spot_img
spot_img

ಪುಸ್ತಕ ಪರಿಚಯ: ಮುದ್ದುಗಿಣಿ ಹಾಡಿ ಕುಣಿ

Must Read

- Advertisement -

ಮುದ್ದುಗಿಣಿ ಹಾಡಿ ಕುಣಿ

(ಮಕ್ಕಳ ಕವಿತೆಗಳು)

“ಕನಸಿನರಮನೆಗೆ ಅಡಿಪಾಯ ಹಾಕಿದೆ
ಉಸಿರನು ನೀಡೋ ಮರಗಳ ಕಡಿದೆ
ಬರಗಾಲವ ನೀನೆ ಬರಮಾಡಿಕೊಂಡೆ
ಪ್ರಕೃತಿಯ ಹಳಿಯುತ ಕುಳಿತುಕೊಂಡೆ”

ಎನ್ನುವ ಕವಿತೆಯ ಸಾಲುಗಳು ಪ್ರಕೃತಿಯ ಮುನಿಸು ಬದುಕನ್ನು ದುಸ್ತರವನ್ನಾಗಿಸುವುದು ಎಂಬ ಸಂದೇಶವನ್ನು ಅಡಕಗೊಂಡಿರುವ ಕವನ “ಮುದ್ದುಗಿಣಿ ಹಾಡಿ ಕುಣಿ” ಮಕ್ಕಳ ಕವನ ಸಂಕಲನದಲ್ಲಿ ಕವಯತ್ರಿ ಬಸಮ್ಮಾ ಏಗನಗೌಡ್ರ ಮನದಾಳದಿಂದ ಮೂಡಿ ಬಂದಿದೆ. ಮೂಲತಃ ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿ ಗ್ರಾಮದವರಾದ ಇವರು ಸದ್ಯ ಶಿಕ್ಷಕಿಯಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಸ ಹಿ ಪ್ರಾ ಶಾಲೆ ಚವಡಾಳದಲ್ಲಿ ಸೇವೆ ಸಲ್ಲಿಸುತ್ತಿರುವರು. ಇದು ಇವರ ಪ್ರಥಮ ಕವನ ಸಂಕಲನ. ಬರವಣಿಗೆ ಹವ್ಯಾಸವನ್ನು ಪ್ರೌಢಶಾಲೆಯಿಂದಲೇ ಬೆಳೆಸಿಕೊಂಡ ಇವರು ಪ್ರೌಢಶಾಲೆ ಹಂತದಲ್ಲಿ ರಾಣೆಬೆನ್ನೂರಿನಲ್ಲಿ ಮನೆಮನೆ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನ ವಾಚನ ಮಾಡುತ್ತಿದ್ದ ಇವರು ನಂತರದ ದಿನಗಳಲ್ಲಿ ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುವ ಮೂಲಕ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

- Advertisement -

ಪ್ರಸ್ತುತ ಕವನ ಸಂಕಲನದಲ್ಲಿ 53 ಕವನಗಳಿದ್ದು, ಕೋರಣ್ಯ ನೀಡಮ್ಮ , ನಲಿ(ಕಲಿ)ಯೋಣ ಬನ್ನಿ, ಕರುನಾಡ ಚರಿತೆ,ಶುಭಾಶಯ ತಿಳಿಸಿ,ಮಕ್ಕಳಿಗೆ ಕಿವಿಮಾತು,ರಾಷ್ಟ್ರಪಿತ,ಸಿರಿಗನ್ನಡಂ ಬಾಳ್ಗೆ,ಅರಳುವ ಕುಸುಮಗಳು,ಭಾರತ ಭೂಮಿಯ ಚಂದ್ರ,ಓ ಮುದ್ದು ಕೋಗಿಲೆ,ಬಾ ಗುಬ್ಬಚ್ಚಿ, ವರುಣನ ಕರುಣೆ, ಕಾಂತದ ಗುಣ,ಮುದ್ದು ಮುದ್ದು ಕಂದ,ತಾಯಿ,ಅಪ್ಪ ನಮ್ಮಪ್ಪ,ಹಸಿರು ನಮ್ಮುಸಿರು,ಧರೆಸಿರಿ ಚಿತ್ರ,ನಮ್ಮೂರ ಆಟ,ಕಟ್ಟಿರುವೆ,ಸ್ವಾತಂತ್ರ್ಯ ಸುದಿನ,ಶಾರದಾ ಸ್ತುತಿ,ನಮ್ಮ ನಾಯಿ ಮರಿ,ಅಂಬೇಡ್ಕರ ಮೊದಲಾದ ಕವನಗಳು ಮಕ್ಕಳು ಹಾಡಿ ಕುಣಿಯುವಂತೆ ಸಾಹಿತ್ಯವನ್ನು ಒಳಗೊಂಡಿವೆ. ಕವಯತ್ರಿ ಶಿಕ್ಷಕಿಯಾಗಿರುವ ಕಾರಣ ಮಕ್ಕಳಲ್ಲಿ ಹಾಡು ತನ್ನದೇ ಪ್ರಭಾವ ಬೀರುತ್ತದೆ ಎಂಬ ಅಂಶವನ್ನು ಮನಗಂಡು ತಮ್ಮ ಎಲ್ಲ ಕವಿತೆಗಳು ಮಕ್ಕಳು ಹಾಡಿ ಕುಣಿಯುವಂತೆ ರಚನೆ ಮಾಡಿದ್ದು ಇಲ್ಲಿನ ಕವಿತೆಗಳನ್ನು ನೋಡಿದಾಗ ಗಮನಿಸಬೇಕಾದ ಅಂಶ.

ಇತ್ತೀಚಿನ ಶಿಕ್ಷಕರಲ್ಲಿ ಸಂಬಳಕ್ಕೋಸ್ಕರ ಸೀಮಿತವಾಗಿ ದುಡಿಯುವ ಶಿಕ್ಷಕ ವರ್ಗ ಮತ್ತು ಒಂದಿಷ್ಟು ಸಮರ್ಪಣಾ ಮನೋಭಾವದ ಶಿಕ್ಷಕರ ಸಂಖ್ಯೆಯ ನಡುವೆ ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದ ನಿಜವಾದ ದೇವಾಲಯಗಳಾಗಿಯೇ ಉಳಿದಿರುವುದು ನಮ್ಮ ಸುದೈವ. ಸರ್ಕಾರಿ ಶಾಲಾ ಸಬಲೀಕರಣಕ್ಕೆ ತಮ್ಮ ಸೇವೆಯನ್ನು ಮೀಸಲಿಟ್ಟಿರುವ ಮಕ್ಕಳೊಂದಿಗೆ ಹಾಡಿ ನಲಿದು ಬೆರೆತು ಕಲಿಸುವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಬಸಮ್ಮ ಏಗನಗೌಡರ ಅವರ ಕ್ರಿಯಾಶೀಲ ಸೇವೆ ಅನುಕರಣೀಯ.

- Advertisement -

ಈವರೆಗಿನ ಬಿಡಿ ಸಾಹಿತ್ಯ ಕೃಷಿಯ ಅನುಭವವನ್ನೆಲ್ಲ ಕ್ರೂಡೀಕರಿಸಿಕೊಂಡು ಮೊದಲ ಸಾಹಿತ್ಯ ಕೃತಿಯ ಫಸಲನ್ನು ಓದುಗರಿಗೆ ಅರ್ಪಿಸುವ ಅವರ ಉತ್ಸಾಹ ಮೆಚ್ಚುವಂತದ್ದೆ.

