spot_img
spot_img

ಸುಖದ ಪಯಣದತ್ತ ಬಾಳಿನ ಬಂಡಿ

Must Read

- Advertisement -

ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ’ ಎಂಬ ಉದಾತ್ತ ಆಶಯ ತುಂಬಿದ ಕವನ ಬರೆದವರು ಕನ್ನಡದ ಮೇರು ಕವಿ ಈಶ್ವರ ಸಣಕಲ್ಲವರು.ಆದರೆ ಇಂದು ನಾವು ಪ್ರತಿಯೊಬ್ಬರು ಸುಖವನ್ನು ಬಯಸುತ್ತೇವೆ. ಸುಖವನ್ನು ಬಯಸುವದು ತಪ್ಪಲ್ಲ ಆದರೆ ಸುಖವನ್ನು ಪಡೆಯಲು ವಾಮ ಮಾರ್ಗಗಳನ್ನು ಅನುಸರಿಸುವುದು ತಪ್ಪು. ಕ್ಷಣಿಕ ಸುಖದ ಬೆನ್ನು ಹತ್ತಿದರೆ, ಮುಂದೆ ದುಃಖದ ಕಡಲಲ್ಲಿ ಮುಳುಗುವುದು ನಿಶ್ಚಿತ. ಸುಖದ ಕಡಲಲ್ಲಿ ಶಾಶ್ವತವಾಗಿ ತೇಲಬೇಕಾದರೆ ದೂರದೃಷ್ಟಿಯನ್ನಿಟ್ಟುಕೊಂಡು ಮುಂದಾಲೋಚನೆಯ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತರಾಗುವದು ಒಳಿತು.

ಆಂಗ್ಲ ಭಾಷೆಯ ಉಕ್ತಿಯಂತೆ ಈ ಜಗದಲ್ಲಿ ಯಾರೂ ದಡ್ಡರಿಲ್ಲ’ಮನಸ್ಸು ಮಾಡಿದರೆ ಯಾರು ಬೇಕಾದರೂ ತಮಗೆ ಬೇಕಾದ್ದನ್ನು ಸಾಧಿಸಬಹುದು..ಜನ್ಮದಿಂದಲೇ ಯಾರೂ ಕಲಿತು ಬಂದಿರುವದಿಲ್ಲ.ಅದಕ್ಕೆ ಸರ್ವಜ್ಞ ತನ್ನ ವಚನದಲ್ಲಿ ಸರ್ವರೊಳಗೊಂದೊಂದು ನುಡಿಗಲಿತು ಸರ್ವಜ್ಞನಾದೆ ಎಂದು ಹೇಳಿದ್ದಾನೆ.

ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯು ಅವನ ಸುತ್ತ ಮುತ್ತಲಿನ ಪರಿಸರ, ಕುಟುಂಬದ ಸಂಸ್ಕಾರ, ಸಂಸ್ಕೃತಿ, ಪಡೆಯುವ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ವ್ಯಕ್ತಿತ್ವ ವಿಕಸನದಲ್ಲಿ ಪರಿಸರದ ಪಾತ್ರ ತುಂಬ ಮಹತ್ತರವಾದುದು. ನಾವು ವಾಸಿಸುವ ಪರಿಸರ ನಮ್ಮ ನಡೆ ನುಡಿಯಲ್ಲಿ ಅಗಾಧವಾದ ಬದಲಾವಣೆ ತರುವ ಶಕ್ತಿ ಹೊಂದಿದೆ. ಸಾಮಾನ್ಯ ವ್ಯಕ್ತಿಯಾದವನು ಏನನ್ನೂ ಸಾಧಿಸಲಾರ ಎಂದೇನಿಲ್ಲ. ಜೀವನದ ಸಂದರ್ಭ ಸನ್ನಿವೇಶ ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ, ರಚನಾತ್ಮಕ ತಿರುವು ನೀಡಿದಲ್ಲಿ ಖಂಡಿತ ಯಶಸ್ವಿ ವ್ಯಕ್ತಿಯಾಗಿ ಹೆಸರು ಗಳಿಸಬಲ್ಲ. ಹಾಗಾದರೆ ಜೀವನದ ಪಯಣದಲ್ಲಿ ನಮಗಾಗುವ ಅನುಭವಗಳಿಂದ ಪಾಠ ಕಲಿತು, ಅವುಗಳನ್ನೇ ಉಜ್ವಲ ಭವಿಷ್ಯದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡರೆ ಸುಖದಾಯಕ ಬದುಕು ನಮ್ಮದಾಗುತ್ತದೆ.

