ಘಟಪ್ರಭಾ ನದಿಗೆ ಮತ್ತೆ ಮಹಾಪೂರ
ಮೂಡಲಗಿ – ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಘಟಪ್ರಭಾ ನದಿಗೆ ಮಹಾಪೂರ ಬಂದಿದ್ದು ತಾಲೂಕಿನ ಹಲವಾರು ಸೇತುವೆಗಳು ಮುಳುಗಡೆಯಾಗಿವೆ, ನೂರಾರು ಎಕರೆ ಕಬ್ಬು ಬೆಳೆ ಮುಳುಗಡೆಯಾಗಿ ಮತ್ತೆ ರೈತನ ಬದುಕಿಗೆ ಬರೆ ಇಟ್ಟಿದೆ.
ಮೂಡಲಗಿ ತಾಲೂಕಿನ ಸುಣಧೋಳಿ, ಹುಣಶಾಳ ಸೇತುವೆಗಳ ಮೇಲೆ ನದಿ ನೀರು ಬಂದಿರುವುದರಿಂದ ಸಂಚಾರ ಬಂದ್ ಆಗಿದೆ. ಮುಸಗುಪ್ಪಿಯ ಪ್ರಸಿದ್ಧ ಲಕ್ಷ್ಮಿ ದೇವಸ್ಥಾನದ ಒಳಗೆ ಮತ್ತೆ ನೀರು ಸೇರಿಕೊಂಡಿದೆ.
ಕಳೆದ ತಿಂಗಳಿನಲ್ಲಿ ಘಟಪ್ರಭಾ ನದಿಗೆ ಪ್ರವಾಹ ಬಂದು ತಾಲೂಕಿನ ನೂರಾರು ಕುಟುಂಬಗಳು ತಮ್ಮ ಮನೆ-ಮಠ, ದನಕರುಗಳನ್ನು ತೊರೆದು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಅದರ ನೋವು ಇನ್ನೂ ಹಸಿರಾಗಿರುವಾಗಲೇ ಈಗ ಮತ್ತೆ ಪ್ರವಾಹ ಬಂದಿದ್ದು ರೈತರ, ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೊದಲೇ ಮುಳುಗಿದ ಬದುಕಿಗೆ ಸರ್ಕಾರ, ತಾಲೂಕಾಡಳಿತ ಶೀಘ್ರವಾಗಿ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಾಹಿತಿ ಪಡೆಯಲು ಮೂಡಲಗಿ ತಹಶೀಲ್ದಾರರಿಗೆ ಕಾಲ್ ಮಾಡಿದರೂ ಅವರು ಸಂಪರ್ಕಕ್ಕೆ ಸಿಗದೆ ಯಾವುದೇ ಮಾಹಿತಿ ದೊರಕಲಿಲ್ಲ
ತಾಲೂಕಾಡಳಿತವು ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರಕ್ಕಾಗಿ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕು.