ಸವದತ್ತಿ: ತಾಲೂಕಿನ ಕಗದಾಳ ಗ್ರಾಮದ ಜನತಾ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನವನ್ನು ಆಚರಿಸಲಾಯಿತು. “ದೇಹದ ಮತ್ತು ಮನಸ್ಸಿನ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಬಹಳ ಮುಖ್ಯ. ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವಿಸಿದರೆ ರೋಗಗಳಿಂದ ದೂರ ಇರಬಹುದು ” ಎಂದು ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಬಸಪ್ಪ ಕುಂಬಾರ ಅವರು ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ರಾಜ್ಯ ಸಂಪನ್ಮೂಲ ವ್ಯಕ್ತಿ ತಿಪ್ಪಾನಾಯ್ಕ.ಎಲ್ ಅವರು “ಆಹಾರದ ಘಟಕಾಂಶಗಳಾದ ಕಾರ್ಬೋಹೈಡ್ರೇಟ್ಸ್, ಪ್ರೋಟೀನು, ವಿಟಮಿನ್, ಕೊಬ್ಬು ಮತ್ತು ಖನಿಜಾಂಶಗಳ ಬಗ್ಗೆ ವಿವರಿಸುತ್ತ ಹಸಿರು ತರಕಾರಿ ಮತ್ತು ಮೊಳಕೆ ಕಾಳುಗಳು, ದ್ವಿದಳ ಧಾನ್ಯಗಳನ್ನೆಲ್ಲ ಒಳಗೊಂಡ ಆಹಾರವನ್ನು ಸೇವಿಸಬೇಕು. ಸಮತೋಲನ ಆಹಾರವೇ ಉತ್ತಮ ಆರೋಗ್ಯದ ಗುಟ್ಟು” ಎಂದು ಹೇಳಿದರು.
ಸಹಶಿಕ್ಷಕರಾದ ಸುರೇಶ ಹಡಪದ ಅವರು “ಪೋಷಣ ಅಭಿಯಾನದ ಹಿನ್ನೆಲೆ ಮತ್ತು ಮಹತ್ವದ” ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಗುರಗಳಾದ ಎಂ.ಕೆ.ನರಸಿಂಗನವರ, ಸ.ಪ್ರೌಢ ಶಾಲೆಯ ಉಪಾಧ್ಯಕ್ಷರಾದ ಮಾಯಪ್ಪ ಜ್ಯೋತೆಣ್ಣವರ, ,ಶ್ರೀ ಕೆಂಚಪ್ಪ ಬಸಲಿಗುಂದಿ,ಶ್ರೀ ಉಮೇಶ ಹಾದಿಮನಿ ಉಪಸ್ಥಿತರಿದ್ದರು. ಸಂತೋಷ ನಿಂಗರಡ್ಡಿ ನಿರೂಪಿಸಿ ವಂದಿಸಿದರು.