ಸ್ತ್ರೀ ಕುಲದ ಆರಾಧ್ಯ ದೇವ, ಭಾಗ್ಯವಿಧಾತಾ, ಸ್ತ್ರೀ ಕುಲದ ಮುಕ್ತಿದಾತಾ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ 

0
80

“ಒಂದು ದೇಶದ ಪ್ರಗತಿಯನ್ನು , ಆ ದೇಶದಲ್ಲಿರುವ ಮಹಿಳೆಯರ ಸಾಮರ್ಥ್ಯ ಹಾಗೂ ಅವರ ಪ್ರಗತಿಯ ಮೇಲೆ ಅಳೆಯುತ್ತೇನೆ” ಎನ್ನುವ ಮಾತು ಹೇಳಿದ ಏಕೈಕ ವ್ಯಕ್ತಿ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್.

ಪ್ರಕೃತಿಯು ತೋರದ ವ್ಯತ್ಯಾಸ ಭೇದ ಭಾವವನ್ನು ಪುರುಷ ವರ್ಗ ಮಾಡುತ್ತಿದ್ದ ಹೆಣ್ಣು ಗಂಡು ಎಂಬ ಭೇದ ಭಾವ ಹಾಗೂ ತಾರತಮ್ಯಕ್ಕೆ ತೆರೆ ಎಳೆದು ಕಾಲಾಂತರಗಳಿಂದ ನಡೆದು ಬಂದ ದುಷ್ಠ ಪದ್ಧತಿಯ ಮೇಲೆ ತೆರೆ ಎಳೆದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್.

