spot_img
spot_img

ರಮೇಶ್ ಗೆ ಬೆಳಗಾವಿ ಉಸ್ತುವಾರಿ, ಮೂಡಲಗಿ ಗತಿಯೇನು?

Must Read

- Advertisement -

ಹೌದು, ಈ ಪ್ರಶ್ನೆಗೆ ಈಗ ಮತ್ತಷ್ಟು ಬಲ ಬಂದಂತಾಗಿದೆ. ಯಾಕೆಂದರೆ ಮೂಡಲಗಿ ತಾಲೂಕೆಂದು ಘೋಷಣೆಯಾಗಿದ್ದನ್ನು ರದ್ದು ಮಾಡಿದವರು ಇದೇ ರಮೇಶ ಜಾರಕಿಹೊಳಿಯವರು. ಹಾಗೆಂದು ಅವರೇ ಆಗ ಒಪ್ಪಿಕೊಂಡರು ಅಮೇಲೆ ಅದಕ್ಕಾಗಿ ಮೂಡಲಗಿಯಲ್ಲಿ ದೊಡ್ಡ ಹೋರಾಟವೇ ಆಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೃಹತ್ ಪ್ರಮಾಣದ ವಿರೋಧವನ್ನೇ ಎದುರಿಸಬೇಕಾಯಿತು. ಆದರೂ ಶಾಸಕರು ಮುತುವರ್ಜಿ ವಹಿಸಿ ತಿಂಗಳುಗಟ್ಟಲೆ ಬೆಂಗಳೂರಿನಲ್ಲೇ ಕುಳಿತು ಕೊನೆಗೂ ರದ್ದಾಗಿದ್ದ ಮೂಡಲಗಿಯನ್ನು ಮತ್ತೆ ತಾಲೂಕಾಗಿ ಘೋಷಣೆ ಮಾಡಿಕೊಂಡು ಬರುವಲ್ಲಿ ಯಶಸ್ವಿಯಾದರು. ಮೂಡಲಗಿಯ ಜನತೆ ಧರಣಿಯನ್ನು ಹಿಂತೆಗೆದುಕೊಂಡರು ಆದರೆ ಹೋರಾಟವನ್ನು ?

ಹೋರಾಟವನ್ನು ಹೇಗೆ ಹಿಂತೆಗೆದುಕೊಳ್ಳಲಾಗುತ್ತದೆ ? ಮೂಡಲಗಿ ಎಂಬ ಊರು ಮೊದಲಿನಿಂದಲೂ ಎಲ್ಲವನ್ನೂ ಹೋರಾಟದಿಂದಲೇ ಪಡೆದುಕೊಂಡು ಬಂದಿದೆ. ಮೂಲಭೂತ ಸೌಕರ್ಯಗಳಿಗಾಗಿ ಎಪ್ಪತ್ತರ ದಶಕದಲ್ಲಿ ಹೋರಾಟ, ಬಸ್ ಸ್ಟ್ಯಾಂಡ್ ಗಾಗಿ ಎಂಭತ್ತರ ದಶಕದಲ್ಲಿ ಹೋರಾಟ, ಆಮೇಲೆ 19-20 ನೇ ದಶಕದಲ್ಲಿ ತಾಲೂಕಿಗಾಗಿ ಹೋರಾಟ….ಹೀಗೆ ಹಲವು ಹೋರಾಟಗಳಿಂದಲೇ ಎಲ್ಲವನ್ನೂ ಪಡೆದಿದೆ ಮೂಡಲಗಿ. ದಶಕಗಳಿಂದಲೂ ಎಲ್ಲ ನಾಯಕರಿಂದ ಮಲತಾಯಿ ಧೋರಣೆಯನ್ನೇ ಅನುಭವಿಸುತ್ತ ಬಂದಿರುವ ಮೂಡಲಗಿ ನಗರವು ತಾಲೂಕಾಗಿ ಹೊರಹೊಮ್ಮಿದೆಯೇನೋ ನಿಜ ಆದರೆ ತಾಲೂಕಿಗೆ ಬೇಕಾದ ಸವಲತ್ತುಗಳನ್ನು ಹೊಂದಬೇಕಾದರೆ ಇನ್ನೂ ಎಷ್ಟು ವರ್ಷ ತಪಸ್ಸು ಮಾಡಬೇಕು?

