”ಅಭಿಷೇಕಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ“
ಬೆಂಗಳೂರು ನಗರದ ಜನ ದಟ್ಟಣೆಯ ನಡುವೆಯೂ ಮನಸ್ಸಿಗೊಂದಿಷ್ಟು ಆಹ್ಲಾದ ನೀಡುವ , ಮನದ ಬೇಗೆ ತಣಿಸುವ ದೇಗುಲವೊಂದು ಬನಶಂಕರಿ 3 ನೇ ಹಂತದ ಹೊಸಕೇರಿಹಳ್ಳಿ ಯ ಮೂಕಾಂಬಿಕ ನಗರದ 14 ನೇ ತಿರುವಿನಲ್ಲಿದೆ.
ಬನಶಂಕರಿ 3 ನೇ ಹಂತದಲ್ಲಿರುವ ಅಭಿಷೇಕಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ” ದೇಗುಲ ತೀರಾ ಪ್ರಾಚೀನವದುದೇನಲ್ಲ , ಚೌಕಾಕಾರ ವಿನ್ಯಾಸದಲ್ಲಿರುವ ದೇವಸ್ತಾನ 2010 ರಲ್ಲಿ ಲೋಕಾರ್ಪಣೆ ಗೊಂಡಿದೆ, ನವ ನವೀನ ದೇಗುಲವಾದರೂ ಇಂದಿಗೂ ಪಾರಂಪರಿಕ ಸೊಗಡನ್ನು ಉಳಿಸಿಕೊಂಡಿದೆ.
ಹೊಸಕೇರಿಹಳ್ಳಿ ಯ ಮೂಕಾಂಬಿಕ ನಗರದ 14 ನೇ ತಿರುವಿನಲ್ಲಿ ಇರುವ ಅಭಿಷೇಕ ಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ ” ಸನ್ನಿಧಿಯಲ್ಲಿ ಮಹಾ ಶಿವರಾತ್ರಿಗೆ ಕ್ಷಣ ಗಣನೆ ಆರಂಭವಾಗಿದೆ.
ದೇವಾಲಯದಲ್ಲಿ ಶಾರ್ವರಿ ಸಂವತ್ಸರ ದ ಮಾಘ ಕೃಷ್ಣ ತ್ರಯೋದಶಿ ಮಾರ್ಚ್ 11 ರ ಗುರುವಾರ ಮಹಾಶಿವರಾತ್ರಿಯ ಪ್ರಯುಕ್ತ ಮುಂಜಾನೆ 8:30 ಕ್ಕೆ ಪಂಚಾಮೃತ ಅಭಿಷೇಕ ,ರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಜರುಗಲಿದೆ.
ಸಂಜೆ 6 ಗಂಟೆಗೆ ರುದ್ರಾಭಿಷೇಕ ರಾತ್ರಿ 8 ಗಂಟೆಗೆ ರಂಗ ಪೂಜೆ – ದೀಪಾರಾಧನೆ ನಡೆಯಲಿದೆ , ಮಾರ್ಚ್ 12 ರ ಶುಕ್ರವಾರ ಬೆಳ್ಳಿಗ್ಗೆ 9 ರಿಂದ 12 ರ ವರೆಗೆ ರುದ್ರಯಾಗವನ್ನು ಹಮ್ಮಿಕೊಳ್ಳಲಾಗಿದ್ದು ನಂತರ ಭಕ್ತರಿಗೆ ಅನ್ನದಾನ ಸೇವೆ ನಡೆಯಲಿದೆ.
ಕ್ಷೇತ್ರ ಪರಿಚಯ:
2010 ರ ಅಕ್ಷಯ ತೃತೀಯ ದಿನದಂದು ಲೋಕಾರ್ಪಣೆ ಗೊಂಡಿರುವ ದೇವಾಲಯದಲ್ಲಿ ರುದ್ರಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ಸದಾಶಿವ ಮಂಜುನಾಥ ಹಾಗು ಸ್ವಯಂವರ ಶ್ರೀ ಪಾರ್ವತಿ ದೇವಿ ಹಾಗು ಶ್ರೀ ಮಹಾಗಣಪತಿ ಸನ್ನಿಧಾನವಿದೆ . ಚೌಕಾಕಾರ ವಿನ್ಯಾಸದಲ್ಲಿರುವ ದೇವಾಲಯದ ಮುಂಭಾಗದಲ್ಲಿ ಗರುಡಗಂಬ ವಿದ್ದು ದೇವಾಲಯದ ಪ್ರಮುಖ ದ್ವಾರದ ಮೇಲ್ಭಾಗದಲ್ಲಿ ಶಿವ – ಪಾರ್ವತಿ ಮತ್ತು ಗಣಪತಿ ಇದ್ದು ರಾಜ ಗೋಪುರವಿದೆ .
