spot_img
spot_img

ಹೃದಯವಂತರಿಗೆ ಬೆಣ್ಣೆ ಬುದ್ಧಿವಂತರಿಗೆ ಕೇವಲ ಮಜ್ಜಿಗೆ

Must Read

- Advertisement -

ಇತ್ತೀಚಿನ ದಿನಮಾನಗಳಲ್ಲಿ ಒಳ್ಳೆಯವರು ಒಳ್ಳೆಯತನ ಅಂದರೆ ಮೂಗು ಮುರಿಯುವದೇ ಹೆಚ್ಚಾಗಿದೆ. ‘ಒಳ್ಳೆಯತನಕ್ಕೆ ಬೆಲೆ ಇಲ್ಲ.ಒಳ್ಳೆಯವರಿಗೆ ಕಷ್ಟಗಳೇ ಹೆಚ್ಚು. ಒಳ್ಳೆಯವರಿಗೆ ಸುಖವಿಲ್ಲ.’ ಎಂಬ ಮಾತು ಎಲ್ಲೆಲ್ಲೂ ಕಿವಿಗೆ ಬೀಳುತ್ತಿದೆ. ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಹೇಳಿ ಕೊಡುವ ಹೃದಯ ವೈಶಾಲ್ಯ ಮತ್ತು ಮಾನವ ಸಂಬಂಧಗಳ ಕುರಿತಾಗಿ ಹೇಳಿ ಕೊಡುವ ನೀತಿ ಪಾಠಗಳು ಕೇವಲ ಅಂಕಕ್ಕೆ ಮಾತ್ರ ಸೀಮಿತ ಎನ್ನುವಂತಾಗಿವೆ. ಬುದ್ಧಿವಂತಿಕೆ ಅವಶ್ಯಕ ಹೌದು ಅದಿಲ್ಲದಿದ್ದರೆ ನಾವು ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತೇವೆ. ಬುದ್ಧಿವಂತಿಕೆ ಅದ್ಭುತವಾದುದೆಂಬ ಮಾತನ್ನು ಅಲ್ಲಗಳೆಯುವಂತಿಲ್ಲ.

ಆದರೆ ಅದು ಅರ್ಥಪೂರ್ಣ ಬದುಕಿಗೆ ಸನ್ನಡತೆ ಸಚ್ಚಾರಿತ್ರ್ಯದಷ್ಟು ಪ್ರಾಮುಖ್ಯತೆ ಹೊಂದಿಲ್ಲ. ಶಿಕ್ಞಣ ಸಂಸ್ಥೆಗಳಲ್ಲಿ ಭಾವನೆಗಳನ್ನು ನಿಗ್ರಹಿಸುವುದು ಇತರರ ಭಾವನೆಗಳಿಗೆ ಸ್ಪಂದಿಸುವ ತರಬೇತಿಯನ್ನು ನೀಡಲಾಗುವುದಿಲ್ಲ. ನಮ್ಮ ಶಿಕ್ಷಣ ಬೌದ್ಧಿಕ ಕ್ಷಮತೆಯನ್ನು ಹರಿತಗೊಳಿಸುತ್ತದೆ. ವ್ಯವಹಾರಿಕ ದಕ್ಷತೆಯನ್ನು ವರ್ಧಿಸುತ್ತದೆ. ಏನೇ ಹೇಳಿ ಬುದ್ಧಿ ನೀಡುವ ಸಹಾಯ ಏನಿದ್ದರೂ ಎರಡನೆಯದ್ದು. ನಿಜವಾದ ಸಹಾಯ ಭಾವನೆಯದ್ದು. ಇತರರಿಗಾಗಿ ಸ್ಪಂದಿಸುವ ಗುಣವೇ ಮಾನವೀಯತೆಯ ಗುಣ.ಅದೇ ಇಲ್ಲದಿದ್ದರೆ ಎಷ್ಟು ಬುದ್ಧಿವಂತನಾದರೂ ಉಪಯೋಗವಿಲ್ಲ.

