spot_img
spot_img

ನವ ಪೌರೋಹಿತ್ಯ ಪೋಷಿಸುವ ನಮ್ಮ ಮಠಾಧೀಶರು ಮಾತೆ ಅಕ್ಕ ಸ್ವಾಮಿಗಳು

Must Read

spot_img
- Advertisement -

ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ ಚಿಂತಕ. ಯಾವುದೇ ಶ್ರೇಣೀಕೃತವಿಲ್ಲದ ಸಮಾನತೆ ಸಮತೆ ಪ್ರೀತಿ ಶಾಂತಿಯನ್ನು ಮೈಗೂಡಿಸಿಕೊಂಡ ಹೊಸ ಲಿಂಗಾಯತ ಧರ್ಮವನ್ನು ಶರಣರು ಸ್ಥಾಪಿಸಿದರು. ಭಕ್ತಿ ಮಾರ್ಗದಲ್ಲಿ ನಡೆದು ಭವಿಯ ಕಷ್ಟಗಳ ತೊರೆವ ಸುಂದರ ಪರಿಕಲ್ಪನೆ ಶರಣರದಾಗಿತ್ತು.

ವರ್ಗ ವರ್ಣ ಲಿಂಗ ಮತ್ತು ಆಶ್ರಮ ಭೇದಗಳನ್ನು ಕಿತ್ತೊಗೆದು ಸರಳ ಸಹಜ ಬದುಕನ್ನು ಶರಣರು ನಿರೂಪಿಸಿದರು.
ಹದಿನೈದನೆಯ ಶತಮಾನದಲ್ಲಿ ದ್ವಿತೀಯ ಅಲ್ಲಮನೆನಿಸಿದ ಶ್ರೀ ತೋಂಟದ ಸಿದ್ಧಲಿಂಗ ಯತಿಗಳು ಶರಣ ವಚನಗಳಿಗೆ ಕಾಯಕಲ್ಪ ನೀಡಿದರು. ಮುಂದೆ 16 ಮತ್ತು 17 ನೇ ಶತಮಾನದಲ್ಲಿ ವಿಜಯನಗರ ಪ್ರೌಢ ದೇವರಾಯನ ಕಾಲದಲ್ಲಿ ಮತ್ತೆ ಪರಿಷ್ಕರಿಸಿ ವಚನಗಳ ಸಂಕಲನದ ಕಾರ್ಯ ನಡೆಯಿತು .

ಶರಣರು ಸಾಧಕರು ಮರ್ತ್ಯ ಲೋಕವನ್ನು ಕರ್ತಾರನ ಕಮ್ಮಟಕ್ಕೆ (maker “s Mint )ಹೋಲಿಸಿ ಮನುಷ್ಯನ ಮೌಲ್ಯವನ್ನು ಪರಾಮರ್ಶೆ ಮಾಡುವ ಕಾರ್ಯವನ್ನು ಶರಣರೇ ವಹಿಸಿಕೊಳ್ಳುವ ಅವಕಾಶವನ್ನು ರೂಪಿಸಿದರು.
ಜಗತ್ತಿನಲ್ಲಿ ಬಸವಣ್ಣ ಒಬ್ಬ ಶ್ರೇಷ್ಠ ಮಟ್ಟದ ದಾರ್ಶನಿಕನು. ಎಲ್ಲ ಧರ್ಮಗಳಿಗಿಂತ ಭಿನ್ನವಾಗಿ ಕಾಣುವ ಸರಳ ವಿಚಾರಗಳ ಆಚರಣೆಯ ಸಿದ್ಧಾಂತವೇ ಶರಣ ಸಿದ್ಧಾಂತವಾಗಿದೆ.

- Advertisement -

ಕಾವಿಗಳು, ಮಠಗಳು ,ಬ್ರಹ್ಮಚರ್ಯ ,ಕಠಿಣ ಆಚರಣೆಗಳು ಇಂದ್ರಿಯ ನಿಗ್ರಹಗಳು ಬಸವ ಧರ್ಮದಲ್ಲಿ ಇಲ್ಲ.. ಲಿಂಗಾಯತ ಧರ್ಮವು ಸಾಂಸ್ಥಿಕರಣಗೊಂಡಿದ್ದೆ ಒಂದು ದುರಂತ. ಅದಕ್ಕಿಂತಲೂ ವಿಷಾದದ ಸಂಗತಿಯೆಂದರೆ ಒಂದೇ ವೀರ ಮಾಹೇಶ್ವರ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಮಠಾಧಿಪತಿ ಪಟ್ಟ ಕಟ್ಟುವ ಹುಚ್ಚುತನ.

