ವಾಲ್ಮೀಕಿ ಮೂಲತಃ ದರೋಡೆಕೋರನಾಗಿದ್ದ. ಅವನ ಮೂಲ ಹೆಸರು ರತ್ನಾಕರ ಎಂದಿತ್ತು. ಜೀವನೋಪಾಯಕ್ಕಾಗಿ ಕಳ್ಳತನ, ಹಿಂಸೆ, ಬೇಟೆ, ಅಪಹರಣ ಮತ್ತಿತರ ಪಾಪದ ಕೃತ್ಯಗಳಲ್ಲಿ ತೊಡಗಿದ್ದ. ಕುಟುಂಬ ನಿರ್ವಹಣೆಗಾಗಿ ದರೋಡೆ ಮಾಡುತ್ತಿದ್ದ.
ಆಶ್ರಯ ಕೊಟ್ಟ ಕಾಡಿನ ಮಾರ್ಗದಲ್ಲಿ ಸಂಚರಿಸುವ ಯಾತ್ರಿಕರನ್ನು, ಸಾಧು ಸಂತರನ್ನು ಹಾಗೂ ವ್ಯಾಪಾರಿಗಳನ್ನು ದೋಚುತ್ತಿದ್ದ. ಅವರಲ್ಲಿದ್ದ ಹಣ, ಆಹಾರ, ಒಡವೆ ಹಾಗೂ ವಸ್ತ್ರಗಳನ್ನೂ ದೋಚಿ ತಂದು, ತನ್ನ ಕುಟುಂಬಿಕರಿಗೆ ದುಡಿದು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.
ಪ್ರಾಯಶಃ ವಿಶ್ವಗುರು ಬಸವಣ್ಣನವರು ಇಂತಹ ಮಹರ್ಷಿಗಳ ಬದುಕನ್ನೇ ತಿಳಿದು ಈ ಕೆಳಗಿನಂತೆ ವಚನದ ಮೂಲಕ ಉಪದೇಶ ನೀಡಿದರೇನೋ?
“ಕಳಬೇಡ, ಕೊಲಬೇಡ,
ಹುಸಿಯ ನುಡಿಯಲು ಬೇಡ, ಮುನಿಯ ಬೇಡ,
ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವ ನೊಲಿಸುವ ಪರಿ”.
ರತ್ನಾಕರನಿಗೆ ಒಮ್ಮೆ ನಾರದ ಮುನಿ ಪ್ರತ್ಯಕ್ಷನಾದ. ಅವನ ಮೇಲೂ ದರೋಡೆಗೆ ಯತ್ನಿಸಿದ. ಅವಾಗ ನಾರದ ಕೇಳಿದನಂತೆ, ” ನಿನ್ನ ಈ ಪಾಪದ ಕರ್ಮದ ಫಲವನ್ನು ನಿನ್ನ ಪರಿವಾರ ತೆಗೆದುಕೊಳ್ಳುತ್ತದೆಯೇ”? ಇದಕ್ಕೆ ಬೆಚ್ಚಿಬಿದ್ದ ರತ್ನಾಕರ, ಓಡಿ ಹೋಗಿ ತನ್ನ ಕುಟುಂಬದವರನ್ನು ಕೇಳಿದನಂತೆ,”ನಾ ದುಡಿಯುತ್ತಿಲ್ಲ. ನಿಮಗಾಗಿ ದರೋಡೆ, ಕಳ್ಳತನ ಮಾಡುತ್ತಿದ್ದೇನೆ. ನೀವು ಈ ಪಾಪದ
ಫಲ ಪಡೆಯುತ್ತಿರಾ”?. ಅವರು ಉತ್ತರಸಿದರಂತೆ,”ನೀ ನಮಗೆ ದುಡಿದು ಹಾಕುವುದು ನಿನ್ನ ಹಕ್ಕು ಮತ್ತು ಕರ್ತವ್ಯ. ನಿನ್ನೊಡನೆ ನಾವು ಹಂಚಿಕೊಳ್ಳುವುದು, ನೀ ತಂದು ಕೊಡುವ ಆಹಾರವಷ್ಟೆ. ಆದ್ರೆ ಪಾಪದ ಪಾಲು ನಮ್ಮದ್ದಲ್ಲ”.
ಈ ವಾಗ್ವಾದ ರತ್ನಾಕರನಲ್ಲಿ ಮನ್ವಂತರ ಬೆಳವಣಿಗೆಗೆ ಕಾರಣವಾಯಿತು. ಪಶ್ಚಾತ್ತಾಪದಿಂದ ನಾರದ ಮುನಿಗೆ ಮಂಡಿಯೂರಿದ. ಆವಾಗ “ರಾಮ….ರಾಮ”
ಎಂದು ತುಟಿಯಿಂದ ಮಾತ್ರ ಜಪಿಸಲು ಉಪದೇಶಿಸದರಂತೆ. ಅದು ಅಸಾಧ್ಯವಾಗಿದ್ದಕ್ಕೆ “ಮರಾ….ಮರಾ”ಎಂದು ಜಪಿಸಲು
ಆರಂಭಿಸಿದನಂತೆ. ಕ್ರಮೇಣ ತಪಸ್ಸಿನಲ್ಲಿ ನಿರತನಾದ ಸಂದರ್ಭದಲ್ಲಿ ರತ್ನಾಕರನ ಶರೀರದ ಮೇಲೆ ಕ್ರಿಮಿ, ಕೀಟ, ಮಣ್ಣುಗುಡ್ಡೆ ಮೆತ್ತಿಕೊಂಡಿತಂತೆ. ಹೀಗಾಗಿ ಅವನಿಗೆ “ವಾಲ್ಮೀಕ-ವಾಲ್ಮೀಕಿ” ಎಂದು ನಾಮಾಂಕಿತವಾಯಿತು.
ರತ್ನಾಕರನ ಪೂರ್ವಜರ ಕುರಿತು ಪೌರಾಣಿಕ ಕಥೆಗಳೆ ಸಾಕ್ಷಿ. ಅವನ ತಂದೆ,ತಾಯಿ ಬ್ರಾಹ್ಮಣ ಗೋತ್ರದ ಪ್ರಚೇತಾ ಮತ್ತು ಚಾರ್ಷಿಣಿ ಎಂದಿದೆ. ಈತ ಜನಿಸಿದ್ದು ತಮಸಾ ನದಿ ತೀರ ಪ್ರದೇಶದ ಹುಣ್ಣಿಮೆ ದಿನದಂದು. ಅರಣ್ಯದಲ್ಲಿ ಬಾಲ್ಯ ಕಳೆಯುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಭೀಲ್ (ಬೇಡ) ಸಮುದಾಯದ ಭೇಟೆಗಾರನೋರ್ವನ ಸುಪರ್ಧಿಯಲ್ಲಿ ಬೆಳೆದನೆಂದು ಜನಪದಗಳು ಸಾರುತ್ತವೆ. ಕ್ರಮೇಣ ಬೇಟೆಗಾರನಾಗಿ ಬೆಳೆದು ಗೃಹಸ್ಥನಾಗಿ ಪುಷ್ಪಾವತಿ ಎಂಬ ಗಿರಿಕನ್ಯೆಯೊಂದಿಗೆ ಲೈಂಗಿಕ
ಸಂಪರ್ಕ ಬೆಳೆಸಿ, ಅವಳನ್ನು ವರಿಸಿಕೊಂಡು ಹಲವು ಮಕ್ಕಳನ್ನು ಹೊಂದಿದ್ದ ಎಂದು ಪುರಾಣ ಕಾವ್ಯಗಳಲ್ಲಿ ಉಲ್ಲೇಖಗಳಿವೆ.