ಭಕ್ತಿ ಚಳವಳಿಯ ಕಾಲದಿಂದಲೂ ಸಾಮಾಜಿಕ ಸ್ಥಾನಮಾನಗಳಲ್ಲಿ ಅವಕಾಶ ಕೇಳಲಿಕ್ಕೂ ಧ್ವನಿ ಎತ್ತದ ಹೆಣ್ಣಿನ ಜೀವನದಲ್ಲಿ ಯಾವ ಬದಲಾವಣೆಯೂ ಕಾಣಲು ಸಾಧ್ಯವಾಗಿರಲಿಲ್ಲ. ಆದಿ ಅನಾದಿ ಕಾಲದಿಂದಲೂ ಒಂದೊ ಎರಡೊ ಹೆಣ್ಣು ಮಕ್ಕಳು ಧ್ವನಿ ಎತ್ತಲೂ ಪ್ರಯತ್ನಿಸಿದರು , ಅವರ ಹೋರಾಟಕ್ಕೆ ಬೆಂಬಲದ ಬರವಿತ್ತು. ಹೆಣ್ಣು ಅಡುಗೆ ಮನೆಗೆ ಸೀಮಿತ, ಮಕ್ಕಳು ಹೆತ್ತುವ ಯಂತ್ರ,ಭೋಗದ ವಸ್ತು…. ಎನ್ನುವ ಭಾವನೆ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ದೇವಸ್ಥಾನಗಳಲ್ಲಿ,ಶಾಲೆಗಳಲ್ಲಿ ಪ್ರವೇಶ ನಿರ್ಬಂಧ, ಅದರಲ್ಲಿಯೂ ದಲಿತ ಮಹಿಯರ ಸ್ಥಿತಿ ಚಿಂತಾಜನಕವಾಗಿತ್ತು. ಕೈಯಲ್ಲಿ ಬಳೆ ಹಾಕುವಂತಿಲ್ಲ, ಯಾವುದೇ ರೀತಿಯ ಆಭರಣ ಅದರಲ್ಲಿ ಚಿನ್ನದ ಆಭರಣ ಹಾಕುವ ಹಾಗಿರಲಿಲ್ಲ, ಹೂವು ಮುಡಿಸಿಕೊಳ್ಳೋ ಹಾಗೂ ಇರಲಿಲ್ಲ, ಹಣೆ ಮೇಲೆ ಕುಂಕುಮ ಇಟ್ಟುಕೊಳ್ಳುವ ಹಾಗೆ ಇರಲಿಲ್ಲ, ಮೊಳಕಾಲ ಮೇಲೆ ಸೀರೆ ಉಟ್ಟಿಕೊಳ್ಳಬೇಕು, ದಲಿತರ ಮೊದಲ ಹೆಣ್ಣು ಮಗು ದೇವದಾಸಿ ಆಗಬೇಕು, ದಲಿತರ ಗಂಡು ಮಕ್ಕಳು ಪೊತೆಗಳು ಆಗಬೇಕು.ಯಾವ ದೇವರೂ ಬರೆದಿದ್ದು ಕಣ್ರೀ ದೇವದಾಸಿ ಪದ್ಧತಿಗೆ ಸಿಲುಕಿದ ಆ ಮುಗ್ಧ ಮಕ್ಕಳ ಮೇಲೆ, ಹೆಣ್ಣಿನ ಮೇಲೆ ಹಗಲಿರುಳು ನಡೆಯುವ ಅತ್ಯಾಚಾರದ ಭಯಾನಕ ದಿನಗಳು, ವಿಧವೆಯರ ಸ್ಥಿತಿ ತೀರಾ ಚಿಂತಾಜನಕ ಆಗಿತ್ತು. ಮನೆಯ ಪ್ರತಿಯೊಬ್ಬ ಪುರುಷ ತನ್ನ ಮನಸ್ಸೋ ಇಷ್ಚೆಯಂತೆ ಭೋಗದ ವಸ್ತುವನ್ನಾಗಿ ಬಳಸುತ್ತಿದ್ದರು. ಓದುವ ಹಕ್ಕಿಲ್ಲ, ಕುಣಿದು ಕುಪ್ಪಳಿಸುವ ಹಾಗಿಲ್ಲ, ಗಂಡ ತೀರಿಕೊಂಡ ನಂತರ ಅವನ ಚಿತೆಯೊಂದಿಗೆ ಇವಳು ಸಾಯಬೇಕು ಅಬ್ಬಾ, ಆದಿ ಅನಾದಿ ಕಾಲದಿಂದಲೂ ನಮ್ಮ ಮಕ್ಕಳ ಈ ಚಿಂತಾಜನಕ ಸ್ಥಿತಿಯ ಬಗ್ಗೆ ಯೋಚಿಸಿದರೆ ಹೆಣ್ಣಾಗಿ ಹುಟ್ಟಲೆ ಬಾರದು ಎಂಬ ಮಾತು ಹೆಣ್ಣು ಮಕ್ಕಳು ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಒಟ್ಟಾರೆಯಾಗಿ,” ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎನ್ನುವ ಮನೋವಾದಿಗಳ ಮಾತಿಗೆ ತೆರೆ ಎಳೆದು
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ” ಎಂಬ ಮಾತನ್ನು ಜಗತ್ತಿಗೆ ತೋರಿಸಿಕೊಟ್ಟವರು ಡಾಕ್ಟರ್ ಬಾಬಾ ಸಾಹೇಬರು.