ಅವರ ಬಹುತೇಕ ಕವಿತೆಗಳು ಮಕ್ಕಳಿಗೆ ಸಂದೇಶ ಸಾರಲು ಹೊರಟಿವೆ. ಆ ಸಂದೇಶಗಳೆಲ್ಲ ಆದರ್ಶ ಶಿಕ್ಷಕಿಯೊಬ್ಬರು ಮಮತೆಯ ಒಡಲಿಂದ ಕಟ್ಟಿದ ಪದಮಾಲೆಯಂತಿವೆ. ಉದಾಹರಣೆಗೆ

ಜೀವನಕ್ಕೊಂದು ಗುರಿ ಇರಲಿ
ಆ ಗುರಿ ತಲುಪುವ ಛಲವಿರಲಿ (ಪುಟ -7 )

ಎಂಬ ಸಂದೇಶ ಗುರಿಯಿರದ ಜೀವನ ಬರಡು ಗುರಿ ಇರುವ ಜೊತೆಗೆ ಆ ಗುರಿಯನ್ನು ತಲುಪಲು ಸಕ್ರಿಯ ಚಟುವಟಿಕೆ ಮುಖ್ಯ ಎಂಬ ಸಂದೇಶವನ್ನು ಕವಯತ್ರಿ ತಿಳಿಸಿರುವರು.

ಗಾಂಧೀಜಿ ಕುರಿತಾಗಿ
ಸತ್ಯದ ಮಾತ ಆಡುವ ಎನುತ
ಸಾಧಿಸಿ ತೋರಿಸಿದಾತ//
ಅಹಿಂಸಾ ಪಥ
ಮಾನವಗೆ ಹಿತ
ಎಂದು ತಿಳಿಸಿದಾತ

ಎಂದು ಗಾಂಧೀಜಿಯ ವ್ಯಕ್ತಿತ್ವವನ್ನು ಗುಣಗಾನ ಮಾಡಿರುವರು.ಇದು ವಾಸ್ತವವೂ ಕೂಡ. ಮಕ್ಕಳಲ್ಲಿ ಗಾಂಧೀಜಿಯ ಆದರ್ಶವನ್ನು ತಿಳಿಸುವ ಆಶಯ ಹೊತ್ತ ಕವನವಿದು.

ಒಂದು ಕವಿತೆಯಲ್ಲಿ. ಗುಬ್ಬಚ್ಚಿಯೊಂದಿಗೆ ಮಾತಾಗುತ್ತ ಹೀಗೆ ಸಂವಾದಿಸುತ್ತಾರೆ.

ನಾನೇನು ಮಾಡಲಿ ಗುಬ್ಬಚ್ಚಿ
ಮಳೆರಾಯನು ಮುನಿದಿರುವ
ಬರಡಾಗಿದೆ ನಮ್ಮಯ ಭೂಮಿ
ಮಳೆಬೆಳೆ ಇಲ್ಲದೆ ನೊಂದಿರುವೆ

ಎನ್ನುವಲ್ಲಿ ಮಳೆಗಾಲದ ಮುನಿಸು ಪುಟ್ಟ ಗುಬ್ಬಚ್ಚಿಯ ನೀರಡಿಕೆಯ ಕನವರಿಕೆ ಇವರ ಪ್ರಕೃತಿಯ ಕಾಳಜಿಯ ಮೂಲಕ ಈ ಕವನ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಯ ಕುರಿತು ಮಾರ್ಮಿಕವಾಗಿ ಮೂಡಿ ಬಂದಿದೆ.

ಮಾತೃ ಹೃದಯ ಮಮತೆಯ ಕಂದಮ್ಮಗಳಿಗೆ ಇರುತ್ತದೆ.ಮಾತೆಯ ಮಮತೆಯನ್ನು ತನ್ನ ಕಂದಮ್ಮನನ್ನು ಕುರಿತು ಮೂಡಿ ಬಂದಿರುವ ಕವಿತೆ

ಮುದ್ದು ಮುದ್ದು ಕಂದಮ್ಮ
ಮುತ್ತು ನೀಡೋ ಕಂದಮ್ಮ

ಈ ನಿನ್ನ ಅಂದವನೂ ಹೊಗಳೊದು ಹೆಂಗಮ್ಮ //ಮುದ್ದು ಮುದ್ದು//
ಬೆಳಗಿನಿಂದ ಸಂಜೆಯವರೆಗೆ ನಿನ್ನ ಆಟವೆನಿತವ್ವ ನಿನ್ನ ತೊದಲು ವಾಣಿಯೇ ಕಿವಿಗೆ ಇಂಪು ಕಣವ್ವ  ಎನ್ನುತ್ತ ಸಾಗುವ ಈ ಕವಿತೆ ಕಂದಮ್ಮಗಳ ಬೆರಗಿನ ಲೋಕಕ್ಕೆ ಕರೆದೊಯ್ಯುತ್ತದೆ.