ಮಧ್ವಾ ಸಂಪ್ರದಾಯದಂತೆ ಪ್ರತಿ ನಿತ್ಯ ಪೂಜೆ – ಪುನಸ್ಕಾರ
ಮಧ್ವಾ ಸಂಪ್ರದಾಯದಂತೆ ಪ್ರತಿ ನಿತ್ಯ ಪೂಜೆ – ಪುನಸ್ಕಾರಗಳು ಹಾಗೂ ಅಲಂಕಾರಗಳು ಮಾಡಲಾಗುತ್ತದೆ . ಶ್ರೀ ವರಸಿದ್ದಿ ಮಂಜುನಾಥೇಶ್ವರ ” ಸನ್ನಿಧಿಯಲ್ಲಿ ಶ್ರೀ ಸ್ವಾಮಿಗೆ ಗೋಪಿಚಂದನದ ಅಲಂಕಾರ ಹಾಗೂ ಗಂಧ – ಅಕ್ಷತೆ ಹಾಗೂ ಪುಷ್ಪ ಅಲಂಕಾರ ಮಾಡಲಾಗುತ್ತದೆ , ಪೂಜಾ ವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ.
ಮನ್ಯು ಸೂಕ್ತ ಪುನಃಶ್ಚರಣದಿಂದ ಅಭಿಷೇಕ:
ಮನ್ಯು ಸೂಕ್ತ ಪುನಃಶ್ಚರಣ ದಿಂದ ಅಭಿಷೇಕ ಮತ್ತು ರುದ್ರಾಭಿಷೇಕ ದ ಮೂಲಕ ಪ್ರತಿ ನಿತ್ಯ ಪೂಜೆ ನಡೆಯುತ್ತದೆ , ಅಭಿಷೇಕಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇದ್ದು ಅದರ ತಳಭಾಗದಲ್ಲಿ ರಂಧ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟು ಅದರೊಳಗೆ ನೀರು ತುಂಬಿಸಿದಾಗ , ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವ ಮೂಲಕ ಮಹಾ ರುದ್ರ ದೇವರಿಗೆ ಅಭಿಷೇಕ ವಾಗುತ್ತದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಪುರೋಹಿತರಾದ ವೇದ ಗಿರಿ ಭಟ್ .
ಸಂತಾನ ಭಾಗ್ಯಕ್ಕೆ ಪ್ರದಕ್ಷಿಣೆ ಸೇವೆ:
ಶ್ರೀ ಕ್ಷೇತ್ರದಲ್ಲಿ ಪ್ರದಕ್ಷಿಣೆ ರೂಪದಲ್ಲಿ ಸೇವೆ ಸಲ್ಲಿಸಿ ಅನೇಕ ದಂಪತಿಗಳು ಸಂತಾನ ಪಡೆದಿದ್ದಾರೆ ಹಾಗೂ ಉದ್ಯೋಗ ಸಮಸ್ಯೆ ಇದ್ದರೆ ಹಾಗೂ ನೂತನ ಉದ್ಯೋಗದ ಹುಡುಕಾಟದಲ್ಲಿ ಇದ್ದರೆ ಇಲ್ಲಿ ಬೇಡಿದರೆ ಉದ್ಯೋಗ ವನ್ನು ಭಗವಂತ ದಯಪಾಲಿಸುತ್ತಾನೆ ಆದರಿಂದ ಶ್ರೀ ಕ್ಷೇತ್ರ ಕ್ಕೆ ಶ್ರೀ ವರಸಿದ್ದಿ ಮಂಜುನಾಥೇಶ್ವರ ಎಂಬ ಹೆಸರು , ಸಣ್ಣ ಮಕ್ಕಳಿಗೆ ಆಗುವ ಭಯ – ಭೀತಿ ನಿವಾರಿಸಲು ಶ್ರೀ ಸ್ವಾಮಿಯ ಸನ್ನಿಧಾನದಲ್ಲಿ ಯಂತ್ರ ಮಾಡಿ ಕೊಡಲಾಗುತ್ತದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಪುರೋಹಿತರಾದ ವೇದ ಗಿರಿ ಭಟ್.
“ಅಭಿಷೇಕಪ್ರಿಯ ಶ್ರೀ ವರಸಿದ್ದಿ ಮಂಜುನಾಥೇಶ್ವರ” ಸನ್ನಿಧಿಯಲ್ಲಿ ನಡೆಯುವ ಸೇವೆಗಳು:
ಪಂಚಾಮೃತ , ಕ್ಷೀರಾಭಿಷೇಕ , ಅರ್ಚನೆ , ರುದ್ರಯಾಗ ( ಸಾಮೂಹಿಕ) ಸೇವೆ , ರಂಗಪೂಜೆ – ದೀಪಾರಾಧನೆ , ಪ್ರದೋಷ ಪೂಜೆ ಎಳೆನೀರು ಅಭಿಷೇಕ , ರುದ್ರಾಭಿಷೇಕ ,ಏಕಾದಶ ರುದ್ರಾಭಿಷೇಕ , ಸಂಪೂರ್ಣ ರುದ್ರಾಭಿಷೇಕ ಸೇವೆ , ಸಂಪೂರ್ಣ ರುದ್ರ ಯಾಗ ಸೇವೆ ಹಾಗೂ ಅನ್ನದಾನ ಸೇವೆ.