‘ವ್ಯಕ್ತಿ ತನ್ನ ಹೃದಯವನ್ನು ನಂಬಬೇಕು. ಹೃದಯ ದುರ್ಬಲವಾದರೆ ಬುದ್ಧಿಯ ಹಿಡಿತವೂ ಹೊರಟು ಹೋಗುತ್ತದೆ.’ ಎನ್ನುತ್ತಾನೆ ಫ್ರೆಂಚ್ ಕಲಾವಿದ ಪಾಲ್ ನೆಝಾನ್ನೆ. ತನ್ನ ಒಳಿತು ಕೆಡುಕುಗಳನ್ನು ಅರಿತುಕೊಂಡು ಒಳಿತಿನೆಡೆಗೆ ಮುನ್ನಡೆಯುವ ಶಕ್ತಿ ನಮ್ಮೊಳಗೇ ಇದೆ. ಅದನ್ನರಿತರೆ ದೃಷ್ಟಿ ವೈಶಾಲ್ಯವಾಗುತ್ತದೆ. ಮತ್ತು ಪ್ರತಿಯೊಬ್ಬರಿಂದಲೂ ಸ್ವೀಕಾರಾರ್ಹ ನಡೆಯೂ ನಮ್ಮದಾಗುತ್ತದೆ. ಮನದಾಳದ ನಿರಾಸೆಯನ್ನು ಹೋಗಲಾಡಿಸಿ ಒಳ್ಳೆಯ ಜೀವನದ ಆನಂದ ಪ್ರಾಪ್ತಿಯಾಗುತ್ತದೆ ಎಂಬುದು ಸೂರ್ಯನಷ್ಟೇ ಸತ್ಯ.

- Advertisement -

ಕಡು ಬೇಸಿಗೆಯಲ್ಲಿ ಹೂಜಿಗಳಲ್ಲಿಟ್ಟ ನೀರು ಬಲು ತಂಪು ಎಂದು ಖುಷಿಯಿಂದ ಕುಡಿಯುತ್ತೇವೆ. ಅದನ್ನು ಮಣ್ಣಿನ ಹೂಜಿ ಎಂದೂ ಹೇಳುತ್ತೇವೆ. ಹಾಗಂತ ಅದು ಕೇವಲ ಮಣ್ಣಿನಿಂದ ಮಾಡಲ್ಪಟ್ಟಿರುವುದಿಲ್ಲ. ಒಂದು ಹೂಜಿ ತಯಾರಾಗುವಾಗ ಅದಕ್ಕೆ ಮಣ್ಣು ಮತ್ತು ನೀರು ಎರಡೂ ಬೇಕು. ಹೂಜಿಯಲ್ಲಿ ಮಣ್ಣಿನ ಅಂಶ ಹೆಚ್ಚಿರುವುದರಿಂದ ಮಣ್ಣಿನ ಹೂಜಿ ಎಂದು ಕರೆಯುತ್ತೇವೆ.

ಇಲ್ಲಿ ಒಂದು ವಿಷಯವನ್ನು ಮೊದಲೇ ಸ್ಪಷ್ಟ ಪಡಿಸುವುದು ಒಳಿತು. ಒಳಿತೆನ್ನುವುದು ಸಂಪೂರ್ಣ ಒಳಿತಿನಿಂದಲೇ ಕೂಡಿರುವುದು ಅದರಲ್ಲಿ ಕೆಟ್ಟದ್ದು ಲವಲೇಷವೂ ಇರುವುದಿಲ್ಲ. ಕೆಟ್ಟದ್ದರಲ್ಲಿ ಒಳ್ಳೆಯದು ಒಂದು ಇನಿತೂ ಇರುವುದಿಲ್ಲ. ಅಂತ ಸಾಮಾನ್ಯವಾಗಿ ತಪ್ಪು ಭಾವಿಸುತ್ತೇವೆ.

ಆದರೆ ಹಾಗೆ ತಿಳಿಯುವ ಹಾಗಿಲ್ಲ. ಮಾನವನು ಒಳ್ಳೆಯ ಮತ್ತು ಕೆಟ್ಟ ಗುಣಗಳ ಮಿಶ್ರಣವಾಗಿದ್ದಾನೆ ಒಳ್ಳೆಯ ಗುಣಗಳು ಹೆಚ್ಚಾಗಿದ್ದರೆ ಒಳ್ಳೆಯವನೆಂದೂ ಕೆಟ್ಟ ಗುಣಗಳು ಅಧಿಕವಾಗಿದ್ದರೆ ಕೆಟ್ಟವನೆಂದೂ ಹೇಳುತ್ತೇವೆ. ಯಾವುದು ಅಧಿಕವುಳ್ಳದ್ದಾಗಿದೆಯೋ ಅದನ್ನು ವ್ಯವಹರಿಸುತ್ತೇವೆ.