ಶ್ರೀ ಅಥಣಿ ಮುರುಗೇಂದ್ರ ಶಿವಯೋಗಿಗಳು ,ಬಿಳ್ಳೂರು ಗುರುಬಸವ ಸ್ವಾಮಿಗಳು, ಸರ್ಪಭೂಷಣ ಶಿವಯೋಗಿಗಳು, ಧಾರವಾಡ ಮೃತ್ಯುಂಜಯ ಸ್ವಾಮಿಗಳು ,ಬಂಥನಾಳ ಸಂಗನಬಸವ ಶಿವಯೋಗಿಗಳು , ಮುರುಗೋಡ ಮಹಾಂತ ಶಿವಯೋಗಿಗಳು, ಭಾಲ್ಕಿಯ ಡಾ ಮ ಘ ಚ .ಚೆನ್ನಬಸವ ಸ್ವಾಮಿಗಳು ಹೀಗೆ ಅನೇಕರು ಧರ್ಮಕ್ಕಾಗಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಆರೋಗ್ಯ ಮುಂತಾದ ಜನಪರ ಯೋಜನೆಗಳನ್ನು ಹಾಕಿ ಸಮಾಜವನ್ನು ಕಟ್ಟಿದ್ದಾರೆ .ಅವರು ನಿಜ ಅರ್ಥದ ಬಸವಣ್ಣನವರ ವಾರಸುದಾರರು

ಈಗಲೂ ನಮ್ಮಲ್ಲಿ ಇಳಕಲ್ ಗದಗ ಬೆಳಗಾವಿ ಭಾಲ್ಕಿ ಹೀಗೆ ಕೆಲ ಮಠಗಳು ಬಸವ ತತ್ವವನ್ನು ಪ್ರತಿಪಾದಿಸುವಲ್ಲಿ ತಕ್ಕ ಮಟ್ಟಿಗೆ ಯಶವನ್ನು ಕಂಡಿವೆ. ಆದರೆ ನೋವಿನ ಸಂಗತಿಯೆಂದರೆ ಕೆಲವರು ಬಸವ ಧರ್ಮವನ್ನು ಆಚರಣೆಯ ಚೌಕಟ್ಟಿನಲ್ಲಿ ಕಟ್ಟಿ ಹಾಕಿ ಹೊಸ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದರು .

- Advertisement -

ವೈದಿಕರ ಪಾರುಪತ್ಯದಲ್ಲಿ ನಡೆಯುವ ಆಚರಣೆಗಳು ಮತ್ತೆ ಎಲ್ಲಾ ಬಹುತೇಕ ಮಠಗಳಲ್ಲಿ ಕಾಣುತ್ತಿವೆ.
ಬಹುತೇಕ ಸ್ವಾಮಿಗಳು ಅಕ್ಕ ಮಾತೆಯರು ಭಕ್ತರ ಕೈಗಳಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಾರೆ. ಪಾದ ಅದು ಜ್ಞಾನವೆನ್ನುವುದು ಮರೆತಿದ್ದಾರೆ ಮರೆಸಿದ್ದಾರೆ.
ಲಿಂಗ ಯೋಗದ ಜೊತೆಗೆ ಮೂರ್ತಿ ಪೂಜೆಯನ್ನು ಬೆಳೆಸಿದರು ನಮ್ಮ ಮಾರ್ಗದರ್ಶಕರು.

