದ “ಇಂತಿ ನಿನ್ನ ಪ್ರೀತಿಯ”, “ಕಾಮಣ್ಣನ ಮಕ್ಕಳು”, “ಮೊಗ್ಗಿನ ಮನಸ್ಸು”, “ಅರಮನೆ”, “ಮೆರವಣಿಗೆ”, “ಆತ್ಮೀಯ”,
“ಸೈಕೊ”, ಇತ್ತೀಚೆಗೆ ಬಿಡುಗಡೆಯಾದ “ಬೊಂಬಾಟ್” ಹೀಗೆ ಹಲವಾರು ಕನ್ನಡ ಚಿತ್ರಗಳಿಗೆ ಹಾಡಿನ ಸಾಹಿತ್ಯ ರಚಿಸಿದ್ದಾರೆ.
೨೦೦೭ರಲ್ಲಿ “ಮಿಲನ” ಚಿತ್ರದ “ನಿನ್ನಿಂದಲೇ” ಹಾಡಿನ ಉತ್ತಮ ಸಾಹಿತ್ಯಕ್ಕಾಗಿ “ಕಸ್ತೂರಿ ಸಿರಿಗಂಧ” ಪ್ರಶಸ್ತಿ ದೊರಕಿದೆ.

ಮತ್ತದೇ ವರುಷದಲ್ಲಿ “ಗೆಳೆಯ” ಚಿತ್ರದ “ಈ ಸಂಜೆ ಯಾಕಾಗಿದೆ” ಹಾಡಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ದೊರಕಿತು.
ಅದೇ ವರುಷದಲ್ಲಿ “ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ” ಎಂಬ ಸಂಸ್ಥೆ ಸಿನೆಮಾ ಮಾಧ್ಯಮದ “ಹಾಡಿನ ಸಾಹಿತ್ಯ” ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವವರಿಗೆ ಕೊಡುವ “ಚಾಣಕ್ಯ ಪ್ರಶಸ್ತಿ”

“ಅಮೃತ ಬಳ್ಳಿ ಕಷಾಯ” ಕಥಾ ಸಂಗ್ರಹವೂ ಆಂಗ್ಲ ಭಾಷೆಗೆ ಅನುವಾದಗೊಂಡು ” dots and lines” ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

ಕನ್ನಡ ಭಾಷೆಯಲ್ಲಿ ಅವರು ಬರೆದ ಲಾವಣಿ ಧಾಟಿಯ ಹಾಡುಗಳ ಸಂಗೀತ ಸಂಗ್ರಹಗಳ ಶ್ರವಣಸಂಚಿಕೆ( ಮ್ಯೂಸಿಕ್ ಆಲ್ಬ್ಂ) ಬಿಡುಗಡೆಯಾಗಲಿದೆ.

ಕೃತಿಗಳು

೨೦೦೩ರಲ್ಲಿ ಶ್ರೀ ಜಯಂತರವರ “ಜಯಂತ ಕಾಯ್ಕಿಣಿ ಕಥೆಗಳು” ಎಂಬ ಲಘು ಕಥೆಗಳ ಸಂಕಲನ ಪುಸ್ತಕ ಮತ್ತು “ಇತಿ ನಿನ್ನ ಅಮೃತ” ಎಂಬ ನಾಟಕವನ್ನೂ ಪ್ರಕಟಿಸಲಾಯಿತು. ೨೦೦೫ರಲ್ಲಿ ಅವರ “ತೂಫಾನ್ ಮೈಲ್” ಎಂಬ ಸಣ್ಣ ಕಥೆಗಳ ಸಂಗ್ರಹ ಪ್ರಕಟವಾಯಿತು. ೨೦೦೪ರಲ್ಲಿ “ಆಕಾಶ ಬುಟ್ಟಿ” ಎಂಬ ನಾಟಕಕೃತಿಯು ಪ್ರಕಟವಾಯಿತು.

ಕಥಾ ಸಂಗ್ರಹಗಳು

  • ತೆರೆದಷ್ಟೆ ಬಾಗಿಲು
  • ಗಾಳ
  • ದಗಡೂ ಪರಬನ ಅಶ್ವಮೇಧ
  • ಅಮೃತಬಳ್ಳಿ ಕಷಾಯ
  • ಬಣ್ಣದ ಕಾಲು
  • ತೂಫಾನ್ ಮೇಲ್
  • ಬೊಗಸೆಯಲ್ಲಿ ಮಳೆ (ಅಂಕಣ ಬರಹಗಳು)
  • ಶಬ್ದತೀರ (ಅಂಕಣ ಬರಹಗಳು)
  • ರಂಗದಿಂದೊಂದಷ್ಟು ದೂರ (ಕವನ ಸಂಕಲನ)
  • ಕೋಟಿತೀರ್ಥ (ಕವನ ಸಂಕಲನ)
  • ಶ್ರಾವಣ ಮಧ್ಯಾಹ್ನ (ಕವನ ಸಂಕಲನ).
  • ನೀಲಿ ಮಳೆ (ಕವನ ಸಂಕಲನ).
  • ಒಂದು ಜಿಲೇಬಿ (ಕವನ ಸಂಕಲನ)