ತಮ್ಮ ಜಾತಿವಿನಾಶ ಪ್ರಬಂಧದಲ್ಲಿ ಅಂಬೇಡ್ಕ‌ರ್ ಹೇಳಿರುವಂತೆ ಪ್ರಾಚೀನ ಕಾಲದ ಭಾರತೀಯ ಸಮಾಜ ವರ್ಣ, ಜಾತಿಗಳಾಗಿ ಶ್ರೇಣೀಕರಣಗೊಳ್ಳಲು ಪ್ರಾರಂಭಿಸಿದ ದಿನವೇ ಹೆಣ್ಣಿನ ಹಕ್ಕು ಅಧಿಕಾರಗಳು ಮೊಟಕುಗೊಳ್ಳಲೂ ಶುರುವಾದವು. ಜಾತಿಪದ್ಧತಿ ಹುಟ್ಟಿದ್ದು ಹೆಣ್ಣಿನ ಲೈಂಗಿಕತೆಯನ್ನು ಚೌಕಟ್ಟಿಗೊಳಪಡಿಸಿ ನಿರ್ಬಂಧಿಸುವ ಮೂಲಕ. ಜಾತಿಪದ್ಧತಿ ಬೆಳೆದಿದ್ದು ಒಳವಿವಾಹ ಚಾಲ್ತಿಗೆ ತರುವ ಮೂಲಕ. ಜಾತಿಪದ್ಧತಿ ಉಳಿದಿದ್ದು ತನಗೆ ಲಭ್ಯವಿರುವ ಹೆರುವ ಹೆಣ್ಣುಗಳನ್ನು ತನಗೆಂದೇ ಕಾಯ್ದಿಟ್ಟುಕೊಳ್ಳುವ ಮೂಲಕ. ಒಟ್ಟಾರೆ ಜಾತಿ ವ್ಯವಸ್ಥೆಯೆನ್ನುವುದು ಹೆಣ್ಣಿನ ಲೈಂಗಿಕತೆ, ಆಯ್ಕೆಯನ್ನಷ್ಟೆ ನಿರ್ಬಂಧಗೊಳಿಸಲಿಲ್ಲ; ಅವಳನ್ನು ಶಾಶ್ವತವಾಗಿ ನಿರ್ಬಂಧಿತ ಸ್ಥಿತಿಯಲ್ಲಿಡಲು ಅನುಕೂಲವಾಗುವ ಆಚರಣೆ, ರೂಢಿ, ಪರಿಕಲ್ಪನೆಗಳನ್ನು ಜಾರಿ ಮಾಡಿತು. ಜ್ಞಾನ, ಅವಕಾಶ, ಆರ್ಥಿಕ ಸಂಪನ್ಮೂಲ, ಅಧಿಕಾರ ಈ ಎಲ್ಲ ನೆಲೆಗಳಿಂದಲೂ ಹೆಣ್ಣನ್ನು ವಂಚಿಸಿ ಅಂಚಿಗೆ ತಳ್ಳಲಾಯಿತು. ಭಾರತೀಯ ಸಮಾಜದ ಸಾಮಾಜಿಕ, ಆರ್ಥಿಕ ಅಸಮಾನ ರಚನೆಗಳೇ ಲಿಂಗತಾರತಮ್ಯದ ಮೂಲ ಕಾರಣವಾಗಿ ಇವತ್ತಿಗೂ ಮುಂದುವರೆದಿವೆ. ‘ಸ್ತ್ರೀವಾದವೆಂಬುದು ಪಾಶ್ಚಾತ್ಯ ಪರಿಕಲ್ಪನೆ.

ಭಾರತದಲ್ಲಿ ಲಿಂಗವಿಶಿಷ್ಟ ಜವಾಬ್ದಾರಿಗಳಿವೆ; ಲಿಂಗ ಅನನ್ಯತೆಯ ಕುರುಹಾದ ಆಚರಣೆಗಳಿವೆಯೇ ಹೊರತು ಲಿಂಗತಾರತಮ್ಯ ಇಲ್ಲ ಎನ್ನುವುದು ಮನೋವಾದಿಗಳ ವಾದವಾಗಿತ್ತು.

ಹೆಣ್ಣು ಹಿಂದೂ ಸಮಾಜದ ಅತ್ಯಂತ ಶೋಷಿತಳು. ದಲಿತರು ಮತ್ತು ಮಹಿಳೆಯರ ಸ್ಥಿತಿಗತಿ ಒಂದೇ. ಭಾರತೀಯ ಸಮಾಜ ಒಂದು ಕೈಯಲ್ಲಿ ಅವಳನ್ನು ಪೂಜಿಸುತ್ತ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದು ಲಕ್ಷ್ಮಣರೇಖೆಗಳನ್ನು ದಾಟದಂತೆ ನಿರ್ಬಂಧ ವಿಧಿಸಿದೆ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು. ವಿದೇಶೀ ವಿದ್ಯಾಭ್ಯಾಸ, ಅದರಲ್ಲೂ ಜರ್ಮನಿಯ ಬಾನ್‌ನಲ್ಲಿ ಕಳೆದ ದಿನಗಳು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗೆ ಅವರನ್ನು ಹತ್ತಿರ ತಂದವು.

