spot_img
spot_img

ರವಿವಾರದ ಕವನಗಳು

Must Read

- Advertisement -

ಅತಿಥಿಗಳು ನಾವು

ಜಗತ್ತಿಗೆ ಬಂದ ಅತಿಥಿಗಳು
ಮಾಲಿಕರೆಂಬ ಗತ್ತು
ಬಂದು ಹೋಗುವ ಮಧ್ಯ
ಭಿನ್ನತೆಯ ಠಾವು
ಆಮಿಷಗಳ ಬಲಿಯಾಗಿ
ಅಧಿಕಾರದ ಮದವೇರಿ
ಸಂಪತ್ತು ಗಳಿಕೆಯ ಹುನ್ನಾರದಿ
ಹೊಸಗಿ ಹಾಕುತಿರುವೆವು
ನನ್ನವರೆಂಬ ಹೂ ಬಳ್ಳಿ
ನಾನಷ್ಟೆ ಎಂಬ ಭ್ರಮೆ
ಕಳಚುವ ಪರಿ
ಬಂದೆ ಬರುವುದು
ನಶ್ವರದ ಬದುಕು
ಅರ್ಥ ಮಾಡಿಕೊಳ್ಳದ
ಮೂಢತೆ ಆವರಿಸಿ
ಕೃತಕಗಳ ಮರ್ಮ
ಸ್ವೇಚ್ಛಾಚಾರದ ನಡವಳಿಕೆ
ಕಡಿವಾಣ ವಿಲ್ಲದ ಬಂಡಿ
ಎತ್ತೆಂದರೆತ್ತ ಸಾಗಿ
ಮಧುರ ಮನಗಳಿಗೆ
ಹಾಕಿದೆ ಬೀಗ
ತಕ್ಕಡಿಯ ಹಾಗೆ ಹೋರಳುತ
ಸಕ್ಕರೆಯ ಬಯಸುತ
ಅಕ್ಕರೆಯ ಮಾತನಾಡುವ
ನಟನ ಬದುಕು
ಪರದೆ ಮುಗಿಯುವ
ಮುನ್ನ ಎಚ್ಚರಿಕೆ ಇರಲಿ
ಕ್ಷಣ ಹೊತ್ತು
ಅಣಿ ಮುತ್ತು
ಇರಲಿ ಕೊಡುಗೆ
ನಿನ್ನದೊಂದು ಕೈವಾಡದಿ
ಆಸೆ ಪಡದೆ
ಇದ್ದುದನ್ನು ಅನುಭವಿಸು
ಮತ್ತಷ್ಟಿದ್ದರೆ ಹಂಚು
ಊಟವೆ ಸ್ವಲ್ಪ ಕಾಲ
ಉಳಿವುದು ಗೊತ್ತಿದ್ದರೂ
ಹೊಟ್ಟೆಯ ಮೇಲೆ
ಬಟ್ಟೆ ಕಟ್ಟದಿರು
ಕಲ್ಮಶವ ಸರಿಸಿ
ಸ್ವಾದವ ಅರುಹಿ
ಮಾನವೀಯ ಮಾನವನಾಗು
ದುಸ್ತರ ದಿನ ದೂರಿಲ್ಲ
ಮಾತ್ಸರ್ಯದ ಮನವ
ತಿಳಿಯ ಹೊನಲಾಗಿಸು
ತಿಥಿ ಆಗುವ ಮುನ್ನ
ಅತಿಥಿ ಎಂಬುದನು
ಮರೆಯದಿರು ಇನ್ನ
ಬುದುಕು ಪಯಣ
ಪಯಣದ ರಸದೌತಣ ಅನುಭವಿಸು
ವೃಥಾ ಕಾಲಹರಣ ಬೇಡ
ಮುಖಸ್ತುತಿಗೆ ಕೈ ಹಾಕದಿರು
ನಿನ್ನ ಸ್ತುತಿಸುವ ಹಾಗೆ
ಬದುಕಿ ತೋರಿಸು
ಮನವ ಮಲ್ಲಿಗೆಯಾಗಿಸಿ
ಸದಾಚಾರದ ಘಮ ಬೀರಿ
ಸಹಾರದ ಎಸಳಾಗಿ
ಮಣ್ಣಾಗುವ ಹೊತ್ತು
ಬೇಡ ಗತ್ತಿನ ಮತ್ತು
ಮಣ್ಣಾದರು ಬರಲು
ಮೀನ ಮೇಷ
ಮಾಡುವ ಸ್ಥಿತಿಗೆ
ಮಾಯಕಾರ ತಂದು ನಿಲ್ಲಿಸಿದ
ಇನ್ನಾದರೂ ಮುಂದಡಿ ಇರಿಸು
ಕನ್ನ ಮಾಡದೆ
ಸನ್ಮತಿಯ ಹೊಂದು.

