spot_img
spot_img

ಡಾ. ಎಫ್.ಟಿ. ಹಳ್ಳಿಕೇರಿ ಅವರ ಕಂಠಪತ್ರ-೪; ಒಂದು ಅವಲೋಕನ

Must Read

- Advertisement -

ಡಾ. ಎಫ್.ಟಿ. ಹಳ್ಳಿಕೇರಿ ನಮ್ಮ ದಿನಮಾನದ ಒಬ್ಬ ಅಪರೂಪದ ಹಸ್ತಪ್ರತಿ ತಜ್ಞರು-ವಿದ್ವಾಂಸರು. ಎಪ್ಪತ್ತರ ದಶಕದಲ್ಲಿ ಡಿ.ಎಲ್.ಎನ್, ಡಾ. ಆರ್. ಸಿ. ಹಿರೇಮಠ ಅವರಂಥ ವಿದ್ವಾಂಸರು ‘ವಿದ್ವತ್ತು, ಪಾಂಡಿತ್ಯ ಇವು ನಮ್ಮೊಂದಿಗೆ ಕೊನೆಗಾಣುತ್ತವೆಂದು ಭಾವಿಸಿದ’ ಕಾಲದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ‘ಕನ್ನಡ ಗ್ರಂಥ ಸಂಪಾದನ ಶಾಸ್ತ್ರ’ ಎಂಬ ಕೃತಿಯನ್ನು ಪ್ರಕಟಿಸಿ, ಆ ವಿದ್ವಜ್ಜನರ ಸಾಹಿತ್ಯಿಕ ವಾರಸುದಾರಿಕೆಯನ್ನು ನಿಜವಾದ ಅರ್ಥದಲ್ಲಿ ಮುಂದುವರಿಸಿದ್ದರು. ಡಾ. ಕಲಬುರ್ಗಿ, ಡಾ. ಚಿದಾನಂದಮೂರ್ತಿ, ಡಾ. ವೆಂಕಟಚಾಲಶಾಸ್ತ್ರಿ ಅವರಂಥ ವಿದ್ವಜ್ಜನರ ತರುವಾಯ ಹಸ್ತಪ್ರತಿಯಂಥ ಕ್ಷೇತ್ರವನ್ನು ಆಯ್ದುಕೊಂಡು ಆ ನೆಲೆಯಲ್ಲಿ ಅಧ್ಯಯನ-ಅಧ್ಯಾಪನ-ಸಂಶೋಧನೆ ಮಾಡುವವರು ಯಾರು? ಎಂಬ ಪ್ರಶ್ನೆ ಮೂಡುವ ಮುಂಚೆಯೇ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಕೆ. ರವೀಂದ್ರನಾಥ, ಡಾ. ವೀರೇಶ ಬಡಿಗೇರ, ಡಾ. ಎಸ್. ಎಸ್. ಅಂಗಡಿ, ಡಾ. ಚೆನ್ನವೀರಪ್ಪ ಈ ಪಂಚ ಯುವ ವಿದ್ವಾಂಸರು ಈ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ‘ಹಸ್ತಪ್ರತಿ ಶಾಸ್ತ್ರ ಅಧ್ಯಯನ ವಿಭಾಗ’ವನ್ನು ವಿಸ್ತಾರೋನ್ನತವಾಗಿ ಬೆಳೆಸುವ ಮಹೋನ್ನತ ಕಾರ್ಯ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು, ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರಗಳು ಮೂಲೆಗುಂಪಾಗಿ, ಅವಜ್ಞೆಗೆ ಒಳಗಾಗಿರುವ ಪ್ರಸ್ತುತ ಸಂದರ್ಭದಲ್ಲಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗವು ಅತ್ಯಂತ ಕ್ರಿಯಾಶೀಲವಾಗಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಈ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಫ್.ಟಿ. ಹಳ್ಳಿಕೇರಿ ಅವರ ಪ್ರೀತಿ ಕಾರಣವಾಗಿ ಹಸ್ತಪ್ರತಿ ವಿಭಾಗ ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ.