ನಿಜಕ್ಕೂ ಮಾತೃ ಹೃದಯದ ಮಮತೆಯ ಸಾಲುಗಳನ್ನು ನೋಡಿದಾಗ ಪುಟ್ಟ ಮಕ್ಕಳನ್ನು ಪಾಠದೊಂದಿಗೆ ತಮ್ಮದೇ ಲೋಕಕ್ಕೆ ಕರೆದೊಯ್ಯುವ ಶಿಕ್ಷಕಿ ಮುದ್ದು ಕಂದಮ್ಮನನ್ನು ಕುರಿತು ಬರೆದ ಈ ಸಾಲುಗಳು ಮಮತೆಯ ಪ್ರತೀಕ.

ಮಕ್ಕಳಿಗೆ ಆಟವೆಂದರೆ ಪಂಚಪ್ರಾಣ.ಅದರಲ್ಲೂ ಗ್ರಾಮೀಣ ಪರಿಸರದಲ್ಲಿ ಮಕ್ಕಳಿಗೆ “ಕೋಲಾಟವೆಂದರೆ ಹಿಗ್ಗೋ ಹಿಗ್ಗು” ಹೀಗೆ ಕೋಲಾಟದ ಪರಿಯನ್ನು ತಮ್ಮ “ಮಕ್ಕಳ ಕೋಲಾಟ” ಎಂಬ ಕವನದಲ್ಲಿ ಈ ರೀತಿಯಾಗಿ ಮೂಡಿ ಬಂದಿದೆ.

ಕೋಲು ಕೋಲೆಣ್ಣ ಕೋಲು ಕೋಲು ಕೋಲೆ
ಕೋಲು ಕೋಲೆಣ್ಣ ಕೋಲೆ (ಪ)
ಹಳ್ಳದ ಹರಿದಾರಿ ಸುವ್ವಿ ಸುಂದರ ದಾರಿ
ನಮ್ಮೂರಿಗೊಂದು ಹರಿದಾರಿ, ನಾವೆಲ್ಲ
ಕೋಲು ಹೊಯ್ಯಾಕ ಬಂದೇವ್ರಿ :1:
ಗೆಜ್ಜೆಯ ನಾದದಿ ಕೋಲು ಹಾಕೋಣ
ನೋಡೋರ ಮನವ ತಣಿಸೋಣ, ನಾವೆಲ್ಲ
ನೋವೆಲ್ಲವ ಮರೆಸೋಣ

ಎನ್ನುವ ಸಾಲುಗಳು ತಮ್ಮ ನೋವನ್ನು ಕೋಲಾಟದೊಂದಿಗೆ ಮರೆಯುವ ಜೊತೆಗೆ ಕೋಲಾಟ ನೋಡುಗರ ಮನಸ್ಸನ್ನು ತಣಿಸುವ ಮೂಲಕ ಅವರ ನೋವನ್ನು ಮರೆಯಲೆನ್ನುವ ಭಾವ ನಿಜಕ್ಕೂ ಅದ್ಭುತ. ಇದು ಕವಿತೆಯ ಶಕ್ತಿ ಮತ್ತು ಆಶಯವಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಮೊದಲು ಹೆತ್ತ ತಂದೆ ತಾಯಂದಿರನ್ನು ಪೂಜಿಸು.ನಂತರ ಗುರುವನ್ನು ಆರಾಧಿಸು ಎಂಬ ನುಡಿಗಳು ಪುರಾತನ ಪರಂಪರೆಯಲ್ಲಿ ಬೆಳೆದು ಬಂದಿವೆ. ಕಷ್ಟ ಬಂದಾಗ, “ಅವ್ವ” ನೆನಪಾಗತಾಳೇ! ಯಾರಾದರು ಹೊಡೆಯಲು ಬಂದರೇ “ಅಪ್ಪ” ನೆನಪಾಗತಾನೇ!!. ಸುಖದಲ್ಲಿ ತಂದೆ ತಾಯಿಯನ್ನು ನೆನಪು ಮಾಡಿಕೊಳ್ಳುತ್ತೇವೆಯೋ ಗೊತ್ತಿಲ್ಲ, ಕಷ್ಟ ಬಂದಾಗ ನಮ್ಮ ತಂದೆ-ತಾಯಿ ಕಣ್ಣು ಮುಂದೆ ಬರುತ್ತಾರೆ. “ಅಪ್ಪ ನಮ್ಮ ಅಪ್ಪ” ಎಂಬ ಕವಿತೆಯಲ್ಲಿ ಶಿಕ್ಷಕಿ

