spot_img
spot_img

ಕನ್ನಡಪರ ಹೋರಾಟಗಾರ ಶ್ರೀ ಬಾಬುರಾಜ ರುದ್ರಗೌಡ ಪಾಟೀಲ(ಬಿ.ಆರ್)

Must Read

- Advertisement -

ಕನ್ನಡ ನಾಡು ಹೆಮ್ಮೆಯ ಬೀಡು.ಸುದೀಘ೯ ಇತಿಹಾಸವನ್ನು ಹೊಂದಿದ ಸಮೃದ್ದ ಸಿರಿವಂತ ನಾಡು.ತನ್ನದೇಯಾದ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶಾಲ ಭೂಪ್ರದೇಶವುಳ್ಳ ಬೀಡು.ಇದರಲ್ಲಿ ಉತ್ತರ ಕರ್ನಾಟಕ ಕನ್ನಡದ ಪ್ರಭಾವಿ ನೆಲ.

ಇಲ್ಲಿ ಸಾವಿರಾರು ಶರಣರೂ ಕವಿಗಳೂ ಆಗಿ ಹೋಗಿದ್ದಾರೆ. ಗಡಿನಾಡು ಬೆಳಗಾವಿ ಜಿಲ್ಲೆ ಕನ್ನಡ ನಾಡಿನ ಅವಿಭಾಜ್ಯ ಅಂಗ. ಇದು ಕನ್ನಡದ ಭದ್ರ ನೆಲೆ.ಇಂತಹ ಗಡಿನಾಡಿನಲ್ಲಿ ಕನ್ನಡ ಬೆಳೆಸಿದವರಲ್ಲಿ ಶ್ರೀ ಬಾಬುರಾಜ ರುದ್ರಗೌಡ ಪಾಟೀಲ ಒಬ್ಬರು.

ಶ್ರೀಯುತ ಬಾಬುರಾಜರು ಬೆಳಗಾವಿ ತಾಲೂಕಿನ ಮೊದಗೆ ಗ್ರಾಮದಲ್ಲಿ ೩೧/೦೭/೧೯೩೫ ರಂದು ಶ್ರೀ ರುದ್ರಗೌಡ ಮತ್ತು ಪಾವ೯ತಮ್ಮನವರ ಪ್ರೀತಿಯ ಸುಪುತ್ರನಾಗಿ ಜನಿಸಿದರು.ಬಾಲ್ಯದಲ್ಲಿ ತುಂಬಾ ಚತುರ ಚಾಣಾಕ್ಷನಾಗಿದ್ದ ಬಾಬುರಾಜರು ತಂದೆತಾಯಿಗಳ ಆದಶ೯ವನ್ನು ಮುಂದಿಟ್ಟುಕೊಂಡು ಬೆಳೆದವರು.

- Advertisement -

ಸನ್ ೧೯೪೯ ರಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಮೊದಗೆ ಮತ್ತು ಬೈಲಹೊಂಗಲ ತಾಲೂಕಿನ ತಿಗಡಿಯಲ್ಲಿ ಪಡೆದು ೧೯೫೨ ರಲ್ಲಿ ಪ್ರೌಢ ಶಿಕ್ಷಣವನ್ನು ಕನ್ನಡದ ಕೋಟೆ ಹಲವು ಕನ್ನಡ ಸಾಹಿತಿಗಳ ಉಗಮಸ್ಥಾನ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಜಿ.ಎ ಹೈಸ್ಕೂಲ್ ನಲ್ಲಿ ಮುಗಿಸಿ ಪ್ರಥಮ ದಜೆ೯ಯಲ್ಲಿ ತೇಗ೯ಡೆಯಾದರು.

ಈ ಪ್ರೌಢಶಾಲೆಯು ಬಾಬುರಾಜರಲ್ಲಿ ಕನ್ನಡದ ಶಕ್ತಿ ಮತ್ತು ಸ್ಫೂರ್ತಿಯನ್ನು ತುಂಬಿತು.ಬಾಲಕನಾಗಿದ್ದಾಗಲೇ ಏಕೀಕರಣದ ಮತ್ತು ವಿವಿಧ ಕನ್ನಡಪರ ಲೇಖನಗಳನ್ನು ಬರೆದಿದ್ದಾರೆ. ಬಾಬುರಾಜರು ಮತ್ತು ಬೆಳಗಾವಿಯ ಸಿದ್ದನಗೌಡ ಪಾಟೀಲರು ಸಮಕಾಲೀನರು.ಇಬ್ಬರು ಕೂಡಿ ವಿದ್ಯಾಥಿ೯ ಜೀವನದಲ್ಲಿಯೇ ಕನಾ೯ಟಕ ಏಕೀಕರಣದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತಿದ್ದರು.

