ಸಿಂದಗಿ – ಸರ್ಕಾರಗಳು ಮಾಡಬೇಕಾಗಿರುವ ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಅದರಲ್ಲಿ ಸಿಂದಗಿಯ ಸಾರಂಗಮಠ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಶಿಕ್ಷಣ ಅನ್ನದಾಸೋಹ ಸಂಸ್ಕಾರ ಜ್ಞಾನ ನೀಡುತ್ತಿರುವುದು ಈ ಭಾಗದ ಜನತೆಯ ಪುಣ್ಯದ ಫಲವಾಗಿದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಸಿ. ಶಿವಕುಮಾರಸ್ವಾಮಿ ಹೇಳಿದರು.
ಅವರು ಸಿಂದಗಿಯ ಸಾರಂಗಮಠದ ಲಿಂಗೈಕ್ಯ ಪೂಜ್ಯಶ್ರೀ ಚೆನ್ನವೀರ ಮಹಾಸ್ವಾಮಿಗಳ 131 ನೇ ಜಯಂತ್ಯುತ್ಸವದ ನಿಮಿತ್ತ ಚೆನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನ ಕೊಡಮಾಡುವ ಶ್ರೀ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಹಿಂದಿನ ಕಾಲದ ರಾಜಾಶ್ರಯ ಪದ್ಧತಿಯಲ್ಲಿ ಅನೇಕ ಕವಿಗಳು, ಸಾಧಕರು ಪ್ರಚಾರಕ್ಕೆ ಬಂದರು ರಾಜಾಶ್ರಯ ಹೋದ ಮೇಲೆ ಮಠಗಳು ಆ ಕಾರ್ಯವನ್ನು ಮಾಡುತ್ತಿವೆ ಎಂದ ಅವರು ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗಿ ಶಿವಾಚಾರ್ಯರು 8 ರಿಂದ 10 ನೇ ಶತಮಾನದ ಅವಧಿಯಲ್ಲಿ ವೀರಶೈವ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ರಚಿಸಿ ಧರ್ಮ ಮಾರ್ಗ ಪ್ರವರ್ತಕರಾಗಿದ್ದವರು. ಸಿದ್ಧಾಂತ ಶಿಖಾಮಣಿ ಕುರಿತಾಗಿ ಈ ನಾಡಿನಲ್ಲಿ ಅನೇಕ ವಾದ ವಿವಾದಗಳು ನಡೆಯುತ್ತಿವೆ ಅವರಿಗೆ ನಾವು ಸೂಕ್ತ ಉತ್ತರವನ್ನು ದಾಖಲೆ ಸಮೇತವಾಗಿ ನೀಡಿದ್ದೇನೆ. ಮೊಟ್ಟ ಮೊದಲ ಬಾರಿಗೆ ಸ್ತ್ರೀಯರಿಗೆ ಶಿವ ದೀಕ್ಷೆ, ಸಮಾನತೆ ಸಂಸ್ಕಾರ ನೀಡಿದ ಜಗತ್ತಿನ ಏಕೈಕ ಧರ್ಮ ವೀರಶೈವ ಧರ್ಮ ವೀರಶೈವ ಧರ್ಮದ ನೆಲೆಯಿಂದ ಬಂದ ಸಿದ್ಧಾಂತ ಶಿಖಾಮಣಿಯನ್ನು ಶಿವಾ ದೈವ ಸಿದ್ದಾಂತ ಎಂದು ಕರೆಯುತ್ತಾರೆ. ಮಾನವನು ಮಹಾದೇವನಾಗಲು ಇರುವ ಎಲ್ಲ ಕಲ್ಪನೆಗಳು ಸಿದ್ಧಾಂತ ಶಿಖಾಮಣಿಯಲ್ಲಿ ಅಡಗಿವೆ. ಶಿವಯೋಗಿ ಶಿವಾಚಾರ್ಯರ ಹೆಸರಿನ ಮೇಲೆ ಸಿಂದಗಿ ಸಾರಂಗ ಮಠ ಶ್ರೀ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯವಾಗಿದೆ.ಎಂದರು. ಈ ವೇಳೆ ಶ್ರೀ ಶಿವಯೋಗಿ ಶಿವಾಚಾರ್ಯ ಪ್ರಶಸ್ತಿ ಯನ್ನು ಉಜ್ಜಯಿನಿಯ ಸದ್ಧರ್ಮ ಸಿಂಹಾಸನದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಡಾ. ಸಿ. ಶಿವಕುಮಾರ ಸ್ವಾಮಿ ಅವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶದನ್ವಯ ಶ್ರೀ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಠಗಳು ಕೇವಲ ಧರ್ಮದ ಹೇಳುವುದಿಲ್ಲ ಅದರ ಜೊತೆಗೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ಅಕ್ಷರ ಜ್ಞಾನ ಸಂಸ್ಕಾರ ನೀಡಿ ಅವರ ಬದುಕನ್ನು ಹಸನ ಮಾಡಲು ಮುಂದಾಗುತ್ತವೆ ಅದರಲ್ಲಿ ಸಿಂದಗಿಯ ಸಾರಂಗಮಠದ ಕಾರ್ಯ ಅನನ್ಯವಾಗಿದೆ ಎಂದ ಅವರು ಸಿಂದಗಿ ಬಸ್ ನಿಲ್ದಾಣಕ್ಕೆ ತಮ್ಮ ಅತ್ಯಂತ ಮೌಲ್ಯದ ಭೂಮಿಯನ್ನ ದಾನವಾಗಿ ಸರ್ಕಾರಕ್ಕೆ ನೀಡಿದ ಲಿಂಗೈಕ್ಯ ಕಾಯಕವೇ ಚೆನ್ನವೀರ ಮಹಾಸ್ವಾಮಿಗಳ ಕಾರ್ಯ ಅತ್ಯಂತ ಸೃಜನಾತ್ಮಕವಾಗಿದೆ ಆ ದಿಶೆಯಲ್ಲಿ ಸಿಂದಗಿ ಮಹಾಜನತೆಯ ಬಹುದಿನಗಳ ಬೇಡಿಕೆಯಾಗಿರುವ ಸಿಂದಗಿ ಬಸ್ ನಿಲ್ದಾಣಕ್ಕೆ ಪೂಜ್ಯಶ್ರೀ ಚೆನ್ನವೀರ ಮಹಾಸ್ವಾಮಿಗಳ ಹೆಸರು ಇಡಬೇಕು ಎಂದು ಸುಮಾರು ವರ್ಷಗಳ ಬೇಡಿಕೆಯಾಗಿತ್ತು ಅದನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಇಂದು ಯಶಸ್ವಿಗೊಂಡಿದೆ ಈ ಕಾರ್ಯ ನನ್ನ ಅಧಿಕಾರ ಅವಧಿಯಲ್ಲಿಯೇ ಅತ್ಯಂತ ಹಿರಿಯ ಕಾರ್ಯ ಎಂದು ನಾನು ಬಯಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕರ ಕುಟುಂಬಕ್ಕೆ ಉಜ್ಜೈನಿಯ ಜಗದ್ಗುರುಗಳು ಸನ್ಮಾನಿಸಿ ಗೌರವಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಪೀಠದ ಶ್ರೀ ಮತ್ ಉಜ್ಜಯನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದoಗಳು ಆಶೀರ್ವಚನ ನೀಡಿ, ಸಿದ್ಧಾಂತ ಶಿಖಾಮಣಿ ಗ್ರಂಥವು ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ. ಇದನ್ನು ವೀರಶೈವರ ಧರ್ಮಗ್ರಂಥ ಎಂದು ಕರೆದಿದ್ದರೂ ಅದು ವೀರಶೈವರಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮದವರೂ ಇದನ್ನು ಓದುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿದರು. ವೇದಿಕೆಯ ಮೇಲೆ ಶಹಪೂರಿನ ಪೂಜ್ಯಶ್ರೀ ಸುಗುರೇಶ್ವರ ಶ್ರೀಗಳು, ಕೊಣ್ಣೂರು ಹೊರಗಿನ ಕಲ್ಯಾಣ ಮಠದ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಪೂಜ್ಯಶ್ರೀ ಸಿದ್ದಲಿಂಗ ಶಿವಾಚಾರ್ಯರು, ಸಿಂದಗಿ ಊರನ ಹಿರೇಮಠದ ಶ್ರೀ ಶಿವಾನಂದ ಶ್ರೀಗಳು ಸೇರಿದಂತೆ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ ರವಿ ಗೋಲಾ ಮತ್ತು ಪೂಜಾ ಹಿರೇಮಠ ನಿರೂಪಿಸಿದರು, ಡಾ ಶರಣು ಜೋಗುರ ಸ್ವಾಗತಿಸಿದರು.