spot_img
spot_img

ರವಿವಾರದ ಕವನಗಳು

Must Read

- Advertisement -

ನಮ್ಮೂರು ಬದಲಾಗಿದೆ

ಟಿವಿಗಳು ಬಂದ ಮೇಲೆ
ಹಂತಿಪದ ಬೀಸುವಪದ
ಡಪ್ಪಿನಾಟ ಬಯಲಾಟ
ಕೋಲಾಟ ಡೊಳ್ಳಿನಪದ
ಪುರಾಣ ಕೀರ್ತನ ಭಜನೆ
ಕೇಳದಂತಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ

ಟ್ರಾಕ್ಟರ್ ಬಂದಮೇಲೆ
ಜೋಡೆತ್ತುಗಳಿಗೆ
ಗೆಜ್ಜೆ ಗಗ್ಗರಿ ಕೋಡಣಸು ಜೂಲ
ಹಾಕಿ ಸವಾರಿ ಬಂಡಿಯಲಿ
ಜಾತ್ರೆಗೆ ಹೋಗುವ
ಮಜಾ ಮಾಯವಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ

ಕಾನ್ವೆಂಟ ಶಾಲೆಗಳು ತೆರೆದ ಮೇಲೆ
ಹಿರೀಕರು ಹೇಳುತಿದ್ದ
ಗಾದೆ ಒಡಪು ಒಡವು
ಬಾಯಿಲೆಕ್ಕ ಸಮಸ್ಯಾಗಣಿತ
ಜಾನಪದಕಥೆಗಳನ್ನು
ಹೇಳುವರಿಲ್ಲ ಕೇಳುವರಿಲ್ಲ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ

- Advertisement -

ಕ್ರಿಕೆಟ್ ಬಂದ ಮೇಲೆ
ಹುಲಿಮನೆ ಚವ್ವ
ಗೋಟುಗುಣಿ ಬಗರಿ
ಕುಂಟೆಬಿಲ್ಲೆ ಚಿಣಿದಾಂಡು
ಮರಕೋತಿ ಗೋಲಿಗುಂಡು
ಆಟಗಳು ಬಂಧಾಗಿವೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ

ರಾಜಕೀಯ ಬಂದಮೇಲೆ
ಸೌಹಾರ್ದ ಸಹಕಾರ ಸಹಾಯ
ಪ್ರೀತಿ ವಿಶ್ವಾಸ ಇಲ್ಲದಂತಾಗಿ
ಜಾತಿಧರ್ಮಪಕ್ಷಕ್ಕೊಂದು
ಫಲಕಗಳು ಬಾವುಟಗಳು
ರಾರಾಜಿಸುತ್ತಿವೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ

ಎನ್.ಶರಣಪ್ಪ ಮೆಟ್ರಿ

- Advertisement -

ಜೀವ ಸೆಳೆತ

ಎಳೆಯುತ್ತಿದೆ ಜೀವ ಮುದುಕನದು ತನ್ನ ಬಾಳಸಂಗಾತಿಯ ನೋಡಲು ಒಬ್ಬರಿಗೊಬ್ಬರು ಕೊಡಿ ಬಾಳಿದ ದಿನಗಳು ನೆನೆಯಲು

ಮಕ್ಕಳು ಮಕ್ಕಳು ಎಂದು ನರಳಾಡಿದ ಆ ದಿನಗಳು
ಮಕ್ಕಳಿಬ್ಬರು ಬೇರ್ಪಡಿಸಿ ನರಳಾಡಿಸಿದರು ಈದಿನ
ಎಳೆಯುತ್ತಿದೆ ಜೀವ ಮುದುಕನದು ತನ್ನವಳ ನೋಡಿ ಮೈಮರೆಯಲು

ಒಂದಾಗಿ ಕುಳಿತು ಊಟ ಮಾಡಿದ ಆ ದಿನಗಳು ನೆನಪಾಗುತ್ತಿವೆ ಸಂಬಂಧಿಕರಿಲ್ಲದ ಒಬ್ಬಂಟಿಯಾಗಿ ತಿಂದ ಈ ದಿನ ಮರೆಯ ಬೇಕೆನಿಸುತ್ತಿದೆ ಯಾರಿಗೆ ಬೇಕು ಈ ಜೀವ ಬೇರೆ ಬೇರೆಯಾಗಿ ಬದುಕು ನಡೆಸುವ ಮುದುಕರ ಜೀವ