ಈ ರೀತಿಯಾದ ಋಷಿಮುನಿಗಳ ಮೂಲಗಳನ್ನು ಅರಿತ ಅಪ್ಪ ಬಸವಣ್ಣ ಈ ಕೆಳಗಿನ ವಚನ ರಚಿಸಿದ್ದಾರೆ ಅನಿಸುತ್ತದೆ
“ವ್ಯಾಸ ಬೋವಿತಿಯ ಮಗ,
ಮಾರ್ಕೇಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು, ಲವನರಸದಿರಿಂ ಭೋ, ಕುಲದಿಂದ ಮುನ್ನೇನಾದಿರಿಂ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ, ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ ಮೂರು ಭುವನವರಿಯೆ ನಾವಿದ ಕಾಣಿಂಭೋ! ನಮ್ಮ ಕೂಡಲಸಂಗಮನ ವಚನವಿಂತೆಂದುದು ಶ್ವಪಚೋಪಿಯಾದರೇನು, ಶಿವಭಕ್ತನೇ ಕುಲಜನು”.
ರತ್ನಾಕರ ದಟ್ಟಾರಣ್ಯದಲ್ಲಿ ಬೇಟೆಗಾರ ಕುಟುಂಬದೊಂದಿಗೆ ಬೆಳೆದ. ಅಪ್ರಾಪ್ತ ವಯಸ್ಸಿನಲ್ಲಿಯೇ ಕಾಡು ಮೃಗಗಳೊಂದಿಗೆ ಬೇಟೆ, ಹತ್ಯೆ ಮತ್ತು ದರೊಡೆ ಗೈಯ್ಯುವುದೇ ಅವನ ಹವ್ಯಾಸವಾಗಿತ್ತು. ಅವನಲ್ಲಿ ದಾಹ, ಲೋಭ, ಹಿಂಸೆ ಹಾಗೂ ಅಜ್ಞಾನ
ತಾಂಡವಾಡುತ್ತಿತ್ತು. ಸಂಸ್ಕಾರವಂತರು ಅವನಲ್ಲಿ ಭಯ ಪಡುತ್ತಿದ್ದರು. ಅವನ ಸಂತಾನವೂ ಕಳ್ಳತನ ಸಂಸ್ಕೃತಿಯಿಂದ ಬೆಳೆದರೂ ಶಾಂತಿ, ಸಭ್ಯತೆ, ಗೌರವ, ಸಂಯಮ ಇರಲಿಲ್ಲ. ಯಾವುದೇ ವಿದ್ಯಾಭ್ಯಾಸ ಹಾಗೂ ಶಾಸ್ತ್ರೀಯ ಜ್ಞಾನ ಪಡೆದಿರಲಿಲ್ಲ. ಅಜ್ಞಾನ
ಮತ್ತು ಕಷ್ಟದ ಜೀವನವೇ ಅವನ ಪಾಡಾಗಿತ್ತು. ಸಂಸ್ಕೃತ, ಸಂಸ್ಕಾರ ಹಾಗೂ ಯಾವುದೇ ಲಿಪಿಶಾಸ್ತ್ರ ಗಳ ಸಂಸ್ಕೃತಿ ಅವನಿಗಿರಲಿಲ್ಲ.