- Advertisement -

ತಪ್ಪು ಮಾಡಿಲ್ಲ ಎಂದರೆ ಪ್ರಯತ್ನವನ್ನೇ ಮಾಡಿಲ್ಲ ಎಂದರ್ಥ. ತಪ್ಪು ಮಾಡುವುದು ತಪ್ಪಲ್ಲ ಪದೇ ಪದೇ ಅದೇ ಅದೇ ತಪ್ಪನ್ನು ಮಾಡುವದು ತಪ್ಪು. ವಿಶ್ವಕೆಲ್ಲ ಸತ್ಯ ಶಾಂತಿ ಅಹಿಂಸೆಯ ತತ್ವ ಸಾರಿದ ಗಾಂಧೀಜಿಯರು ಸಣ್ಣವರಿದ್ದಾಗ ಅನೇಕ ತಪ್ಪುಗಳನ್ನು ಮಾಡಿದ್ದರು ಎನ್ನುವದು ನಮಗೆಲ್ಲರಿಗು ಗೊತ್ತು. ಆದರೆ ಅವರು ತಮ್ಮ ತಪ್ಪಿನ ಅರಿವು ಉಂಟಾದಾಗ ಪಶ್ಚಾತಾಪ ಪಟ್ಟು ತಮ್ಮ ಜೀವನದ ದಿಕ್ಕನ್ನು ಬದಲಾಯಿಸಿಕೊಂಡು ನಮಗೆಲ್ಲ ದಾರಿ ದೀವಿಗೆಯಾದರು.

ಸಮಸ್ಯೆಗಳು ಮನುಷ್ಯನಿಗಲ್ಲದೆ ಮರಗಳಿಗೆ ಬರುತ್ತವೆಯೆ? ಎಂಬ ಮಾತಿನಂತೆ ಸಮಸ್ಯೆಗಳು ಮಾನವ ಜೀವನದ ಅವಿಭಾಜ್ಯ ಅಂಗಗಳು. ಸಮಸ್ಯೆಗಳಿಗೆ ಹೆದರಿ ಫಲಾಯನಗೈಯದೇ ಎದೆಗಾರಿಕೆಯಿಂದ ಎದುರಿಸುವ ಛಲ ಬೆಳೆಸಿಕೊಳ್ಳಬೇಕಿದೆ. ಇತ್ತೀಚೆಗೆ ಅನೇಕ ವಿದ್ಯಾರ್ಥಿಗಳು ಮತ್ತು ಯುವ ಜನತೆ ಸಣ್ಣ ಪುಟ್ಟ ಸಮಸ್ಯೆಗಳ ವಿಫಲತೆಯನ್ನು ದೊಡ್ಡ ವೈಫಲ್ಯತೆಯೆಂದು ಪರಿಗಣಿಸಿ ತನ್ನಿಂದ ಏನನ್ನೂ ಸಾಧಿಸಲಾಗುವದಿಲ್ಲ ಎಂದು ಹತಾಶರಾಗಿ ತಮ್ಮ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದು ಅರ್ಥಹೀನವಾದುದು.

