ಮೂಡಲಗಿ: ಅಧ್ಯಾತ್ಮದ ಮೇರು ಪರ್ವತ, ಸದ್ಗುಣಗಳ ಸಾಕಾರಮೂರ್ತಿ. ಜಾತಿ, ಜನಾಂಗ, ಧರ್ಮಕ್ಕಿಂತ ಮಿಗಿಲಾಗಿ ಭಕ್ತರ ಮನದಲ್ಲಿ ನಡೆದಾಡುವ ದೇವರೆಂದೇ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನೆಲೆ ನಿಂತಿದ್ದಾರೆ ಎಂದು ಗೋಕಾಕದ ಸಾಹಿತಿ-ಶಿಕ್ಷಕ ರಮೇಶ ಮಿರ್ಜಿ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮೂಡಲಗಿಯ ಪಂಚಾಕ್ಷರಿ ಪ್ರಕಾಶನ ಪ್ರಕಟಿಸಿದ ಲೇಖಕ ಬಾಲಶೇಖರ ಬಂದಿ ಸಂಪಾದಿಸಿದ ‘ಜ್ಞಾನಗಂಧ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಬಿಳೆ ಪಂಚೆ, ಬಿಳಿ ಅಂಗಿ, ಸಾಧಾರಣ ಮೈಕಟ್ಟು, ತೇಜಸ್ಸು ಹೊಂದಿದ ನಗುಮುಖ ಕಂಡವರೆಲ್ಲರಿಗೂ ಚಿಂತೆ, ದುಗುಡ, ದುಮ್ಮಾನ ಮರೆಯಾಗುತ್ತಿದ್ದವು. ಇಂತಹ ಶ್ರೀಗಳು ಕಲ್ಲೋಳಿ ಪಟ್ಟಣದಲ್ಲಿ ನೀಡಿದ ಪ್ರವಚನದ ಸಾರವನ್ನು ಜ್ಞಾನಗಂಧ ಕೃತಿಯಲ್ಲಿ ಬಾಲಶೇಖರ ಬಂದಿ ಅವರು ಸಂಪಾದಿಸಿಕೊಟ್ಟಿರುವುದು ಮಹತ್ತರ ಕಾರ್ಯವಾಗಿದೆ ಎಂದರು.
ಎಸ್.ಆರ್.ಇ. ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಪಾಟೀಲ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಶ್ರೀಗಳ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿವೆ. ಬರವಣಿಗೆ ಮತ್ತು ಸಂಪಾದನೆ ಸುಲಭದ ಕಾರ್ಯವಲ್ಲ. ಪೂಜ್ಯರ ಮಾತುಗಳಿಗೆ ಎಲ್ಲಿಯೂ ಚ್ಯುತಿ ಬಾರದಂತೆ ಬಾಲಶೇಖರ ಬಂದಿ ಜ್ಞಾನಗಂಧ ಕೃತಿ ಸಂಪಾದಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕಿರಿಯರಿಂದ ಹಿಡಿದು ಹಿರಿಯರೂ ಓದಬಹುದಾದ ಉಪಯುಕ್ತ ಕೃತಿಯಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಶ್ರೀಗಳ ನಡೆ ನುಡಿ ತಮ್ಮ ಮೇಲೆ ಬೀರಿದ ಪ್ರಭಾವಗಳ ಜೋತೆಗೆ ಕಲ್ಲೋಳಿಯಲ್ಲಿ ಜರುಗಿದ ಪೂಜ್ಯರ ಆಧ್ಯಾತ್ಮಿಕ ಪ್ರವಚನದ ಕ್ಷಣಗಳನ್ನು ಮೆಲುಕು ಹಾಕಿದರು. ಲೇಖಕ ಬಾಲಶೇಖರ ಬಂದಿ ಅವರು ಅತ್ಯಂತ ವಿಸ್ತಾರವಾದ ಶ್ರೀಗಳ ಪ್ರವಚನದ ಸಾರವನ್ನು ಪುಟ್ಟ ಕೃತಿಯ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ರಚನೆ ಆಗಲಿ ಆಶಿಸಿದರು.
ಕೃತಿ ಸಂಪಾದಕ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಸಾತಪ್ಪ ಖಾನಾಪೂರ, ಬಿ.ಬಿ ವಾಲಿ. ಡಾ. ಎಂ.ಬಿ. ಕುಲಮೂರ, ಶಂಕರ ನಿಂಗನೂರ, ಬಿ.ಕೆ. ಸೊಂಟನವರ ಇನ್ನೀತರರು ಇದ್ದರು.
ಕು. ರಾಧಿಕಾ ಕರೆವ್ವಗೋಳ ಪ್ರಾರ್ಥಿಸಿದರು, ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು, ಪ್ರೊ. ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ವಿಲಾಸ ಕೆಳಗಡೆ ವಂದಿಸಿದರು.