‘ಶಂಕರ ದಾಸಿಮಯ್ಯ ಪುರಾಣ’ ಒಂದು ಅಧ್ಯಯನ: ಕೃತಿ ಅವಲೋಕನ.

Must Read
               ‘ಶಂಕರ ದಾಸಿಮಯ್ಯ ಪುರಾಣ’ ಒಂದು ಅಧ್ಯಯನ  ಸಂಶೋಧನಾ ಗ್ರಂಥ ಪುಷ್ಪವಾಗಿರುತ್ತದೆ. ಡಾ.ಅನ್ನಫೂರ್ಣ ಜಾಲವಾದಿ (ಸ್ನೇಹಾ  ಭೂಸನೂರ) ಅವರು ಡಾ.ಬಿ.ಕೆ.ಹಿರೇಮಠ ಗುರುವರೇಣ್ಯರ ಮಾರ್ಗದರ್ಶನದಲ್ಲಿ  ಈ ಸಂಶೋಧನಾ ಮಹಾಪ್ರಬಂಧವನ್ನು  ಸಮರ್ಪಿಸಿ ಡಾಕ್ಟರೇಟ್ ಪದವಿ ಪಡೆದಿರುವರು. ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ಬೆಳ್ಳಿಹಬ್ಬ ಪಿಎಚ್ ಡಿ ಪ್ರಬಂಧಮಾಲೆಯ ಸಂಪಾದಕ ಮಂಡಳಿಯ ಡಾ.ಎಂ.ಎಂ.ಕಲಬುರ್ಗಿಯವರು ಈ ಕ್ರತಿಯ ಪ್ರಧಾನ ಸಂಪಾದಕರು. ಡಾ.ಟಿ.ಆರ್.ಚಂದ್ರಶೇಖರ್,ಪ್ರೊ.
ಮಲ್ಲೇಪುರಂ ಜಿ.ವೆಂಕಟೇಶ್,ಡಾ.ಬಿ.ರಾಜಶೇಖರಪ್ಪ,ಡಾ.ವಿಜಯಕುಮಾರ.ಎಂ.ಬೋರಟ್ಟಿ,ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ,ಡಾ.ಸಿ.ಎ. ಸೋಮಶೇಖರಪ್ಪ, ಡಾ.ಸಿ.ಟಿ. ಜಯಣ್ಣ ಇವರೆಲ್ಲರೂ ಸಂಪಾದಕರಾಗಿರುವರು.
‘ಶರಣಶ್ರೀ’ ಅಭಿನಂದನ ಗ್ರಂಥ ಪ್ರಕಟಣೆ,ಪಿ ಎಚ್ ಡಿ ಪ್ರಬಂಧಗಳ ಹಾಗೂ ಶ್ರೀ ಮಠದ ಕ್ರತಿಗಳ  ಮರುಮುದ್ರಣ ವಿಶೇಷತೆ  ಕುರಿತು ,ಈ ಮೂರು ಭಾಗಗಳಲ್ಲಿ ಡಾ.ಎಂ.ಎಂ.ಕಲಬುರ್ಗಿಯವರು ಪ್ರಧಾನ ಸಂಪಾದಕೀಯದಲ್ಲಿ  ತಮ್ಮ ಅಮೂಲ್ಯ ಅಭಿಪ್ರಾಯವನ್ನು ಬಿತ್ತರಿಸಿದ್ದಾರೆ.