ಪೋಲೀಸಿನ ಲಾಠಿ ಎಟುತಿಂದು ಬಂಧನಕ್ಕೊಳಪಟ್ಟಾಗ ಕನ್ನಡದ ಕಿಚ್ಚು ಹೆಚ್ಚಾಗತೊಡಗಿತು.ಮುಂದೆ ಕಾಲೇಜ ಶಿಕ್ಷಣವನ್ನು ಲಿಂಗರಾಜ್ ಕಾಲೇಜಿನಲ್ಲಿ೧೯೫೬ ರಲ್ಲಿ ,ಹುಬ್ಬಳ್ಳಿಯ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದು ೧೯೬೦ ರಲ್ಲಿ ಶಿಕ್ಷಣ ಮುಗಿಸಿದರು..ಆಗ ೦೧ ನವೆಂಬರ ೧೯೫೬ ರಲ್ಲಿ ಕನ್ನಡ ರಾಜ್ಯ ಉದಯವಾಯಿತು.

- Advertisement -

“ಉದಯವಾಗಲಿ ಚಲುವ ಕನ್ನಡ ನಾಡು” ಎನ್ನುವ ಹುಯಿಲಗೋಳ ನಾರಾಯಣರಾಯರ ಧ್ವನಿ ಅವರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿತು.ಮರಾಠಿ ಹಾವಳಿಯ ನಡುವೆ ಕನ್ನಡದ ಧ್ವಜ ಹಿಡಿದರು. ಇವರ ಇಂಜಿನಿಯರಿಂಗ್ ಫಲಿತಾಂಶ ಬರುವ ಮುನ್ನವೇ ಇವರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿಯ ಆದೇಶ ಬಂತು.

ಕೂಡಲೇ ಹಿಡಕಲ್ ರಾಜಾ ಲಖಮಗೌಡ ಜಲಾಶಯದ ನೀರಾವರಿಯ ಸಹಾಯಕ ಅಭಿಯಂತರಾಗಿ ಸೇವೆಗೆ ಹಾಜರಾದರು. ಮುಂದೆ ಯು.ಪಿ.ಎಸ್.ಸಿ ಪರೀಕ್ಷೆಗೆ ಕುಳಿತು ಪ್ರಥಮ ದಜೆ೯ಯ ಇಂಜಿನಿಯರಾಗಿ ನಿಯುಕ್ತಿಗೊಂಡು ದಿಲ್ಲಿಯ ಕೇಂದ್ರೀಯ ನೀರು ಮತ್ತು ವಿದ್ಯುತ್ ಶಕ್ತಿಯ ಆಯೋಗದಲ್ಲಿ ಸಹಾಯಕ ನಿದೇ೯ಶಕರಾಗಿ ಆಯ್ಕೆಯಾಗಿ ಮೂರು ವಷ೯ ಸೇವೆ ಸಲ್ಲಿಸಿದರು.

ತದನಂತರ ನಿಪ್ಪಾಣಿಯ ಸುಸಂಸ್ಕೃತ ಮನೆತನದ ಸೌ ಸುಶೀಲಾ ಅವರೊಂದಿಗೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಕೌಟುಂಬಿಕ ಕಾರಣಕ್ಕಾಗಿ ನೌಕರಿ ತೊರೆದು ತನ್ನ ಧಮ೯ಪತ್ನಿಯ ಊರಾದ ನಿಪ್ಪಾಣಿಗೆ ೧೯೬೮ ರಲ್ಲಿ ಆಗಮಿಸಿದರು. ೧೯೬೮ ರ ವರೆಗೆ ಮೊಳಕೆಯಂತಿದ್ದ ಕನ್ನಡದ ಅಭಿಮಾನ ಬರುಬರುತ್ತಾ ಬೆಳೆಯತೊಡಗಿತು.ಅವರು ನಿಪ್ಪಾಣಿಗೆ ಬಂದಾಗ ಎಲ್ಲವೂ ಮರಾಠಿಮಯ.ಕನ್ನಡದ ಪದವಿಲ್ಲದ ಸ್ಥಳ.ನುಡಿಗೆ ನೆಲೆಯಿಲ್ಲ ಕಲೆಗೆ ಬೆಲೆಯಿಲ್ಲದ ಸಮಯ.

ಕನ್ನಡದ ಹೋರಾಟದಲ್ಲಿ ಬಾಬುರಾಜರಿಗೆ ಇದೆಲ್ಲವು ನೋಡಿ ಕನ್ನಡದ ರಕ್ತ ಕುದಿಯತೊಡಗಿತು.ಸಾಮರಸ್ಯದಿಂದ ಕನ್ನಡ ಬೆಳೆಸುವ ಸಂಕಲ್ಪ ಮಾಡಿದರು.ನಡೆನುಡಿ ಕನ್ನಡವಾಗಿಸಿ ದಿವಂಗತ ಬಸವಪ್ರಭು ನೆಷ್ಠಿ ಅವರ ಗರಡಿಯಲ್ಲಿ ಪಳಗಿ ಬೆಳಗಿ ಬಂದವರು.ಸದಾ ಕನ್ನಡದ ಚಿಂತೆ.

ಮುಂದೆ ನಿಪ್ಪಾಣಿಗೆ ಆಗಮಿಸಿದ ಬಾಬುರಾಜರು ತಮ್ಮ ಮಾವನವರ ತಂಬಾಕು ವ್ಯವಸಾಯವನ್ನು ಮಾಡಹತ್ತಿದರು.ಕೃಷಿ ಮಾಡುತ್ತಾ ಮುಂದೆ ೧೯೬೯ ದಿಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆದಾರನಾಗಿ ಕೆಲಸ ಪ್ರಾರಂಭಿಸಿದರು.ನಿಪ್ಪಾಣಿ ಬಾಗೇವಾಡಿ ಮಹಾವಿದ್ಯಾಲಯದ ವಿದ್ಯಾರ್ಥಿ ನಿಲಯದ ಪ್ರಥಮ ಗುತ್ತಿಗೆ ಕೆಲಸ ಹಿಡಿದು ಕಡಿಮೆ ಖಚಿ೯ನಲ್ಲಿ ನಿಮಿ೯ಸಿಕೊಟ್ಟರು.

ಮುಂದೆ ಸಾವ೯ಜನಿಕವಾಗಿ ಗುರುತಿಸಿಕೊಂಡ ಇವರು ನಿಪ್ಪಾಣಿ ಕನ್ನಡದ ಹಿರಿಯರ,ಸಂಘಟನೆಗಳ ಒಡನಾಡಿಯಾಗುತ್ತಾ ೧೯೭೦ ರಲ್ಲಿ ಕನ್ನಡದ ಸಂಸ್ಥೆ ವಿದ್ಯಾ ಸಂವಧ೯ಕ ಮಂಡಳದ ಸಂಚಾಲಕರಾಗಿ ಆಯ್ಕೆಯಾಗಿ ಅದೇ ವಷ೯ ಪದವಿಪೂವ೯ ಕಾಲೇಜು ಪ್ರಾರಂಭಿಸುವಲ್ಲಿ ಪರಿಶ್ರಮಪಟ್ಟಿದ್ದಾರೆ.ಕನ್ನಡದ ಕಾವಲುಗಾರರಾಗಿ ಕನ್ನಡದ ಹಿತ ಕಾಯ್ದಿದ್ದಾರೆ.

ಮುಂದೆ ೧೯೮೭ ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಬೆಂಗಳೂರಿನಲ್ಲಿ ನಾಡೋಜ ಪಾಟೀಲ್ ಪುಟ್ಟಪ್ಪ,ಕನ್ನಡದ ಸೇನಾನಿ ಬಸವಪ್ರಭು ನೇಷ್ಠಿಯವರೊಂದಿಗೆ ಭೇಟಿಯಾಗಿ ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪಿಸಲು ಶ್ರಮಪಟ್ಟಿರುವರು.ಬೇಡಿಕೆಯನ್ನು ಹಿಡಿದು ಹೊರಟರೆ ಮಂಜೂರು ಪಡೆಯದೇ ಬಿಡುತ್ತಿರಲಿಲ್ಲ ನೇಷ್ಠಿ ಮತ್ತು ಬಾಬುರಾಜರು.ಈ ಜೋಡಿ ಕನ್ನಡದ ಏಳಿಗೆಗೆ ಹಗಲಿರುಳು ದುಡಿದಿದೆ.೧೯೮೬ ರಲ್ಲಿ ಬಸವ ಪುತ್ಥಳಿಯ ಸಮೀಪ ಮರಾಠಿಗರು ದಂಗೆ ಮಾಡಿ ವಾಹನಗಳನ್ನು ಸುಟ್ಟು ಅಂಗಡಿಗಳಿಗೆ ಕಲ್ಲು ತೂರಾಟ,ನನ್ನ ಮನೆಗೂ ಕಲ್ಲನ್ನು ಎಸೆದಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಬಾಬುರಾಜರು.

ಅಂದೇ ರಾತ್ರಿ ನೋವಿನ ದುಗುಡದಲ್ಲಿ ಬಸವಪ್ರಭು ನೇಷ್ಠಿ ಅವರೊಂದಿಗೆ ಕೂಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಅಂದಿನ ಪೋಲಿಸ್ ಅಧಿಕಾರಿ ಬಿ.ಎನ್.ಗರುಡಾಚಾರ್ ಅವರನ್ನು ಭೇಟಿಯಾಗಿ ಗಡಿ ಕನ್ನಡಿಗರ ನೋವಿನ ವಿವರ ನೀಡಿದಾಗ ಕನ್ನಡದ ರಕ್ಷಕನಾದ ಆ ಅಧಿಕಾರಿ ನಿಪ್ಪಾಣಿಗೆ ಬಸವೇಶ್ವರ ಪೋಲೀಸ್ ಠಾಣೆ ಮತ್ತು ಸಿ.ಪಿ.ಆಯ್ ಕಾಯಾ೯ಲಯ ಮಂಜೂರು ಮಾಡಿ ಒಂದು ವಾರದ ಒಳಗಾಗಿ ಸ್ವತಹ ನಿಪ್ಪಾಣಿಗೆ ಆಗಮಿಸಿ ಉದ್ಘಾಟಿಸಿದ್ದರು ಎನ್ನುವುದು ಇತಿಹಾಸದ ಪುಟ ಸೇರಿದೆ.ಕನ್ನಡದ ಕಾಯಕಕ್ಕಾಗಿ ಬಸವಪ್ರಭು ನೇಷ್ಠಿಯವರ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದ ಇವರದೂ ಸಾಥ೯ಕ ಬದುಕು.ತನ್ನ ಜೀವಮಾನದಲ್ಲಿ ಎಂದೂ ಕನ್ನಡಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ.

ಇಲ್ಲಿಗೆ ಕನ್ನಡದ ಸೇವೆ ನಿಲ್ಲಿಸದ ಇವರು ೧೯೮೬ ರಲ್ಲಿಯೇ ನಿಪ್ಪಾಣಿಯಲ್ಲಿಯೇ ಕನ್ನಡ ಮತ್ತು ಸಂಸ್ಕೃತಿಕ ಸಂಘವನ್ನು ಸ್ಥಾಪಿಸಿ ಬಸವಪ್ರಭು ನೇಷ್ಠಿ ಅವರು ಅಧ್ಯಕ್ಷರಾಗಿ ಬಾಬುರಾಜ ಪಾಟೀಲರು ಉಪಾಧ್ಯಕ್ಷರಾಗಿ ಕನ್ನಡದ ಸೇವೆ ಸಲ್ಲಿಸಿದ್ದಾರೆ.ವೀರಶೈವ ಸಮಾಜದ ಕ್ರೀಯಾಶೀಲ ಸದಸ್ಯರಾಗಿ ಸಮಾಜಕ್ಕಾಗಿಯೂ ದುಡಿದಿದ್ದಾರೆ.

ಮುಂದುವರೆದೂ೧೯೯೦ ರಲ್ಲಿ ಗಡಿನಾಡು ಚಿತ್ರಕಲಾ ಮಹಾವಿದ್ಯಾಲಯ ಸ್ಥಾಪಿಸಿ ಕಲೆಯ ಬೆನ್ನು ತಟ್ಟಿದ್ದಾರೆ.ನಿಪ್ಪಾಣಿ ನಗರದ ಹೃದಯಭಾಗದಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಪ್ರತಿಷ್ಠಾಪನೆ ಸಮಿತಿಯ ಉಪಾಧ್ಯಕ್ಷರಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.

