ಸಿಂದಗಿ: ಮಳೆಯ ಅಭಾವದಿಂದ ಕ್ಷೇತ್ರದಲ್ಲಿ ಬರದ ಛಾಯೆ ಮೂಡಿದೆ. ಇರುವ ಅಲ್ಪ ಸ್ವಲ್ಪ ಲಭ್ಯ ನೀರನ್ನು ತಮ್ಮ ಬೆಳೆಗಳಿಗೆ ಹಾಯಿಸಿ ಬೆಳೆಗಳನ್ನು ಕಾಪಾಡಿಕೊಳ್ಳಬೇಕೆಂದರೆ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ರೈತರು ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವರೊಂದಿಗೆ ಇದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸುವದು ಅತ್ಯವಶ್ಯಕವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಕೊರತೆ ಉಂಟಾಗಿದೆ. ಇದರಿಂದ ನೀರಾವರಿ ಪಂಪಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದಿರುವದನ್ನು ಮನಗಂಡು, ಮತ್ತು ಲಭ್ಯವಿರುವ ವಿದ್ಯುತ್ತನ್ನೇ ಸಿಂದಗಿ ಮತಕ್ಷೇತ್ರದ ರೈತರಿಗೆ ಸಮಯಕ್ಕೆ ಸರಿಯಾಗಿ ಮತ್ತು ಪೂರಕವಾಗಿ ಯಾವ ರೀತಿಯಾಗಿ ಸರಬುರಾಜು ಮಾಡಬಹುದು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿದರು.
ವಿಶೇಷವಾಗಿ ಗುಬ್ಬೇವಾಡ, ಕಣ್ಣಗುಡ್ಯಾಳ, ಬನ್ನೆಟ್ಟಿ, ಬಸ್ತಿಹಾಳ, ಬೋರಗಿ, ಪುರದಾಳ, ಬ್ಯಾಕೋಡ ಮತ್ತು ಆ ಭಾಗದ ಇತರೆ ಗ್ರಾಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತಿದೆ. ಕಾರಣ ಹೆಸ್ಕಾಂ ಅಧಿಕಾರಿಗಳು ಮತ್ತು ನೌಕರರು ಆ ಭಾಗದ ರೈತರೊಂದಿಗೆ ಸದಾ ಸಂಪರ್ಕದಲ್ಲಿ ಇದ್ದು, ನಿಗದಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ತಾಕೀತು ಮಾಡಿದರು. ಹಾಗೂ ಮುಂದಿನ ದಿನಗಳಲ್ಲಿ ಸಿಂದಗಿ ಮತಕ್ಷೇತ್ರವು ವಿದ್ಯುತ್ ಸ್ವಾವಲಂಬಿಯಾಗಬೇಕಾರೆ ದೂರದೃಷ್ಟಿಯಾಗಿ ಎಲ್ಲೆಲ್ಲಿ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಿಸಬೇಕು ಮತ್ತು ಅವುಗಳಿಗೆ ಜಾಗದ ಲಭ್ಯತೆ ಬಗ್ಗೆ ಚರ್ಚಿಸಿದರು. ಮತ್ತು ಮಂಜೂರಾದ ಕಾಮಗಾರಿಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಎ.ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಸಿ.ಡಿ.ನಾಯಕ, ಅಧಿಕಾರಿಗಳಾದ ಎಸ್.ಎನ್.ಗೌಡರ, ಡಿ. ಎಮ್.ಮೂಲಿಮನಿ, ಪ್ರವೀಣ ಬಡಿಗೇರ ಮತ್ತು ಎಲ್ಲ ಶಾಖಾಧಿಕಾರಿಗಳು ಭಾಗಿಯಾಗಿದ್ದರು.