
ಮೂಡಲಗಿ – ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್ ಅಧ್ಯಕ್ಷ ಡಾ. ರಂಗಣ್ಣ ಸೋನವಾಲಕರ ಹೇಳಿದರು
ಶ್ರೀನಿವಾಸ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿ ಅವರು ಮಾತನಾಡಿದರು.
ಶ್ರೀನಿವಾಸ ಶಾಲೆಯು ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೇ ಶಾಲೆಯಲ್ಲಿ ನಾವು ಹಾಸ್ಟೆಲ್ ಸೇರಿದಂತೆ ಇನ್ನೂ ಅನೇಕ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಅದಕ್ಕೆ ತಮ್ಮೆಲ್ಲರ ಸಹಾಯ ಸಹಕಾರ ಬೆಂಬಲ ಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ಧಸಂಸ್ಥಾನ ಮಠ ಮೂಡಲಗಿಯ ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಶಾಲೆಯ ಪ್ರಾಂಶುಪಾಲ ಎಸ್ ಬಿ ಮಠಪತಿಯವರು ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧಿಸಿದ ಸಾಧನೆ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು ಹಲವು ಸೆಮಿನಾರುಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಬಗ್ಗೆ, ಶಾಲೆಯಲ್ಲಿ ಮೇಲಿಂದ ಮೇಲೆ ಹಮ್ಮಿಕೊಳ್ಳಲಾಗುವ ಅನೇಕ ಅದ್ಭುತ ಚಟುವಟಿಕೆಗಳ ಹಾಗೂ ಸ್ಪರ್ಧೆಗಳ ಬಗ್ಗೆ, ಶಾಲಾ ಆವರಣದಲ್ಲಿ ಸ್ವಚ್ಛತೆ, ಆಧುನಿಕ ಪದ್ಧತಿಯ ಶಿಕ್ಷಣ, ಪಾಲಕರ ಸಭೆಗಳನ್ನು ಹಮ್ಮಿಕೊಳ್ಳುವಿಕೆ, ಗುಣಮಟ್ಟದ ಶಿಕ್ಷಣದ ಬಗ್ಗೆ ವರದಿ ವಾಚನ ಮಾಡಿದರು.
ಅತಿಥಿಯಾಗಿ ಆಗಮಿಸಿದ್ದ ಪ್ರೊ. ಎಸ್ ಕೆ ಶಾಸ್ತ್ರಿಮಠ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಮಗುವಿನ ಸಮಗ್ರ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಎಲ್ಲ ಪಾಲಕರು ಮಕ್ಕಳಿಗೆ ಅವಶ್ಯಕ ಶಿಕ್ಷಣ ಕೊಡಿಸಬೇಕು ವಿದ್ಯೆಯ ಜೊತೆಗೆ ಮಕ್ಕಳಿಗೆ ನೈತಿಕತೆಯನ್ನೂ ನೀಡಬೇಕಾಗಿದ್ದು ಪಾಲಕರ ಕರ್ತವ್ಯ. ಹಾಗೆಯೇ ನಾನು ನೋಡಿದಂತೆ ಶ್ರೀನಿವಾಸ ಶಾಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡುವಾಗ ಪಾಲಕರಿಗೆ ಅನೇಕ ಕನಸುಗಳಿರುತ್ತವೆ. ಅವುಗಳ ಜೊತೆಗೆ ಮಗುವನ್ನು ಸಾಮಾಜೀಕರಣಗೊಳಿಸುವುದು ಪಾಲಕರ ಕರ್ತವ್ಯ ಕೇವಲ ಶಿಕ್ಷಣ ಅಷ್ಟೇ ಕೊಡಿಸುವುದಲ್ಲ. ಮಕ್ಕಳು ಶ್ರೇಷ್ಠ ಪರ್ಸನಾಲಿಟಿ ಆಗಲು ಶಾಲೆಗಳು ಅವಶ್ಯಕ ತಮ್ಮ ಮಗುವಿನಿಂದ ಅತಿಯಾದದ್ದನ್ನು ನಿರೀಕ್ಷೆ ಮಾಡಬೇಡಿ, ಮಗುವಿನ ಮೇಲೆ ಅತಿಯಾದ ಒತ್ತಡ ಹಾಕಬೇಡಿ ಮಕ್ಕಳಿಗೆ ಸಹಕಾರ, ಬೆಂಬಲ ನೀಡಿ ಆತ ಅತ್ಯುತ್ತಮ ಸಾಧನೆ ಮಾಡಲು ಪ್ರೇರೇಪಿಸಬೇಕು. ಮನೆಯಲ್ಲಿ ನಾವು ಯಾವ ರೀತಿಯ ವಾತಾವರಣ ನೀಡುತ್ತೇವೆ ಎಂಬುದು ನಮ್ಮ ಮಗುವಿನ ಮೂಲಕ ಹೊರಹೊಮ್ಮುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆ, ಅಭ್ಯಾಸ ಹಾಗೂ ಇತರೆ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಯವರಿಂದ ಸ್ವಾಮೀಜಿಯವರನ್ನು ಹಾಗೂ ಅತಿಥಿಗಳನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ಶಾಲೆಯ ಮಕ್ಕಳೇ ಆಕರ್ಷಕವಾಗಿ ಕಾರ್ಯಕ್ರಮ ನಿರೂಪಿಸಿದರು. ಎರಡನೇ ತರಗತಿಯ ಸಾನ್ವಿ ವಂದಿಸಿದರು
ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ನೃತ್ಯ, ಗಾಯನ ರೂಪಕ ಕಾರ್ಯಕ್ರಮಗಳು ನಡೆದು ವಾರ್ಷಿಕೋತ್ಸವ ಸಮಾರಂಭದ ಕಳೆ ಹೆಚ್ಚಿಸಿದವು.
ವರದಿ : ಉಮೇಶ ಬೆಳಕೂಡ, ಮೂಡಲಗಿ