ಲಿಂಗೈಕ್ಯ. ಲಿಂಗಾನಂದ ಸ್ವಾಮಿಗಳು ಬಸವ ಪ್ರಜ್ಞೆಯನ್ನು ಬೆಳೆಸಿ ಮಠಗಳಲ್ಲಿ ಬಂಧಿಯಾಗಿದ್ದ ಬಸವನನ್ನು ಜನ ಮುಖಿಯನ್ನಾಗಿ ಮಾಡುವಲ್ಲಿ ಯಶವ ಕಂಡರು. ಆದರೆ ಡಾ ಮಾತೆ ಮಹಾದೇವಿ ಅವರು ಬಸವ ತತ್ವವನ್ನು ಚೆನ್ನಾಗಿ ತಿಳಿದುಕೊಂಡಿದ್ದರೂ ವಚನಾಂಕಿತ ತಿದ್ದಿ ಗೊಂದಲ ಎಬ್ಬಿಸಿದರು. ಶರಣ ಮೇಳ ಕಲ್ಯಾಣ ಪರ್ವ ಪಟ್ಟಾಧಿಕಾರದ ದಶಮಾನೋತ್ಸವ ಕಾರ್ಯಕ್ರಮಗಳ ಜೊತೆಗೆ , ಜಗದ್ಗುರು ಮಹಾಜಗದ್ಗುರು ಎಂಬ ಶ್ರೇಣೀಕೃತ ವ್ಯವಸ್ಥೆಗಳನ್ನು ಆರಂಭಿಸಿದರು.

ಅಲ್ಲಿ ಪೂಜೆ ಆಚರಣೆ ಸಾಮೂಹಿಕ ಪ್ರಾರ್ಥನೆ ಭಜನೆ ಹೀಗೆ ಎಲ್ಲ ವೈದಿಕ ಪದ್ಧತಿಗಳನ್ನು ಹುಟ್ಟು ಹಾಕಿದರು. ಭಕ್ತರಿಗೂ ಕಾವಿ ಸ್ಕಾರ್ಫ ಹಾಕಿ ಉನ್ಮಾದ ಉತ್ಸಾಹಗಳಿಂದ ಜನರನ್ನು ದಿಕ್ಕು ತಪ್ಪಿಸಿದರು. ಅಲ್ಲಿರುವ ಅನೇಕ ಸಾಧಕರಿಗೆ ಗುರು ಲಿಂಗ ಜಂಗಮದ ಕಲ್ಪನೆಗಳಿಲ್ಲ .ಧರ್ಮವೆನ್ನುವುದು ಅಂತರಂಗದ ವಿಕಸನ ಎನ್ನುವುದು ಇವರಿಗೆ ತಿಳಿಯದ ವಿಷಯವೇ ?.ಬಸವಣ್ಣನ ತತ್ವಕ್ಕೆ ಬೇಡವಾದ ಮೂರ್ತಿಗೆ ಚಾಲನೆ ನೀಡಿ ಬಸವಣ್ಣನವರಿಗೂ ಕಾವಿ ತೊಡಿಸಿದರು ಡಾ. ಮಾತಾಜಿಯವರು.