ಅಪ್ಪನೆಂದರೆ ಪ್ರೇಮಸಾಗರ
ಮಕ್ಕಳ ಮಮತೆಯ ದೇವರ
ಮಕ್ಕಳಿಗಾಗಿ ಹಗಲಿರುಳೆನ್ನದೆ
ದುಡಿಯುವ ಸುರಿಸುತ ಬೆವರು
ಎನ್ನುತ್ತ ಅಪ್ಪನ ಕುರಿತು ಆಪ್ತತೆಯ ನುಡಿಗಳನ್ನು ಹೇಳುತ್ತ ಮುಂದುವರಿದೆ
ಅಪ್ಪ ನೀನಂದು ತೋರಿಸಿದೆ ಬೆಳಗಿನ ಬೆಳ್ಳಿಯ ಚುಕ್ಕಿ
ಕಂಡಿಹೆವು ನಾವ್ ನಿನ್ನಿಂದ ಬದುಕಿನ ಬೆಳಕಿನ ಚುಕ್ಕಿ //

ಎನ್ನುವ ಅವರ ತಂದೆಯ ಕುರಿತು ಆಡುವ ಆಶಯ ನೆನಪಿನ ನುಡಿ ಕವನ ರಚನೆಯಲ್ಲಿ ತಮ್ಮದೇ ಆದ ಶೈಲಿ, ಲಯದೊಂದಿಗೆ ಮೂಡಿ ಬಂದಿದೆ.
“ಕೋಗಿಲೆ ಮತ್ತು ಮಾವು” ಎನ್ನುವ ಕವನ ಇಲ್ಲಿ ಉದಾಹರಿಸಲೇಬೇಕು.

ಮಾವಿನಮರವೆ ಮಾವಿನಮರವೆ
ನೀ ನನ್ನ ಮರೆತೆಯಾ
ನನಗಾಗಿ ಹಣ್ಣನು ನೀಡಿ
ಹಸಿವೆ ನೀಗಿಸೆಯಾ
ಕೋಗಿಲೆ ಮರಿಯೆ ಕೋಗಿಲೆ ಮರಿಯೆ
ಹೇಗೆ ಮರೆಯಲಿ
ಬರಗಾಲದಿ ಬೆಂದಿರುವೆ ನಾ
ನೀರಿಲ್ಲದೆ ದಾಹದಲಿ

ಎನ್ನುವಲ್ಲಿ ಮಾವಿನ ಮರದ ನಂಟನ್ನು ಕೋಗಿಲೆ ಹೊಂದಿರುವ ರೀತಿಯನ್ನು ಉಪಮೆಯಾಗಿ ನೀಡುತ್ತ ಒಂದಕ್ಕೊಂದು ಸಂಬಂಧವನ್ನು ಹೇಗೆ ಹೊಂದಿಕೊಂಡು ಬಾಳುತ್ತವೆ ಎಂಬುದನ್ನು ಪ್ರಕೃತಿಯ ಕೊಡುಕೊಳ್ಳುವಿಕೆಯ ಬಾಂಧವ್ಯವನ್ನು ನಿರೂಪಿಸಿರುವರು.