ರೇಷ್ಮಾ ಕಂದಕೂರ


ಅಪ್ಪ ನಿನಗೆ ವಯಸ್ಸಾಗಲ್ಲ

ಕೆಸರು ಮೈಗೆ ಮೆತ್ತಿಕೊಂಡು
ನೇಗಿಲ ಮೇಳಿ
ದಿನದ ಸೂರ್ಯನಂತೆ ಹೊಳೆದು
ಬೆವರ ಹನಿಯ ಭೂಮಿಗಿಳಿಸಿ
ಹಗಲೆಲ್ಲಾ ಕೆಸರ ಗದ್ದೆಯಲ್ಲಿ
ಉತ್ಸಾಹದಿಂದ ದುಡಿಯುತ್ತಿದ್ದೆ
ಅಪ್ಪಾ ನೀನಂದು
ನನಗದು ಅರಗುವುದರೊಳಗೆ
ನೀ ಮುದುಕನಾಗಿದ್ದೆ
ನಾ ಅಪ್ಪನಾಗಿದ್ದೆ
ಅಪ್ಪ ನಿನಗೆ ವಯಸ್ಸಾಗಲ್ಲವೆಂಬುದು
ನನ್ನ ಹಣೆ ಬೆವರಿನಿಂದ ನಾನರಿತಿದ್ದೆ

- Advertisement -

ಹೊಂಡು ನೀರಿನಲಿ ಮುಖ ತೊಳೆದು
ಹೊಲದ ಬದುವಿನಲಿ ಬಾಗಿ ಕುಳಿತು
ರೊಟ್ಟಿ ಮುರಿಯಲು ನೀ ಕೈಚಾಚಿದಾಗ
ನಿನ್ನ ಅಂಗೈ ಬೊಬ್ಬೆಗೆ
ಕನ್ನಡಿ ಬೇಕಿರಲಿಲ್ಲ
ಅಮ್ಮ ನೋವಲಿ ವಟಗುಟ್ಟಿದಾಗ
ಸುಮ್ಮನೆ ನೀ ಚಂದ್ರನಂತೆ ನಕ್ಕೆಯಲ್ಲ
ಆಗದು ನನಗೊಂದು ತಿಳಿಯಲಿಲ್ಲ
ಬೆಪ್ಪನಾಗಿ ನೋಡುವುದರ ಹೊರತು

ನೀನಾಗ ನೋವು ಸಹಿಸಿದ್ದು
ಈಗೀಗ ನನ್ನ ಕಾಡಲಾರಂಭಿಸಿದೆ
ಮರಕೊರಕ ಹುಳುವಿನಂತೆ
ಅದು ನಮ್ಮ ಹೊಟ್ಟೆ ತುಂಬಿಸುವ
ಭರಾಟೆಯ ಹೋರಾಟವೆಂದು
ಬಾಳಿನರ್ಥದ ಗುಟ್ಟೆಂದು
ಅಪ್ಪ ನಿನಗೆ ವಯಸ್ಸಾಗಲ್ಲ
ನಿನ್ನ ದುಡಿಮೆ ತ್ಯಾಗಕ್ಕೂ