ದೇವಾಲಯವು ಬೆಳ್ಳಿಗ್ಗೆ 6 ರಿಂದ 12 ರವರೆಗೆ ಹಾಗೂ ಸಂಜೆ 5 ರಿಂದ ರಾತ್ರಿ 8. 30 ರ ವರೆಗೆ ತೆರೆದಿರುತ್ತದೆ.
ಮಹಾರುದ್ರ ದೇವರ ಬಗ್ಗೆ:
ಶಿವ ಐಶಾನ್ಯ ದಿಕ್ಕಿಗೆ ಅಧಿಪತಿ . ಈಶಾನನ ದಿಕ್ಕು ಐಶಾನ್ಯ . ಅಲ್ಲಿ ಶಿವ ಏಕೆ ನಿಂತಿದ್ದಾನೆ ಎಂದರೆ ಪೂರ್ವ ದಿಕ್ಕಿನಲ್ಲಿ ಅದರ ಅಧಿಪತಿಯಾದ ಇಂದ್ರನ ಜೊತೆಗೆ ಉಪೇಂದ್ರನೊ ಇದ್ದಾನೆ . ಪೂರ್ವ ದಿಕ್ಕಿನಲ್ಲಿ ಪಾಶ್ಚಿಮಾಭಿಮುಖನಾಗಿ ಕುಳಿತ ಉಪೇಂದ್ರ ನನ್ನು ಈಶಾನ್ಯ ದಲ್ಲಿರುವ ಶಿವ ಅರಾಧಿಸುತ್ತಾನೆ . ಹೀಗೆ ಶಿವನು ತನ್ನ ವಾಮ ಭಾಗದಲ್ಲಿ ರುವ ವಾಮನನನ್ನು ಸದಾ ಪೂಜಿಸುತ್ತಿದ್ದುದರಿಂದ ಶಿವ ವಾಮ ದೇವ ಎನಿಸಿದ , ಬ್ರಹ್ಮ ದೇವರ ಭ್ರೂ ಮಧ್ಯ ದಿಂದಾಗಿ ಜನಿಸಿ ಬಂದಿದ್ದರಿಂದ ಶಿವನು ” ವಿರಿಂಚಿತನಯ ” ಎನಿಸಿದ್ದಾನೆ .
ಶಿವನು ಜನಿಸುತ್ತಿದ್ದಂತೆಯೇ ರೋದನ ಮಾಡಿದ್ದರಿಂದ ರುದ್ರ ಎಂದು ಕರೆಸಿಕೊಂಡನು ಎಂಬ ವಿಶೇಷ ಅಂಶವನ್ನು ಭಾಗವತದಲ್ಲಿ ಉಲ್ಲೇಖ ಮಾಡಲಾಗಿದೆ .
ಶಿವ ಶಕ್ತಿ:
ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ, ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ, ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು.
ಅಭಿಷೇಕ ಪದ್ಧತಿ:
ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.
ಜಾಗರಣೆ, ಹಬ್ಬದ ವಿಶೇಷ ಆಚರಣೆ:
ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವ ನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ.
”ಮಾಸ್ಕ್ ಧಾರಣೆ ಕಡ್ಡಾಯ“
ಕೊರೋನಾ ವೈರಸ್ ಇರುವ ಕಾರಣ ಮಾರ್ಚ್ 11 ರಂದು ಮಹಾಶಿವರಾತ್ರಿ ಯಲ್ಲಿ ಭಾಗವಹಿಸುವ ಭಕ್ತರ ಆರೋಗ್ಯ ಹಾಗು ದೇವಾಲಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ಉತ್ಸವದಲ್ಲಿ ಭಾಗವಹಿಸಿ ಶ್ರೀ ರುದ್ರಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ಸದಾಶಿವ ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಆಡಳಿತ ಮಂಡಳಿಯವರು ವಿನಂತಿಸಿ ಕೊಂಡಿದ್ದಾರೆ.
ಛಾಯಾ ಚಿತ್ರ; ಲೇಖನ: ತೀರ್ಥಹಳ್ಳಿ ಅನಂತ ಕಲ್ಲಾಪುರ
(ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ ಲೇಖನ ಬರೆಯಲಾಗಿದೆ)