- Advertisement -

ಸೃಷ್ಟಿಯಲ್ಲಿ ಯಾವುದಕ್ಕೇನೂ ಕೊರತೆಯಿಲ್ಲ. ‘ನಿಸರ್ಗ ನಮ್ಮ ಅಗತ್ಯಗಳನ್ನು ಈಡೇರಿಸಬಲ್ಲದು. ಆದರೆ ಸ್ವಾರ್ಥ ವ್ಯಾಮೋಹದಲ್ಲಿ ಬಿದ್ದ ನಮ್ಮ ದುರಾಸೆಗಳನ್ನು ಅಲ್ಲ.’ ನಿಸರ್ಗದೇವತೆಯು ಕರುಣಿಸಿದ್ದನ್ನು ಬಳಸಿಕೊಂಡು ಆಂತರಿಕವಾಗಿ ವಿಕಾಸವಾಗುತ್ತ ಒಳ್ಳೆಯತನದತ್ತ ಸಾಗಬೇಕು ಸಾವಿರಾರು ವರುಷಗಳ ಹಿಂದೆ ಬಾಳಿದ್ದ ಋಷಿ ಮುನಿಗಳು ಸಾಧು ಸಂತರು ಶರಣರೆಲ್ಲ ಸತ್ಪುರುಷರಾಗಿದ್ದರು.

ಅವರ ಬಾಳಿನಲ್ಲಿ ಸಂತಸದ ಜೇನು ತುಂಬಿಕೊಂಡಿತ್ತು. ಹಾಗಂತ ಅವರ ಕಾಲದಲ್ಲಿ ದುಷ್ಟ ಜನ ಇರಲಿಲ್ಲ ಅಂತಲ್ಲ. ಮುಳ್ಳುಗಳ ಮಧ್ಯೆಯೇ ನಕ್ಕು ಅರಳುವ ಗುಲಾಬಿಯಂತೆ ಕೆಟ್ಟವರ ನಡುವೆಯೇ ಸುಖದಿಂದ ಬದುಕಲು ಕಲಿತಿದ್ದರು.ಒಂದೇ ಸಮನೆ ಧಾರಾಕಾರವಾಗಿ ಸುರಿಯುವ ಕೆಟ್ಟವರ ಅಟ್ಟಹಾಸದಲ್ಲೂ ಸದ್ಗುಣಗಳ ರಸ್ತೆಯನ್ನು ಸೀಳಿಕೊಂಡು ಮುನ್ನಡೆಯುವ ಧೈರ್ಯ ಒಳ್ಳೆಯವರು ಹೃದಯವೈಶಾಲ್ಯತೆಯನ್ನು ಹೊಂದಿದವರು ಸಿದ್ಧಿಸಿಕೊಂಡಿರುತ್ತಾರೆ. ಇಂದಿನ ಜಗತ್ತಿನಲ್ಲಿ ಬುದ್ಧಿವಂತರು ಹೇರಳವಾಗಿ ದೊರೆಯುತ್ತಾರೆ. ಆದರೆ ಹೃದಯವಂತರ ಕೊರತೆ ಬಹುವಾಗಿ ಕಾಡುತ್ತಿದೆ.

ಒಳ್ಳೆಯವರಲ್ಲಿ ಹೃದಯವೈಶಾಲ್ಯತೆ ಇದ್ದೇ ಇರುತ್ತದೆ. ಕೆಟ್ಟವರು ಬುದ್ಧಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಬದುಕುವುದಕ್ಕೆ ಭೌತಿಕ ಸುಖ ಸಮೃದ್ಧಿ ಬೇಕು. ಅದರೆ ಅದುವೇ ಬದುಕಿನ ಗುರಿಯಲ್ಲ ಪರಮೋದ್ದೇಶವೂ ಅಲ್ಲ.

ದೇವರು ದಯಪಾಲಿಸಿದ ಬದುಕಿನಲ್ಲಿ ನಡೆಯುವುದು ಎಡುವುದು ಬೀಳುವುದು ಸ್ವಾಭಾವಿಕ. ಒಳ್ಳೆಯದು ಸದ್ಭಾವ ಸತ್ ಚಿಂತನೆಗಳಲ್ಲಿ ಆರಂಭವಾಗಿ ಸತ್ಕಾರ್ಯದ ಕಾರ್ಯಸಿದ್ಧಿಯಲ್ಲಿ ಕೊನೆಗೊಳ್ಳುತ್ತದೆ. ಒಳ್ಳೆಯದು ಅಸ್ಪಷ್ಟವಾದುದನ್ನು ಸ್ಪಷ್ಟಗೊಳಿಸುವ ದಿಕ್ಕಿನಲ್ಲಿ ಚಿಂತಿಸಿ ಹರಿಯುತ್ತದೆ. ಮೌಲ್ಯಗಳಾಗಿ ಆದರ್ಶಗಳಾಗಿ ಮಾರ್ಪಡುತ್ತದೆ.