ಲಿಂ.ಡಾ.ಎಂ.ಎಂ.ಕಲಬುರ್ಗಿಯವರ ಸಲಹೆಯಂತೆ ವೀರಶೈವ-ಲಿಂಗಾಯತ, ಶರಣ ಚಳವಳಿ, ಮಠ-ಪೀಠಗಳ ಸಮಾಜಮುಖಿ ಕಾರ್ಯಗಳನ್ನು ಕುರಿತಂತೆ,ಸಮಾಜ ಸೇವಾಕರ್ತ ಮಹನೀಯರ ಸಾಧನೆಗಳನ್ನು ಕುರಿತಂತೆ ಇಪ್ಪತ್ತೈದು ಗ್ರಂಥಗಳನ್ನು ಈ ಗ್ರಂಥಮಾಲೆಯಿಂದ ಪ್ರಕಟಿಸಲಾಗಿದೆ. ಜೊತೆಗೆ ಶ್ರೀಗಳವರ ‘ ಪೀಠಾರೋಹಣ ಬೆಳ್ಳಿಹಬ್ಬ’ ದ ಸ್ಮರಣಿಕೆಯಾಗಿ ” ಶರಣಶ್ರೀ” ಕೃತಿಯು ಡಾ.ಎಂ.ಎಂ.ಕಲಬರ್ಗಿಯವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಇದು ಡಾ.ಎಂಎಂ.ಕಲಬುರ್ಗಿಯವರ ಕೊನೆಯ ಗ್ರಂಥ ಸಂಪಾದನೆಯಾಗಿದ್ದು ಇದನ್ನು ಅವರು ಕಂಡು ಸಂತೋಷಿಸುವ ಕ್ಷಣ ನಮ್ಮ ಮುಂದಿಲ್ಲದಿರುವುದು ದುಃಖವೂ ಆಗಿದೆ.ಆ ಹಿರಿಯ ಸಂಶೋಧನಾ ಚೈತನ್ಯಕ್ಕೆ ಪ್ರಕಾಶನದ ಪರವಾಗಿ ಅನಂತಾನಂತ ಧನ್ಯವಾದಗಳು ಎಂಬ ಅಭಿಪ್ರಾಯ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅವರದಾಗಿದೆ.
   ಸದಾಕಾಲ ಅಧ್ಯಯನ ನಿರತರಾದ ಡಾ.ಬಿ.ಕೆ. ಹಿರೇಮಠ  ಗುರುವರ್ಯರ ಮಾರ್ಗದರ್ಶನದಲ್ಲಿ ತಾವು ಪ್ರಪ್ರಥಮ ಸಂಶೋಧನಾ ವಿದ್ಯಾರ್ಥಿನಿಯಾಗಿರುವದು ಹೆಮ್ಮೆಯ ಸಂಗತಿ.ಆಳವಾಗಿ ಚಿಂತಿಸುವ, ತೂಕಬದ್ಧ ನಿರ್ಣಯಕ್ಕೆ ಬರುವ ಪ್ರವೃತ್ತಿಯೊಂದಿಗೆ ಪ್ರತಿಯೊಂದನ್ನೂ ಕೂಲಂಕುಷವಾಗಿ ಓದಿ,ಚರ್ಚಿಸಿ, ತಿದ್ದಿ ತೀಡಿ ಈ ಪ್ರಬಂಧಕ್ಕೆ ಒಂದು ರೂಪವನ್ನು ಕೊಟ್ಟು ಮಾರ್ಗದರ್ಶನಗೈದ  ಗುರುಗಳಿಗೆ ಉಪಕ್ರತಳಾಗಿರುವೆನು ಎಂಬ ಡಾ ಅನ್ನಪೂರ್ಣಾ ಜಾಲವಾದಿಯವರ ಅಭಿಪ್ರಾಯ ಔಚಿತ್ಯಪೂರ್ಣವಾದುದು.
  ಈ ಗ್ರಂಥದಲ್ಲಿ  ಅಧ್ಯಯನದ ಉದ್ದೇಶ ವ್ಯಾಪ್ತಿ, ಪೂರ್ವಾಪರಗಳು, ಕಥಾವಸ್ತು ಸಮೀಕ್ಷೆ, ಕೃತಿ ವಿಶ್ಲೇಷಣೆ, ಸಾಂಸ್ಕೃತಿಕ ಅಂಶಗಳು, ಸಮಾರೋಪ, ಹೀಗೆ ಒಟ್ಟು ಆರು ಅಧ್ಯಾಯಗಳಿರುತ್ತವೆ. ನವಿಲೆಯ ಶಾಸನಗಳು, ಪಂಡಿತ ಕವಿ ಮಲ್ಲಿಕಾರ್ಜುನೋಕ್ತ ಶೈವ ಪ್ರಭೇದಗಳು, ಗ್ರಂಥ ಋಣ,ನಕ್ಷೆ, ಇವೆಲ್ಲವನ್ನೂ ಅನುಬಂಧದಲ್ಲಿ ಸೂಚಿಸಲಾಗಿದೆ.
