ಹೊಸದಿಲ್ಲಿ – ಒಂದು ಒಳ್ಳೆಯ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಮೂರು ಕೃಷಿ ಕಾನೂನುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ಆಗದ ಕಾರಣ ಅವುಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶದ ಝಾಂಸಿಯಲ್ಲಿ ಈ ಘೋಷಣೆ ಮಾಡಿದ ಅವರು, ರೈತರಿಗೆ ಕಾನೂನುಗಳ ಬಗ್ಗೆ ಮನವರಿಕೆ ಮಾಡಿ ಕೊಡಲಾಗಲಿಲ್ಲ, ರೈತರ ಹಿತ ಕಾಪಾಡಲು ಆಗಲಿಲ್ಲ ಅದಕ್ಕಾಗಿ ದೇಶದ ಕ್ಷಮೆ ಕೇಳಿದ್ದಾರೆ.
ರೈತರಿಗೆ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ ಹಾಗೂ ಹರಿಯಾಣಾ ರಾಜ್ಯಗಳ ರೈತರು ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಸುಮಾರು ಹನ್ನೊಂದು ಸಲ ಕೇಂದ್ರ ಸರ್ಕಾರ ಮಾತುಕತೆ ನಡೆಸಿದರೂ ರೈತರು ಮಣಿದಿರಲಿಲ್ಲ. ಕೃಷಿ ಕಾಯ್ದೆ ಹಿಂದೆ ತೆಗೆದುಕೊಳ್ಳಲೇಬೇಕು ಎಂದು ಹಟ ಹಿಡಿದಿದ್ದರು. ಕೊನೆಗೂ ಕೇಂದ್ರ ಸರ್ಕಾರ ಮಣಿದು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವದಾಗಿ ಘೋಷಣೆ ಮಾಡಿದರು.
ಮೋದಿಯವರ ಈ ಘೋಷಣೆಯನ್ನು ವಿರೋಧ ಪಕ್ಷಗಳು ಟೀಕಿಸಿದ್ದು ಚುನಾವಣೆಯ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ ಎಂದಿವೆ.
ರಾಷ್ಟ್ರೀಯ ಕಿಸಾನ್ ಸಭಾ ಅಧ್ಯಕ್ಷ ರಾಕೇಶ ಟಿಕಾಯತ್ ಪ್ರತಿಕ್ರಿಯೆ ನೀಡಿ, ಬರೀ ಘೋಷಣೆ ಮಾಡಿದ ಮಾತ್ರಕ್ಕೆ ರೈತರು ವಾಪಸ್ ಹೇಗೆ ಹೋಗಬೇಕು. ಸಂಸತ್ತಿನಲ್ಲಿ ಕಾನೂನು ವಾಪಸ್ ಆಗಬೇಕು ಆಗ ಮಾತ್ರ ರೈತರು ತೆರಳುತ್ತಾರೆ ಎಂದಿದ್ದಾರೆ.
ಉ.ಪ್ರ. ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ – ಭವಿಷ್ಯದಲ್ಲಿ ರೈತರನ್ನು ಸಂಕಟಕ್ಕೆ ದೂಡುವ ಮತ್ತೆ ಯಾವುದೇ ಕಾಯ್ದೆ ಜಾರಿಗೆ ಬರುವುದಿಲ್ಲ ಎಂಬ ಗ್ಯಾರಂಟಿ ಏನು. ಇದೆಲ್ಲ ಚುನಾವಣಾ ಗಿಮಿಕ್ ಎಂದಿದ್ದಾರೆ.
ಇತ್ತ ಕರ್ನಾಟಕದಲ್ಲಿಯೂ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂತಾದವರು ಪ್ರತಿಕ್ರಿಯೆನೀಡಿ, ಚುನಾವಣೆಯ ಭಯದಿಂದ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾಮೂಲಿ ರಾಗ ಹಾಡಿದ್ದಾರೆ.
ಏನೇ ಆಗಲಿ ಪ್ರತಿಪಕ್ಷಗಳಿಗೆ ಚುನಾವಣೆಯಲ್ಲಿ ಯಾವುದೇ ಮಾತು ಆಡದಂತೆ ಬಾಯಿ ಬಂದ್ ಮಾಡಲು ಮೋದಿ ಸರ್ಕಾರ ಯಶಸ್ವಿ. ವಿರೋಧ ಪಕ್ಷಗಳ ಚಿಂತೆ ಮತ್ತಷ್ಟು ಹೆಚ್ಚಾಗಿದೆ. ೨೦೨೨ ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ, ಪಂಜಾಬ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು ಪಂಜಾಬನಲ್ಲಿ ಬಿಜೆಪಿಗೆ ಲಾಭವಾಗಲಿದೆ ಎನ್ನಲಾಗುತ್ತಿದೆ ಇದರಿಂದ ಪ್ರತಿಪಕ್ಷಗಳ ಮುಖ ಕಪ್ಪಾಗಿದೆ.