ನಾ ಎಳೆಯರ ಕೆಳೆಯ
ನೀ ಎತ್ತುಗಳ ಗೆಳೆಯ
ಎರರಿಗೆ ಎದೆ ಕಳೆದ
ನೀವು ಪರರುಪಕಾರಿ
ಜೀವನ ಕಲೆಯ ಚೇತೋಹಾರಿ
ಕುಡುಗೋಲು ಬಾರುಕೋಲು ಹಾರೆ ಬುಟ್ಟಿ
ನೀನಿವುಗಳ ಒಡನಾಡಿ
ನಾವು ಬಾನಾಡಿ
ಅಪ್ಪ ನಿನಗೆ ವಯಸ್ಸಾಗಲ್ಲ
ಇಳೆಯ ದಂದುಗದಲ್ಲಿ

- Advertisement -

ತುತ್ತು ಕಲಸುವ ಕೈಯಿಗೆ
ಸತ್ವ ಒದಗಿಸುವ ಅಪ್ಪ
ನೀನಾಗಿದ್ದೆ ಅಂದು
ಅಂಬೆಗಾಲಿಗೆ ಹಿಂಬುಗಾಲಾಗಿ
ನಾನಿಂದು ನಿಂತಾಗ
ಸಂಸಾರ ರಥ ಎಳೆಯುವ
ಮರ್ಮ ನಾನರಿತಿದ್ದೆ
ಅಪ್ಪ ನಿನಗೆ ವಯಸ್ಸಾಗಲ್ಲವೆಂಬುದು
ನಾನೂ ಸಾಧಾರ ಪಡಿಸಿದ್ದೆ

ಕೆ ಬಿ ವೀರೇಶ
ಮೊ:9980489569


ವಿದ್ಯಾರ್ಥಿಯ ಪ್ರಲಾಪ

ಶಾಲೆ ಎಂಬುದೆ ಕಾಣದಾಗಿದೆ
ಪುಸ್ತಕ ಕನ್ನಡಿ ಗಂಟಾಗಿದೆ
ಗುರುಗಳ ದರುಶನವಿಲ್ಲದೆ ಮನ
ನೊಂದು ಬೆಂದು ನಲುಗಿ ಹೋಗಿದೆ.
ಪ್ರತಿ ವರುಷ ಈ ಹೊತ್ತಿಗೆ
ತೆರೆಯುತ್ತಿದ್ದವು ನಮ್ಮ ಹೊತ್ತಿಗೆ
ಓದು ಬರಹ ಸುಖವಾಗಿ ಸಾಗಿ
ಚಡಪಡಿಸುತ್ತಿದ್ದೆವು ಇನ್ನಷ್ಟು ಓದಿಗಾಗಿ.
ಬರಬಾರದೇನೋ ಬಂದಿತು ಹೀಗೆ
ಹೀಗಾದರೆ ನಮ್ಮ ಅಭ್ಯಾಸ ಹೇಗೆ?
ಓದುವುದ್ಯಾವಾಗ? ಬರೆಯುವುದ್ಯಾವಾಗ?ನಮ್ಮಯ ಹಣೆ ಬರಹ ಹೀಗ್ಯಾಕೆ?.
ಎಂದಿಗೆ ಕೊನೆಯೋ ಯಾರೂ ಕಾಣರು
ಶಾಲೆಯ ಪ್ರಾರಂಭ ಯಾರೂ ಹೇಳರು
ಮನೆ ಹಿಡಿದಿಹೆವು ಟಿವಿ ನೋಡುತ
ಖಂಡಿಸುವವರೆ ನೋಡೆನ್ನುವರು ಖಚಿತ.
ವಿಷಯವೇನೋ ತಿಳಿತಿದೆ ತಿಳಿಯಾಗಿ
ಕೇಳದು ಗುರುಗಳ ದನಿ ಅಲೆಅಲೆಯಾಗಿ
ಗುರು ಶಿಷ್ಯ ಬಾಂಧವ್ಯ ದೊರೆಯದೆ ಹೋಗಿದೆ
ಇನ್ನೆಷ್ಟು ದಿನವಿದು ತಿಳಿಯದಾಗಿದೆ.
ಹೆದರಿದರೆ ಹೆಮ್ಮಾರಿ ಹೋಗದು ಎದುರಿಸಿ ಓಡಿಸಿ ಈ ಕರೋನ ಎಂಬ ರೋಗವನ್ನು .

ಎಂ. ಸಿ .ಅಗಸಗಿ, ಶಿಕ್ಷಕರು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group