ಮಹಾದೇವಿಯಕ್ಕನ ಸ್ವರ ವಚನಗಳು, ಅಕ್ಕನ ಹಾಡುಗಳು, ವಚನಗುಚ್ಚಗಳನ್ನು ಸ್ಮರಿಸುತ್ತಾ,ಮೊಟ್ಟಮೊದಲ ಕವಿ ಯಿತ್ರಿ ಅಕ್ಕಮಹಾದೇವಿಯು ತನ್ನ ಆರಾಧ್ಯ ದೇವ ಚೆನ್ನಮಲ್ಲಿಕಾರ್ಜುನನ್ನು ಅರಸುತ್ತ ಹೋಗುವ ಪ್ರಸಂಗವನ್ನು ಅತ್ಯಂತ ಭಾವಪೂರ್ಣರಾಗಿ ಡಾ. ಸಾವಿತ್ರಿ ಕಮಲಾಪುರ ಅವರು ಕಟ್ಟಿಕೊಟ್ಟರು.
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 13 ನೆಯ ದಿವಸ ಅವರು ಮಾತನಾಡಿದರು.
ಅಕ್ಕಮಹಾದೇವಿ ತನ್ನ ದೇಹಾಭಿಮಾನವನ್ನು ಬಿಟ್ಟು, ಅಮೂರ್ತದಿಂದ ನಿರಾಕಾರದವರೆಗೆ ನಡೆದುಕೊಂಡು ಹೋದ ದಾರಿಯನ್ನು ಎಳೆ ಎಳೆಯಾಗಿ ಚಿತ್ರಿಸಿದರು. ಅಕ್ಕಮಹಾದೇವಿಯ ಆಧ್ಯಾತ್ಮಿಕ ಹಸಿವು, ಅಕ್ಕನ ವಚನಗಳ ಬೆರಗು – ಬೆಡಗು, ರೂಪಕಗಳು, ಸಾಂಕೇತಿಕತೆ, ಭಾವನಾತ್ಮಕತೆ.. ಹೀಗೆ ಎಲ್ಲವನ್ನೂ ವಚನಗಳನ್ನು ಹೇಳುತ್ತಾ ಅವುಗಳೊಂದಿಗೆ ಅನುಸಂಧಾನ ಮಾಡಿದರು ಎಂದರೆ ತಪ್ಪಾಗಲಾರದು.
ಹರಿಹರನ ರಗಳೆ, ಬಳ್ಳಿಗಾವೆಯ ಬಿಜ್ಜಳನ ಶಾಸನ, ಶೂನ್ಯ ಸಂಪಾದನೆ, ಬಸವ ಪುರಾಣ ಶಾಸನಗಳನ್ನು ಉಲ್ಲೇಖಿಸುತ್ತಾ, ವಿಮರ್ಶಾರ್ಪೂರ್ವಕ ಮತ್ತು ವೈಚಾರಿಕ ನಿಲುವುಗಳಿಂದ ಉಪನ್ಯಾಸಕ್ಕೆ ಒಂದು ಪ್ರಬುದ್ಧತೆಯನ್ನು ತಂದುಕೊಟ್ಟರು. ಆಕರದ ಗ್ರಂಥಗಳನ್ನೂ ಸಹ ನಮ್ಮೊಂದಿಗೆ ಹಂಚಿಕೊಂಡರು
ಇನ್ನೊಬ್ಬ ಉಪನ್ಯಾಸಕರಾದ ಶರಣೆ ಸ್ಮಿತಾ ಪಾವಟೆ ಅವರು “ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ ” ಎಂಬ ಕವನದ ಸಾಲುಗಳ ಮೂಲಕ ಪ್ರಖ್ಯಾತರಾದ ಕವಿ ಈಶ್ವರ ಸಣಕಲ್ ಅವರ ಬಗೆಗೆ ತಮ್ಮ ಮಾತುಗಳನ್ನು ಪ್ರಾರಂಭ ಮಾಡಿದರು.