ಡಾ. ಎಫ್.ಟಿ. ಹಳ್ಳಿಕೇರಿ ಅವರು ಡಾ. ಎಂ. ಎಂ. ಕಲಬುರ್ಗಿ ಮತ್ತು ಡಾ. ವೀರಣ್ಣ ರಾಜೂರ ಅವರ ಪರಮಾಪ್ತ ಶಿಷ್ಯರು. ಉಭಯ ಗುರುಗಳ ಅಪಾರ ಜ್ಞಾನಭಂಡಾರದ ಸದುಪಯೋಗಪಡೆದುಕೊಂಡ ಸುದೈವಿ ಶಿಷ್ಯರು. ೧೯೮೯-೯೧ರ ಕಾಲದಲ್ಲಿ ಈ ಇಬ್ಬರು ವಿದ್ವಾಂಸರು ಕೈಕೊಂಡ ‘ಸಮಗ್ರ ವಚನ ಸಾಹಿತ್ಯದ ಪ್ರಕಟಣ ಯೋಜನೆ’ಯಲ್ಲಿ ಡಾ. ಹಳ್ಳಿಕೇರಿಯವರು ತಮ್ಮನ್ನು ತೊಡಗಿಸಿಕೊಂಡು, ಹಸ್ತಪ್ರತಿ ಕ್ಷೇತ್ರದಲ್ಲಿ ದುಡಿಯಲು ಮನಸ್ಸು ಮಾಡಿದರು. ಅಲಕ್ಷಿತ ಕ್ಷೇತ್ರದಲ್ಲಿ ಉಪೇಕ್ಷಿತ ಸಾಹಿತ್ಯವನ್ನು ಶೋಧಿಸಬೇಕೆಂಬ ಹಂಬಲವೇ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ.

- Advertisement -

ಡಾ. ಎಂ. ಎಂ. ಕಲಬುರ್ಗಿ ಅವರು ತಮ್ಮ ಸಂಶೋಧನ ಪ್ರಬಂಧಗಳನ್ನು ‘ಮಾರ್ಗ’ ಸಂಪುಟ ಮಾಲೆಯಲ್ಲಿ ಪ್ರಕಟಿಸುತ್ತ ಬಂದಿದ್ದರು. ಆ ಮಾದರಿಯಲ್ಲಿ ಡಾ. ಎಫ್.ಟಿ.ಹಳ್ಳಿಕೇರಿ ಅವರು ‘ಕಂಠಪತ್ರ’ ಮಾಲೆಯನ್ನು ಪ್ರಕಟಿಸುತ್ತಿರುವುದು ಸಂಶೋಧನ ಕ್ಷೇತ್ರದಲ್ಲಿ ಒಂದು ವಿನೂತನ ಪ್ರಯತ್ನವೆನಿಸಿದೆ. ಕಂಠಪತ್ರ ಹೆಸರಿನ ಮೂರು ಸಂಪುಟಗಳನ್ನು ೨೦೦೩, ೨೦೦೪, ೨೦೧೪ರಲ್ಲಿ ಪ್ರಕಟಿಸಿದ್ದರು. ಈಗ ನಾಲ್ಕನೆಯ ಸಂಪುಟವನ್ನು ಪ್ರಕಟಿಸಿರುವುದು ಅವರ ನಿರಂತರ ಕ್ರಿಯಾಶೀಲ ದುಡಿಮೆಗೆ ಸಾಕ್ಷಿಯಾಗಿದೆ.

ಕಂಠಪತ್ರ-೪ರಲ್ಲಿ ಎರಡು ಭಾಗಗಳಾಗಿವೆ. ಮೊದಲ ಭಾಗದಲ್ಲಿ ಹಸ್ತಪ್ರತಿಶಾಸ್ತ್ರ ಕುರಿತು ೯ ಲೇಖನಗಳಿದ್ದರೆ, ಎರಡನೆಯ ಭಾಗದಲ್ಲಿ ೧೧ ಲೇಖನಗಳಿವೆ. ಒಟ್ಟು ೨೦ ಸಂಪ್ರಬಂಧಗಳು ಇಲ್ಲಿವೆ. ಡಾ. ಬಿ. ಆರ್. ಹಿರೇಮಠ ಅವರು ಈ ಹಿಂದೆ ಹಸ್ತಪ್ರತಿ ಲಿಪಿಕಾರರು ಎಂಬ ಹೆಸರಿನ ಒಂದು ಕೃತಿಯನ್ನು ಪ್ರಕಟಿಸಿದ್ದರು. ತದನಂತರ ಈ ಕುರಿತು ಯಾರೂ ಅಧ್ಯಯನ ಮಾಡಿರಲಿಲ್ಲ. ಲಿಪಿಕಾರರ ಬಗ್ಗೆ ಒಂದು ಸಮಗ್ರ ಯೋಜನೆ ಕೈಕೊಂಡು ಪೂರೈಸಿದ ಕೀರ್ತಿ ಡಾ. ಹಳ್ಳಿಕೇರಿ ಅವರಿಗೆ ಸಲ್ಲುತ್ತದೆ. ಈ ಕೃತಿಯಲ್ಲಿ ‘ಕವಿ-ಲಿಪಿಕಾರ-ಪ್ರತಿಕಾರ : ಒಂದು ಪರಿಕಲ್ಪನೆ’ ಎಂಬ ಮೊದಲ ಲೇಖನದಲ್ಲಿ ಈ ಮೂರು ಪದಗಳ ಅರ್ಥವ್ಯತ್ಯಾಸವನ್ನು ತಿಳಿಸಿ, ಅವುಗಳನ್ನು ಬಳಸಬೇಕಾದ ಕ್ರಮವನ್ನು ತಿಳಿಸಿದ್ದಾರೆ. ‘ಹಸ್ತಪ್ರತಿ ಲಿಪಿಕಾರರ : ಚರಿತ್ರೆ ಮತ್ತು ಚಾರಿತ್ರ್ಯ’ ಎಂಬ ಲೇಖನವೂ ಸಂಶೋಧನೆಯ ಹೊಸ ಹೊಳವುಗಳನ್ನು ತಿಳಿಸುತ್ತವೆ. ‘ಹಸ್ತಪ್ರತಿಗಳು ಮತ್ತು ನಂಬಿಕೆಗಳು’, ‘ಹಸ್ತಪ್ರತಿ ಸಂರಕ್ಷಣೆಯಲ್ಲಿ ಲಿಂಗಾಯತ ಮಠಮಾನ್ಯಗಳ ಸೇವೆ’, ‘ಕನ್ನಡ ಹಸ್ತಪ್ರತಿ ಶಾಸ್ತ್ರ : ಅಧ್ಯಯನದ ಇತಿಹಾಸ’, ‘ಐದು ಕಲ್ಲಚ್ಚಿನ ಪುಸ್ತಕಗಳ ಅವಲೋಕನ’, ‘ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದ ಹಸ್ತಪ್ರತಿಗಳು’, ‘ಮಹಾರಾಷ್ಟ್ರದಲ್ಲಿ ಕನ್ನಡ ಹಸ್ತಪ್ರತಿಗಳು’ ಮೊದಲಾದ ಲೇಖನಗಳು ಅವರ ಹಸ್ತಪ್ರತಿ ಜ್ಞಾನದ ಅಪಾರ ವಿದ್ವತ್ತಿಗೆ, ವಿಚಕ್ಷಣತೆಗೆ ಉಜ್ವಲ ನಿದರ್ಶನಗಳಾಗಿವೆ.
ಗ್ರಂಥ ಸಂಪಾದನೆ ವಿಭಾಗದ ಎರಡನೆಯ ಭಾಗದಲ್ಲಿ ಆಧುನಿಕ ಕನ್ನಡ ಗ್ರಂಥಸಂಪಾದನೆಯ ಕುರಿತು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುವ ಲೇಖನಗಳಿವೆ. ಡಿ.ಎಲ್.ಎನ್. ಅವರು ‘ಗ್ರಂಥಸಂಪಾದನ ಶಾಸ್ತ್ರ’, ಡಾ. ಎಂ. ಎಂ. ಕಲಬುರ್ಗಿ ಅವರ ‘ಕನ್ನಡ ಗ್ರಂಥ ಸಂಪಾದನ ಶಾಸ್ತ್ರ’ ಎಂಬ ಎರಡು ಕೃತಿಗಳನ್ನು ಹೊರತುಪಡಿಸಿದರೆ, ಸಮಗ್ರವೆನಿಸುವ ಯಾವ ಕೃತಿಗಳೂ ಕನ್ನಡದಲ್ಲಿ ಇರಲಿಲ್ಲ. ಈ ಕೊರತೆಯನ್ನು ನೀಗಿಸಿದವರು ಡಾ. ಎಫ್.ಟಿ. ಹಳ್ಳಿಕೇರಿಯವರು. ತಮ್ಮ ‘ಹಸ್ತಪ್ರತಿ ವ್ಯಾಸಂಗ’ ಸಂಪಾದನ ಕೃತಿಗಳಲ್ಲಿ, ‘ಹಸ್ತಪ್ರತಿ ಅಧ್ಯಯನ’ ಪತ್ರಿಕೆಗಳಲ್ಲಿ ಈ ಕುರಿತು ಅನೇಕ ಮೌಲಿಕ ಲೇಖನಗಳನ್ನು ಮೇಲಿಂದ ಮೇಲೆ ಬರೆದು, ಈ ಶಾಸ್ತ್ರಕ್ಕೊಂದು ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ.

‘ಕನ್ನಡ ಗ್ರಂಥ ಸಂಪಾದನೆ : ಹೊಸ ಸಾಧ್ಯತೆಗಳು’, ‘ಉದಯಾದಿತ್ಯಾಲಂಕಾರ : ಪರಿಷ್ಕರಣೆ ಮತ್ತು ಅಧ್ಯಯನ’, ‘ಹರಿಹರನ ರಗಳೆಗಳು : ಪರಿಷ್ಕರಣೆಗಳ ಪರಿಶೀಲನೆ’, ‘ಪ್ರಾಚೀನ ಕನ್ನಡ ಪಠ್ಯಗಳ ಸಂಪಾದನೆ : ಕ್ರೈಸ್ತ ಮಿಷನರಿಗಳ ಕೊಡುಗೆ’ ಇವು ಇಲ್ಲಿಯ ಮಹತ್ವದ ಲೇಖನಗಳಾಗಿವೆ. ಆಧುನಿಕ ಗ್ರಂಥ ಸಂಪಾದನ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆ ನೀಡಿದ ಪ್ರಾತಃಸ್ಮರಣೀಯ ಮಹನೀಯರ ಸಾಧನೆ-ಸಿದ್ಧಿಗಳನ್ನು ತಿಳಿಸುವ ಲೇಖನಗಳನ್ನು ಬರೆದಿದ್ದಾರೆ. ‘ಎರ್ತೂರು ಶಾಂತಿರಾಜ ಶಾಸ್ತ್ರಿ ಅವರ ಗ್ರಂಥಸಂಪಾದನೆ’, ‘ಹಸ್ತಪ್ರತಿ-ಗ್ರಂಥ ಸಂಪಾದನೆ : ಎನ್. ಅನಂತರಂಗಾಚಾರ್ ಅವರ ಸಾಧನೆ’, ‘ಡಿ.ಎಲ್.ಎನ್. : ಕನ್ನಡ ಗ್ರಂಥಸಂಪಾದನ ಶಾಸ್ತ್ರದ ಪಿತಾಮಹ’, ‘ಆರ್. ಸಿ.

- Advertisement -

ಹಿರೇಮಠ ಅವರ ಪ್ರಾಚೀನ ಕಾವ್ಯ ಪರಿಷ್ಕರಣಗಳು’, ‘ಗ್ರಂಥ ಸಂಪಾದನೆ : ಎಂ. ಎಂ. ಕಲಬುರ್ಗಿ ಅವರ ಚಿಂತನೆಗಳು’, ‘ಲೌಕಿಕ ಶಾಸ್ತ್ರ ಸಾಹಿತ್ಯ ಸಂಪಾದನೆ : ಜಿ.ಜಿ. ಮಂಜುನಾಥನ್ ಅವರ ವೈಧಾನಿಕತೆ’, ‘ಹಸ್ತಪ್ರತಿ-ಗ್ರಂಥ ಸಂಪಾದನೆ : ವೈ.ಸಿ.ಭಾನುಮತಿ ಅವರ ಸಾಧನೆ’ ಈ ಲೇಖನಗಳು ಗ್ರಂಥಸಂಪಾದನ ಕ್ಷೇತ್ರದಲ್ಲಿ ದುಡಿದ ಸಾಧಕರ ಪರಿಚಯವನ್ನು ಮಾಡಿಕೊಡುತ್ತವೆ.

ಹಸ್ತಪ್ರತಿ ಮತ್ತು ಗ್ರಂಥಸಂಪಾದನ ಶಾಸ್ತ್ರದ ಹಿರಿಯ ವಿದ್ವಾಂಸರಾದ ಬಿ. ಎಸ್. ಸಣ್ಣಯ್ಯ, ಜಿ.ಜಿ.ಮಂಜುನಾಥನ್, ವೈ.ಸಿ.ಭಾನುಮತಿ ಅವರ ವಿದ್ವತ್ ಪ್ರೀತಿಗೆ ಈ ಕೃತಿಯನ್ನು ಅರ್ಪಿಸಿದ್ದಾರೆ. ಅನುಬಂಧದಲ್ಲಿ ಆಯಾ ಲೇಖನಗಳ ಪ್ರಕಟಣ ಸಂದರ್ಭವನ್ನು ನೀಡಿರುವುದು ಔಚಿತ್ಯಪೂರ್ಣವಾಗಿದೆ.

“ಪ್ರೊ. ಎಫ್.ಟಿ. ಹಳ್ಳಿಕೇರಿಯವರು ಎರಡೂವರೆ ದಶಕಗಳಿಂದ ಹಸ್ತಪ್ರತಿ ಶಾಸ್ತ್ರ, ಗ್ರಂಥಸಂಪಾದನ ಶಾಸ್ತ್ರ-ಹಳಗನ್ನಡ ಸಾಹಿತ್ಯ-ಕನ್ನಡ ಸಂಸ್ಕೃತಿ ಈ ನೆಲೆಗಳ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ಸಂಶೋಧನೆಯ ಫಲಿತಗಳನ್ನು ಕಂಠಪತ್ರ ಸಂಪುಟಗಳ ಮೂಲಕ ಪ್ರಕಟಿಸುತ್ತ ಬಂದಿದ್ದಾರೆ. ಕಂಠಪತ್ರ ಎಂಬ ಶೀರ್ಷಿಕೆ ಈ ಶಾಸ್ತ್ರಗಳ ಬಗಗೆ ಇವರಿಗಿರುವ ಕುರುಹಾಗಿದೆ. ಕಂಠಪತ್ರ ೪ ರಲ್ಲಿ ಕೂಡ ಇವರ ಸಂಶೋಧನಾಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಕಾಣಬಹುದು.

ಇಲ್ಲಿನ ಬರಹಗಳಲ್ಲಿ ಒಂದು ವ್ಯವಸ್ಥಿತವಾದ ಕ್ರಮವಿದೆ. ಹಳ್ಳಿಕೇರಿಯವರ ಅಧ್ಯಯನದ ಶಿಸ್ತು ಇಲ್ಲಿನ ಬರಹಗಳಲ್ಲಿ ಎದ್ದು ಕಾಣುತ್ತದೆ. ಇವರ ಬರಹಗಳು ಮಾಹಿತಿ ನಿಷ್ಠವಾಗಿರುತ್ತವೆ. ಇಲ್ಲಿನ ಸಂಪ್ರಬಂಧಗಳು ಹಸ್ತಪ್ರತಿಯನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನ ಮಾಡಲು ಪ್ರೇರೇಪಿಸುವಂತಿವೆ” ಎಂದು ಡಾ. ವೈ.ಸಿ. ಭಾನುಮತಿ ಅವರು ಮುನ್ನುಡಿ ರೂಪದ ‘ಶುಭನುಡಿ’ಯಲ್ಲಿ ಹಾರೈಸಿದ್ದಾರೆ.

ಡಾ. ಹಳ್ಳಿಕೇರಿ ಅವರ ಈವರೆಗಿನ ಒಟ್ಟು ಸಾಧನೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯಶ್ರೀ’ ಪ್ರಶಸ್ತಿ ದೊರೆತಿರುವುದು ಅಭಿನಂದನೀಯ.
ಡಾ. ಹಳ್ಳಿಕೇರಿಯವರು ಈಗ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ಶುಭ ಸಂದರ್ಭದಲ್ಲಿಯೇ ಹಸ್ತಪ್ರತಿ ವಿಭಾಗದ ರಜತ ಮಹೋತ್ಸವ ಜರುಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮೌಲಿಕ ಗ್ರಂಥ ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳ ಮೂಲಕ ವಿಧಾಯಕವಾಗಿ ರಜತೋತ್ಸವವನ್ನು ಆಚರಿಸುತ್ತಿರುವ ಡಾ. ಎಫ್.ಟಿ.ಹಳ್ಳಿಕೇರಿ ಅವರಿಂದ ಕನ್ನಡ ಹಸ್ತಪ್ರತಿ-ಗ್ರಂಥಸಂಪಾದನ ಕ್ಷೇತ್ರ ಇನ್ನೂ ಉಜ್ವಲವಾಗಿ ಬೆಳಗಲಿ ಎಂದು ಆಶಿಸುತ್ತ, ಕಂಠ ಪತ್ರ-೪ ಕೃತಿಯನ್ನು ಪ್ರೀತಿ ವಿಶ್ವಾಸ ಪೂರ್ವಕ ಕಳಿಸಿದ ಅವರಿಗೆ ವಂದನೆಗಳನ್ನು ಸಲ್ಲಿಸುವೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group