ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಶೀಲ ಫಂಥದ ಮುಖ್ಯ ಬರಹಗಾರರಾಗಿ, ಹೋರಾಟವನ್ನೇ ಬದುಕಿನ ಆಂತರ್ಯವನ್ನಾಗಿಸಿಕೊಂಡು ಬದುಕಿದವರು ಬಸವರಾಜ ಕಟ್ಟೀಮನಿ. ಪ್ರಗತಿಶೀಲ ಸಂದರ್ಭದ ಜೀವಂತ ಜ್ವಾಲಾಮುಖಿಯಾಗಿದ್ದ ಕಟ್ಟೀಮನಿಯವರು ಕುಟುಂಬ, ಸಮುದಾಯ ಗ್ರಾಮಗಳಲ್ಲಿನ ಅತೀಯಾದ ಬಡತನ, ಹಸಿವುಗಳನ್ನು ಕಣ್ಣಾರೆ ಕಂಡು, ಅನುಭವಿಸಿ ಉಂಡನೋವೆಲ್ಲವನ್ನು ಕತೆಯಾಗಿಸಿ, ಕಾದಂಬರಿಯನ್ನಾಗಿಸಿ ಪ್ರಗತಿಶೀಲ ಪಂಥದಲ್ಲಿಯೇ ಬಹುದೊಡ್ಡ ಲೇಖಕರಾದರು. ಇಂದು ಕಟ್ಟೀಮನಿಯರ ಪುಣ್ಯಸ್ಮರಣೆ.
ಪ್ರಗತಿಶೀಲ ಸಾಹಿತ್ಯದ ಮುಂಚೂಣಿ ಬರಹಗಾರರಾದ ಬಸವರಾಜ ಕಟ್ಟಿಮನಿಯವರು ಬ.ಕ ಎಂದೇ ಸಾಹಿತ್ಯ ವಲಯದಲ್ಲಿ ಪ್ರಸಿದ್ದರಾಗಿದ್ದರು. ಕಟ್ಟಿಮನಿಯವರು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮಲಾಮರಡಿ ಎಂಬ ಪುಟ್ಟ ಗ್ರಾಮದಲ್ಲಿ ೫-೧೦-೧೯೧೯ ರಲ್ಲಿ ಅಪ್ಪಣ್ಣ ಹಾಗೂ ಬಾಳವ್ವರ ಪುಣ್ಯದಂಪತಿಗಳ ಉದರದಲ್ಲಿ ಜನಿಸಿದರು. ಬಾಲ್ಯದಲ್ಲಿಯೆ ಮನೆತನದ ಬಡತನವನ್ನು ಕಣ್ಣಾರೆ ಕಂಡಿದ್ದರಿಂದ ಸಹಜವಾಗಿ ಅವರ ಮನಸ್ಸು ಪ್ರಗತಿಯತ್ತ ದಾಪುಗಾಲು ಇಟ್ಟಿದ್ದು ಸಹಜವೇ ಆಗಿದೆ. ಕಟ್ಟೀಮನಿಯರಿಗೆ ದೇಶ ಸ್ವಾತಂತ್ರ್ಯದ ಜೊತೆಗೆ ಪ್ರಗತಿಯೂ ಆಗಬೇಕು ಎಂಬ ಉತ್ಕಟವಾದ ಹಂಬಲವೂ ಇತ್ತು. ಹೀಗಾಗಿ ತಮ್ಮ ಬರವಣಿಗೆಯುದ್ದಕ್ಕೂ ಪ್ರಗತಿಯ ಆಶಯವನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟುತ್ತಲೇ ಬಂದರು.
ಕಟ್ಟೀಮನಿಯವರಿಗೆ ಬದುಕು ಮತ್ತು ಹೋರಾಟ ಭಿನ್ನವಾಗಿರಲೇ ಇಲ್ಲ. ಹೀಗಾಗಿ ಅವರನ್ನು ಹುಟ್ಟು ಹೋರಾಟಗಾರರೆಂದು ಕರೆಯಬಹುದು. ಕುವೆಂಪುರವರು ಬಸವರಾಜ ಕಟ್ಟಿಮನಿಯವರನ್ನು ಉದ್ದೇಶಿಸಿ ‘ಕಟ್ಟಿಮನಿಯವರದು ಪಕ್ಕಾ ರೈತ ರಕ್ತ, ನಡೆ ನೇರ, ನುಡಿ ಖಾರ, ಮುಚ್ಚು-ಮರೆ, ಸನ್ನೆ-ಸೂಕ್ಷ್ಮತೆಗಳಿಗೆ ಹೊಂದಿಕೊಳ್ಳುವ ರಾಜೀ ಸ್ವಭಾವದ ವ್ಯಕ್ತಿತ್ವ ಅವರದಲ್ಲ’ ಎನ್ನುತ್ತಾರೆ. ನಿಜ ಕಟ್ಟೀಮನಿಯವರದು ಹೋರಾಟದ ಬದುಕೇ ಆಗಿತ್ತು ಅಷ್ಟು ಸರಳವಾಗಿ ಯಾರೊಂದಿಗೂ ರಾಜಿಯಾಗುವ ಜಾಯಮಾನವಂತೂ ಅವರದ್ದಾಗಿರಲಿಲ್ಲ. ಅವರ ಬರವಣಿಗೆ ಆರಂಭವಾದದ್ದೇ ಹೋರಾಟದ ಕಥನದಿಂದ ಹೀಗಾಗಿ ಬಸವರಾಜ ಕಟ್ಟಿಮನಿಯವರು ಅಪ್ಪಟ ಪ್ರಗತಿಶೀಲ ಮನೋಧರ್ಮವನ್ನು ಮೈಗೂಡಿಸಿಕೊಂಡು ಜಾತಿ-ಧರ್ಮಗಳಲ್ಲಿ ನಂಬಿಕೆಯನ್ನಿಡಲಾರದೆ, ಪೂಜೆ-ಪ್ರಾರ್ಥನೆಗಳಲ್ಲಿ ಕಾಲಹರಣ ಮಾಡದೆ, ಸಮಾಜದಲ್ಲಿನ ಶೋಷಣೆಯನ್ನು, ಹಸಿವು, ಅನ್ಯಾಯ, ದಬ್ಬಾಳಿಕೆಯನ್ನು ತಮ್ಮ ಸಾಹಿತ್ಯ ಕೃಷಿಯಲ್ಲಿ ಖಂಡಿಸಿದ್ದಾರೆ.
ಕಟ್ಟಿಮನಿಯವರಿಗಿದ್ದ ಇನ್ನೊಂದು ಮಹಾತ್ವಾಕಾಂಕ್ಷೆಯೆಂದರೆ, ಪ್ರಗತಿಶೀಲ ಸಾಹಿತ್ಯ ಚಳವಳಿಯನ್ನು ಪುನಶ್ಚೇತನಗೊಳಿಸುವುದಾಗಿತ್ತು. ನಿರಂಜನರು ದಕ್ಷಿಣದಲ್ಲಿ ಪ್ರಗತಿಶೀಲಕ್ಕೆ ಪುನಶ್ಚೇತನ ನೀಡುವ ಪ್ರಯತ್ನ ಮಾಡಿದಂತೆ ಉತ್ತರದಲ್ಲಿ ಕಟ್ಟಿಮನಿಯವರು ಪ್ರಗತಿಶೀಲ ಸಾಹಿತ್ಯಕ್ಕೆ ಅಡಿಪಾಯ ಹಾಕಿದರು. ಆದರೆ ಮುಂದೆ ಕಟ್ಟಿಮನಿಯವರನ್ನು ಈ ಪಂಥವು ಹೊರಗಡೆ ಇಟ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ದುರಂತವೇ ಸರಿ.