‘ ಶಂಕರ ದಾಸಿಮಯ್ಯ’ ನ ಪುರಾಣ ಕೃತಿಯನ್ನು ಕ್ರಿ.ಶ. 1941 ರಷ್ಟು ಹಿಂದೆ ಸಂಪಾದಿಸಿ ಪ್ರಸ್ತಾವನೆ ಶಾಸನ ಪಾಠ ಚಿತ್ರ ಕೋಶಗಳನ್ನು ಒಳಗೊಂಡು ಅಭ್ಯಾಸ ಪೂರ್ಣವಾಗಿ ಪ್ರಕಟಿಸಿದವರು ಧಾರವಾಡದ ಒಂದನೆ ವರ್ಗದ ನ್ಯಾಯಾಧೀಶರಾಗಿದ್ದ ವೀರಭದ್ರಪ್ಪ. ಬಿ. ಹಾಲಭಾವಿಯವರು. ಅವರ ಈ ಕಾರ್ಯ ತಮಗೆ ಮುಂದಿನ ಶೋಧನೆಗೆ ದಿಕ್ಸೂಚಿಯಾಗಿದೆ ಎಂದು ಡಾ. ಅನ್ನಪೂರ್ಣ ಜಾಲವಾದಿಯವರು ಅಭಿಪ್ರಾಯಪಟ್ಟಿರುವರು.  ತಮ್ಮಲ್ಲಿರುವ ‘ಶಂಕರ ದಾಸಿಮಯ್ಯ’ ಪುರಾಣದ ಹಸ್ತ ಪ್ರತಿಯನ್ನು ಒದಗಿಸಿದ ಹುಬ್ಬಳ್ಳಿಯ ಎಂ.ಕೆ. ರುದ್ರೇಶ ಸೋಲಾಪುರದ ಶಿವಯೋಗಪ್ಪ ಲೋಣಿ ಮೈಸೂರು ವಿವಿಯ ಮತ್ತು ಕವಿವಿಯ ಹಸ್ತ ಪ್ರತಿ ವಿಭಾಗದ ಕೇಂದ್ರ ಗ್ರಂಥಾಲಯಗಳಿಂದ  ಸಂಶೋಧನೆಗೆ ಅತ್ತ್ಯುಪಯುಕ್ತ ಮಾಹಿತಿ ಸಂಗ್ರಹಿಸಿರುವದಾಗಿ ಡಾ.ಅನ್ನಪೂರ್ಣಾ ಅವರು ತಿಳಿಸಿರುವರು.
  ಕವಿ ಪಂಡಿತ ಮಲ್ಲಿಕಾರ್ಜುನನ ‘ಶಂಕರ ದಾಸಿಮಯ್ಯ’ ಪುರಾಣವು ಸಾಹಿತ್ಯ ಚರಿತ್ರೆಕಾರರ, ಸಾಹಿತ್ಯಾಸಕ್ತರ  ವಿಮರ್ಶಕರ ಗಮನ  ಸೆಳೆಯದಿರುವ ಇಂಥ ಅಲಕ್ಷ್ಯಕ್ಕೊಳಗಾದ ಕೃತಿಯಾಗಿದ್ದು ಅದರ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನರಿತು ಪ್ರಮುಖವಾಗಿ ಬಸವ ಪೂರ್ವದ ಆಂದೋಲನಕಾರನ ಹಾಗೂ ಆಂದೋಲನದ ಸ್ವರೂಪದ ಮೇಲೆ ಬೆಳಕು ಬೀರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕವಿ ಹಾಗೂ ಕೃತಿ  ಕುರಿತಾಗಿ ಮೊದಲ ಸಮಗ್ರ ಅಧ್ಯಯನವಾದ ಇದು ಕವಿಯ ಪೂರ್ವಾಪರಗಳ ಬಗೆಗೆ ಕೃತಿ ಶಿಲ್ಪದ ಬಗೆಗೆ ಆಳವಾದ ಮಾಹಿತಿಯನ್ನೂ ಹಾಗೂ ಅನೇಕ ಹೊಸ ಅಂಶಗಳನ್ನೊಳಗೊಂಡಿರುತ್ತದೆ.
