ಮೂಡಲಗಿ – (ಪ್ರೊ. ಕೆ.ಜಿ.ಕುಂದಣಗಾರ ಪ್ರಧಾನ ವೇದಿಕೆ)
ಕನ್ನಡ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮೂಡಲಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ 4 ಗುಂಟೆ ನಿವೇಶನವನ್ನು ಪುರಸಭೆಯಿಂದ ನೀಡುವುದಾಗಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಘೋಷಿಸಿದರು.
ಶನಿವಾರದಂದು ಇಲ್ಲಿಯ ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದಿಂದ ಹಮ್ಮಿಕೊಂಡ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಾಹಿತ್ಯಿಕ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದರು.
ಅವಿಭಜಿತ ಗೋಕಾಕ ತಾಲೂಕಿನಲ್ಲಿ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಈಗಾಗಲೇ ಯಶಸ್ವಿಯಾಗಿ ಮಾಡಲಾಗಿದೆ. ಶಿವಾಪೂರ(ಹ), ಬೆಟಗೇರಿ, ಕೌಜಲಗಿ ಮುಂತಾದ ಗ್ರಾಮಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು,ನುಡಿ, ನೆಲ,ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನಮ್ಮ ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ ಆಯೋಜಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಜೊತೆಗೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ನಮ್ಮ ಕನ್ನಡ ಭಾಷೆಯು ಈ ಜಗತ್ತಿನಲ್ಲಿಯೇ ಸುಂದರವಾದ ಭಾಷೆಯಾಗಿದೆ. ಕನ್ನಡವನ್ನು ಬರೆಯುವುದಕ್ಕೂ ಮತ್ತು ಮಾತನಾಡುವುದಕ್ಕೂ ಸರಳವಾಗಿದೆ. ಕನ್ನಡದ ಸೊಗಡು ಜಾಗತೀಕವಾಗಿ ಹರಡಿದೆ. ಕನ್ನಡ ಭಾಷೆಯ ಉಳಿವಿಗೆ ನಾವೆಲ್ಲರೂ ಕಟಿಬದ್ಧರಾಗಿ ದುಡಿಯಬೇಕಾಗಿದೆ. ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಈ ದಿಸೆಯಲ್ಲಿ ಮೂಡಲಗಿ ತಾಲೂಕಿನಲ್ಲಿ ಕನ್ನಡ ಬಗ್ಗೆ ಅರಿವು ಮೂಡಿಸಲು ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಮೂಲಕ ನಮ್ಮ ಸೇವೆಯು ಸದಾ ನಾಡಿಗಾಗಿ ಮೀಸಲಿದೆ ಕನ್ನಡ ಪರ ಹೋರಾಟಕ್ಕೆ ನಾನು ಸದಾ ಸಿದ್ದ ಎಂದು ಅವರು ತಿಳಿಸಿದರು
ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ ಆದರೂ ಸಾಹಿತ್ಯಿಕ ಚಟುವಟಿಕೆಗಳು ನಿಂತಿಲ್ಲ. ಕನ್ನಡ ಕೆಲಸಗಳಿಗೆ ನನ್ನಿಂದಾಗುವ ಕೈಲಾದ ಸಹಾಯವನ್ನು ಮಾಡುತ್ತೇನೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಿರಂತವಾಗಿ ನಡೆಯಲಿಕ್ಕೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಕನ್ನಡ ಭಾಷೆಯ ಹೋರಾಟಕ್ಕಾಗಿ ಅನೇಕ ಮಹನೀಯರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ವರನಟ ಡಾ|| ರಾಜಕುಮಾರ್ ಆದಿಯಾಗಿ ಹಲವರು ಹೋರಾಟ ಮಾಡಿದ್ದಾರೆ. ಡಾ|| ರಾಜಕುಮಾರ್ ಅವರ ಕಂಠಸಿರಿಯಿಂದ ಮೂಡಿಬರುವ ಕನ್ನಡ ಹಾಡುಗಳನ್ನು ಸವಿಯಲು ಚೆಂದ, ಕನ್ನಡ ನಾಡು-ನುಡಿ ವಿಚಾರ ಬಂದಾಗ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಹೋರಾಡಬೇಕು.
ಈ ಸಂದರ್ಭದಲ್ಲಿ ಜಾತಿ ಮತ್ತು ಪಕ್ಷಗಳನ್ನು ಹೊರಗಿಟ್ಟು ಕನ್ನಡ ನಾಡಿನ ಸೇವೆಗೆ ಕಟಿಬದ್ಧರಾಗಿ ದುಡಿಯುವಂತೆ ಅವರು ಕರೆ ನೀಡಿದರು.
ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಕನ್ನಡವು ನಮ್ಮ ಅಸ್ಮಿತೆಯಾಗಿದ್ದು, ನಮ್ಮ ಸಂಸ್ಕøತಿ ಪರಂಪರೆಯನ್ನು ಮುಂದುವರೆಸಲು ಎಲ್ಲರೂ ಬದ್ಧರಾಗಬೇಕು. ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆ ಸೇರಿದಂತೆ ಅನ್ಯಭಾಷೆಗಳ ಅಪಾಯವಿದ್ದು, ಎರಡು ಸಾವಿರ ಪೂರ್ವ ಇತಿಹಾಸದ ಕನ್ನಡದ ಭಾಷೆಯನ್ನು ವಿಶ್ವವ್ಯಾಪ್ತಿಯಲ್ಲಿ ಬೆಳೆಸುವ ಕಾರ್ಯವನ್ನು ನಾವಿಂದು ಮಾಡಬೇಕಿದೆ. ತಂತ್ರಜ್ಞಾನ, ಜಾಗತೀಕರಣ, ಒತ್ತಡದಲ್ಲಿ ಕನ್ನಡ ಭಾಷೆಯ ಬಳಕೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇಂತಹ ಸಂದಿಗ್ಧದ ಅಪಾಯಗಳನ್ನು ಎದುರಿಸುವಂತೆ ಸಾಹಿತಿ, ಚಿಂತಕರಲ್ಲಿ ಗಂಭೀರ ಚಿಂತನೆಗಳು ನಡೆಯಬೇಕಾದ ಅಗತ್ಯತೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿಪಾದಿಸಿದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಖುರ್ಷಾದಬೇಗಂ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಸಂತೋಷ ಪಾರ್ಶಿ, ತಹಶೀಲದಾರ ಶಿವಾನಂದ ಬಬಲಿ, ಬಿಇಓಗಳಾದ ಅಜೀತ ಮನ್ನಿಕೇರಿ, ಜಿ.ಬಿ.ಬಳಗಾರ, ತಾ.ಪಂ ಇಓ ಎಫ್.ಜಿ.ಚಿನ್ನನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಜಿಲ್ಲೆಯ ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರು, ಅನೇಕ ಸಾಹಿತಿಗಳು, ಲೇಖಕರು, ಕವಿಗಳು, ಕನ್ನಡ ಪರ ಸಂಘಟನೆಗಳ ಪ್ರಮುಖರು, ಪುರಸಭೆ ಸದಸ್ಯರು, ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.