ಕರ್ತವ್ಯ ನಿನ್ನದು ಫಲಾಫಲಗಳು ದೇವರದು ಎಂದು ಕೃಷ್ಣ ಅರ್ಜುನನಿಗೆ ಗೀತೆಯಲ್ಲಿ ಉಪದೇಶಿಸಿಲ್ಲವೇ? ಪ್ರಾಮಾಣಿಕವಾಗಿ ಪರಿಶ್ರಮ ವಹಿಸುವುದರಲ್ಲಿ ಯಶಸ್ಸು ಅಡಗಿದೆ.ಕುಳಿತವನು ಎಡವಲಾರ ನಡೆಯುವವನೇ ಎಡುವುತ್ತಾನೆ’. ಎದುರಿಸುವ ಧೈರ್ಯವಂತರಿಗೆ ಮಾತ್ರ ಸಮಸ್ಯೆಗಳು ಎದರಾಗುತ್ತವೆ. ಸೋಮಾರಿಗಳಿಗೆ ಹೇಡಿಗಳಿಗೆ ಸಮಸ್ಯೆಗಳು ಎದುರಾಗುವುದಿಲ್ಲ. ಏಕೆಂದರೆ ಸಮಸ್ಯೆ ಎದುರಿಸುವ ಛಾತಿ ಅವರಲ್ಲಿಲ್ಲ. ಅವರೇನಿದ್ದರೂ ಸಮಸ್ಯೆಗಳಿಗೆ ಬೆನ್ನು ತೋರಿಸಿ ಓಡಿ ಹೋಗುವವರು. ಸಮಸ್ಯೆಗಳನ್ನು ಸವಾಲೆಂದು ಸ್ವೀಕರಿಸಿ ದಿಟ್ಟ ಹೆಜ್ಜೆ ಇಡುವಲ್ಲಿ ಬದುಕಿನ ಸಾಫಲ್ಯತೆಯಿದೆ.

- Advertisement -

ಘಟಿಸಿ ಹೋದ ಕಹಿ ಘಟನೆಗಳನ್ನು ಮೆಲಕು ಹಾಕುತ್ತ, ಅಮುಖ್ಯ ಘಟನೆಗಳಿಗೆ ಪ್ರಾಮುಖ್ಯತೆ ನೀಡಿ ಕೊರಗುತ್ತ, ಕೂಡ್ರುವುದು ಶುದ್ಧ ಸಮಯ ವ್ಯರ್ಥವೇ ಸರಿ.ಕನಸು ಕಾಣಲು ಹಣ ನೀಡಬೇಕೆ? ಎನ್ನುತ್ತ ಹಗಲುಗನಸು ಕಾಣುತ್ತ ಜೀವನವನ್ನು ಸಿನಿಮೀಯವಾಗಿಸಿಕೊಳ್ಳಲು ಹೋಗಿ ಕೊನೆಗೆ ನಿರಾಶರಾಗಿ ಸಿನಿಕರಾಗುತ್ತಾರೆ.
ಇದರ ಬದಲು ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಕಾಣುತ್ತ ಅವುಗಳನ್ನು ನನಸಾಗಿಸಲು, ದೃಢಸಂಕಲ್ಪ ಮಾಡಿ, ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡು ಶ್ರದ್ಧಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

ಕಾರ್ಲೈಲರ ಅತ್ಯಧಿಕ ಸ್ಪೂರ್ತಿಯ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಸಮೀಪದಲ್ಲಿರುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವದರಲ್ಲಿಯೇ ನಮ್ಮ ಮುಖ್ಯವಾದ ಕರ್ತವ್ಯವಿದೆ. ದೂರ ದಿಗಂತದಲ್ಲಿ ಅಸ್ಪಷ್ಟವಾಗಿ ಗೋಚರಿಸುವ ಭವಿಷ್ಯದೆಡೆ ನೋಡುವದರಲ್ಲಿ ಜೀವನದ ಯಶಸ್ಸು ಅಡಗಿಲ್ಲ ಎನ್ನುವುದನ್ನು ಒತ್ತಿ ಹೇಳುತ್ತದೆ. ಇದನ್ನರಿತ ಮಹಾನ್ ಸಾಧಕರು ವರ್ತಮಾನದಲ್ಲಿಯೇ ಕ್ರಿಯಾಶೀಲರಾಗಿ ಅತ್ಯುನ್ನತವಾದುದನ್ನು ಸಿದ್ಧಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಂಡರು ಮತ್ತು ಇತರರ ಬಾಳಿಗೆ ಕೈ ದೀವಿಗೆಯಾದರು.