ನಂತರ ವಿದ್ಯಾಸಂವಧ೯ಕ ಮಂಡಳದ ಸದಸ್ಯರಾಗಿ ಮತ್ತು ಉಪಕಾಯಾ೯ಧ್ಯಕ್ಷರಾಗಿ ಹತ್ತು ವಷ೯ ಸೇವೆ ಸಲ್ಲಿಸಿರುವರು.ಮಧ್ಯದ ಕೆಲವು ಅವಧಿಯಲ್ಲಿ ಸಂಸ್ಥೆಯಿಂದ ದೂರ ಉಳಿದು ಎಕಾಂತದತ್ತ ಜಾರಿ ಸಮಾಜ ಸೇವೆಯಲ್ಲಿ ತಲ್ಲಿನರಾಗುತ್ತಾರೆ.ಪುನ ದಿ.ಸೋಮಶೇಖರ ಕೋಠಿವಾಲೆಯವರ ಕೋರಿಕೆಯಂತೆ ೨೦೦೪ ರಿಂದ ೨೦೧೪ ರ ವರೆಗೆ ಸಂಚಾಲಕರಾಗಿ ಉಪಾಧ್ಯಕ್ಷರಾಗಿ ಸೇವೆಗೈದು ಕನ್ನಡವ ಬೆಳೆಸುತ್ತಾ ೨೦೧೪ ರಿಂದ ಇಲ್ಲಿಯವರೆಗೆ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.

ತನ್ನ ಜೀವನದಲ್ಲಿ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಬದುಕಿ ಕನ್ನಡದ ವಿಷಯ ಬಂದಾಗ ಯಾವುದಕ್ಕೂ ರಾಜಿಯಾಗದ ಅಪ್ಪಟ ಕನ್ನಡಿಗ ಇವರು.ಮುಂದೆ ೨೦೧೦ ರಲ್ಲಿ ಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸುವ ಸ್ಥಳದ ತಾಂತ್ರಿಕ ಅಡಚಣೆಯಾದಾಗ ಅಂದಿನ ಕಂದಾಯ ಮಂತ್ರಿಗಳಾದ ಕರುಣಾಕರರೆಡ್ಡಿ ಅವರಿಗೆ ತಮ್ಮ ಸಂಬಂಧಿಕರ ಮೂಲಕ ತಿಳಿಹೇಳಿ ಅಡಚಣೆಗಳನ್ನು ದೂರ ಮಾಡಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಹಲವಾರು ಸಾಹಿತಿಗಳ ಒಡನಾಟದಲ್ಲಿದ್ದವರು.

ಇದಲ್ಲದೇ ಕನ್ನಡ ಸೇವೆಗೆ ಪೂರಕವೆಂಬಂತೆ ಚಿಕ್ಕೋಡಿ ತಾಲೂಕಾ ಒಕ್ಕಲುತನ ಹಿಡುವಳಿ ಮಾರುಕಟ್ಟೆ ಸಂಘದ ನಿದೇ೯ಶಕರಾಗಿ,ರೋಟರಿ ಕ್ಲಬ್ ಮತ್ತು ವೀರಶೈವ ಸಮಾಜದ ಅಧ್ಯಕ್ಷರಾಗಿ,ಬಸವ ಪುತ್ಥಳಿ ಸ್ಥಾಪನಾ ಸಮಿತಿ ಮತ್ತು ಚಿಕ್ಕೋಡಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣಾ ಸಮಿತಿಯ ಉಪಾಧ್ಯಕ್ಷರಾಗಿ ಗಡಿನಾಡು ಕನ್ನಡ ಬಳಗದ ಮಾಗ೯ದಶಿ೯ ಸಲಹಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಅಮೇರಿಕಾ,ಯುರೋಪ,ದಕ್ಷಿಣ ಪೂವ೯ ಏಶಿಯಾ,ಚೀನಾ ಹಾಂಕಾಂಗ್ ನೇಪಾಳ ಮುಂತಾದ ವಿದೇಶಿ ಪ್ರಯಾಣ ಮಾಡಿ ಅಲ್ಲಿಯೂ ಕನ್ನಡದಲ್ಲಿ ಮಾತನಾಡಿ ಕನ್ನಡದ ನಾಡು ನುಡಿ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ..