ರಚಿಸಿದ ಚಿತ್ರಗೀತೆಗಳು

  • ” ಓ ಆಜಾರೆ” (“ಚಿಗುರಿದ ಕನಸು”)
  • ” ವಿ ಆರ್ ಒಕೆ” (ಪ್ರಸಾದ್)
  • ” ಈ ಸಂಜೆ ಏಕಾಗಿದೆ” (ಗೆಳೆಯ)
  • ” ನಿನ್ನಿಂದಲೇ” (ಮಿಲನ)
  • ” ಮಳೆ ನಿಂತು ಹೋದ ಮೇಲೆ”(ಮಿಲನ)
  • ” ಅನ್ನಿಸುತ್ತಿದೆ ಯಾಕೋ ಇಂದು” (ಮುಂಗಾರು ಮಳೆ)
  • ” ಕುಣಿದು ಕುಣಿದು ಬಾರೆ” (ಮುಂಗಾರು ಮಳೆ)
  • ” ಮಳೆ ಬರುವ ಹಾಗಿದೆ” (ಮೊಗ್ಗಿನ ಮನಸು)
  • ” ಮಧುವನ ಕರೆದರೆ” (ಇಂತಿ ನಿನ್ನ ಪ್ರೀತಿಯ)
  • ” ಬೆಳದಿಂಗಳಂತೆ ಮಿನುಗುತ” (Psycho)
  • ” ಹೇ ಮೌನ” (ಕೃಷ್ಣ)
  • ” ಮಿಂಚಾಗಿ ನೀನು” (ಗಾಳಿಪಟ)
  • ” ಪೂರ್ವ ಪರ”
  • ” ಮಧುರ ಪಿಸುಮಾತಿಗೆ” (ಬಿರುಗಾಳಿ)
  • ” ಮಳೆಯ ಹನಿಯಲ್ಲಿ” (ಜನುಮ ಜನುಮದಲ್ಲೂ)
  • ” ಯಾರೋ ಕೂಡ ನಿನ್ನ ಹಾಗೆ” (ಲವ್ ಗುರು)
  • ” ಎಲ್ಲೋ ಮಳೆಯಾಗಿದೆ” (ಮನಸಾರೆ)
  • ” ಒಂದು ಕನಸು” (ಮನಸಾರೆ)
  • ” ಒಂದೇ ನಿನ್ನ” (ಮನಸಾರೆ)
  •  ಚಲಿಸುವ ಚೆಲುವೆ” (ಉಲ್ಲಾಸ ಉತ್ಸಾಹ)
  • ” ನೀ ಸನಿಹಕೆ ಬಂದರೆ” (ಮಳೆಯಲ್ಲಿ ಜೊತೆಯಲ್ಲಿ)
  • ” ಕುಡಿ ನೋಟವೆ” (ಪರಿಚಯ)
  • ” ಹೂವಿನ ಬಾಣದಂತೆ ಯಾರಿಗೂ ಕಾಣದಂತೆ (ಬಿರುಗಾಳಿ)
  • ” ಅರಾಮಾಗಿ ಇದ್ದೆ ನಾನು (ಗೋಕುಲ)
  • ” ನೀನೆಂದರೆ ನನ್ನೊಳಗೆ (ಜಂಗ್ಲಿ)
  • ” ಹೃದಯವೆ ಬಯಸಿದೆ ನಿನ್ನನೆ” (ಕ್ರಿಷ್ಣನ್ ಲವ್ ಸ್ಟೋರಿ)
  • ” ನಿನ್ನ ಗುಂಗಲ್ಲಿ” (ಲೈಫು ಇಷ್ಟೇನೆ)
  • ” ಪರವಶನಾದೆನು” (ಪರಮಾತ್ಮ)
  • ” ಯೇನೆಂದು ಹೆಸರಿಡಲಿ” (ಅಣ್ಣ ಬಾಂಡ್)
  • ” ನೀರಲ್ಲಿ ಸಣ್ಣ” (ಹುಡುಗರು)
  • ” ಕಣ್ಣ ಮಿಂಚೆ ಜಾಹಿರಾತು ಕಲಿಯುವ ಹೃದಯಕೆ”(Victory)
  • ” ಜಿಯಾ ತೇರೆ ಜಿಯಾ ಮೇರೆ ” “(ಭಜರಂಗಿ)
  • ” ನಿನ್ನ ದನಿಗಾಗಿ ನಿನ್ನ ಕರೆಗಾಗಿ ” (ಸವಾರಿ ೨)
  • ” ಕಾಗದದ ದೋಣಿಯಲ್ಲಿ ” (ಕಿರಿಕ್ ಪಾರ್ಟಿ)
  • ” ಬದುಕಿನ ಬಣ್ಣವೆ ” (ಟಗರು)
  • ” ಜೀವಸಖೀ ” (ಟಗರು)
  • ” ಬಲ್ಮಾ ” (ಟಗರು)
  • ” ಗುಮ್ಮ ಬಂದ ಗುಮ್ಮ ” (ಟಗರು)

ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group