“ನಮ್ಮೂರ ಆಟ” ಎಂಬ ಕವನದಲ್ಲಿ ಗ್ರಾಮೀಣ ಆಟಗಳಾದ ಚೌಕಾಬಾರ ಆಟ,ಚನ್ನಮಣೆ ಆಟ,ಹಾವ ಕಡಿದು ಏಣಿ ಏರೋ ಆಟ,ಗಡಿಗೆಯ ಮಾಡಿ ಅಡಿಗೆ ಮಾಡಿ ಊಟ ಚಪ್ಪರಿಸೋ ಆಟ,ಗೋಲಿ ಬುಗುರಿ ಆಟ.ಚಿನ್ನಿ ದಾಂಡು ಆಟ,ಕಬಡ್ಡಿ ಆಟ, ಕಣ್ಣಾ ಮುಚ್ಚಾಲೆ ಆಟ, ಮರಕೋತಿ ಆಟ ಹೀಗೆ ಎಲ್ಲ ರೀತಿಯ ಆಟಗಳನ್ನು ನೆನಪಿಸಿದ್ದಾರೆ “ನಮ್ಮೂರು” ಎಂಬ ಕವಿತೆಯಲ್ಲಿ ನಮ್ಮ ಊರು ಶಾಂತಿ ತುಂಬಿದ ಊರು, ದುಶ್ಚಟಗಳಿಗೆ ಬಲಿಯಾಗದ ಊರು.ಪಾನ ನಿಷೇದ ಮಾಡಿದ ಊರು, ಶರಣ ಸಂಸ್ಕೃತಿಗೆ ಹೆಸರಾದ ಊರು ಹೀಗೆ ತಮ್ಮ ಊರಿನ ವೈಶಿಷ್ಟ್ಯವನ್ನು ತಮ್ಮ ಕವಿತೆಯಲ್ಲಿ ಒಡ ಮೂಡಿಸಿರುವರು. ಕವನ ಸಂಕಲನದ ಕೊನೆಯ ಕವನ

“ಅಂಬೇಡ್ಕರ” ಎನ್ನುವ ಕವನದಲ್ಲಿ
“ದಲಿತರ ಬಾಳಿನ ಬೆಳಕಿವರು
ರಾಮ್ಜೀಯ ಹೆಮ್ಮೆಯ ಪುತ್ರರು
ಭಾರತ ಸಮಾಜ ಸುಧಾರಕರು
ಸಂವಿಧಾನದ ಶಿಲ್ಪಿಯಿವರು”

ಎನ್ನುತ ಅಂಬೇಡ್ಕರ ಅವರ ವ್ಯಕ್ತಿ ಚಿತ್ರಣವನ್ನು ಮಕ್ಕಳ ಮನ ಮುಟ್ಟುವಂತೆ ಚಿತ್ರಿಸಿರುವರು. ಒಟ್ಟಾರೆ ಕವನ ಸಂಕಲನದ ಎಲ್ಲ ಕವನಗಳು ಮಕ್ಕಳ ಮಟ್ಟಕ್ಕೆ ಸರಳ ಭಾಷೆ ಅರ್ಥಪೂರ್ಣ ವಾಕ್ಯಗಳು,ಪದಪುಂಜಗಳು ಅಲ್ಲಲ್ಲಿ ಪ್ರಾಸಬದ್ಧವಾಗಿ ಮೂಡಿ ಬಂದಿದ್ದು ಕವಿತೆಗಳು ಹಾಡುವ ರೀತಿಯಲ್ಲಿ ತಾವೇ ಸ್ವತಃ ಅವುಗಳನ್ನು ಹಾಡುವ ಮೂಲಕ ನುಡಿಗಳನ್ನು ಪೋಣಿಸುತ್ತ ಕವಿತೆ ಬರೆದಿರುವುದು ಶಿಕ್ಷಕಿಯ ಕವಿತಾ ಪ್ರೌಢಿಮೆಗೆ ಸಾಕ್ಷಿ.