ಅಸಮರ್ಪಕ ಮನಸ್ಸಿನ ಜಗತ್ತನ್ನು ಅಚ್ಚರಿಯ ತಾಣವನ್ನಾಗಿ ಮೂಡಿಸುತ್ತದೆ. ಮನುಕುಲದ ಮೇಲೆ ದಟ್ಟ ಪ್ರಭಾವ ಬೀರಿ ಅರಿವಿನ ದಿಗಂತವನ್ನು ವಿಸ್ತರಿಸುತ್ತದೆ. ಒಳಿತು ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ತಾತ್ವಿಕವಾದ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ತಪ್ಪುಗಳನ್ನು ತಿದ್ದಿ ತೀಡುತ್ತ ನೈತಿಕ ಶಕ್ತಿಯನ್ನು ಹೆಚ್ಚಿಸುತ್ತ ಸ್ವಾಸ್ಥ್ಯ ಸಮಾಜದ ಅಭ್ಯುದಯಕ್ಕೆ ಚಿಂತಿಸುತ್ತಾರೆ. ಏಕೆಂದರೆ ನಾವ್ಯಾರೂ ಸಿದ್ಧಪಡಿಸಿದ ಒಳ್ಳೆಯ ಮನುಷ್ಯರಲ್ಲ.

ಚಿಪ್ಪಿನೊಳಗಡೆ ಆಮೆ ಸೇರಿಕೊಂಡ ಹಾಗೆ ಸೇರಿಕೊಂಡರೆ ಒಳ್ಳೆಯವರಾಗಿ ಬಾಳಿ ಬದುಕುವುದು ಕಠಿಣವಾಗುತ್ತದೆ. ಅದ್ಭುತ ಜಗತ್ತನ್ನು ಸೃಷ್ಟಿಸುವುದು ಕಷ್ಟವಾಗುತ್ತದೆ. ಒಳ್ಳೆಯವರೆಂದು ತೋರಸಲು ಕೆಲವರು ಭಾಷೆಯನ್ನು ಮಾತ್ರ ಸುಧಾರಿಸಿಕೊಳ್ಳುತ್ತಾರೆ. ಬಳಸುವ ಭಾಷೆ ಸುಸಂಸ್ಕೃತ ಭಾಷೆ ಇಲ್ಲವೇ ಪ್ರಬುದ್ಧವಾಗಿದ್ದರೆ ಸಾಲದು.ಭಾವನೆಯೂ ಅತ್ಯುತ್ತಮವಾಗಿರಬೇಕು.ತೋರಿಕೆಯ ಭಾಷೆ ಬಳಸಿದರೆ ಮನಸ್ಸು ಕಲ್ಲಾಗುತ್ತದೆ. ಮನಸ್ಸಿನಲ್ಲಿ ಉರಿಯುತ್ತಿರುವ ದ್ವೇಷದ ದಳ್ಳುರಿ ಆರುವುದಿಲ್ಲ.

ಯಾವ ಮನಸ್ಸು ದ್ವೇಷದಿಂದ ಕುದಿಯುತ್ತದೋ ಅವನು ಒಳ್ಳೆಯ ವ್ಯಕ್ತಿಯಾಗಿ ಬದಲಾಗಲು ಸಾಧ್ಯವೇ ಇಲ್ಲ.

ಹೃದಯ ವೈಶಾಲ್ಯತೆಯನ್ನು ಒತ್ತಿ ಹೇಳುತ್ತ ಸ್ವಾಮಿ ವಿವೇಕಾನಂದರು ಈ ಸಂದೇಶವನ್ನು ನೀಡುತ್ತಾರೆ. ಅವರ ನುಡಿಗಳಲ್ಲೇ ಹೇಳುವುದಾದರೆ: ‘ಬುದ್ಧಿಯ ಸ್ತರ ಒಂದೇ-ವಿಚಾರ. ವಿಚಾರದ ಪರಿಧಿಯಲ್ಲಿ ಬುದ್ಧಿ ಕೆಲಸ ಮಾಡುತ್ತದೆ. ಆದರೆ ಅದರಾಚೆ ಅದು ಹೋಗಲಾರದು. ಹೃದಯವೊಂದೆ ವ್ಯಕ್ತಿಯನ್ನು ಬುದ್ಧಿ ತಲುಪಲಾರದ ಎತ್ತರಕ್ಕೆ ಅತ್ಯುನ್ನತ ಸ್ತರಕ್ಕೆ ಕರೆದೊಯ್ಯಬಲ್ಲದು. ಅದು ಬುದ್ಧಿಯ ಆಚೆ ಹೋಗಿ ಸ್ಪೂರ್ತಿ ಅಥವಾ ಅನುಭಾವವನ್ನು ತಲುಪುತ್ತದೆ. ಬುದ್ಧಿ ಸ್ಪೂರ್ತಿಯನ್ನು ತುಂಬಲಾಗದು.