ಮೊದಲ ಅಲೆಯ ಮಹಿಳಾ ಚಳವಳಿಯ ಪ್ರತಿಫಲವಾಗಿ1918ರ ಹೊತ್ತಿಗೆ ಬ್ರಿಟನ್ ಹಾಗೂ1920ರ ವೇಳೆಗೆ ಅಮೆರಿಕಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಯಿತು. ಸಮಾನ ವೇತನ, ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ಮೊದಲಾದವು ಅಲ್ಲಿ ಬಹುಚರ್ಚಿತ ವಿಷಯಗಳಾಗಿದ್ದವು. ಸಹಜವಾಗಿಯೇ ಮುಕ್ತ ಚಿಂತನೆಯ ಅಂಬೇಡ್ಕರರನ್ನು ಮಹಿಳಾಪರ ಚಿಂತನೆಗಳು ಸೆಳೆದವು. ರಾಜಕೀಯ ಅಧಿಕಾರ ಸಿಗದೇ ಯಾವುದೂ ಬದಲಾಗುವುದು ಅಷ್ಟು ಸುಲಭವಲ್ಲ ಎಂಬುದನ್ನವರು ಗುರುತಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದುವಾಗ ಹಿಂದುಳಿದ ವರ್ಗಗಳ ವಿದ್ಯಾಭ್ಯಾಸ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಬಹುಮುಖ್ಯವೆಂದು ಅರಿತರು .

‘ಸದ್ಯದಲ್ಲಿಯೇ ಒಳ್ಳೆಯ ದಿನಗಳನ್ನು ಕಾಣುತ್ತೇವೆ. ಆದರೆ ಅದಕ್ಕಾಗಿ ಪುರುಷರ ಜೊತೆಗೆ ಮಹಿಳೆಯರೂ ಒಟ್ಟಿಗೆ ಶಿಕ್ಷಣ ಪಡೆಯುವುದು ಅವಶ್ಯವಿದೆ ಎಂದೂ ಹೇಳಿದ್ದರು.
ಅಂತಹ ಸಮಯದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ಹಾಗೂ ಸ್ತ್ರೀ ಸ್ವಾತಂತ್ರ್ಯ ಸಮಾನತೆಗಾಗಿ ಹೋರಾಟ ಮಾಡಿ ಗಟ್ಟಿ ನೆಲೆ ಕಲ್ಪಿಸಿ ಕೊಟ್ಟ ಫುಲೆ ದಂಪತಿಗಳ ಹೋರಾಟವನ್ನು ಬಾಲದಿಂದಲೇ ವೀಕ್ಷಿಸುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿ ಗಾಗಿ ಸಾಮಾಜಿಕ ಆರ್ಥಿಕ ರಾಜಕೀಯವಾಗಿ ಒಂದು ಗಟ್ಟಿ ನೆಲೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟವನ್ನು ಪ್ರಾರಂಭಿಸಿ ಹಿಂದೂ ಕೋಡ ಬಿಲ್ ಸರ್ಕಾರದ ಮುಂದೆ ಇಟ್ಟಾಗ, ಸರ್ಕಾರ ಇದನ್ನು ನಿರಾಕರಿಸಿದ ಸಂದರ್ಭದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟಂತಹ ವ್ಯಕ್ತಿ ಇವರು.

ಮಹಿಳೆಯರು ಎದುರಿಸುವ ಜೈವಿಕ, ದೈಹಿಕ ಕಷ್ಟಗಳ ಕುರಿತು; ನಿಭಾಯಿಸಬೇಕಾದ ವಿಶೇಷ ಜವಾಬ್ದಾರಿಯ ಕುರಿತು ಅಂಬೇಡ್ಕ‌ರ್ ಮಾತನಾಡಿದರು. 1938ರಷ್ಟು ಹಿಂದೆಯೇ ಕುಟುಂಬ ಯೋಜನಾ ವಿಧಾನವನ್ನು ಸರ್ಕಾರ ಜನಪ್ರಿಯಗೊಳಿಸಬೇಕೆಂದು ಮುಂಬಯಿಯ ಶಾಸನಸಭೆಯಲ್ಲಿ ವಾದಿಸಿದರು. ಹೆತ್ತುಹೆತ್ತು ಮಕ್ಕಳನ್ನು ಸಾಕುವುದರಲ್ಲೇ ಹೆಣ್ಣುಮಕ್ಕಳು ಹೈರಾಣಾಗುತ್ತಿದ್ದಾರೆಂದೂ, ಅವರ ಶಕ್ತಿಸಾಮರ್ಥ್ಯವನ್ನು ಸಮಾಜ ಉಪಯೋಗಿಸಿಕೊಳ್ಳಬೇಕೆಂದರೆ ಕುಟುಂಬ ಯೋಜನೆ ಅವಶ್ಯವೆಂದೂ ಪ್ರತಿಪಾದಿಸಿದರು.

1942ರಲ್ಲಿ ದೆಹಲಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹೆರಿಗೆ ಭತ್ಯೆ ನೀಡುವ ಬಗ್ಗೆ ಪ್ರಸ್ತಾಪಿಸಿದರು. ವೇತನ ಸಹಿತ ಹೆರಿಗೆ ಭತ್ಯೆ ರಜೆ ನೀಡುವುದು ಸರ್ಕಾರಕ್ಕೆ ಆರ್ಥಿಕ ಹೊರೆಯೆನಿಸಿದರೂ ಸಹ ಮನುಷ್ಯ ಸಮಾಜದ ನಾಳಿನ ಸಂತತಿಯನ್ನು ಹೆತ್ತು ಸಾಕುವ ಹೆಣ್ಣುಮಕ್ಕಳನ್ನು ಅಷ್ಟಾದರೂ ಗೌರವಿಸುವುದು, ಅವರಿಗೆ ಅವಶ್ಯವಿರುವಷ್ಟು ವಿರಾಮ ನೀಡುವುದು ಉಳಿದ ಸಮಾಜದ ಕರ್ತವ್ಯ ಎಂದೂ, ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕೆಂದೂ ಸೂಚಿಸಿದರು.

ಹಾಗೆಯೆ ಭಾರತ’ ಪತ್ರಿಕೆಗಳಲ್ಲಿ ಮಹಿಳಾ ಸಮಸ್ಯೆ ಮುಖ್ಯವಾಗಿ ಚರ್ಚಿತವಾಗುತ್ತಿತ್ತು. ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ 500 ಸ್ತ್ರೀಯರು ಪಾಲ್ಗೊಂಡಿದ್ದರು. ಕಾಳಾರಾಮ್ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡಾ ಮಹಿಳೆಯರಿದ್ದರು 1927ರಲ್ಲಿ ಡಿಪ್ರೆಸ್ಡ್ ಕ್ಲಾಸ್ ವಿಮೆನ್ಸ್ ಅಸೋಸಿಯೇಷನ್ ಶುರುವಾಯಿತು. ಅದರ ಸಮಾವೇಶದಲ್ಲಿ 3000 ಹಿಂದುಳಿದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಾ ‘ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ ಎಂದು ಕಿವಿಮಾತು ಹೇಳಿದ್ದರು. ಅಂಬೇಡ್ಕರರ ತಾತ್ವಿಕ ಬೆಂಬಲ ಹಾಗೂ ಸಂಘಟನೆಗಳ ಬಲದೊಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯವೇ ಶುರುವಾಯಿತು.

1928ರಲ್ಲಿ ಹಿಂದುಳಿದ ಮಹಿಳೆಯರ ಸಂಘಟನೆ ಆರಂಭವಾಯಿತು. ಅನೇಕ ಕಡೆಗಳಲ್ಲಿ ದಲಿತ ಮಹಿಳಾ ಸಮಾವೇಶಗಳು ಜರುಗಿದವು. ತುಳಸೀಬಾಯಿ ಬಣಸೋಡೆ ‘ಚೊಕ್ಕಮೇಲ’ ಎಂಬ ಪತ್ರಿಕೆ ಶುರುಮಾಡಿದರು.
ಮಹಿಳಾ ಹಾಸ್ಟೆಲ್ಲುಗಳು, ಶಾಲೆಗಳನ್ನು ತೆರೆಯಲಾಯಿತು. ಹೆಣ್ಣುಮಕ್ಕಳು ಆತ್ಮಕತೆ, ನಾಟಕಗಳನ್ನು ಬರೆದರು. ಧರ್ಮಪ್ರಸಾರಕರಾದರು .

1931ರಲ್ಲಿ ರಾಧಾಬಾಯಿ ವಢಾಳೆ ಎಂಬಾಕೆ, ‘ಹಿಂದೂ ದೇವಸ್ಥಾನ ಪ್ರವೇಶಿಸಲು ಹಾಗೂ ಕುಡಿಯುವ ನೀರಿಗಾಗಿ ಸಾರ್ವಜನಿಕ ಜಲಮೂಲಗಳಿಗೆ ಹೋಗಲು ನಮಗೆ ಹಕ್ಕು ಬೇಕು. ಸಾಮಾಜಿಕ ಹಕ್ಕುಗಳ ಜೊತೆ ನಮಗೆ ರಾಜಕೀಯ ಹಕ್ಕುಗಳೂ ಬೇಕು ಎಂದು ಬ್ರಿಟಿಷರಿಗೂ ಹಾಗೂ ಭಾರತೀಯ ನಾಯಕರಿಗೂ ಎಚ್ಚರಿಕೆ ನೀಡಿದಳು ,ಕಠಿಣ ಶಿಕ್ಷೆಗೆಲ್ಲ ನಾವು ಹೆದರುವವರಲ್ಲ. ಅವಮಾನಕರವಾಗಿ ಬದುಕುವುದಕ್ಕಿಂತ ನೂರು ಸಲವಾದರೂ ಹೋರಾಡಿ ಸಾಯಲು ನಾವು ಸಿದ್ಧರಿದ್ದೇವೆ ಎಂದು ಹೇಳಿದಳು.

ಹೀಗೆ ಅನೇಕ ಕಡೆಗಳಲ್ಲಿ ನಿಧಾನವಾಗಿ ಗತಿಯಲ್ಲಿ ಮಹಿಳೆಯರ ತನ್ನ ಹಕ್ಕುಗಳಿಗೆ ಹೋರಾಟ ಪ್ರಾರಂಭ ಮಾಡುವ ನೆಟ್ಟಿನಲ್ಲಿ ದೇಶಾದ್ಯಂತ ಹೋರಾಟಗಳು ಪ್ರಾರಂಭವಾದವು. ಯಾವುದೇ ಕಾರಣಕ್ಕೂ ಯಾವುದೆ ಆಸೆ ಆಮಿಷಕ್ಕೆ ಅಧಿಕಾರಕ್ಕೆ ಬಲಿ ಬೀಳದೆ ಸಂವಿಧಾಮಾತ್ಮಕವಾಗಿ ಹೆಣ್ಣು ಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಹಕ್ಕು ಒದಗಿಸಿಕೊಡುವಲ್ಲಿ ಬಾಬಾ ಸಾಹೇಬ್ ಅವರು ಅನೇಕ ಕೊಡುಗೆಗಳನ್ನು ನೀಡಿದರು