ಶುದ್ಧವಾಗಿ ರಾಮ…ರಾಮ ಎಂದು ಜಪಮಂತ್ರ ಉಚ್ಚರಿಸಲು ಬರುತ್ತಿರಲಿಲ್ಲ. ಅದರ ಬದಲು ‘ಮರಾ…ಮರಾ” ಎಂದು ಜಪಿಸುತ್ತಿದ್ದ. ಹಾಗೆಂದರೆ ತನ್ನ ಕಷ್ಟ, ಪೀಡೆ ಹಾಗೂ ಪಾಪಗಳಿಂದ ವಿಮುಕ್ತಿಗೊಳಿಸಿ, ನಿನ್ನಲ್ಲಿ ಸಂರಕ್ಷಿಸು ಎಂದು ತಪಸ್ಸಿಗೆ ಆಶ್ರಯ ನೀಡಿದ ವೃಕ್ಷಕ್ಕೆ ಬೇಡಿಕೊಳ್ಳುತ್ತಿದ್ದನಂತೆ. ಏಕೆಂದರೆ ರತ್ನಾಕರ ನಾರದಮುನಿಯ ಉಪದೇಶದಂತೆ ಮರವೊಂದರ ಅಡಿಯಲ್ಲಿ ತಪಸ್ಸಿಗೆ ಕುಳಿತ್ತಿದ್ದ. ರಾಮನ ಪ್ರಜ್ಞೆ ಹಾಗೂ ಶೃಂಗಾರ ಕಾವ್ಯಗಳ ಕುರಿತಾಗಿ ಅವನಿಗೆ ಅರಿವು ಇರಲಲ್ಲ. ಸಂಸ್ಕೃತದ ಶ್ಲೋಕಗಳಲ್ಲಿ ನಿವೇದಿಸುವ ಪಾಂಡಿತ್ಯವೂ ತಿಳಿದಿರಲಿಲ್ಲ. ಹಾಗಾದ್ರೆ ರಾಮಾಯಣ ರಚಿಸಿದ್ದಾದ್ರೂ ಹೇಗೆ?
ಹನುಮಂತ ಶ್ರೀರಾಮನ ಭಂಟನಾಗಿದ್ದ. ಅವನೊಂದಿಗೆ ವನವಾಸದಲ್ಲಿದ್ದ. ಸೀತಾಪಹರಣ ಸುಖಾಂತ್ಯಗೊಳಿಸಿದ್ದ. ಲಂಕಾದಹನ ಮಾಡಿದ್ದ. ಶ್ರೀರಾಮ ಅಯೋದ್ಯಕ್ಕೆ ಮರಳಿ ಬಂದು ಸಿಂಹಾಸರೋಹಣ ಗೈದಿದ್ದೆಲ್ಲ ತಿಳಿದಿದ್ದ. ಅಪಾರ ವಿದ್ಯಾಪಾರಂಗತನಾಗಿದ್ದ. ಸಂಸ್ಕೃತ ಪಾಂಡಿತ್ಯ ಹೊಂದಿದ್ದ. ರಾಮ, ಸೀತೆ, ಲಕ್ಷ್ಮಣರೊಂದಿಗೆ ಸಂವಾದದಲ್ಲಿ ತೊಡುಗುತ್ತಿದ್ದ. ಹೀಗಾಗಿ ಮೂಲ ರಾಮಾಯಣ ರಚಿಸಿದವನೆ ಹನುಮಂತ. ಅದಕ್ಕೆ “ಹನುಮದ್ ರಾಮಾಯಣ” ಎಂದು ಕರೆಯಲಾಯಿತು. ಒಂದಿನ
ಬೆಳಗಿನ ಜಾವ ಹನುಮಂತ ನದಿಯಲ್ಲಿ ಸ್ನಾನಗೈದು ತೀರದಲ್ಲಿ ಕುಳಿತು ರಾಮಜ್ಞಾನ ಮತ್ತು ಶ್ರೀರಾಮನ ಜಪದಲ್ಲಿ ಮಗ್ನನಾಗಿದ್ದ. ಅದೇ ಸೂರ್ಯೋದಯದ ಸಂದರ್ಭದಲ್ಲಿ ವಿಹಾರದಲ್ಲಿದ್ದ ವಾಲ್ಮೀಕಿ ಅಲ್ಲಲ್ಲಿ ಅನೇಕ ಗುಹೆಗಳ ಶಿಲೆಗಳ ಮೇಲೆ ಹನುಮಂತ ತನ್ನ ಉಗುರುಗಳಿಂದ ರಚಿಸಿದ ರಾಮಾಯಣದ ಶ್ಲೋಕಗಳನ್ನು ಗಮನಿಸಿದ. ಇದನ್ನೆಲ್ಲ ಬರೆದವರು ಯಾರು? ನನಗಿಂತ ಬಹು ಸೊಗಸಾಗಿ ರಚಸಿದ ಮಹಾತ್ಮ ಯಾರೆಂದು ಶೋಧಿಸಿದ. ಯಾಕೆಂದರೆ ಶ್ಲೋಕಗಳಲ್ಲಿ ಹನುಮಂತನೆ ಲೇಖಕನೆಂದು ಎಲ್ಲಿಯೂ
ಉಲ್ಲೇಖಗಳಿರಲಿಲ್ಲ.