ಅಮ್ಮನನ್ನು ಹಿರಿಯ ಅಣ್ಣ
ಅಪ್ಪನನ್ನು ಕಿರಿಯ ತಮ್ಮ
ನೋಡಿ ಕೊಳ್ಳುವ ನೆಪದಲ್ಲಿ ಹಂಚಿಕೊಂಡಿದ್ದಾರೆ ಅವರಿಬ್ಬರನ್ನು ಎಳೆಯುತ್ತಿದೆ ಜೀವ ಮುದುಕನದು ತಾನು ಉಣಿಸಿ ಬೆಳೆಸಿದ ಮಗನನ್ನು ನೋಡಲು

ಕೊನೇ ಗಾಲದಲ್ಲಿ ಸತ್ತಾಗ
ನರಳಾಡುವ ಜೀವ ನೋಡಲಾಗದೆ ಎಳೆಯುತ್ತಿದೆ ಜೀವ ಮುದುಕನದು ಪರಿತಪಿಸುತ್ತಿದೆ ಜೀವ ಬಾಳಸಂಗಾತಿಯ ನೆನೆದು

ರಾಹುಲ್ ಸರೋದೆ
ಗಂಗಾವತಿ


ಅಪ್ಪ ಕ್ಷಮಿಸಿಬಿಡು

ಅಪ್ಪ ನೀ ಹಾಕಿ ಕೊಟ್ಟ
ಸಂವಿಧಾನದ ಹಾದಿಯಡಿ ವಿಧಾನಸೌಧ, ಸಂಸತ್, ಮೆಟ್ಟಿಲೇರಿ ಶಾಸಕ ಸಂಸದ ಮಂತ್ರಿ ಪಟ್ಟವೇರಿ ಸಂವಿಧಾನಕ್ಕೂ ಕೊಳ್ಳಿಯಿಟ್ಟರೂ ಕುದಿಯದೆ ಸುಮ್ಮನಿದ್ದೇವೆ, ಅಪ್ಪ ಕ್ಷಮಿಸಿಬಿಡು

ಅಪ್ಪ ನಿನ್ನ ತತ್ವಗಳನ್ನು ಅನುಸರಿಸಿ ಬೇಕಾದಷ್ಟು ತಿಂದು-ತೇಗಿ ಅರಗಿಸಿಕೊಳ್ಳದೆ ಸಂವಿಧಾನವನ್ನು ಬದಲಿಸುತ್ತೇವೆಂದು ಬಾಯಿ ಬಾಯಿ ಬಡಿದುಕೊಂಡರೂ ಅವರೊಟ್ಟಿಗೆ ಮೂಕ ನಾಯಕರಾಗಿದ್ದೇವೆ ಅಪ್ಪ ಕ್ಷಮಿಸಿಬಿಡು

ಅಪ್ಪ ನಿನ್ನ ಮೂರ್ತಿಯನ್ನು ಅಷ್ಟ ದಿಕ್ಕಿಗೂ ಸ್ಥಾಪಿಸಿ ಹಾರ ಬದಲಿಸಿ ಅವಮಾನಗೊಳಿಸಿ ವಿರೂಪಗೊಳಿಸಿದರೂ ಮತದ ಎಣಿಕೆಯಲ್ಲಿ ಮೌನವಾಗಿದ್ದೇವೆ ಅಪ್ಪ ಕ್ಷಮಿಸಿಬಿಡು

ಅಪ್ಪ ಸತ್ಯ ಶಾಂತಿ ನ್ಯಾಯ ನೆಲೆಸಿದ್ದ ರಾಜಗೃಹವನ್ನು ಕಲ್ಲೆಸೆದು ವಿಕೃತಿ ಮೆರೆದರೂ ಜಾಣ ಕುರುಡರಂತೆ ನಾವು ಕುಂತ ಕುರ್ಚಿ ಗಟ್ಟಿಯಾಗಿದೆಯಾಗಿದೆಯೆಂದು ಸುಮ್ಮನಿದ್ದೇವೆ ಅಪ್ಪ ಕ್ಷಮಿಸಿಬಿಡು

ಅಪ್ಪ ನೀ ಹಾಕಿದ ಸಂವಿಧಾನ ಭದ್ರ ಬುನಾದಿಯ ಒಂದೊಂದೆ ಮೆಟ್ಟಿಲುಗಳನ್ನು ಮುರಿದರೂ ನಾವು ದಿನಾಲು ಸತ್ತವರಂತೆ ಬಾಳುತ್ತಿದ್ದೇವೆ ಅಪ್ಪ ಕ್ಷಮಿಸಿಬಿಡು

ಮೈಲಾರಪ್ಪ ಬೂದಿಹಾಳ ಮುಗಿಲಹಕ್ಕಿ


ಶಿವಸ್ತುತಿ ಶಿವಪರಿಹರಿಸೊ…..