ಚಿತ್ರದುರ್ಗ ಡಾ. ಮುರುಘಾ ಶರಣರು 1997 -1999 ರ ವರೆಗೆ ಬಸವ ಕೇಂದ್ರದ ಮೂಲಕ ನಾಡಿನಲ್ಲಿ ಒಂದು ಹೊಸ ಶಕ್ತಿಯನ್ನು ಸಂಚಲಿಸುವಲ್ಲಿ ಯಶವನ್ನು ಕಂಡರು. ಆದರೆ ಮುಂದೆ ಕೂಡಲ ಸಂಗಮದಲ್ಲಿ ಮಾಂಸ ತಪ್ಪಲ್ಲ ಹಾಗೂ ಜಾತಿಗೊಬ್ಬ ಜಗದ್ಗುರು ಮಾಡಿ ಸಮಾಜವನ್ನು ಒಡೆಯುವಲ್ಲಿ ಯಶವ ಕಂಡರು. ಇಂದು ಪಂಚಮಸಾಲಿ ,ಬಣಜಿಗ ,ಗಾಣಿಗ ,ಶಿವಸಿಂಪಿ , ನೊಣಂಬ ಮೇದಾರ ನೇಕಾರ ಎಲ್ಲ ಹೀಗೆ ಒಳಪಂಗಡಗಳು ತಮ್ಮ ತಮ್ಮ ಸಂಘಟನೆಯಲ್ಲಿ ಆಸಕ್ತಿ ವಹಿಸಿ ಬಸವ ತತ್ವಕ್ಕೆ ಕೊಡಲಿ ಪೆಟ್ಟು ಬೀಳಲು ಮುರುಘಾ ಶರಣರು ಕಾರಣರಾದರು. 375 ಕೋಟಿ ರೂಪಾಯಿಯಲ್ಲಿ ಕಂಚಿನ ಬಸವಣ್ಣನವರ ಪ್ರತಿಮೆ ಮಾಡಿ ಅದರಲ್ಲಿ ಲಿಫ್ಟ್ ಅಳವಡಿಸಿ ಬಸವಣ್ಣನವರ ಮೂರ್ತಿಯ ಮೇಲೆ ಜನ ಹೋಗಲು ಅನುವು ಮಾಡಿಕೊಡುವವರಿದ್ದಾರೆ.ಇದಕ್ಕೆ ಕರ್ನಾಟಕ ಸರಕಾರವು ಕೋಟಿ ಕೋಟಿ ಹಣಕೊಟ್ಟಿದೆಯಂತೆ .
ಈ ಹಿಂದೆ ಮುರುಘಾ ವನವು ಉಚಿತ ಪ್ರವೇಶಕ್ಕೆ ಮುಕ್ತವಾಗಿತ್ತು. ಈಗ ಟಿಕೆಟು ಅಳವಡಿಸಲಾಗಿದೆ.ಹಾಗೆ ಮುಂದೆ ಬಸವಣ್ಣನ ಮೂರ್ತಿ ನೋಡಲು ಸಾವಿರಾರು ರೂಪಾಯಿಯ ಟಿಕೆಟು ಇಟ್ಟರೂ ಆಶ್ಚರ್ಯವಿಲ್ಲವೆನ್ನಬಹುದು. ಇವರು ನಡೆಸುವ ಶರಣ ಸಂಸ್ಕೃತಿ ಆಡಂಬರದ್ದು , ಮಿತಿ ಮೀರಿದ ಖರ್ಚು ಹೆಲಿಕ್ಯಾಪ್ಟರ್ ಮೂಲಕ ಪುಷ್ಪ ಗುಚ್ಛ ಹೂವುಗಳ ತಲೆ ಮೇಲೆ ಹಾಕಿಕೊಳ್ಳಿಸುವುದು ತುಂಬಾ ಬಾಲಿಶವೆನಿಸುವುದು . ತಮ್ಮನ್ನು ಆಧುನಿಕ ಬಸವಣ್ಣ ಎಂದು ತಮ್ಮ ಭಟ್ಟಂಗಿಗಳ ಬಾಯಲ್ಲಿ ಹೊಗಳಿಸಿಕೊಂಡು ತೃಪ್ತಿ ಪಡುತ್ತಾರೆ.

ಬೀದರಿನ ಅಕ್ಕ ಅರ್ಥವಿಲ್ಲದ ಕೃತಿ ಚೌರ್ಯವ ಮಾಡಿದ ಗುರುವಚನ ಗ್ರಂಥ ಜನರ ತಲೆಯ ಮೇಲೆ ಇಟ್ಟು ಜನರ ಮೆರವಣಿಗೆ ಮಾಡಿ ವಚನವಿಜಯೋತ್ಸವ ಎಂಬ ಕಾರ್ಯವನ್ನು ಮಾಡುತ್ತ ಜಾತ್ರೆ ಹಬ್ಬಗಳಂತೆ ಎಲ್ಲರಿಗೂ ತಾವು ಸಲೆಬ್ರಿಟಿಗಳಿಗೆ ಕಡಿಮೆ ಇಲ್ಲ ಎನ್ನುವ ಹಾಗೆ ಮಂತ್ರಿಗಳನ್ನು ಭ್ರಷ್ಟ ವ್ಯಕ್ತಿಗಳನ್ನು ಬಸವ ವೇದಿಕೆಯ ಮೇಲೆ ಕರೆದು ವೈಭವೀಕರಿಸಿದ್ದು ಈಗ ನೆನಪು.

ಮೇಲಿನ ಕೆಲವರು ಸರಕಾರದಿಂದ ಬಡವರಿಗೆ ಮಂಜೂರಾದ ಯೋಜನೆಗಳ ಹಣವನ್ನು ತಮ್ಮ ದಾಸೋಹ ಮಂಟಪಕ್ಕೆ ಉಪಯೋಗಿಸಿ ಬಡವರ ಹೊಟ್ಟೆಯ ಎಲೆ ಬರಿಯ ಎಳೆದಿದ್ದಾರೆ.