ಬಸವಾದಿ ಶರಣರ ಆಂದೋಲನಕ್ಕೆ ಪೂರ್ವಭಾವಿಯಾಗಿ ನಡೆದ ಆಂದೋಲನದ ಸ್ವರೂಪವನ್ನು ತಿಳಿಸುತ್ತಿದ್ದಂತೆಯೇ ಇದುವರೆಗೆ ಚಾರಿತ್ರಿಕ ಕೊರತೆಯಾಗಿರುವುದನ್ನು ಭರಿಸುವ ಸದುದ್ದೇಶದಿಂದ ಹಲವು ಮುಖಗಳ ಮುಖೇನ ಸಂಶೋಧಕರು ಅಧ್ಯಯನಗೈದಿರುವರು.
ಕವಿಯ ಕಾಲ ಮತ ಊರು ಆಶ್ರಯ ಪ್ರೇರಣೆ ಹಾಗೂ ವ್ಯಕ್ತಿತ್ವ ಕುರಿತು ಇಲ್ಲಿಯವರೆಗೆ ಪ್ರಾಸಂಗಿಕವಾಗಿ ಚರ್ಚಿಸಲ್ಪಟ್ಟವುಗಳನ್ನು ಕೈಗತ್ತಿಕೊಂಡು ವಿವರವಾಗಿ ಸಾಧಾರಣವಾಗಿ ವಿವೇಚಿಸಿ ಸದ್ಯ ನಿರ್ವಿವಾದದ್ದೆನ್ನಬಹುದಾದ ನಿರ್ಣಯಕ್ಕೆ ಬರಲಾಗಿದೆ. ಕೇವಲ ಕಾವ್ಯ ಅಥವಾ ಶಾಸ್ತ್ರದ ಪಾಠಗಳಿಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದ್ದ ಹಸ್ತಪ್ರತಿಗಳನ್ನು ಇಲ್ಲಿ ಕೃತಿ ರಚನಾ ಅವಧಿಯನ್ನು ನಿರ್ಧರಿಸಿಕೊಳ್ಳಲು ಬಳಸಿಕೊಂಡಿರುವುದು ವೈಶಿಷ್ಟಪೂರ್ಣವಾಗಿರುತ್ತದೆ.
    ಕೃತಿ ನಾಯಕನ ಪೂರ್ವಾಪರಗಳನ್ನು ಕುರಿತು ನಡೆಸಿರುವ ಕಾಲ ದೇಶ ಪರಿಸರಾದಿಗಳ ವಿವೇಚನೆಯೂ ಕೂಡಾ ಅನೇಕ ಹೊಸ ಸಂಗತಿಗಳನ್ನರಹುತ್ತದೆ. ಶಂಕರದಾಸಿಮಯ್ಯನು  ಬದುಕಿದ ಕಾಲ ಪರಿಸರಾದಿಗಳು ವೀರಶೈವ ಆಂದೋಲನದ ಬಹುಮುಖ್ಯವಾದ ಪ್ರಾರಂಭಿಕ ಹಂತವನ್ನು ಕಣ್ಮುಂದಿಡುತ್ತದೆಯಲ್ಲದೆ ಆ ನಿಟ್ಟಿನ ಚರಿತ್ರೆಯ ಪೂರ್ಣತೆಗೆ ಸಹಾಯಕವಾಗಿರುತ್ತದೆ. ಅದರಂತೆ ಶಂಕರದಾಸಿಮಯ್ಯನ ಇಷ್ಟದೈವ, ದೇವಾಲಯ ಕುರಿತಾಗಿ ಸಂಗ್ರಹಿಸಿರುವ ಮಾಹಿತಿ ಹೊಸತಾಗಿದೆ.ಇಲ್ಲಿನ ಶಂಕರದಾಸಿಮಯ್ಯನ ಶಿಷ್ಯ ಸಂತತಿ ಹಾಗೂ ಸಂಪ್ರದಾಯ ಕುರಿತು ಹೇಳಲಾದ ಸಂಗತಿಗಳು ಲಭ್ಯವಾದ ಎಲ್ಲ ಶಾಸನ ಹಾಗೂ ಸಾಹಿತ್ಯಕ ಆಕರಗಳನ್ನು ಆಧರಿಸಿದ್ದು ಅವುಗಳನ್ನಾಧರಿಸಿದ ನಿರ್ಣಯಗಳು ಕೂಡ ಈ ವರೆಗೆ ಬೆಳಕಿಗೆ ಬಾರದ ಮಾಹಿತಿಗಳೇ ಆಗಿವೆ. ಅವುಗಳ ಬಗ್ಗೆ ಹೊಸ ವಿಚಾರಗಳನ್ನು ವಿವೇಚಿಸಲಾಗಿದೆ.