- Advertisement -

ಇಲ್ಲಿ ಎಲ್ಲವೂ ಇದೆ. ವ್ಯಾಪಾರ ವಹಿವಾಟು ಚೆನ್ನಾಗಿದೆ. ಬೇರೆ ರಾಜ್ಯಗಳ ಜನರು ಇಲ್ಲಿಗೆ ಬಂದು ವ್ಯಾಪಾರದಲ್ಲಿ ಪ್ರಗತಿ ಕಾಣುತ್ತಾರೆ. ಆಸ್ತಿ ಸಂಪಾದಿಸುತ್ತಾರೆ. ಆದರೆ ಇದ್ದೂರ ಜನರಿಗೆ ಅನುಕೂಲವಾಗುವ ಸರ್ಕಾರಿ ಕಚೇರಿಗಳು ಪ್ರಾರಂಭವಾಗುತ್ತಿಲ್ಲ. ಒಂದು ವಿಚಿತ್ರವೆಂದರೆ ಮೂಡಲಗಿಗೆ ಸಬ್ ರಜಿಸ್ಟ್ರಾರ್ ಕಚೇರಿ ಸ್ಯಾಂಕ್ಷನ್ ಆಗಿ 26 ವರ್ಷಗಳೇ ಆದವು. ಇನ್ನೂ ಕಚೇರಿ ಆರಂಭವಾಗಿಲ್ಲ ! ಅದನ್ನು ಆರಂಭಿಸಬೇಕೆಂಬ ಮನೋಭಾವ ಶಾಸಕರಿಗೂ ಇಲ್ಲ, ಅಧಿಕಾರಿಗಳಿಗಂತೂ ಮೊದಲೇ ಇಲ್ಲ ! ಯಾಕೆಂದರೆ ಇಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಆರಂಭವಾದರೆ ಗೋಕಾಕದ ಆದಾಯದ ಮೇಲೆ ಹೊಡೆತ ಬೀಳುತ್ತದೆ ! ಇನ್ನು ನಮಗಂತೂ ದಾರಿ ಕಾಯದೇ ವಿಧಿಯಿಲ್ಲ !

ಮೂಡಲಗಿ ತಾಲೂಕು ಘೋಷಣೆಯಾಗಿ ಆಗಿನ ಸಚಿವ ರಮೇಶ ಜಾರಕಿಹೊಳಿಯವರ ‘ ಮನಸಿನಂತೆ ‘ ರದ್ದಾಯಿತು. ಇದರಿಂದ ಮೂಡಲಗಿ ಜನತೆ ಹೋರಾಟಕ್ಕಿಳಿಯಿತು. ಪಕ್ಕದ ಹಳ್ಳಿಯವರೂ ಬೆಂಬಲ ನೀಡಿದರು. ಶ್ರೀ ಶ್ರೀಪಾದಬೋಧ ಸ್ವಾಮೀಜಿಯವರ ನೇತೃತ್ವದಲ್ಲಿ ಸುಮಾರು 34 ದಿನಗಳ ಕಾಲ ಧರಣಿ ನಡೆಸಿದ ಊರ ಜನರ ಹೋರಾಟಕ್ಕೆ ಮಣಿದು ಮೂಡಲಗಿ ಮತ್ತೆ ತಾಲೂಕಾಯಿತು. ಆದರೆ ತಾಲೂಕಾದ ಹದಿನೈದು ದಿನಗಳ ಒಳಗೇ ತಾಲೂಕಿಗೆ ಬರಬೇಕಾದ ಎಲ್ಲ ಕಚೇರಿಗಳನ್ನು ಆರಭಿಸುವುದಾಗಿ ಭರವಸೆ ನೀಡಿದ ಶಾಸಕರು ತಹಸೀಲ್ದಾರ ಕಚೇರಿ ಹಾಗೂ ಸಿಡಿಪಿಓ ಕಚೇರಿ ಮಾತ್ರ ಆರಂಭಿಸಿ ಸುಮ್ಮನಾದರು. ಇದ್ದೂ ಇಲ್ಲದಂಥ ತಹಸೀಲ್ದಾರ ಕಚೇರಿಯೊಡನೇ ಜನರು ಏಗಬೇಕಾಗಿದೆ. ಇನ್ನೂ ಹಲವಾರು ಕಚೇರಿಗಳು ಮೂಡಲಗಿಗೆ ಬರಬೇಕಿದೆ.