ಒಂದು ಸಭೆಯಲ್ಲಿ ಮಾತನಾಡುತ್ತ, ‘ಮದುವೆಗೆ ಅವಸರಪಡಬೇಡಿ. ಮದುವೆ ಒಂದು ಬಂಧನ. ಮದುವೆಯ ನಂತರದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಶಕ್ತಿಶಾಲಿಯಲ್ಲದಿದ್ದರೆ ಮದುವೆಯಾಗಬೇಡಿ. ಮದುವೆಯಾದ ಹೆಣ್ಣು ಗಂಡನ ಪಕ್ಕ ಸರಿಸಮಾನಳಾಗಿ ನಿಲ್ಲಬೇಕು, ದಾಸಿಯಂತಲ್ಲ. ಮದುವೆಯಾದವರು ನೆನಪಿಡಿ: ತುಂಬ ಮಕ್ಕಳನ್ನು ಹೆರುವುದು ಅಪರಾಧ. ಏಕೆಂದರೆ ನಮ್ಮ ಪಾಲಕರು ನೀಡಿದ್ದಕ್ಕಿಂತ ಹೆಚ್ಚಿನದನ್ನು ನಾವು ನಮ್ಮ ಮಕ್ಕಳಿಗೆ ನೀಡಲು ಶಕ್ತರಾಗಿರಬೇಕು ಎಂದು ಹೇಳಿದರು. ಇಂಥ ತಾಯ್ತನದ ಅಂತಃಕರಣದ ಮಾತುಗಳ ಕಾರಣವಾಗಿಯೇ ಜನಪದರ ಭಾವಕೋಶದಲ್ಲಿ ಅಂಬೇಡ್ಕ‌ರ್ ಬಾಬಾ ಎಂದು ಚಿರಸ್ಥಾಯಿಯಾದರು.

ಭಾರತೀಯ ಮಹಿಳೆ ಮತ್ತು ಹಿಂದೂ ಕೋಡ್ ಬಿಲ್

ಯಾವುದೇ ಸಾಮಾಜಿಕ ಬಲಾವಣೆ ಬಯಸುವುದಾದರೂ ಅದಕ್ಕೆಪೂರಕವಾಗಿಕಾನೂನು ಚೌಕಟ್ಟು ಒದಗಿಸಬೇಕು ಎನ್ನುವುದು ಅಂಬೇಡ್ಕರ್ ನಿಲುವು. ಮಹಿಳಾ ಹಕ್ಕುಗಳ ಪರವಾಗಿ ಖಚಿತ ನಿಲುವು ಹೊಂದಿದ್ದ ಅಂಬೇಡ್ಕರರಸಂವಿಧಾನವು ಮಹಿಳೆಯರಿಗೆ ಪುರುಷರಿಗಿರುವ ಎಲ್ಲ ಸವಲತ್ತುಗಳನ್ನೂ ನೀಡಿತು. ಜೊತೆಗೆ 15(3), 51(ಎ) ಕಲಮುಗಳು ವಿಶೇಷ ಸವಲತ್ತುಗಳನ್ನು ನೀಡಲು ಅವಕಾಶ ಕಲಿಸಿದವು.

ಇವತ್ತು ಹಿಂದೂಗಳಲ್ಲಿ ಪ್ರಚಲಿತವಿದ್ದ ಹಲವು ತೆರನ ಮದುವೆ ಪದ್ಧತಿಗಳನ್ನು ರದ್ದುಗೊಳಿಸಿ ಒಂದೇ ವಿಧದ ಮದುವೆಯ ವ್ಯವಸ್ಥೆ ಕಲ್ಪಿಸಿದರು.

ಮಹಿಳೆಗೆ ಆಸ್ತಿ ಹಕ್ಕು ಮತ್ತು ದತ್ತು ತೆಗೆದುಕೊಳ್ಳುವ ಹಕ್ಕು ಕೊಡುವುದು.