‘ಸಾಹಿತಿಯೂ ಸಮಾಜದ ಕೂಸು ಸಮಾಜದಲ್ಲಿರುವುದನ್ನೆ ತನಗರುಹಿದಂತೆ ಸಾಹಿತ್ಯದಲ್ಲಿ ಅನುಸರಿಸುತ್ತಾನೆ ಮತ್ತು ಪ್ರತಿಧ್ವನಿಸುತ್ತಾನೆ’ ಎನ್ನುವ ವಿಮರ್ಶಕರ ಅಭಿಪ್ರಾಯದಂತೆ ಕಟ್ಟಿಮನಿಯವರು ತಮ್ಮ ಸುತ್ತಮುತ್ತಲಿನ ಬದುಕನ್ನೆ ಚಿತ್ರಿಸಿದರು. ಕಂಡ ವ್ಯಕ್ತಿಗಳನ್ನೆ ಕೃತಿಯ ಪಾತ್ರಗಳಾಗಿ ಎರಕಹೊಯ್ದರು ಸಮಾಜದ ಒಳತಿಗೆ ಮಾರಕವಾಗುವ ಖಾಕಿ, ಖಾದಿ, ಕಾವಿಧಾರಿಗಳ ಅನುಚಿತ ವರ್ತನೆ ಜೀವನ ವಿಧಾನವನ್ನು ನಿರ್ಧಾಕ್ಷಿಣ್ಯವಾಗಿ ತಮ್ಮ ಕಥೆಗಳಲ್ಲಿ ಖಂಡಿಸುತ್ತಾರೆ. ಸಾಮಾಜಿಕ ಬದುಕಿನಲ್ಲಿ ಅನೇಕ ದುಸ್ತರಗಳನ್ನು, ಎದುರಿಸಿದ ಸಂಕಟಗಳು, ನೋವುಗಳು, ಸಂಘರ್ಷಗಳು ಕಟ್ಟಿಮನಿಯವರ ಕಥೆಗಳ ಮುಖ್ಯ ವಸ್ತುಗಳಾಗಿದ್ದವು. ಇದಕ್ಕೆ ದಟ್ಟವಾದ ಅನುಭವವೂ ಕಾರಣವಾಗಿತ್ತು. ಸ್ವಂತದ ಎಷ್ಟೋ ಅನುಭವಗಳು ಇವರ ಕಥೆಗಳಲ್ಲಿ ಅನಾವರಣಗೊಂಡಿವೆ ಎಂಬುದನ್ನು ಅವರ ಕಥೆಗಳೇ ಸಾಕ್ಷೀಕರಿಸುತ್ತವೆ. ಅಂತೆಯೇ ಡಾ, ಎಮ್.ಎಮ್.ಕಲಬುರ್ಗಿಯವರು ಕಟ್ಟಿಮನಿಯವರು ‘ತಮ್ಮ ಸಮಗ್ರ ವ್ಯಕ್ತಿತ್ವವನ್ನು ಸಾಮಾಜೀಕರಣಗೊಳಿಸಿದ ಅಪೂರ್ವ ಪ್ರಗತಿಶೀಲ ಲೇಖಕ ಮತ್ತು ಕುಂದರನಾಡಿನ ಹಿತಚಿಂತಕ’ ಎಂದಿದ್ದಾರೆ.
ಓದುಗರಿಗೆ ಶಿಕ್ಷಣ ನೀಡುವ ಉದ್ದೇಶಕ್ಕಾಗಿ ತಮ್ಮ ಲೇಖನಿಯನ್ನು ಬಳಸಿಕೊಂಡ ಕಟ್ಟಿಮನಿಯವರು ತಮ್ಮ ಜೀವಿತಾವಧಿಯಲ್ಲಿ ೪೨ ಕಾದಂಬರಿ, ೧೦ ಕಥಾ ಸಂಕಲನ, ಅನುವಾದ, ಕವನ ಸಂಕಲನ, ನಾಟಕ, ಜೀವನ ಚರಿತ್ರೆ, ಪ್ರವಾಸ ಕಥನ, ಮಕ್ಕಳ ಕಥೆಗಳು ಸಂಪಾದಿತ ಕೃತಿಗಳು, ಆತ್ಮಕಥೆ ಕಾದಂಬರಿಕಾರನ ಕಥೆಯನ್ನೂ ಸೇರಿಕೊಂಡಂತೆ ಒಟ್ಟು ೬೭ ಕೃತಿಗಳನ್ನು ರಚಿಸಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಈ ಕೃತಿ ಸಂಖ್ಯೆಯ ಬಾಹುಳ್ಯವು ಅವರು ಸಹೃದಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ್ದಕ್ಕೆ ಸಾಕ್ಷಿಯಾಗಿದೆ.