ಹೃದಯ ಮಾತ್ರ ಸ್ಪೂರ್ತಿರಂಜಿತವಾಗಬಲ್ಲದು. ಬುದ್ಧಿವಂತನಾದ ಹೃದಯಹೀನ ವ್ಯಕ್ತಿ ಸ್ಪೂರ್ತಿದಾಯಿ ವ್ಯಕ್ತಿ ಆಗಲು ಸಾಧ್ಯವಿಲ್ಲ. ಹೃದಯವೊಂದೇ ಪ್ರೇಮವನ್ನು ಹೇಳಬಲ್ಲದು. ಬುದ್ಧಿ ನೀಡುವ ಸಾಧನಕ್ಕಿಂತ ಉನ್ನತ ಸಾಧನವನ್ನು ಹೃದಯ ಹುಡುಕಿ ತೆಗೆಯುತ್ತದೆ.

ಬುದ್ಧಿ ಜ್ಞಾನದ ಆವಾಸವಾಗಿರುವಂತೆ ಸ್ಪೂರ್ತಿ ಹೃದಯದ ಸೆಲೆ., ಕೆಳಮಟ್ಟದ ಹಂತದಲ್ಲಿ ಅದು ಬುದ್ಧಿಗಿಂತ ದುರ್ಬಲ ಸಾಧನವೇ ಸರಿ. ಒಬ್ಬ ಮೂರ್ಖನಿಗೆ ಏನೂ ಗೊತ್ತಿಲ್ಲ ಆದರೆ ಅವನು ಸ್ವಭಾವತಃ ಭಾವುಕನಾಗಿರುತ್ತಾನೆ. ಒಬ್ಬ ಪ್ರೊಫೆಸರ್‍ನೊಂದಿಗೆ ಆತನನ್ನು ಹೋಲಿಸಿದಾಗ ಪ್ರೊಫೆಸರ್‍ನಲ್ಲಿ ಏನದ್ಭುತ ಜ್ಞಾನವಿದೆ! ಎಂದೆನಿಸುವುದು. ಆದರೆ ಅವನು ಬುದ್ಧಿವಂತಿಕೆಯೊಂದಿಗೆ ರಾಕ್ಷಸನೂ ಆಗಿರಬಹುದು. ಆದರೆ ಹೃದಯವಂತನು ಎಂದಿಗೂ ರಾಕ್ಷಸನಾಗಲಾರನು.

ಭಾವನೆಗಳಿಂದ ಕೂಡಿದ ವ್ಯಕ್ತಿ ಎಂದೂ ರಾಕ್ಷಸನಾಗಲಾರನು. ಭಾವನೆಗಳನ್ನು ಸರಿಯಾಗಿ ತರಬೇತುಗೊಳಿಸಿದಾಗ ಹೃದಯ ಪರಿವರ್ತನೆಯಾಗುತ್ತದೆ. ಅವನು ಬುದ್ಧಿಯನ್ನು ದಾಟಿ ಹೋಗುತ್ತಾನೆ. ಆಗ ಹೃದಯದಿಂದ ಅನುಭಾವ ಅಥವಾ ಸ್ಪೂರ್ತಿ ಹೊರಹೊಮ್ಮುತ್ತದೆ. ಕೊನೆಗೂ ವ್ಯಕ್ತಿ ಬುದ್ಧಿಯನ್ನು ಮೀರಿ ಬೆಳೆಯಬೇಕು.

ಮನುಷ್ಯನ ಗ್ರಹಣಶಕ್ತಿ, ಜ್ಞಾನ, ವಿಚಾರ, ಬುದ್ಧಿ ಮತ್ತು ಹೃದಯಗಳು ಜಗತ್ತು ಎಂಬ ಹಾಲನ್ನು ಮಂಥನಗೈಯುವಲ್ಲಿ ವ್ಯಸ್ತವಾಗಿವೆ. ದೀರ್ಘ ಮಂಥನದಿಂದ ನವನೀತ ಹೊರ ಹೊಮ್ಮುತ್ತದೆ. ಆ ನವನೀತವೇ ಭಗವಂತ. ಆದ್ದರಿಂದ ಹೃದಯವಂತರಿಗೆ ನವನೀತ ಲಭಿಸುತ್ತದೆ. ಮತ್ತು ಬುದ್ಧಿವಂತರಿಗೆ ಮಜ್ಜಿಗೆ.’


ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group