ಒಂದು ಬೃಹತ್ ದೇಶದ ಪ್ರಧಾನಿಯ ತಾಯಿಯಾಗಿದ್ದರೂ ಅತ್ಯಂತ ಸರಳ ಜೀವನ ಸಾಗಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ವಿಧಿವಶರಾಗಿದ್ದಾರೆ.
ಈ ಬಗ್ಗೆ ದುಃಖ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ತಮ್ಮ ತಾಯಿಯವರನ್ನು ಸ್ಮರಿಸಿಕೊಂಡು ತಾಯಿಯಲ್ಲಿ ತಾನು ತ್ರಿಮೂರ್ತಿಯವರನ್ನು ಕಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಒಬ್ಬ ತಾಯಿ ಹೇಗಿರಬೇಕೆಂಬುದರ ಮಾದರಿಯಾಗಿ ನಿಲ್ಲುವ ಹೀರಾ ಬೆನ್ ಅತ್ಯಂತ ಸರಳವಾಗಿ ತಮ್ಮ ಸಣ್ಣ ಮನೆಯಲ್ಲಿಯೆ ವಾಸವಾಗಿದ್ದರು. ಐದು ಜನ ಗಂಡು ಮಕ್ಕಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಬ್ಬರು. ತಾವು ಪ್ರಧಾನಿಯ ತಾಯಿಯಾಗಿದ್ದರೂ ಲವಲೇಶವೂ ಹಮ್ಮು ಬಿಮ್ಮು ಇಲ್ಲದೆ ಒಬ್ಬ ಸಾಮಾನ್ಯ ಗೃಹಿಣಿಯಾಗಿ ನೂರು ವಯಸ್ಸಿನ ಗಡಿ ತಲುಪಿದ್ದರೂ ತಮ್ಮ ಕೆಲಸ ತಾವೇ ಮಾಡಿಕೊಳ್ಳುವಷ್ಟು ಸಮರ್ಥವಾಗಿದ್ದರು.
ಈ ಮೊದಲು ಭಾರತ ಸರ್ಕಾರ ನೋಟು ಬ್ಯಾನ್ ಮಾಡಿದಾಗ ಸರತಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಂಡಿದ್ದರು.
ತುಂಬಾ ಕಷ್ಟದಲ್ಲಿ ಬೆಳೆದು ಬಂದಿರುವ ಹೀರಾಬೆನ್ ಅಲ್ಲಿ ಇಲ್ಲಿ ಪಾತ್ರೆ ಪಗಡ ತೊಳೆದು, ಮನೆಗೆಲಸ ಮಾಡಿ ತಮ್ಮನ್ನು ಸಾಕಿದ್ದಾಗಿ ಮೋದಿಯವರು ಒಂದು ಸಂದರ್ಶನದಲ್ಲಿ ಹೇಳಿ ಭಾವುಕರಾಗಿದ್ದರು. ತಾಯಿಯಾಗಿ ತಮ್ಮನ್ನು ಸಲಹಿದ್ದಲ್ಲದೆ ಆದರ್ಶಗಳನ್ನೇ ಕಲಿಸಿಕೊಟ್ಟಿದ್ದಾಗಿ ಮೋದಿ ಹೇಳಿಕೊಂಡಿದ್ದರು.
ತಮ್ಮ ನೂರನೇ ವಯಸ್ಸಿನಲ್ಲಿ ವಿಧಿವಶರಾದ ತಾಯಿಯವರ ಪಾರ್ಥಿವಕ್ಕೆ ಹೆಗಲು ನೀಡಿದ ಮೋದಿಯವರು ಸೇರಿದಂತೆ ಐವರು ಮಕ್ಕಳೂ ಅಗ್ನಿ ಸ್ಪರ್ಶ ಮಾಡಿದರು. ತಾಯಿಯವರ ನಿಧನದಿಂದಾಗಿ ಸರ್ಕಾರಿ ಕಾರ್ಯಕ್ರಮಗಳಿಗೆ ಚ್ಯುತಿ ಬಾರದಂತೆ ನೋಡಿಕೊಂಡ ಮೋದಿ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.