ಕಟ್ಟಿಮನಿಯವರು ತಮ್ಮ ಇಡೀಯಾದ ಸಾಹಿತ್ಯ ಕೃಷಿಯಲ್ಲಿ ತಮ್ಮ ಕಾಲದ ಇತರ ಪ್ರಗತಿಶೀಲ ಲೇಖಕರಂತೆ ಕಪ್ಪು ಬಿಳುಪನೇ ಸೃಷ್ಟಿಸಿದ್ದಾರೆ. ರೋಷ ತುಂಬಿದ ದಾಟಿಯಲ್ಲಿ ಹಲವಾರು ಎದೆಗಳಲ್ಲಿ ಅನುಭವವನ್ನು ಹಸಿ ಹಸಿಯಾಗಿ ಚಿತ್ರಿಸಿದ್ದಾರೆ. ಸಾಮಾಜಿಕ ಸಮಸ್ಯೆಗಳಲ್ಲಿ ಕಥೆ ಹಾಗೂ ಕಾದಂಬರಿಯ ನಿರೂಪಣೆಯ ಮೂಲಕ ಕ್ರಾಂತಿ ಸಾಧ್ಯ ಎಂದು ಬರೆಯಲು ತೊಡಗಿದ ಕಟ್ಟಿಮನಿಯವರು ಕನ್ನಡದ ಓದುಗ ವಲಯವನ್ನು ವಿಸ್ತಾರಗೊಳಿಸಿದವರಾಗಿದ್ದಾರೆ. ತಮ್ಮ ಬರವಣಿಗೆಯಲ್ಲಿ ಕಥೆ ಮತ್ತು ಕಾದಂಬರಿಯನ್ನು ಮುಖ್ಯ ಮಾಧ್ಯಮವನ್ನಾಗಿಸಿಕೊಂಡು ರೈತ ಮತ್ತು ಕಾರ್ಮಿಕ ವರ್ಗವನ್ನು ಆಗು ಮಾಡಿಕೊಂಡು ಐತಿಹಾಸಿಕ ವಸ್ತುಗಳತ್ತ ಅವರ ಕಥೆಗಳ ತುಡಿತವಿರುವದನ್ನು ಗಮನಿಸಬಹುದಾಗಿದೆ. ಕಟ್ಟೀಮನಿಯವರು ತಮ್ಮ ಕಥೆ ಹಾಗೂ ಕಾದಂಬರಿಗಳಲ್ಲಿ ವಸ್ತುಗಳನ್ನು ಆರಿಸಿಕೊಳ್ಳುವ ಜಾಣ್ಮೆಯನ್ನು ಮೆಚ್ಚುವಂತಹದ್ದು ತತ್ಕಾಲದ ಸನ್ನಿವೇಶಕ್ಕೆ ಕನ್ನಡಿ ಹಿಡಿದ ಇವರ ಕಥೆಗಳಲ್ಲಿನ ಉತ್ಕಟತೆ ಹಾಗೂ ಉದ್ವಿಗ್ನತೆಯನ್ನು ಸಹೃದಯರು ಓದಿಯೇ ಸವಿಯಬೇಕು.
ಪ್ರಗತಿಶೀಲ ಸಾಹಿತಿಗಳಲ್ಲಿಯೇ ನೇರವಾದ ಮಾತು ಮತ್ತು ಛಾತಿಯಿಂದ ಹೆಸರುವಾಸಿಯಾದ ಕಟ್ಟೀಮನಿಯವರನ್ನು ಪತ್ರಿಕಾ ಮಾಧ್ಯಮದ ಅಂದಿನ ಗೆಳೆಯೆರಲ್ಲರೂ ಅವರು ಕಟ್ಟೀಮನಿಯಲ್ಲ ‘ಕತ್ತಿ ಮೊನೆ’ ಎನ್ನುತ್ತಿದ್ದರಂತೆ ಎಂದು ನಮ್ಮೂರು ಸುಲಧಾಳದ ಹಿರಿಯರಾದ ಕಟ್ಟೀಮನಿಯರ ಆಪ್ತಬಳಗದಲ್ಲಿ ಗುರುತಿಸಿಕೊಂಡ ಬಾಳಗೌಡ ಪಾಟೀಲರು ನೆನಪಿಸಿಕೊಳ್ಳುತ್ತಾರೆ. ಇಂತಹ ಕಟ್ಟೀಮನಿಯರನ್ನು ಯಾರು ಗುರುತಿಸಲೇ ಇಲ್ಲಾ ಅಲ್ಲಪಾ ಅನ್ನುತ್ತಲೇ ಕಲಬ್ಬುರ್ಗಿ ಗುರುಗಳು ೨೦೧೨ರಲ್ಲಿ ಸರ್ಕಾರದ ಮೇಲೆ ಒತ್ತಡವನ್ನು ತಂದು ಬೆಳಗಾವಿಗೆ ಬಸವರಾಜ ಕಟ್ಟೀಮನಿ ರಾಷ್ಟ್ರೀಯ ಟ್ರಸ್ಟ್ ನ್ನು ಆರಂಭಿಸಿಯೇ ಬಿಟ್ಟರು. ಆರಂಭಿಕ ಮೂರು ವರ್ಷಗಳಲ್ಲಿ ಟ್ರಸ್ಟ್ ಕಲಬುರ್ಗಿ ಸರ್ ಅವರ ನೇತೃತ್ವದಲ್ಲಿ ಭಾರೀ ಜೋರಾಗಿಯೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿತು. ಮೊದಲ ವರ್ಷದಲ್ಲೇ ಬಸವರಾಜ ಕಟ್ಟೀಮನಿಯವರ ಸ್ಮರಣಾರ್ಥವಾಗಿ ಸಾಕಷ್ಟು ಪುಸ್ತಕ ಬಹಮಾನಗಳನ್ನು ಕೊಟ್ಟರು. ಅದರಲ್ಲಿ ನನ್ನ ಪುಸ್ತಕ ಮನೋಗತವು ವಿಮರ್ಶಾ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು ಎಂಬುದನ್ನು ನಾನು ತುಂಭಾ ಗೌರವದಿಂದ ಈ ಸಂದರ್ಭದಲ್ಲಿ ನೆನೆಯುತ್ತೇನೆ.