ಸಣಕಲ್ ಅವರು ಹುಟ್ಟಿದ ಊರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ, ಸೇವೆ ಸಲ್ಲಿಸಿರುವ ಅವರು ಬಾಲ್ಯದಿಂದಲೇ ಸಾಹಿತ್ಯದ ಆಸಕ್ತಿ ಇದ್ದವರು ಎಂದು ಹೇಳುತ್ತಾ, ಅವರು ಬರೆದಿರುವ “ಹುಲ್ಕಲ್ಗೆ ಕಿಡಿ ” ( ಕವನ ಸಂಕಲನ )ಬಟ್ಟೆ ( ಕಥಾ ಸಂಕಲನ ) ಸಂಸಾರ ಸಮರ ( ಕಾದಂಬರಿ )ಗ್ರಾಮೋದ್ಧಾರ (ಅನುವಾದಿತ ಕೃತಿ ) ಪುಸ್ತಕಗಳ ಹೆಸರುಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಸಣಕಲ್ ಅವರು ಸಹಕಾರ ಪತ್ರಿಕೆಯ ಸಂಪಾದಕರಾಗಿದ್ದುದು, ರಾಜ್ಯ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಬಂದದ್ದು, ಬೆಳಗಾವಿಯಲ್ಲಿ 1980 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದುದನ್ನು ಸಹ ಸ್ಮರಿಸಿದರು .
ಮಾರ್ಗದರ್ಶಕರಾದ ಶರಣ ಬಿ. ಆರ್. ಪೊಲೀಸ ಪಾಟೀಲ್ ಸರ್ ಅವರು ಅಕ್ಕನ ಪಾರಮಾರ್ಥಿಕ ಹಾದಿಯನ್ನು
ವಿವರಿಸಿ, ವಚನ ಅಧ್ಯಯನ ವೇದಿಕೆ ಗೂಗಲ್ ಮೀಟ್ ಗಳಿಂದ ನಡೆಸುತ್ತಿರುವ ಉಪನ್ಯಾಸಗಳು ಶೈಕ್ಷಣಿಕ ಮತ್ತು ವೈಚಾರಿಕ ಕ್ರಾಂತಿಯನ್ನು ಹುಟ್ಟುಹಾಕುತ್ತಿವೆ. ವೇದಿಕೆಯ ಸದಸ್ಯರು ಅತ್ಯಂತ ಪ್ರಭುದ್ಧವಾಗಿ ತಮ್ಮದೇ ಆದ ವಿಮರ್ಶಾತ್ಮಕ ಹಿನ್ನೆಲೆಯಲ್ಲಿ ಮಾತನಾಡಲು ಕಲಿತಿದ್ದಾರೆ.. ಎನ್ನುವ ಸಕಾರಾತ್ಮಕ ನುಡಿಗಳನ್ನು ವ್ಯಕ್ತಪಡಿಸಿದರು.
ಸಣಕಲ್ ಅವರ ಬಗೆಗೆ ಹೇಳುತ್ತಾ, ಎಲ್ಲ ಶ್ರೇಷ್ಠ ಕವಿಗಳ ವ್ಯಕ್ತಿತ್ವದ ಬಗೆಗೆ ಕವಿತೆ ಬರೆದ ಮಹಾನ್ ಕವಿ ಎಂದು ಹೊಗಳಿದರು.
ಕಡೆಯಲ್ಲಿ ಡಾ. ಶಶಿಕಾಂತ ಪಟ್ಟಣ ಅವರು ವೈರಾಗ್ಯ ನಿಧಿ ಅಕ್ಕಮಹಾದೇವಿ ವ್ಯವಸ್ಥೆಯನ್ನು ಪ್ರತಿಭಟಿಸಿ ತನ್ನದೇ ಆದ ಆಧ್ಯಾತ್ಮಿಕ ಹಾದಿಯಲ್ಲಿ ನಡೆದ ಮಹಾನ್ ಶಿವಶರಣೆ ