ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ದುರಂತ : ಒರ್ವ ಕಾರ್ಮಿಕನ ಸಾವು, ಇಬ್ಬರ ಸ್ಥಿತಿ ಗಂಭೀರ

Must Read

ಮೂಡಲಗಿ – ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿರುವ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದ ಭೀಕರ ದುರಂತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಈ ದುರ್ಘಟನೆಯ ನಂತರ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಯಾದವಾಡ ಗ್ರಾಮದ ಹೊರವಲಯದಲ್ಲಿರುವ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆಯತಪ್ಪಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ಅಪಘಾತದಲ್ಲಿ ರಮೇಶ್ ಬಾಬುಲಾಲ್ ರಾಮ್ ಎಂಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಕಾರ್ಮಿಕರನ್ನು ತಕ್ಷಣ ಬಾಗಲಕೋಟೆ ಜಿಲ್ಲೆಯ ಕೆರೊಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ನಂದಕುಮಾರ್ ಮತ್ತು ರಮೇಶ್ ಮಹೇಂದ್ರ ರಾಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಾರ್ಮಿಕರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟ ರಮೇಶ್ ಬಾಬುಲಾಲ್ ರಾಮ್ ಅವರು ಸೇರಿದಂತೆ ಗಾಯಗೊಂಡಿರುವ ಕಾರ್ಮಿಕರು ಮೂಲತಃ ಬಿಹಾರ ರಾಜ್ಯದಿಂದ ಆಗಮಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಸಹ ಕಾರ್ಮಿಕನ ದುರ್ಮರಣಕ್ಕೆ ಆಕ್ರೋಶಗೊಂಡ ಉಳಿದ ಕಾರ್ಮಿಕರು ತಕ್ಷಣವೇ ಪ್ರತಿಭಟನೆಗಿಳಿದಿದ್ದಾರೆ.

ಕಾರ್ಮಿಕರು ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಖಾನೆಯ ಸೆಕ್ಯುರಿಟಿ ಕಚೇರಿ (ಭದ್ರತಾ ಕಚೇರಿ) ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಘಟನೆಯಿಂದಾಗಿ ಕಾರ್ಖಾನೆಯ ಆವರಣದಲ್ಲಿ ಪರಿಸ್ಥಿತಿ ತಾರಕಕ್ಕೇರಿತ್ತು. ಕಾರ್ಮಿಕರ ಸುರಕ್ಷತಾ ಕ್ರಮಗಳ ಕೊರತೆಯೇ ಈ ಅಪಘಾತಕ್ಕೆ ಕಾರಣ ಎಂದು ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.

ಕಾರ್ಮಿಕರ ಪ್ರತಿಭಟನೆ ಮತ್ತು ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಕಾರ್ಖಾನೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ, ಕುಲಗೋಡ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸರು ಪ್ರತಿಭಟನಾ ನಿರತ ಕಾರ್ಮಿಕರನ್ನು ಸಮಾಧಾನಪಡಿಸಿ, ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ದೊರಕಿಸುವ ಹಾಗೂ ಅಪಘಾತದ ಕುರಿತು ನ್ಯಾಯಯುತ ತನಿಖೆ ನಡೆಸುವ ಭರವಸೆ ನೀಡಿದರು.

ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಅಪಘಾತಕ್ಕೆ ಕಾರಣವೇನು ಹಾಗೂ ಕಾರ್ಖಾನೆಯಲ್ಲಿ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group