ಇದು ಮೊಟ್ಟ ಮೊದಲ ಕವನ ಸಂಕಲನವಾದ ಕಾರಣ ನಿಜಕ್ಕೂ ಮುಖಪುಟದಿಂದ ಹಿಡಿದು ಕೊನೆಯ ರಕ್ಷಾಪುಟದವರೆಗೂ ಕವನ ಸಂಕಲನ ಉತ್ತಮವಾಗಿ ಮೂಡಿಬಂದಿದೆ.ಕವಿತೆಗಳಲ್ಲಿ ಸೂಕ್ತ ರೇಖಾಚಿತ್ರಗಳನ್ನು ಕೂಡ ಪ್ರಕಟಿಸುವ ಮೂಲಕ ಮಕ್ಕಳ ಕೈಗೆ ಈ ಪುಸ್ತಕ ನೀಡಿದರೂ ಕೂಡ ಅವರು ಆಕರ್ಷಕ ರೇಖಾಚಿತ್ರಗಳನ್ನು ನೋಡಿ ಕವನದತ್ತ ಕಣ್ಣು ಹಾಯಿಸುವ ಮಟ್ಟಿಗೆ ರೇಖಾ ಚಿತ್ರಗಳು ಆಕರ್ಷಣೀಯವಾಗಿವೆ.

ಒಟ್ಟು 70 ಪುಟಗಳನ್ನು ಹೊಂದಿದ ಈ ಕವನ ಸಂಕಲನ ಹೆಚ್.ಎಸ್.ಆರ್.ಎ. ಪ್ರಕಾಶನ ಬೆಂಗಳೂರು ಇಲ್ಲಿ ಮುದ್ರಣವಾಗಿದೆ,  ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಗುಣಾತ್ಮಕ ಶಿಕ್ಷಣದಲ್ಲಿ ಪ್ರಗತಿಪರ ಹೆಜ್ಜೆಯನ್ನು ಶಿಕ್ಷಣ ಆಶಯ ಹೊಂದಿದ್ದು. ಶಿಕ್ಷಕಿಯವರು ತಮ್ಮ ವೃತ್ತಿಯ ಜೊತೆಗೆ ಮಕ್ಕಳನ್ನು ಕವಿತೆಗಳ ಮೂಲಕ ಪಾಠಬೋಧನೆಗೆ ತೊಡಗಿರುವ ಕಾರ್ಯ ನಿಜಕ್ಕೂ ಅಭಿನಂದನಾರ್ಹ.

ಇವರ ಕವನಗಳು ಇಷ್ಟಕ್ಕೆ ನಿಂತಿಲ್ಲ ಇನ್ನೂ ಹಲವು ಕವನ ಸಂಕಲನಗಳು ಮೂಡಿ ಬರುವಷ್ಟು ಸಂಗ್ರಹ ಇವರಲ್ಲಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಮೂಡಿ ಬರಲಿ. ಸಾಹಿತ್ಯ ಲೋಕದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ, ಶಿಕ್ಷಕ ವೃತ್ತಿಯಲ್ಲಿ ಬರವಣಿಗೆ ಪ್ರವೃತ್ತಿಯಾಗಿಸಿಕೊಂಡವರು ವಿರಳ. ಅಂಥವರಲ್ಲಿ ಇವರು ಗಮನಾರ್ಹರು. ಇವರ ಕಾವ್ಯಕ್ಕೆ “ರಂಗ ಕಾವ್ಯ ಸಾಹಿತ್ಯ ಸಿರಿ” ಪ್ರಶಸ್ತಿಯನ್ನು ರಾಣೇಬೆನ್ನೂರಿನ ರಂಗ ಕುಸುಮ ಪ್ರಕಾಶನದವರು ನೀಡಿ ಗೌರವಿಸಿದ್ದು ಇನ್ನೂ ಹೆಚ್ಚಿನ ಪ್ರಶಸ್ತಿಗಳು ಇವರ ಕಾವ್ಯಪ್ರತಿಭೆಗೆ ಸಲ್ಲುವಂತಾಗಲಿ ಎಂದು ಹಾರೈಕೆ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ 591117
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ
8971117442

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group