ರಾಮಾಯಣದ ಉತ್ತರಕಾಂಡದ ೧೧೧ನೆ ಸರ್ಗ,೧೬ನೆ ಶ್ಲೋಕವು ” ಆದಿ ಕಾವ್ಯ ಮಿದಂ ತ್ವರ್ಷ ಪುರಾ ವಾಲ್ಮೀಕಿ ನಾ ಕೃತಂ” ಎಂದಿದೆ. ಅಂದರೆ ಈ ಆದಿ ಕಾವ್ಯದ ಕರ್ತೃ ವಾಲ್ಮೀಕಿ ಎಂದು ಉಲ್ಲೇಖಿಸಲಾಗಿದೆ. ಹಾಗಾದ್ರೆ ಈ ಶ್ಲೋಕವನ್ನು ರಚಿಸಿದವರು ಯಾರು? ವಾಲ್ಮೀಕಿ ಆಗಿದ್ರೆ, ಈ ಕಾವ್ಯದ ಕರ್ತೃ ಎಂದು ಏಕೆ ಬರೆದುಕೊಳ್ಳುತ್ತಿದ್ದ? ಶ್ಲೋಕದಲ್ಲಿ “ಪುರಾ” ಎನ್ನುವ ಪದದ ಅರ್ಥ
“ಮೊದಲೆ, ಪೂರ್ವದಲ್ಲಿ”ಎಂದರ್ಥ. ಹಾಗಾದ್ರೆ ಪೂರ್ವದಲ್ಲೇ ಬರೆದಿದ್ದ ಕಾವ್ಯವನ್ನು ಮತ್ತೆ ರಚಿಸಲು ಸಾಧ್ಯವೇ?!
ಪ್ರಚೇತಾ ಎಂಬ ರತ್ನಾಕರನ ಮೂಲ ಬ್ರಾಹ್ಮಣ ಗೋತ್ರದ ತಂದೆ ನಂತರ ಪುನರ್ ಜನ್ಮ ಪಡೆದು ತುಳಸಿದಾಸನಾಗಿ ಪ್ರಸಿದ್ಧಿ ಪಡೆದನಂತೆ. ಅವನಿಂದ ವಾಲ್ಮೀಕಿ ರಾಮಾಯಣವನ್ನು “ರಾಮಚರಿತ ಮಾನಸ”ವೆಂದು ತಿದ್ದುಪಡಿಗೊಳಿಸದನೆಂದು ಪ್ರತೀತಿ. ನಂತರ ತುಳಸಿದಾಸರ ಕೃತಿಗೆ “ವಾಲ್ಮೀಕಿ ರಾಮಾಯಣ” ಎಂದೆ ಕರೆಯುವುದು ವಾಡಿಕೆಯಾಯಿತು. ಪ್ರಸಕ್ತ ಪಠಿಸುತ್ತಿರುವ
ಹನುಮಾನ ಚಾಳಿಸಾ ಸಹ ಸ್ವತಃ ತುಳಸಿದಾಸರೆ ರಚಿಸಿದ್ದು. ಯಾಕೆಂದರೆ ಹನುಮಂತ ರೊಚ್ಚಿಗೆದ್ದು ರಾವಣನ ಸಂಹಾರಗೈಯದಂತೆ ಬ್ರಾಹ್ಮಣರ ಸಂತತಿ ಸರ್ವನಾಶಗೊಳಿಸದಂತೆ ಅವನ ಓಲೈಕೆಗಾಗಿ ಹಾಗೂ ಮನ ಕರಗಿಸಲು ಹನುಮಂತನಲ್ಲಿ ತಮ್ಮನ್ನು ಮಣ್ಣಿಸುವಂತೆ ಅವನ ಗುಣಗಾನದ ಕಾವ್ಯವೆ ಹನುಮಾನ ಚಾಲೀಸಾ ಆಗಿದೆ.