ಹೆಳವನ ಮೇಲೆ ಕುರುಡನೊಬ್ಬ ಕುಳಿತಿಹನು ದಾರಿ ಸಾಗುವದೆಂತು ನೋಡಬೇಕೀಗ ಎಂಬ ಗೋಪಾಲಕೃಷ್ಣ ಅಡಿಗರ ಮಾತಿನಂತೆ ಭ್ರಷ್ಟ ಮಂತ್ರಿಗಳ ಮೇಲೆ ಕುರುಡು ಧರ್ಮಾಧಿಕಾರಿಗಳು ಕುಳಿತು ಯಾತ್ರೆ ನಡೆಸುತ್ತಿದ್ದಾರೆ. ಮೂಢ ಜನರು ಭ್ರಮೆ ಭ್ರಾಂತಿಗಳಿಂದ ಇಂತಹ ವ್ಯವಸ್ಥೆಯನ್ನು ಅನಿವಾರ್ಯವಾಗಿ ಒಪ್ಪಿಕೊಂಡು ದಾಸ್ಯತ್ವಕ್ಕೆ ಅಣಿಯಾಗಿದ್ದಾರೆ.

ಕೆಲವರು ಪ್ರವಚನದ ಹೆಸರಿನಲ್ಲಿ ಮೈಕಿನಲ್ಲಿ ಚೆನ್ನಾಗಿ ಕಿರುಚಿ ಶಬ್ದಗಳ ಮಾಲಿನ್ಯದ ಜೊತೆಗೆ ಏನಕೇನ ಪ್ರಕಾರೇಣ ಪ್ರಸಿದ್ಧಿಭವ ಎಂದು ಜನರ ಭಾವನೆಗಳನ್ನು ಉದ್ರೇಕಗೊಳಿಸಿ ಪ್ರಚೋದನೆ ಮಾಡುತ್ತಾರೆ ಇದು ಖಂಡಿತ ಶರಣ ಸಿದ್ಧಾಂತವಲ್ಲ. ಇತ್ತೀಚೆಗೆ ಕೆಲ ಸ್ವಾಮಿಗಳು ಪ್ರವಚನವನ್ನು ದೊಡ್ಡ ಉದ್ಧಿಮೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿಯ ವ್ಯವಹಾರಗಳು. ಅಥಣಿ ಶ್ರೀ ಮುರುಗೇಂದ್ರ ಶ್ರೀಗಳು ತಮ್ಮ ಮಠದ ಕಸವನ್ನು ತಾವೆ ಹೊಡೆಯುತ್ತಿದ್ದರು. ಯಾರಾದರೂ ಆ ಕಾರ್ಯವನ್ನು ಮಾಡಿದರೆ ಅವರು ಅಂದು ಪ್ರಸಾದವನ್ನು ಸ್ವೀಕರಿಸುತ್ತಿದ್ದಿಲ್ಲ .
ಇಂದಿನ ಸ್ವಾಮಿಗಳು ಮಾತೆಯರು ಅಕ್ಕನವರು ಬಸವಣ್ಣನವರ ಹೆಸರಿನಲ್ಲಿ ಉದ್ಧಿಮೆ ಮಾಡಿ ಜನರನ್ನು ಶೋಷಿಸುತ್ತಿದ್ದರೆ .ರಾಜಕಾರಣಿಗಳು ತಮ್ಮ ವೋಟ್ ಬ್ಯಾಂಕ್ ನೀತಿಗಾಗಿ ಇಂತವರನ್ನು ಸಲುಹುತ್ತಾರೆ.
ಜನರು ವಚನ ಸಾಹಿತ್ಯದ ಅಧ್ಯಯನವನ್ನು ತೀವ್ರಗೊಳಿಸಿ ಇಂತಹ ಆಷಾಢಭೂತಿಗಳಿಗೆ ವಿಶ್ರಾಂತಿ ನೀಡಬೇಕು.
ಭಕ್ತ ಮೊದಲು ಇಂತಹ ವ್ಯವಸ್ಥೆಯಿಂದ ಮುಕ್ತನಾದಾಗ ಮಾತ್ರ ನಮಗೆ ಸ್ವತಂತ್ರ ಧರ್ಮದ ಪರಿಕಲ್ಪನೆ ಅರಿವಾಗುವುದು. ಇಲ್ಲದಿದ್ದರೆ ಶೋಷಣೆ ಮಾಡುವ ಸನಾತನಿಗಳಿಗೂ ನಮ್ಮ ಶ್ರೀಗಳು ಮತ್ತೆ ಅಕ್ಕನವರಿಗೂ ಯಾವುದೇ ವ್ಯತ್ಯಾಸವಿಲ್ಲ.ಪೌರೋಹಿತ್ಯವನ್ನು ವಿರೋಧಿಸುತ್ತ ಇನ್ನೊಂದು ನವ ಪೌರೋಹಿತ್ಯಕ್ಕೆ ನಾಂದಿ ಹಾಡುವ ನಮ್ಮ ಲಿಂಗಾಯತ ಧಾರ್ಮಿಕ ಮುಖಂಡರಿಂದ ಬಸವ ಧರ್ಮಕ್ಕೆ ಕಂಟಕವೆಂದರೆ ತಪ್ಪಾಗಲಿಕ್ಕಿಲ್ಲ .