ಸದಾ ಕನ್ನಡವನ್ನೆ ಊಸಿರಾಗಿಸಿಕೊಂಡು ಜೀವನ ಸಾಗಿಸುತ್ತಿರುವ ಇವರು ನಮಗೆಲ್ಲಾ ಮಾಗ೯ದಶ೯ಕರು. ಪ್ರಸ್ತುತ ವಿದ್ಯಾಸಂವಧ೯ಕ ಮಂಡಳದ ಅಧ್ಯಕ್ಷರಾಗಿ ಕನ್ನಡಕ್ಕಾಗಿ ಹುಟ್ಟಿದ ಸಂಸ್ಥೆಯಲ್ಲಿ ಕನ್ನಡದ ಡಿಂಡಿಮ ಬಾರಿಸುತಿದ್ದಾರೆ. ಸದಾ ನಮಗೆ ಕನ್ನಡದ ಹಿತಚಿಂತನವನ್ನು ನೀಡುತ್ತಾ ಹಿಂದಿನ ಕನ್ನಡದ ಸ್ಥಿತಿ ನಡೆದ ಹೋರಾಟಗಳನ್ನು ಮೆಲುಕು ಹಾಕಿ ನಮ್ಮಲ್ಲೂ ಕನ್ನಡದ ಅಭಿಮಾನ ಬೇರುರುವಲ್ಲಿ ಕಾರಣರಾಗಿದ್ದಾರೆ.

ಇಂತಹ ಅಪರೂಪದ ಕನ್ನಡದ ಹೋರಾಟಗಾರನ ಕನ್ನಡದ ಕಾಯ೯ ಕಂಡು ೨೦೧೬ ರಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು ಬೆಳಗಾವಿಯವರು ಅವರ ಜೀವಮಾನ ಸಾಧನೆಗಾಗಿ “ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ ” ನೀಡಿ ಗೌರವಿಸಿದೆ.ದಿವಂಗತ ಬಸವಪ್ರಭು ನೇಷ್ಠಿಯವರೊಂದಿಗೆ ಪ್ರತಿ ಕನ್ನಡದ ಕಾಯಕದಲ್ಲಿ ಪಾಲ್ಗೊಂಡು ಕನ್ನಡ ಪ್ರೇಮ ಮೆರೆದಿದ್ದಾರೆ.ಗಡಿ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಶ್ರಮಪಟ್ಟಿದ್ದಾರೆ.

ಮರಾಠಿ ಅಬ್ಬರದ ನಡುವೆ ಕನ್ನಡದ ಸೇನಾನಿಯಾಗಿ ಬಂದು ನಿಪ್ಪಾಣಿ ಕನ್ನಡದ ತಾಣವಾಗುವಲ್ಲಿ ಇವರ ಪರಿಶ್ರಮ ತುಂಬಾನೆ ಇದೆ.ಇಂದು ನಿಪ್ಪಾಣಿ ಕನ್ನಡಮಯವಾಗಿದೆ ಎಂದರೆ ಇವರು ಅದಕ್ಕೆ ಕಾರಣರು. ೮೬ ರ ಇಳಿವಯಸ್ಸಿನಲ್ಲಿಯೂ ಕನ್ನಡದ ಸೇವೆ ಮಾಡುತ್ತಿರುವ ಇವರಿಗೆ ಕನ್ನಡಾಂಬೆ ಉತ್ತಮ ಆರೋಗ್ಯ ನೀಡಲಿ ಎಂದು ಭಕ್ತಿಯಿಂದ ಪ್ರಾಥಿ೯ಸಿ ಹಿರಿಯ ಜೀವಿಗೆ ಪ್ರಣಾಮಗಳನ್ನು ಅಪಿ೯ಸಿ ಕನ್ನಡ ರಾಜ್ಯೋತ್ಸವ ಈ ಸಮಯದಲ್ಲಿ ಅವರನ್ನು ಭಕ್ತಿಯಿಂದ ಸ್ಮರಿಸೋಣ

ಮಾಹಿತಿ:

  • ಶ್ರೀ ಬಿ.ಆರ್.ಪಾಟೀಲ
  • ಶ್ರೀ ಎಸ್.ಎಂ.ಪುರಾಣಿಕಮಠ
  • ಶ್ರೀ ಅನಿಲ್ ನೇಷ್ಠಿ
  • ಶ್ರೀ ಮಾರುತಿ ಕೊಣ್ಣುರಿ

ಲೇಖಕ

ಪ್ರೋ ಮಿಥುನ ಅಂಕಲಿ
ಖಡಕಲಾಟ

ಸಹಯೋಗ:

  • ಕನ್ನಡ ಸಾಹಿತ್ಯ ಪರಿಷತ್ತು
  • ಶರಣ ಸಾಹಿತ್ಯ ಪರಿಷತ್ತು
  • ಗಡಿನಾಡು ಕನ್ನಡ ಬಳಗ, ನಿಪ್ಪಾಣಿ
- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group