spot_img
spot_img

ಇವತ್ತಿನ ಚಿಂತನೆ: ಖಾಸಗಿ ಪ್ರಾಥಮಿಕ ಶಿಕ್ಷಕ/ಶಿಕ್ಷಕಿಯರ ಗತಿಯೇನು ?

Must Read

- Advertisement -

ಕೊರೋನಾ ದೆಸೆಯಿಂದಾಗಿ ಶಿಕ್ಷಣದ ಗತಿ ಅಧೋಗತಿಯಾಗಿದೆ. ಶಾಲಾ ಕಾಲೇಜುಗಳನ್ನು ಆರಂಭಿಸಬೇಕೋ ಬೇಡವೋ ಎಂದು ಅಳೆದು ತೂಗಿ ನೋಡಿದ ಶಿಕ್ಷಣ ಇಲಾಖೆ ಕೊನೆಗೂ ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸುತರಾಂ ನಕಾರ ಹೇಳಿದೆ.

ಕಳೆದ ಆರು ತಿಂಗಳುಗಳಿಂದ ಶಾಲೆಗಳು ಬಂದ್ ಆಗಿವೆ. ಶಿಕ್ಷಣವೆಂಬ ದೋಣಿ ಕೊರೋನಾ ಬಿರುಗಾಳಿಗೆ ಸಿಲುಕಿ ಹೊಯ್ದಾಟತೊಡಗಿದೆ. ಶಾಲೆ ಕಾಲೇಜುಗಳು ಬಂದ್ ಆಗಿ ಎಲ್ಲರೂ ಮನೆಯಲ್ಲಿಯೆ ಕುಳಿತು ಕಲಿಯುವುದು ಕಲಿಸುವುದು ನಡೆದಿದೆ. ಮಕ್ಕಳು ಮನೆಯಲ್ಲಿ ಕುಳಿತು ಆನ್ ಲೈನ್ ಕಲಿಕೆಗೆ ತೊಡಗಿದ್ದರೆ ಶಿಕ್ಷಕರೂ ಕೂಡ ಆನ್ ಲೈನ್ ನಲ್ಲಿಯೇ ಕಲಿಸತೊಡಗಿದ್ದಾರೆ. ಇದು ಸರ್ಕಾರಿ ಶಿಕ್ಷಕರು ಹಾಗೂ ಸರ್ಕಾರಿ ಶಾಲೆಯ ಮಕ್ಕಳ ಕತೆಯಾಯಿತು. ಶಾಲೆ ಶುರುವಾದರೂ ಬಂದ್ ಆದರೂ ಶಿಕ್ಷಕರಿಗೆ ಸಂಬಳವಂತೂ ಸಿಕ್ಕೇ ಸಿಗುತ್ತದೆ. ಆದರೆ ರಾಜ್ಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಕಲಿಸುತ್ತಿರುವ ಶಿಕ್ಷಕ/ ಶಿಕ್ಷಕಿಯರ ಬದುಕಿನ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿಲ್ಲ.

- Advertisement -

ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರುಗಳು ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸುವಲ್ಲಿ ತೋರಿಸಿರುವ ಆಸಕ್ತಿಯನ್ನು ಪ್ರಾಥಮಿಕ ಶಾಲಾ ಪ್ರಾರಂಭಕ್ಕೆ ತೋರಿಸುತ್ತಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಸಂಬಳ ಸರ್ಕಾರದಿಂದ ಬರುತ್ತದೆ ಆದರೆ ಖಾಸಗಿ ಸಂಸ್ಥೆಯವರು ಸರ್ಕಾರದ ಆದೇಶದ ನೆಪ ಹೇಳಿಕೊಂಡು ಶಾಲೆ ಆರಂಭಿಸುತ್ತಿಲ್ಲ ಅಲ್ಲಿ ಕಲಿಸಲು ಹೋಗುತ್ತಿದ್ದ ಬಡ ಶಿಕ್ಷಕ/ ಶಿಕ್ಷಕಿಯರು ಬೀದಿ ಪಾಲಾಗುವಂತಾಗಿದೆ.

ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಸುವವರು ಎನ್ ಟಿಟಿಸಿ, ಡಿ ಎಡ್ ಕಲಿತವರಿರುತ್ತಾರೆ. ಅಂಥವರಿಗೆ ಶಿಕ್ಷಣ ಸಂಸ್ಥೆಗಳು ಕೊಡುವ ಸಂಬಳ ತಿಂಗಳಿಗೆ 3000 ದಿಂದ 7000 ರೂ. ಗಳವರೆಗೆ ಇರುತ್ತದೆ. ಇಂಥ ಸಂಬಳಕ್ಕೆ ಕಲಿಸಲು ಹೋಗುವವರು ಬಡವರೇ ಆಗಿರುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಈಗ ಶಾಲೆಗಳು ಆರಂಭವಾಗದೆ ಖಾಸಗಿ ಸಂಸ್ಥೆಯವರು ಅವರನ್ನು ಶಾಲೆಗೆ ಕೂಡ ಕರೆಯುತ್ತಿಲ್ಲವೆಂಬುದು ಶಿಕ್ಷಕ ಶಿಕ್ಷಕಿಯರ ಅಳಲು.

ಕೆಲವರು ಅಷ್ಟೇ ಸಂಬಳದಲ್ಲಿ ಕುಟುಂಬಕ್ಕೆ ನೆರವಾಗುವವರಿರುತ್ತಾರೆ. ಸಾಲ ಸೋಲ ಮಾಡಿದವರಿರುತ್ತಾರೆ, ಕಲಿಸುವುದನ್ನು ಬಿಟ್ಟು ಬೇರೆ ಯಾವ ಕೆಲಸ ಬರದವರಿರುತ್ತಾರೆ ಅವರೇನು ಮಾಡಬೇಕು? ಪುರುಷರು ಬೇರೆ ಏನಾದರೂ ಕೆಲಸ ಮಾಡಿ ಜೀವನ ಸಾಗಿಸಬಹುದು. ಆದರೆ ಮನೆ ಬಿಟ್ಟು ಹೊರ ಹೋಗದ ಶಿಕ್ಷಕಿಯರು ಏನು ಮಾಡಬೇಕು ? ಖಾಸಗಿ ಸಂಸ್ಥೆಗಳು ಇದಕ್ಕೊಂದು ಪರಿಹಾರ ಹುಡುಕಬೇಕು. ಸರ್ಕಾರದ ಹೆಸರು ಹೇಳಿ ಶಾಲೆಯನ್ನು ಬಂದ್ ಮಾಡಿಕೊಂಡು ಕುಳಿತರೆ ಸಾಲದು ತಮ್ಮಲ್ಲಿ ಕಲಿಸಲು ಬರುತ್ತಿದ್ದ ಶಿಕ್ಷಕಿಯರ, ಅದರಲ್ಲೂ ಬಡ ಶಿಕ್ಷಕಿಯರ ಬದುಕಿಗೊಂದು ದಾರಿ ತೋರಬೇಕು.

- Advertisement -

ಶಿಕ್ಷಣ ಇಲಾಖೆ ಕೂಡ ಕಣ್ಣು ತೆರೆಯಬೇಕಾಗಿದೆ.ಕೊರೋನಾ ಮಾಹಾಮಾರಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆಯೇನೋ ನಿಜ. ಚಿಕ್ಕ ಮಕ್ಕಳಿಗಾಗಿ ಶಾಲೆ ತೆರೆಯಲಾಗುವುದಿಲ್ಲ ಅದೂ ಸರಿ ಆದರೆ ಮನೆಯಲ್ಲಿ ಮಕ್ಕಳಿರುವವರು ಹೊರಗೆ ಕೆಲಸ ಮಾಡಿ, ಕೆಲವರು ಊರ ತುಂಬಾ ತಿರುಗಾಡಿ ಹಾಗೆಯೇ ಮನೆಗೆ ಬರುವವರಿದ್ದಾರೆ ಅವರಿಂದ ಮಕ್ಕಳಿಗೆ ಕೊರೋನಾ ಬರುವುದಿಲ್ಲವೆ? ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುವವರು ಎಷ್ಣು ಜನ ಈ ಬಗ್ಗೆ ಕಾಳಜಿ ತೆಗೆದುಕೊಂಡಿರುತ್ತಾರೆ ? ಶಾಲೆಗೆ ಮಕ್ಕಳನ್ನು ಕಳಿಸುವುದರಿಂದಲೇ ಮಕ್ಕಳಿಗೆ ಕೊರೋನಾ ಬರುತ್ತದೆಯೆಂಬುದನ್ನು ಹೇಗೆ ಹೇಳಲಾಗುತ್ತದೆ.