- Advertisement -

ಈಗ ಸಾರ್ವಜನಿಕರಲ್ಲಿ ಎದ್ದಿರುವ ಪ್ರಶ್ನೆಯೇನೆಂದರೆ, ಯಾವುದೇ ಕಾರಣವಿಲ್ಲದೆ ಮೂಡಲಗಿ ತಾಲೂಕನ್ನು ರದ್ದು ಮಾಡಿರುವ ರಮೇಶ ಜಾರಕಿಹೊಳಿಯವರು ಈಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾರೆ. ಅಂದ ಮೇಲೆ ಈವರೆಗೆ ಆಗದ ತಾಲೂಕಿನ ಅಭಿವೃದ್ಧಿ ಇನ್ನು ಆಗುವುದೇ ಎಂಬುದು ಪ್ರಶ್ನೆ.
ತಾಲೂಕಾ ಹೋರಾಟದ ನಂತರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಯವರಿಗೆ ಚುನಾವಣೆಯಲ್ಲಿ ಸ್ವಲ್ಪ ಕಠಿಣ ಅನ್ನಿಸಿದ್ದು ನಿಜ. ಮೂಡಲಗಿ ಹೋರಾಟದಲ್ಲಿ ಮಿಂಚಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಚುನಾವಣೆಗೆ ನಿಲ್ಲುವ ಮೂಲಕ ಜಾರಕಿಹೊಳಿಯವರ ಕೋಟೆಯನ್ನು ಕೆಡವಲು ಯತ್ನಿಸಿದರು. ಇವರ ಜೊತೆ ತಾಲೂಕಿನ ಇತರೆ ನಾಯಕರಾದ ಅರವಿಂದ ದಳವಾಯಿ,ರಮೇಶ ಉಟಗಿ, ಲಕ್ಕಣ್ಣ ಸವಸುದ್ದಿ, ಈರಪ್ಪ ಬೆಳಕೂಡ, ಅಶೋಕ ಪೂಜೇರಿ, ಈರಪ್ಪ ಕಡಾಡಿ, ರಮೇಶ ವಂಟಗೋಡಿ ಅವರಲ್ಲದೆ ಬೈಲಹೊಂಗಲದ ಅರುಣ ಶಹಾಪೂರ ಅವರು ಕೂಡ ಇಲ್ಲಿಗೇ ಬಂದು ಹೋರಾಟಕ್ಕೆ ಬೆಂಬಲ ನೀಡುವುದರಿಂದ ಜಾರಕಿಹೊಳಿ ಕೋಟೆಯಲ್ಲಿ ಬಿರುಕು ಮೂಡಿತೆಂದೇ ಎಲ್ಲರೂ ತಿಳಿದುಕೊಂಡಿದ್ದರು. ಇದು ಸಹಜವಾಗಿ ಬಾಲಚಂದ್ರ ಜಾರಕಿಹೊಳಿಯವರಲ್ಲಿ ಅಸಮಾಧಾನ ಮೂಡಿಸಿತ್ತು.

ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಎದುರಿಸಿದ ಬಾಲಚಂದ್ರರು ಆರಿಸಿ ಬಂದರಾದರೂ ಅವರ ಮನಸಿನಿಂದ ಅಸಮಾಧಾನ ಇನ್ನೂ ಹೋಗಿಲ್ಲ ಎಂಬುದಕ್ಕೆ ಮೂಡಲಗಿಯ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದೇ ಸಾಕ್ಷಿ. ಈ ನಡುವೆ ನಗರಸಭೆಗೆ ಚುನಾವಣೆಗೆ ಜರುಗಿದಾಗ ಆಗಲೂ ಜೆಡಿಎಸ್ ಅಭ್ಯರ್ಥಿಗಳು ಪೈಪೋಟಿ ಕೊಟ್ಟು ಬಹುಮತದ ಸಮೀಪ ಬಂದು ನಿಂತರು. ಆದರೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸ್ಥಗಿತಗೊಂಡಿರುವುದರಿಂದ ರಾಜ್ಯದ ಎಲ್ಲ ನಗರಸಭೆಗಳು ತ್ರಿಶಂಕು ಸ್ಥಿತಿಯಲ್ಲಿ ನೇತಾಡುತ್ತಿವೆ. ಆದರೆ ಮೂಡಲಗಿ ನಗರಸಭೆ ಸ್ವಲ್ಪ ಹೆಚ್ಚು ನೇತಾಡುತ್ತಿದೆ ಎನ್ನಬೇಕು ! ಈಗ ಎಲ್ಲ ನಗರಸಭಾ ಸದಸ್ಯರು ತಮಗೆ “ಫುಲ್ ಪಗಾರ, ಬಿನ್ ಅಧಿಕಾರ” ಎಂದು ಹೇಳಿಕೊಳ್ಳುತ್ತ ತಿರುಗಾಡುವಂತಾಗಿದೆ.

