ಮೂಡಲಗಿ: ಸರಕು ಮತ್ತು ಸೇವಾ ತೆರಿಗೆ ಚೌಕಟ್ಟು ಭಾರತದಲ್ಲಿ ಜುಲೈ 1, 2017 ರಿಂದ ಜಾರಿಗೆ ಬಂದಿರುವ ಏಕರೂಪದ, ಗುರಿ-ಆಧಾರಿತ, ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಇದು ಹಿಂದಿನ ಅನೇಕ ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ಒಂದೇ ತೆರಿಗೆಯಲ್ಲಿ ವಿಲೀನಗೊಳಿಸಿತು ಎಂದು ಮೂಡಲಗಿಯ ಶ್ರೀ ಶ್ರೀ ಶ್ರೀಪಾದಬೋಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ವಾಯ್. ಕಂಬಾರ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಸಹಯೋಗದಲ್ಲಿ “ಜಿ.ಎಸ್.ಟಿ ಪ್ರೇಮ್ ವರ್ಕ್” ಎಂಬ ವಿಷಯದ ಕುರಿತು ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಜಿ.ಎಸ್.ಟಿಯ ಉದ್ದೇಶ, ರಚನೆ ಹಾಗೂ ವ್ಯಾಪಾರ ಕ್ಷೇತ್ರದ ಮೇಲೆ ಇರುವ ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ತೆರಿಗೆ ಪರಂಪರೆ ಪ್ರಾಚೀನ ಕಾಲದಿಂದಲೂ ನಡೆದು ಬಂದ ಹಾದಿಗಳನ್ನು ಶಾಸನ ಹಾಗೂ ವಚನಗಳ ಮೂಲಕ ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಎಂ.ಬಿ. ಕುಲಮೂರ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ, ವಾಣಿಜ್ಯ ಶಾಸ್ತ್ರ ವಿಭಾಗದ ಅಧ್ಯಾಪಕರಾದ ಆರ್.ಎಸ್. ಪಂಡಿತ, ವ್ಹಿ.ವಾಯ್. ಕಾಳೆ, ವಿಲಾಸ ಕೆಳಗಡೆ, ಸಂತೋಷ ಬಂಡಿ, ಬಿ.ಸಿ. ಮಾಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

