ಕಲ್ಲೋಳಿ: ಸೈಬರ್ ಜಾಗೃತಿ ಎಂದರೆ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಮತ್ತು ಸೈಬರ್ ಅಪರಾಧಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಅರಿವು ಮತ್ತು ಜ್ಞಾನವಾಗಿದೆ ಎಂದು ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಗಣಕಶಾಸ್ತ್ರ ಪ್ರಾಧ್ಯಾಪಕ ಆರ್.ಎಸ್. ಪಂಡಿತ ಹೇಳಿದರು.
ಅವರು ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಘಟಕ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸೈಬರ್ ಜಾಗೃತಿ ಭಾರತ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನದ ಪ್ರಗತಿಯೊಂದಿಗೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಾಗಾಗಿ, ವೈಯಕ್ತಿಕ ಮಾಹಿತಿ ಮತ್ತು ಹಣಕಾಸು ವ್ಯವಹಾರಗಳನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿರಿಸಲು ಪ್ರತಿಯೊಬ್ಬರಿಗೂ ಸೈಬರ್ ಜಾಗೃತಿ ಹೊಂದುವುದು ಅತ್ಯಗತ್ಯ ಎಂದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ ಮಾತನಾಡಿ, ಸೈಬರ್ ಮೋಸಗಳಿಂದ ತಪ್ಪಿಸಿಕೊಳ್ಳಲು ಬಲವಾದ ಪಾಸ್ವರ್ಡ್ಗಳನ್ನು ಬಳಸಿ ಮತ್ತು ಅವುಗಳನ್ನು ನಿಯಮಿತವಾಗಿ ಬದಲಾಯಿಸಿ. ಎರಡು-ಹಂತದ ಪರಿಶೀಲನೆ ಸೌಲಭ್ಯವನ್ನು ಸಾಧ್ಯವಾದೆಡೆ ಬಳಸಿ. ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಮಿತಿಯಾಗಿ ಹಂಚಿಕೊಳ್ಳಿ, ಅಪರಿಚಿತರು ಕಳುಹಿಸಿದ ಸಂದೇಶ ಅಥವಾ ವಿಡಿಯೋಗಳಿಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸಿ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ಗೆ ಬರುವ ಒನ್-ಟೈಮ್ ಪಾಸ್ವರ್ಡ್ (OTP), ATM ಪಿನ್, ಅಥವಾ ಕಾರ್ಡ್ನ CVV ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೈಬರ್ ಅಪರಾಧ ನಡೆದರೆ, ತಕ್ಷಣವೇ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಸಂತೋಷ ಬಂಡಿ ನಿರೂಪಿಸಿದರು, ವಿಲಾಸ ಕೆಳಗಡೆ ಸ್ವಾಗತಿಸಿದರು. ಡಾ. ಎಂ.ಬಿ. ಕುಲಮೂರ ವಂದಿಸಿದರು.