ಈ ರೀತಿಯಾಗಿ ಒಣಗಿ ಹೋಗುತ್ತಿರುವ ಮೂಡಲಗಿಗೆ ರಮೇಶ್ ಜಾರಕಿಹೊಳಿಯವರು ಜಿಲ್ಲಾ ಉಸ್ತುವಾರಿಯಾಗಿದ್ದು ನುಂಗಲಾರದ ಬಿಸಿ ತುಪ್ಪವಾಗಿದೆ. ಯಾವುದೇ ಕಾರಣವಿಲ್ಲದೇ ಮೂಡಲಗಿ ತಾಲೂಕನ್ನು ರದ್ದು ಮಾಡಿದವರು ಇನ್ನು ಮೂಡಲಗಿ ಅಭಿವೃದ್ಧಿ ಮಾಡುತ್ತಾರಾ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ. ಅದರ ಚಿತ್ರಣ ಈಗಾಗಲೇ ಮೂಡಿದೆ. ನಗರದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ನಗರ ಸೇವಕರ ಮುಖದಲ್ಲಿ ಕಳೆಯಿಲ್ಲ. ನಾಗರಿಕರ ಯಾವುದೇ ಕೆಲಸಗಳಾಗುತ್ತಿಲ್ಲ. ಇದೆಲ್ಲದರ ಜೊತೆಗೆ ಕೊರೋನಾ ಹೊಡೆತ ಬೇರೆ. ಮೂಡಲಗಿ ನಗರಕ್ಕೆ ಗ್ರಹಣ ಬಡಿದಂತಾಗಿದೆ. ಮೂಡಲಗಿಯ ಮುಂದಿನ ದಿನಗಳು ಶಾಸಕರು ಹಾಗೂ ಉಸ್ತುವಾರಿ ಮಂತ್ರಿಗಳ ಮರ್ಜಿಯ ಮೇಲೆ ಅವಲಂಬನೆಯಾಗಿವೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ ಈಗಿನ ಪರಿಸ್ಥಿತಿ ಅಲ್ಲದೆ ತಾಲೂಕು ಹೋರಾಟದ ನಂತರ ರಮೇಶ ಜಾರಕಿಹೊಳಿಯವರು ಮೂಡಲಗಿಯ ಕಡೆ ಬಂದಿಲ್ಲ. ಹೋರಾಟದ ಮುನಿಸು ಏನೇ ಇರಲಿ ಜನನಾಯಕರಾಗಿ, ಮಂತ್ರಿಗಳಾಗಿ ಅವರು ಎಲ್ಲ ಕ್ಷೇತ್ರಗಳಲ್ಲಿ ತಿರುಗಾಡಿ ಜನರಲ್ಲಿ ಭರವಸೆ ಮೂಡಿಸಬೇಕು. ಈಗಾಗಲೇ ಅವರಿಗೆ ಬೆಳಗಾವಿ ಉಸ್ತುವಾರಿ ಖಾತೆ ದೊರಕಿತ್ತು ಆಗಿನ ಪರಿಸ್ಥಿತಿ ಬೇರೆ. ಈಗ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ರಾಜ್ಯ ಮಟ್ಟದಲ್ಲಿ ಸರ್ಕಾರದ ಭವಿಷ್ಯ ನಿರ್ಣಯ ತೆಗೆದುಕೊಳ್ಳುವಷ್ಟು ಎತ್ತರದಲ್ಲಿ ಅವರು ಬೆಳೆದು ನಿಂತಾಗ ಎಲ್ಲರನ್ನೂ, ಎಲ್ಲ ಪ್ರದೇಶಗಳನ್ನೂ ಸಮಾನವಾಗಿ ಕಾಣುವ ಮನೋಭಾವ ಅವರಲ್ಲಿ ಬರಬೇಕಾಗಿದೆ.

ಮೂಡಲಗಿ ಅಕ್ಷರಶ: ಮಲತಾಯಿ ಧೋರಣೆಗೆ ಒಳಗಾಗಿದೆ. ಆದ್ದರಿಂದ ಶಾಸಕರು, ಸಚಿವರು ಪೂರ್ವಗ್ರಹ ಪೀಡಿತರಾಗದೇ ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ !

ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. ಇದನ್ನು BUTTER TREE ಎಂದೂ...
- Advertisement -

More Articles Like This

- Advertisement -
close
error: Content is protected !!
Join WhatsApp Group