       ಪ್ರಸ್ತುತ ಪುರಾಣದಲ್ಲಿ ನಿಕ್ಷೇಪಗೊಂಡಿರುವ ಚಾರಿತ್ರಿಕ ಹಾಗೂ  ಸಾಂಸ್ಕೃತಿಕ ಮಹತ್ವದ ಅಂಶಗಳನ್ನೊಳಗೊಂಡಿದೆಯಲ್ಲದೆ ಇಡೀ ಅಧ್ಯಯನದ ಮಹತ್ವವನ್ನು ವರ್ಧಿಸುವಂತಿದೆ. ದೇವಾಲಯ ಪರಿಸರ , ಸೇವೆ ಸೇವಾ ಪರಿವಾರ ಕುರಿತ ಪ್ರಸ್ತಾಪ ವಿವಿಧ ಮತಗಳ ಉಲ್ಲೇಖ ಶೈವ-ಶೈವದ ಕೆಲವು ಶಾಖೆಗಳು, ಹಾಗೆಯೇ ಕಾಪಾಲಿಕ, ಶಾಕ್ತ, ಮತಗಳ ಕುರಿತ ತಾತ್ವಿಕ ಮತ್ತು ಆಚರಣಾದಿಗಳ ಪ್ರಸ್ತಾಪ,ಮೈಲಾರ ಭೈರವ ಸೇರಿದಂತೆ ಕೆಲವು ಸ್ತ್ರೀಪುರುಷ ದೇವತೆಗಳ ವಿವರಣೆ,ಹಾಗೆಯೇ ಆಂದೋಲನಕಾರ ಶಂಕರದಾಸಿಮಯ್ಯ ಮತ್ತು ಅವನ ಪರಿವಾರ,ವೇಷಭೂಷಣ,ಬಿರುದಾವಳಿ,ಲಾಂಛನಗಳು,ನಂದಿಯ ಮುಖವಾಡ ಇತ್ಯಾದಿಗಳ ಪ್ರಸ್ತಾಪವು ಶಂಕರದಾಸಿಮಯ್ಯನ ಕಾಲದ ಧಾರ್ಮಿಕ ವಲಯದ ಸ್ಥಿತಿಗತಿಗಳ ಚಿತ್ರಣವನ್ನು ಪ್ರಸ್ತಾಪಿಸಲಾಗಿದೆ. ಇಲ್ಲಿನ ಹಣೆಗಣ್ಣು ತವನಿಧಿ ಹಾಗೂ ಶಂಕರದಾಸಿಮಯ್ಯನ ಪಥ್ಯಾಹಾರವೆನ್ನಲಾದ  ಗುಲಗಂಜಿ ಲೋಳೆಸರದ ಬಗ್ಗೆ ವಿವೇಚನೆಗಳು ಕೇವಲ ಸಾಹಿತ್ಯಿಕ ಮಾಹಿತಿಯಾಗಿರದೆ  ವೈಜ್ಞಾನಿಕ ಹಾಗೂ ಅಂತರ್ ಶಿಸ್ತೀಯ  ಅಧ್ಯಯನದ ಫಲಶ್ರುತಿಯಂತಿರುತ್ತವೆ.
