ಗುರುವೆಂಬ ಶಕ್ತಿ
ಹೊಸತನಕೆ ನಾಂದಿ
ಆತ್ಮವಿಶ್ವಾಸಕೆ ಮುನ್ನುಡಿ
ಚೈತನ್ಯ ತುಂಬುವ ಶಕ್ತಿ
ಭೂತ ವರ್ತಮಾನ ತಿಳಿಸಿ
ಒಳಿತು ಕೆಡುಕುಗಳ ತೋರ್ಪಡಿಸಿ
ಅಂಧಕಾರ ಕಳೆಯುವ ಅನನ್ಯ ಶಕ್ತಿ.
ಭ್ರಮೆಗಳ ಬಿಡಿಸಿ
ಅಂತರಂಗದ ಪ್ರಶ್ನೆಗಳಿಗೆ ಉತ್ತರಿಸಿ
ಭರವಸೆಯ ತುಂಬುವ ಅನಂತ ಶಕ್ತಿ.
ಅಕ್ಕರೆಯಲಿ ಅಕ್ಷರ ಕಲಿಸಿ
ಮೌಲ್ಯಗಳ ಪರಿಚಯಿಸಿ
ಬೋಧನೆಯಲಿ ದಾರಿ ತೋರುವ ಬೆರಗಿನ ಶಕ್ತಿ.
ಜೇವನ ಹಾದಿಯ ಸುಗಮವಾಗಿಸಿ
ತಪ್ಪು ತಿದ್ದುವ ಜ್ಞಾನ ದೀವಿಗೆ ಹೊತ್ತಿಸಿ
ಪ್ರತಿಭೆಗೆ ಪ್ರೇರಣಾ ಶಕ್ತಿ.
ಛಲದಿ ಬಲವ ರೂಪಿಸಿ
ಅಭಿವೃದ್ಧಿ ಅಥವ ಝೇಂಕರಿಸಿ
ಉತ್ತೇಜನ ನೀಡುವ ಸ್ಪೂರ್ತಿ ಶಕ್ತಿ.
ಸುಜ್ಞಾನದಿ ಸನ್ಮಾರ್ಗ ಪ್ರವಹಿಸಿ
ಶಿಸ್ತಿನಲಿ ಸಂಸ್ಕಾರ ಕಲಿಸಿ
ಸಮಸ್ಯೆ ಪರಿಹರಿಸುವ ದಿವ್ಯ ಶಕ್ತಿ.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