ಕಲಬುರ್ಗಿಯವರು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಮಲಾಮರಡಿ, ಗುಜನಾಳ, ಸುಲಧಾಳ ಗ್ರಾಮದ ಯುವಕರನ್ನು ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಚರ್ಚೆ, ಮುಂದಿನ ಯೋಜನೆಗಳ ಕಾರ್ಯಾಚರಣೆ ಇವುಗಳನ್ನು ತ್ವರಿತವಾಗಿ ಸ್ಥಳೀಯ ರಾಜಕೀಯ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದರು. ಎಂದು ಕಟ್ಟೀಮನಿಯವರನ್ನು ತುಂಬಾ ಹತ್ತಿರದಿಂದ ಬಲ್ಲ ರಾಯನಗೌಡ ಪಾಟೀಲರು ನೆನಪಿಸಿಕೊಳ್ಳುತ್ತಾರೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಕಲಬುರ್ಗಿ ಅವರ ನಿರ್ಗಮನದಿಂದ ಟ್ರಸ್ಟ್ ತನ್ನ ಜೀವವನ್ನು ಕಳೆದುಕೊಂಡಿತ್ತು. ಈಗ ಮತ್ತೆ ಅದಕ್ಕೆ ನೀರಣಿಸುವ ಕಾರ‍್ಯವನ್ನು ಈಗಿನ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ಟ್ರಸ್ಟ್ನ ಹಿರಿಯ ಸದಸ್ಯರಾದ ಪ್ರೊ. ಚಂದ್ರಶೇಖರ ಅಕ್ಕಿ, ಡಾ. ಬಾಳಾಸಾಬ ಲೋಕಾಪುರ, ಡಾ. ರಾಮಕೃಷ್ಣ ಮರಾಠೆ, ಡಾ. ಬಸವರಾಜ ಸಾದರ, ಶಿರೀಷ ಜೋಶಿ ಮತ್ತು ಶಿವಕುಮಾರ ಕಟ್ಟಿಮನಿ ಅವರುಗಳು ಕಟ್ಟಿಮನಿಯವರ ಜೀವನ, ಸಾಹಿತ್ಯ ಮುಂತಾದ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಸರಕಾರವು ನಿಗದಿತ ವೇಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ನೀಡುವುದರ ಮೂಲಕ ವಿಭಿನ್ನ ಕಾರ್ಯಕ್ರಮಗಳನ್ನು ಟ್ರಸ್ಟ ಹಮ್ಮಿಕೊಳ್ಳುವಂತಾಗಲಿ ಆ ಮೂಲಕ ‘ಕುಂದರನಾಡಿನ ಕಂದ’ನ ಕೀರ್ತಿ ರಾಷ್ಟ್ರಾದ್ಯಂತ ಪಸರಿಸುವಂತಾಗಲಿ ಎಂದು ಆಶಿಸುತ್ತೇನೆ.
ಡಾ. ಆನಂದಕುಮಾರ ಎಂ. ಜಕ್ಕಣ್ಣವರ
ಮುಖ್ಯಸ್ಥರು, ಕನ್ನಡ ವಿಭಾಗ
ಶಿವಾನಂದ ಮಹಾವಿದ್ಯಾಲಯ, ಕಾಗವಾಡ.