ಮೂಡಲಗಿ – ಕಾವ್ಯ, ಕುಂಚ, ಗಾಯನೋತ್ಸವ ಕಾರ್ಯಕ್ರಮವು ಕಿವಿ, ಕಣ್ಣಿನ ಕಾರ್ಯಕ್ರಮ. ಕವಿ ಭಾವಜೀವಿ, ಋಷಿ ಇದ್ದಂತೆ. ಕವಿಯ ಭಾವಕ್ಕನುಗುಣವಾಗಿ ಹಾಡು, ಸಂಗೀತ ಹಾಗೂ ಕಲೆಯನ್ನು ಇಲ್ಲಿ ಪ್ರದರ್ಶನ ಮಾಡುತ್ತಾರೆ. ಇದು ಹೃದಯ ಸಂವಾದಿ ಕಾರ್ಯಕ್ರಮ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಮಕರ ಸಂಕ್ರಾಂತಿ ನಿಮಿತ್ತ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಪ್ರಥಮ ದರ್ಜೆ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕವಿ, ಕಾವ್ಯ, ಕುಂಚ ಗಾಯನೋತ್ಸವ ಕಾರ್ಯಕ್ರಮದಲ್ಲಿ ಅವರು ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಕವಿ ಸುಮ್ಮನೆ ಲಯಬದ್ಧವಾಗಿ ಬರೆದದ್ದನ್ನು ಶಾಸ್ತ್ರಜ್ಞ ಗಮನಿಸಿ ಅದಕ್ಕೊಂದು ಛಂದಸ್ಸು ಕೊಡುತ್ತಾನೆ. ಜಾನಪದ ಕೂಡ ಇದೇ ರೀತಿ ಲಯಬದ್ಧವಾಗಿ ಬಂದಿದ್ದರೂ ಛಂದಸ್ಸಿನ ನಿಯಮಗಳಿಗೆ ಒದಗಿಕೊಂಡಿವೆ ಇದೇ ಕಾವ್ಯದ ಮಹತ್ವ. ಇಂದು ಇಂಥದೇ ಎಂಬ ಸಾಹಿತ್ಯವಿಲ್ಲ. ನವೋದಯ, ನವ್ಯ, ದಲಿತ, ಬಂಡಾಯ, ಚುಟುಕು ಎಂಬ ಹಲವಾರು ರೂಪಗಳನ್ನು ಪಡೆದುಕೊಂಡ ಸಾಹಿತ್ಯ ಮುಂದಿನ ದಿನಗಳಲ್ಲಿ ಮತ್ತದೇ ಲಯವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಲಯದ ಜೊತೆಗೆ ಭಾವವೂ ತುಂಬಾ ಮುಖ್ಯ. ಅದಕ್ಕೆ ಸಾಕ್ಷಿಯಾಗಿ ಈ ಕವಿ, ಕಾವ್ಯ,ಕುಂಚ ಗಾಯನೋತ್ಸವ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕಾವ್ಯ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ ಪರಿಯನ್ನು ಮನೋಜ್ಞವಾಗಿ ವಿವರಿಸುತ್ತ ನಾಡಿನ ವರಕವಿ ಬೇಂದ್ರೆ, ಕುವೆಂಪುರವರ ಭಾವನಾತ್ಮಕ ಪದಗಳು ಬಂಡಾಯ ಕವಿ ಸಿದ್ದಲಿಂಗಯ್ಯನವರ ಪದಗಳಲ್ಲಿ ಹೇಗೆ ರೂಪಾಂತರ ಹೊಂದುತ್ತವೆಯೆಂಬುದನ್ನು ಸೋದಾಹರಣವಾಗಿ ತೆರೆದಿಟ್ಟ ಅಕ್ಕಿ ಗುರುಗಳು, ಪ್ರಸಕ್ತ ಚುಟುಕದ ಬಗ್ಗೆ ಮಾತನಾಡುತ್ತ, ಚುಟುಕು ಎನ್ನುವುದು ಚಕಮಕಿ ಕಿಡಿ ಇದ್ದಂತೆ. ಒಂದು ಕ್ಷಣದಲ್ಲಿಯೇ ತನ್ನ ಪ್ರಭಾವ ಬೀರಿ ಹೋಗುತ್ತದೆ. ಸತತ ನಿಂತರೆ ಅದು ಕವನ ಎನಿಸಿಕೊಳ್ಳುತ್ತದೆ ಎಂದರು
ಚುಟುಕು ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಾ ಅಧ್ಯಕ್ಷ ಚಿದಾನಂದ ಹೂಗಾರ ಪ್ರಾಸ್ತಾವಿಕ ಮಾತನಾಡಿ, ಕವಿಯ ಕಲ್ಪನೆಗೆ ರಾಗ ಸಂಯೋಜನೆ ಜೋಡಿಸಿದಾಗ ಅದಕ್ಕೆ ತನ್ನದೇಯಾದ ಮಹತ್ವ ಬರುತ್ತದೆ ಈ ಮಹತ್ವವನ್ನು ತಮ್ಮ ಕಲೆಯಿಂದ ಪ್ರತ್ಯಕ್ಷಗೊಳಿಸುವವರು ಕಲಾವಿದರು. ಆದ್ದರಿಂದ ಇಷ್ಟು ದಿನ ನಾವು ಕವಿಗಳನ್ನು ಪರಿಚಯಿಸಿದವರು ಅವರ ಜೊತೆಗೆ ಸ್ಥಳೀಯ ಕಲಾವಿದರನ್ನೂ ಗಾಯಕರನ್ನೂ, ಅವರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಮಹದಾಶೆಯಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕವಿ ಬಯಸುವುದು ಎರಡು ಕಿವಿಗಳನ್ನು ಮಾತ್ರ ಅದರ ಜೊತೆಗೆ ತನ್ನ ಕಾವ್ಯ ಚಿತ್ರವಾಗಿ ಮೂಡಿ ಬಂದರೆ ಆ ಕವಿಯ ಆನಂದಕ್ಕೆ ಪಾರವೇ ಇರುವುದಿಲ್ಲ ಆ ನಿಟ್ಟಿನಲ್ಲಿ ಈ ಕವಿ, ಕಾವ್ಯ ಕುಂಚ, ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಕಲಾವಿದ ಜಿಕೆ ಕಾಡೇಶ ಅವರು ಕವಿ ಸಿದ್ರಾಮ ದ್ಯಾಗನಟ್ಟಿಯವರ ಕವಿತೆಯೊಂದನ್ನು ಸುಶ್ರಾವ್ಯವಾಗಿ ಹಾಡಿದರು.
ಮಕ್ಕಳ ಕವಿ ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಸಿದ್ರಾಮ ದ್ಯಾಗಾನಟ್ಟಿ, ಡಾ. ಮಹಾದೇವ ಜಿಡ್ಡಿಮನಿ, ಶಿವಕುಮಾರ ಕೋಡಿಹಾಳ, ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ ವೇದಿಕೆಯ ಮೇಲಿದ್ದರು ಬಸಪ್ಪ ಹೆಬ್ಬಾಳ ಸ್ವಾಗತಿಸಿದರು. ಸಂಗ್ರೇಜಿಕೊಪ್ಪ ನಿರೂಪಿಸಿದರು
ಕವಿ, ಕಾವ್ಯ, ಕುಂಚ ಗಾಯನೋತ್ಸವದಲ್ಲಿ ಸಾಹಿತಿ ಶಿವಕುಮಾರ ಕೋಡಿಹಾಳ ಅವರ ಕವನವನ್ನು, ಗಾಯಕ ಅರ್ಜುನ ಕಾಂಬಳೆ ಹಾಡಿದರು ಅದಕ್ಕೆ ಗಣಪತಿ ಭಾಗೋಜಿ ಕುಂಚವನ್ನಾಡಿಸಿ ಶ್ರೀ ಕಲ್ಮೇಶ್ವರರ ಚಿತ್ರ ಬರೆದರು
ಕವಿ ಸಿದ್ರಾಮ ದ್ಯಾಗಾನಟ್ಟಿ ಅವರ ಕವನವನ್ನು ಕು. ಪಲ್ಲವಿ ಕಂಟಿಕಾರ ಮಠ ಅವರು ಗಾಯನ ಮಾಡಿದರು. ಕಲಾವಿದ ಸದಾಶಿವ ಹುಗ್ಗಿ ಕುಂಚವಾಡಿಸಿದರು ಬಸಪ್ಪ ಹೆಬ್ಬಾಳ ಕವನಕ್ಕೆ ಗಾಯನ ಕು. ಪಲ್ಲವಿ ಕಂಟಿಕಾರಮಠ ಹಾಗೂ ಕಲಾವಿದ ಬಿ. ಆಯ್ ಬಡಿಗೇರ ಚಿತ್ರ ಬಿಡಿಸಿದರು, ಸೋಮಶೇಖರ್ ಕಂಟಿಕಾರಮಠ ತಮ್ಮ ಕವಿತೆಯನ್ನು ಸ್ವತಃ ಹಾಡಿದರೆ ಸದಾಶಿವ ಹುಗ್ಗಿ ಚಿತ್ರ ಬಿಡಿಸಿದರು. ದುರ್ಗಪ್ಪ ದಾಸನ್ನವರ ಅವರ ಕಾವ್ಯ ಗಾಯನಕ್ಕೆ ಕಲಾವಿದ ಸುಭಾಸ ಕುರಣೆ, ಚಿದಾನಂದ ಹೂಗಾರ ಕವನವನ್ನು ದುರ್ಗಪ್ಪ ದಾಸನ್ನವರ ಹಾಡಿ ಭೀಮಣ್ಣ ಬಿರಾದಾರ ಚಿತ್ರ ಬಿಡಿಸಿದರು ಹಾಗೂ ಡಾ. ಮಹಾದೇವ ಪೋತರಾಜ ಅವರ ಕವನವನ್ನು ಕು. ಫಯಾಜಖಾನ್ ಹಾಡಿ, ರಾಜು ಬಡೆಸ ಚಿತ್ರ ಬಿಡಿಸಿದರು.