ಮಹಿಳೆಗೆ ವಿಚ್ಚೇದನದ ಹಕ್ಕು ನೀಡುವುದು. ಈ ಮಸೂದೆಯು ಎಂಟು ಭಾಗಗಳನ್ನೊಳಗೊಂಡಿತ್ತು. ಹಿಂದೂ ಯಾರು ಮದುವೆ/ ದತ್ತು ಸ್ವೀಕಾರ/ ಪೋಷಕತ್ವ/ಅವಿಭಕ್ತ ಕುಟುಂಬದ ಆಸ್ತಿ ಕಾನೂನು/ ಹೆಣ್ಣುಮಕ್ಕಳ ಆಸ್ತಿ ಹಕ್ಕು/ ವಾರಸುದಾರಿಕೆ ಹಾಗೂ ಜೀವನಾಂಶಗಳ ಕುರಿತ ಕಾನೂನುಗಳನ್ನು ಅದರಲ್ಲಿ ರೂಪಿಸಲಾಗಿತ್ತು. ಈ ಪರಿಷ್ಕರಿತ ಆವೃತ್ತಿಯಲ್ಲಿ ಮಹಿಳೆಗೆ ವಿಚ್ಛೇದನಕ್ಕೆ ಅವಕಾಶವಿತ್ತು. ವಿಧವೆಗೆ ಗಂಡನ ಆಸ್ತಿಯ ಪೂರಾ ಹಕ್ಕು ಹಾಗೂ ಮದುವೆಯಾದ ಹೆಣ್ಣುಮಕ್ಕಳಿಗೆ ತವರಿನ ಆಸ್ತಿ ಹಕ್ಕುಗಳು ಪ್ರಸ್ತಾಪಿಸಲ್ಪಟ್ಟಿದೆ.

ಇವತ್ತು ಬಾಬಾ ಸಾಹೇಬರ ಕೃಪಾಶೀರ್ವಾದದಿಂದ ಎಲ್ಲಾ ಕ್ಷೇತ್ರಗಳಲ್ಲಿ 33 % ಆವಕಾಶ ಸಿಕ್ಕಿದ್ದು, ಪ್ರತಿಶತ 80 ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಯೂ ಸಮರ್ಥರಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ದೇಶದ ಪ್ರಗತಿಯಲ್ಲಿ ಮೊದಲ ಪಾಲು ಪಡೆದಿದ್ದಾರೆ. ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಪಡೆದಿರುವ ಕ್ಷೇತ್ರದ ಅಭಿವೃದ್ಧಿ ಇಂದು ಉನ್ನತ ಮಟ್ಟದಲ್ಲಿದೆ.
ಹೆಣ್ಣು ತಾಯಿ ಮಗಳು ಅಕ್ಕ ತಂಗಿ ಹೆಂಡತಿ ಗೆಳತಿ ಹೀಗೆ ಎಲ್ಲ ಸಂಬಂಧಗಳನ್ನು ಅಚುಕಟ್ಟಾಗಿ ನಿಭಾಯಿಸುವ ಶಕ್ತಿ ಇದೆ, ಹೆಣ್ಣಿನಿಂದಲೇ ಎಲ್ಲಾ ಎನ್ನುವುದು ಅರಿತ ಬಾಬಾಸಾಹೇಬರು ಅಚಲ ನಂಬಿಕೆ ಇಟ್ಟುಕೊಂಡು ಇವತ್ತು ಸಂವಿಧಾನಾತ್ಮಕವಾಗಿ ಸುಖಃ ಶಾಂತಿಯ ಜೀವನ ಮಾಡಲು ಅವಕಾಶ ಮಾಡಿಕೊಟ್ಟ ಮಹಾನ್ ಪುರುಷನಿಗೆ ನನ್ನ ಹೃತ್ಪೂರ್ವಕ ನಮನಗಳು.

ನಂದಿನಿ ಸುರೇಂದ್ರ ಸನಬಾಳ್, ಕಲಬುರಗಿ.

LEAVE A REPLY

Please enter your comment!
Please enter your name here