ಹಾಗಾದ್ರೆ, ವಾಲ್ಮೀಕಿ ಮಹರ್ಷಿಯ ಜಾತಿಯ ಮೂಲ ಯಾವುದು? ಅಪ್ರಾಪ್ತ ರತ್ನಾಕರನನ್ನು ಪೋಷಿಸಿ, ಬೆಳೆಸಿದ ಭೀಲ್ (ಬೇಡ) ಸಮುದಾಯವು ಬೇಟೆಗಾರಿಕೆ ವೃತ್ತಿಯಲ್ಲಿತ್ತು. ಈಗಲೂ ಬೇಟೆಯಾಡುವ ಬೇಡರ ಜನಾಂಗದ ಮೂಲವೂ ಅದೇ ಆಗಿದೆ. ಆದಾಗ್ಯೂ, ವಾಲ್ಮೀಕಿ ಬೇಡ ಜನಾಂಗದ ಪೂರ್ವಜ ಹಾಗೂ ರಾಮಾಯಣದ ಮೂಲ ಕರ್ತೃ ಎಂದೇ
ಹೇಳಲಾಗುತ್ತಿದೆ !
ಅಯೋಧ್ಯೆಯಲ್ಲಿ ಬ್ರಾಹ್ಮಣನ ಸುಪುತ್ರನೋರ್ವ ಶೂದ್ರ ಶಂಬೂಕನಿಗೆ ಚುಡಾಯಿಸುತ್ತಿದ್ದ. ಅವನ ಉಪಟಳ ತಾಳದೆ, ನಿರ್ಮೂಲನೆಗಾಗಿ ಶಂಬೂಕ ತಪಸ್ಸಾಚರಿಸಿ ವರ ಪಡೆದು ಆ ಬಾಲಕನ ಸಾವಿಗೆ ಕಾರಣನಾದ. “ಆ ಶೂದ್ರ ಶಂಬೂಕ ತಪಸ್ಸಿಗೆ ಅರ್ಹನಲ್ಲ. ಆದ್ರೂ ವರ ಪಡೆದು ನನ್ನ ಮಗನನ್ನು ಮೃತ್ಯುಗೊಳಿಸಿದ್ದಾನೆ”, ಎಂದು ದುಃಖಿತ ಬ್ರಾಹ್ಮಣ ಅಯೋಧ್ಯಾ ಪತಿ ಶ್ರೀರಾಮನಿಗೆ ದೂರು ನೀಡುತ್ತಾನೆ. ಆವಾಗ ರೊಚ್ಚಿಗೆದ್ದ ಸ್ವತಃ ರಾಮನೆ ಶೂದ್ರ ಶಂಬೂಕ ಋಷಿಯನ್ನು ಕೊಲೆಗೈಯ್ಯುತ್ತಾನೆ.
ನಂತರ ಬ್ರಾಹ್ಮಣರಿಗಾಗಿ ಶೂದ್ರ ಮಹರ್ಷಿಯ ಹತ್ಯೆಯ ಪ್ರಕರಣ ಮರೆಮಾಚಿಸಲು ಕೆಲವು ಪುರೋಹಿತ ವರ್ಗ
ವಾಲ್ಮೀಕಿ(ರತ್ನಾಕರ)ನನ್ನು ಶೂದ್ರ ಕವಿ, ದಲಿತ ಮಹರ್ಷಿ ಎಂದು ಬಿಂಬಿಸಲಾಗಿದೆ.

-ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕರು,
ಅಂಚೆ: ಕೋಳೂರ, ತಾ: ಮುದ್ದೇಬಿಹಾಳ
ಜಿ: ವಿಜಯಪುರ-೫೮೬೧೨೯(ಕರ್ನಾಟಕ)
ಮೊ: ೯೨೪೧೨೮೬೪೨೨
Email:satishitagi10@gmail.com