ಹೊನ್ನಿನೊಳಗೊಂದೊರೆಯ ಅನ್ನದೊಳಗೊಂದಗುಳ ,ವಸ್ತ್ರ (ಸೀರೆ) ದೊಳಗೊಂದ ಎಳೆಯ ಇಂದಿಂಗೆ ನಾಳಿಂಗೆ ಬೇಕೆಂದನಾದಡೆ ಆಣೆ ನಿಮ್ಮಾಣೆ ಎನ್ನುವ ಬಸವಣ್ಣನವರೆಲ್ಲಿ.?ಎಲ್ಲ ರೀತಿಯ ಹಣವನ್ನು ತಂದು ವ್ಯವಹಾರವ ಮಾಡಿ ಕಾಯಕ ದಾಸೋಹ ತತ್ವಕ್ಕೆ ದ್ರೋಹ ಬಗೆಯುವ ಇವರೆಲ್ಲಿ.?
ಇನ್ನಾದರೂ ಎಲ್ಲ ಹಿರಿಯ ಸ್ವಾಮಿಗಳಲ್ಲಿ ಮಾತೆ ಅಕ್ಕನವರು ಮಠಾಧೀಶರಲ್ಲಿ ಕಳಕಳಿಯ ವಿನಂತಿ. ಬಸವ ಭಕ್ತರು ನಿಮ್ಮೆಲ್ಲ ಕಾರ್ಯವನ್ನು ನೋಡುತ್ತಿದ್ದಾರೆ. ನಿಮ್ಮ ನಿಮ್ಮ ವ್ಯಕ್ತಿ ನಿಷ್ಠೆಯನ್ನು ಬೆಳೆಸುವುದನ್ನು ಬಿಟ್ಟು ಬಸವ ಪ್ರಜ್ಞೆಯನ್ನು ಹೆಚ್ಚಿಸಿ ಲಿಂಗಾಯತ ಧರ್ಮದ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ತೊಡಗಿಸಿಕೊಳ್ಳಲು ಕೋರಿಕೆ,  ಶರಾಣಾರ್ಥಿ .
———————————————————
ಡಾ.ಶಶಿಕಾಂತ.ಪಟ್ಟಣ.ಪೂನಾ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನಗಳು

ಭ್ರೂಣವು .ಹೊಸ ಬಸುರಿನ ಒಡಲೊಳಗೆ ಚಿಗುರೊಡೆದ ಭ್ರೂಣವು ಒಡಲಾಚೆ ವಿಶ್ವದಿ ಮೊಟ್ಟೆಯೊಡೆದು ಹುಟ್ಟ ಬಯಸುವ ಪಕ್ಷಿಯು ಕಡಲೊಳಗೆ ಕಣ್ಣ್ತೆರೆದು ಕನಸು ಕಾಣುವ ಪುಟ್ಟ ಮೀನು ಜೀವಜಾಲದ ಮಧ್ಯೆ ನಗೆಯ ಪರಿಮಳ ಕಂಪು ಸೂಸುವದು ಮುಗ್ಧ ಭಾವ ಮೊಳಕೆಯೊಡೆವ ಜೀವಕೆ ಗೊತ್ತಿಲ್ಲ ಹೆಣ್ಣೋ ಗಂಡೋ? ಸಮಕಳೆ ಶಾಂತಿ ಮಂತ್ರ ________________________ ನೆಲವನಾಳುವ ನೆಲವನಾಳುವ ನೀಚ ಮನುಜರೆ ಏಕೆ ಕಾಡು ಕೊಲ್ಲುತಿರಿ ಮರದ ಪೊದರಲಿ ಪುಟ್ಟ ಪಕ್ಷಿ ನಗುವ ಕಲೆಗೆ ಏಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group