ಚಿಪ್ಪಿಗ ವೃತ್ತಿ ಅವರ ಪೂರ್ವ ವ್ರತ್ತಾಂತ ಕುರಿತ ಮಾಹಿತಿ ಅತ್ಯಂತ ಮಹತ್ವದ್ದಾಗಿರುತ್ತದೆ.ಪುರಾಣೋಕ್ತವಾದ ಈ ಹಿಂದೆ ಚರ್ಚಿಸಲ್ಪಡದ ಮಹದಡಂಬ ನಗರವನ್ನು ಹಾಗೂ ಮೈಲಾರನ ಪಿಂಬೇರ ಕ್ಷೇತ್ರವನ್ನು ಸರಿಯಾಗಿ ಗುರುತಿಸುವದರೊಂದಿಗೆ ಸರಿಯಾದ ವಿವರಣೆಯನ್ನೂ ಸಂಶೋಧಕರು ಅರುಹಿದ್ದಾರೆ.
ಈ ಕೃತಿಯ ಅನುಬಂಧದಲ್ಲಿ ಶಂಕರದಾಸಿಮಯ್ಯನ ಮನೆದೇವರಾದ ಕಂದಗಲ್ಲಿನ ಶ್ರೀ ಶಂಕರಲಿಂಗ ಮತ್ತು ಇಷ್ಟದೇವತೆಯಾದ ನವಿಲೆಯ ಶ್ರೀ ಜಡೆಯಶಂಕರ ಮಂದಿರಗಳು ಉಪಯುಕ್ತವಾದ ಹಲವಾರು ವರ್ಣಮಯ ಛಾಯಾಚಿತ್ರಗಳನ್ನು ಹಾಗೂ ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾದ ಶಾಸನ ಪಾಠಗಳನ್ನು ದಾಖಲಿಸಿರುವುದರಿಂದ ಅವೆಲ್ಲವೂ ಸಾಹಿತ್ಯಿಕ ಮಾಹಿತಿಗಳಿಗೆ ಪೂರಕವಾದ ಚರಿತ್ರೆ ಮತ್ತು ವಾಸ್ತುಶಿಲ್ಪ ಸಂಬಂಧಿ ದಾಖಲೆಗಳಾಗಿರುತ್ತವೆ.

‘ಶಂಕರದಾಸಿಮಯ್ಯ’ಪುರಾಣ ಮಹಾಪ್ರಬಂಧದ ಈ ಕೃತಿರತ್ನವು ಉಪೇಕ್ಷಿತ ವಿಷಯ ವಸ್ತುವಿನ ವೈಶಿಷ್ಟ್ಯಮಯ ಸಂಶೋಧನೆಯಾಗಿದೆಯಲ್ಲದೆ ಸಾಹಿತ್ಯಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಅತ್ಯುಪಯುಕ್ತ ಆಳವಾದ ಮಾಹಿತಿಯನ್ನು ಪ್ರತಿಬಿಂಬಿಸುವಂತಹ ಸಂಶೋಧನಾಸಕ್ತ ಯುವಪೀಳಿಗೆಗೆ ದಾರಿದೀಪವೇ ಆಗಿರುತ್ತದೆ.

ಚಿತ್ರದುರ್ಗದ ಶ್ರೀ ಮುರುಘಾಮಠದ ಶ್ರೀ ಮುರುಘರಾಜೇಂದ್ರ ಗ್ರಂಥಮಾಲೆಯ ಪ್ರಕಟಣಾ ಕ್ರತಿಯಿದು. ಧಾರವಾಡದ ಎಚ್.ಎಸ್.ಮೇಲಿನಮನಿಯವರು ಅಕ್ಷರ ಸಂಯೋಜಿಸಿದ್ದಾರೆ. ಸಂಶೋಧನಾಪ್ರಿಯರಿಗೆ ಅಮೂಲ್ಯ ಆಕರಗ್ರಂಥವಿದಾಗಿದ್ಜು ಅಧ್ಯಯನಾಸಕ್ತ ಸಹೃದಯರು ಓದಲೇಬೇಕಾದ ಕೃತಿರತ್ನವೆಂಬುದರಲ್ಲಿ ಎರಡು ಮಾತಿಲ್ಲ.
—-***—-
ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು.ಗದಗ.
ಮೊ: ೯೯೮೦೭೧೧೪೩೫

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group