ಬೀದರ – ಸುತ್ತ ಮುತ್ತಲೂ ನಿಂತ ಮಳೆ ನೀರು, ಗಬ್ಬು ವಾಸನೆ ಹೊಡೆಯುತ್ತಿರುವ ಕೊಳಚೆ ನೀರು, ಅಲ್ಲಲ್ಲಿ ತಿರುಗುತ್ತಿರುವ ಹಂದಿಗಳ ನಡುವೆಯೇ ಬದುಕು ಸಾಗಿಸಿರುವ ಬೀದರ ಜಿಲ್ಲೆಯ ಅಲೆಮಾರಿ ಜನಾಂಗದವರ ಕಥೆ ಯಾರನ್ನಾದರೂ ವಿಚಲಿತರನ್ನಾಗಿ ಮಾಡುತ್ತದೆ ಆದರೆ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.
ಧಾರಾಕಾರ ಸುರಿಯುತ್ತಿರುವ ಅಲೆಮಾರಿ ಬುಡಕಟ್ಟು ಜನಾಂಗದವರ ಜೀವ ತೆಗೆಯುತ್ತಿದೆ. ಔರಾದ ತಾಲೂಕಿನ ಪಟ್ಟಣದಲ್ಲಿ ಅಲಮಾರಿ ಜನಾಂಗದವರು ಹಾಕಿಕೊಂಡಿರುವ ಪ್ಲಾಸ್ಟಿಕ್ ಟೆಂಟುಗಳು ಅರ್ಧ ನೀರಿನಲ್ಲಿಯೇ ಮುಳುಗಿವೆ. ಅಂಥದ್ದರಲ್ಲಿಯೇ ಇವರು ಬದುಕು ಸಾಗಿಸಬೇಕಾಗಿದೆ.
2014ರಲ್ಲಿ ಅಲೆಮಾರಿ ಜನಾಂಗಕ್ಕಾಗಿ ಸರ್ಕಾರದಿಂದ ಎರಡು ಎಕರೆ ಜಮೀನು ನೀಡಲಾಗಿದ್ದರೂ ಸಹ ಇವತ್ತಿನ ತನಕ ಅವರಿಗೆ ನಿವೇಶನ ಕೊಟ್ಟಿಲ್ಲ. ಇದರಲ್ಲಿ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದೆ.
ಅತ್ತ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಬಡ ಕುಟುಂಬ ಸಣ್ಣ ಮನೆ ಹೊಂದಿರಬೇಕು ಎಂಬ ಕನಸು ಕನಸಾಗಿಯೇ ಇದೆ ಎಂದು ಹೇಳಬಹುದು.
ಸಬ್ ಕಾ ಸಾಥ್ ಸಬ್ಕಾ ವಿಕಾಸ ನರೇಂದ್ರ ಎಂದು ಮೋದಿ ಹೇಳಿದ್ದು ಬರಿ ಮಾತಿನಲ್ಲಿಯೇ ಹೇಳುವುದಾದರೆ ದೇಶ ಹೇಗೆ ಅಭಿವೃದ್ಧಿ ಆಗುತ್ತದೆ ಎಂದು ಜನತೆ ಕೇಳುವಂತಾಗಿದೆ.
ಈ ಅಲೆಮಾರಿ ಜನಾಂಗದವರು ಜೀವನ ನಡೆಸುತ್ತಿದ್ದ ಸ್ಥಳ ನೋಡಿದರೆ ಯಾರಿಗಾದರೂ ಅಸಹ್ಯ ಹಾಗೂ ಭಯ ಆಗುತ್ತದೆ. ಮಳೆ ನೀರು, ಹಂದಿ, ನಾಯಿಗಳ ಪಕ್ಕದಲ್ಲಿಯೇ ಇವರ ಜೀವನ ನಡೆಯುತ್ತದೆ. ಇಲ್ಲಿಯೇ ಇವರು ಊಟ ಮಾಡಬೇಕು, ನಿದ್ದೆ ಮಾಡಬೇಕು. ಮಕ್ಕಳು ಮರಿಗಳನ್ನು ಸಾಕಬೇಕು. ಎಲ್ಲೆಡೆ ಸ್ವಚ್ಛತೆಯನ್ನು ಸಾರುವ ಬಿಜೆಪಿ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಕಣ್ಣಿಗಂತೂ ಬೀಳಲಿಲ್ಲ ಆದರೆ ಸ್ಥಳೀಯರಾದ ಕೇಂದ್ರ ಸಚಿವ ಭಗವಂತ ಖೂಬಾ ಹಾಗು ಪ್ರಭು ಚೌಹಾಣ್ ಅವರ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಜನ ಮಾತಾಡುತ್ತಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು. ರೋಗ ರುಜಿನಗಳಿಗೆ ಸುಲಭ ತುತ್ತಾಗುವ ಪರಿಸರದಲ್ಲಿ ಇರುವ ಈ ಅಲೆಮಾರಿ ಜನಾಂಗದ ಸೂರಿಲ್ಲದವರಿಗೆ ಸೂರು ನೀಡಿ ಆಸರೆಯಾಗುತ್ತಾರೋ ಅಥವಾ ನರೇಂದ್ರ ಮೋದಿ ಕನಸು ಕನಸಾಗಿ ಇರುತ್ತದೆಯೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