ಮೂಡಣದಿ ಬಂಗಾರದ
ರಥವೇರಿ ಬಂದ ಶಿವ
ಕಾನನದ ಪುಷ್ಪಕ್ಕೆ
ಅರಳುವಿಕೆ ತಂದ ಶಿವ ।ಪ ।
ಮುಂಜಾನೆಯ ತಂಬೆಲರು
ತೀಡುತಲಿ ತಾ ಬಂದ ಶಿವ
ಮನದ ಮೂಲೆಯಲ್ಲಿ
ಪಿಸುಗುಟ್ಟಿದೆ ಶಿವನಾಮ ।೧।
ಪ್ರಕ್ರತಿ ಮಾತೆಯಲ್ಲು
ಮೂಡಿದೆ ಶಿವನಾಮ
ಮನೆಯ ಅಂಗಳದ
ರಂಗಿಗೂ ಅದೆ ಭಾವ ।೨।
ಸೃಷ್ಟಿಕರ್ತನೆ ನೀನು
ಮಸಣದ ವಾಸಿ
ಮನವ ಸಿಂಗರಿಸು ನೀ
ನಿನ ಧ್ಯಾನ ತುಂಬಿ।೩।
ಮೂಜಗದ ಒಡೆಯನೇ
ನಿನಗೆ ನಾ ಶರಣು
ಶಿವನೇ ಪರಿಹರಿಸೊ
ಇಹ ಪರದ ನೋವ ।೪।

ಲಲಿತಾ ಕ್ಯಾಸನ್ನವರ


ಬರಲಿದೆ ಕೇಡು

ಎಲ್ಲಿ ಹೋದವೋ ಆ ಸುಂದರ ಹಕ್ಕಿಗಳು,
ನೆರಳು ನೀಡುತ್ತಿದ್ದ ರಸ್ತೆ ಬದಿ ಮರಗಳು,
ಜೀವಸೆಲೆಯಾಗಿದ್ದ ಆ ತೊರೆಗಳು,
ಎಲ್ಲಿ ಹೋದವೋ ರೈತರ ಮೊಗದ ಮುಗುಳ್ನಗೆಗಳು…..

ಅಂದು ಎಲ್ಲೆಲ್ಲೂ ಹಸಿರು-ಹಸಿರು,ಝುಳು-ಝುಳು ನೀರು,
ರೈತನ ಮೊಗದಲಿ ಸಂತೃಪ್ತಿಯ ಉಸಿರು,
ಇಂದಾಯಿತು ಮನುಜನ ಸ್ವಾರ್ಥಕೆ ಪರಿಸರದ ಬಲಿ,
ಕೆರೆ -ಕಟ್ಟೆಗಳಾಯಿತು ನೂತನ ಲೇಔಟ್ ಗಳಿಗೆ ಧಾಳಿ…!!!!!

ಮರವಿಲ್ಲದೇ ಮಳೆ ಹೋಯಿತು,ಬರ ಬಡಿಯಿತು,
ಅಂತರ್ಜಲ ಕುಸಿಯಿತು,ಬದುಕೇ ಬರಡಾಯ್ತು,
ಕೊಳವೆ ಬಾವಿಗಳ ಧಾಳಿ,ತಂದಿತು ಸಂತೃಪ್ತಿ
ಭೂಒಡಲು ಬತ್ತಿತು,ಭೂಕಂಪವಾಯ್ತು…

ಕಲುಷಿತ ನೀರು ಕುಡಿದು ಸಾವು,
ಇದು ಇಂದಿನ ಸುದ್ದಿ !!
ಕುಡಿಯಲು ನೀರು ದೊರಕದೇ ಸಾವು,
ಇದು ಮುಂಬರುವ ಸುದ್ಧಿ !!!

ಅಣ್ಣಾ ! ನೀರು ಹಣವಿದ್ದಂತೆ
ನಿನ್ನ ಜೀವದುಸಿರು ಇದ್ದಂತೆ,
ಮಿತವಾಗಿ ಬಳಸಿದರೆ ಬಾಳು ಹಾಲ್ಜೇನು,
ಇಲ್ಲದಿದ್ದರೆ ಮುಂದೊಮ್ಮೆ ಬರಲಿದೆ ನೀರಿನ ಭೀಕರ ಬರ !!!!

ನೀರಿನ ವ್ಯರ್ಥ ಬಳಕೆ ಬಿಡು,
ಮಳೆ ನೀರು ಸಂಗ್ರಹಿಸಿ ಕೂಡಿಡು,
ಕೆರೆ – ಕಟ್ಟೆ ಆಕ್ರಮಿಸುವ ಪ್ರಯತ್ನ ಬಿಡು,
‘ನೀರು ಉಳಿಸಿ’ ‘ಪರಿಸರ ರಕ್ಷಿಸದಿದ್ದರೆ’
ನಿನಗೆ ಬರಲಿದೆ ಕೇಡು…

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group