ಕಳೆದು ಹೋದ ನಿನ್ನೆಯ ಬಗ್ಗೆ, ಇನ್ನೂ ಬಾರದಿರುವ ನಾಳೆಯ ಬಗ್ಗೆ ವೃಥಾ ಚಿಂತಿಸದೇ ಸದ್ಯ ನಮ್ಮ ಕೈಯಲ್ಲಿರುವ ಇಂದು ಬಲು ದೊಡ್ಡದು.ಇಂದಿನ ಪ್ರತಿ ಕ್ಷಣಗಳನ್ನು ಜೀವಿಸೋಣ ಸಂಭ್ರಮಿಸೋಣ ಎಂದು ವರ್ತಮಾನವನ್ನು ಕ್ರಿಯಾತ್ಮಕವಾಗಿ ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ಬದುಕಿನ ಶಾಂತಿ ನೆಮ್ಮದಿ ಅಡಗಿದೆ.ಇದಕ್ಕೆ ಪುಷ್ಟಿ ನೀಡುವಂತೆ `ನೀನು ಈ ದಿನವನ್ನು ನೋಡಿಕೊ ಅದು ನಿನ್ನ ನಾಳೆಯನ್ನು ನೋಡಿಕೊಳ್ಳುತ್ತದೆ ಎಂದು ಆಂಗ್ಲ ವಿದ್ವಾಂಸರೊಬ್ಬರು ಅರ್ಥಪೂರ್ಣವಾಗಿ ಹೇಳಿದ್ದಾರೆ.

ಕೇವಲ ಮಹಾತ್ವಾಕಾಂಕ್ಷೆಗಳನ್ನು ಹೊಂದಿ, ಯೋಜನೆಗಳನ್ನು ರೂಪಿಸಿ, ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತ ಕೈ ಕಟ್ಟಿ ಕುಳಿತರೆ ಮಹಾತ್ವಾಕಾಂಕ್ಷೆ ಈಡೇರದು. ಅದಕ್ಕಾಗಿ ನಮ್ಮ ಪ್ರಾಬಲ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಂಡು ಕಾರ್ಯಕ್ಷಮತೆಯ ವ್ಯಾಪ್ತಿಯಲ್ಲಿ ಮಹಾತ್ವಾಕಾಂಕ್ಷೆ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಮಹಾತ್ವಾಕಾಂಕ್ಷೆ ಈಡೇರದೇ ಭವಿಷ್ಯದಲ್ಲಿ ಹತಾಶೆಯಿಂದ ನಿರಾಶಾವಾದಿಗಳಾಗುವ ಸಂಭವನೀಯತೆಯೇ ಹೆಚ್ಚು.

ಭೂತ ಭವಿಷ್ಯತ್ತುಗಳ ಕುರಿತು ಚಿಂತಿಸದೆ ಈ ದಿನ ಈ ಕ್ಷಣ ಮಾತ್ರ ನನ್ನದು ಎನ್ನುವ ಭಾವ ತುಂಬಿಕೊಂಡು ನಿರಂತರವಾಗಿ ಪರಿಶ್ರಮ ಪಟ್ಟರೆ ಸುಖದ ಪಯಣದತ್ತ ಬಾಳಿನ ಬಂಡಿ ಸಾಗುವದರಲ್ಲಿ ಎರಡು ಮಾತಿಲ್ಲ.


ಜಯಶ್ರೀ ಅಬ್ಬಿಗೇರಿ
ಸ ಪ ಪೂ ಕಾಲೇಜು
ಹಿರೇಬಾಗೇವಾಡಿ
ತಾ:ಜಿ:  ಬೆಳಗಾವಿ
9449234142

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group