ಈಗ ಕೊರೋನಾ ಸಲುವಾಗಿ ಶಾಲೆ ತೆರೆದಿಲ್ಲವೆಂದು ಮಕ್ಕಳೇನಾದರೂ ಮನೆಯಲ್ಲಿಯೇ ಇದ್ದಾವೆಯೆ ? ಓಣಿ ತುಂಬೆಲ್ಲ ಓಡಾಡಿಕೊಂಡಿವೆ, ಸಮೀಪದ ಮಾರುಕಟ್ಟೆಗೆ, ಪಾರ್ಕ್ ಗಳಿಗೆ, ಮಾಲ್ ಗಳಿಗೆ ಪಾಲಕರ ಜೊತೆ ಬಂದೇ ಬರುತ್ತಿವೆ. ಕೆಲವು ಮಕ್ಕಳಿಗೆ ಮಾಸ್ಕ್ ಕೂಡ ಇಲ್ಲ. ಇಷ್ಟೆಲ್ಲ ಸ್ವಾತಂತ್ರ್ಯ ಮಕ್ಕಳಿಗೆ ನೀಡಿರುವವರು ಮಕ್ಕಳನ್ನು ಶಾಲೆಗೆ ಕಳಿಸಲು ಯಾಕೆ ಹಿಂದೇಟು ಹಾಕುತ್ತಾರೆ ?

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಿಗಬೇಕಾದ ಶಿಕ್ಷಣ ಸಿಗಬೇಕು. ಇಲ್ಲದಿದ್ದರೆ ತಲೆಯಲ್ಲಿ ಹೋಗಬೇಕಾದ ವಿಷಯ ಹೋಗುವುದಿಲ್ಲ. ಈಗಲು ಕಾಲ ಮಿಂಚಿಲ್ಲ. ಕೆಲವು ಕಟ್ಟುನಿಟ್ಟಿನ ಕ್ರಮಗಳೊಂದಿಗೆ, ಸ್ವಚ್ಛತೆಯ ತಿಳಿವಳಿಕೆಯನ್ನು ಮಕ್ಕಳಿಗೆ ನೀಡುವುದು ಹಾಗೂ ಪಾಲಿಸಲು ಹೇಳುವುದರೊಂದಿಗೆ ಮತ್ತು ಕೊರೋನಾ ಬಗ್ಗೆ ತಿಳಿವಳಿಕೆ ನೀಡುವುದರೊಂದಿಗೆ ಒಂದು ಶಿಸ್ತನ್ನು ಪಾಲಿಸುತ್ತ ಮಕ್ಕಳಿಗಾಗಿ ಪ್ರಾಥಮಿಕ ಶಾಲೆಗಳನ್ನು ತೆರೆಯಬಹುದಾಗಿದೆ. ಖಾಸಗಿ ಆಡಳಿತ ಮಂಡಳಿಗಳಿಗೆ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಪಾಲನೆಗೆ ಆದೇಶ ನೀಡಿ ಶಾಲೆ ತೆರೆಯಲು ಪರವಾನಿಗೆ ನೀಡಬೇಕು. ತಪ್ಪಿದ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಖಾಸಗಿ ಪ್ರಾಥಮಿಕ , ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕ, ಶಿಕ್ಷಕಿಯರ ಬದುಕಿಗೆ ಒಂದು ಆಸರೆ ನೀಡಬಹುದು. ಶಿಕ್ಷಣ ಸಚಿವರು ಇತ್ತ ಗಮನ ಹರಿಸಲಿ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group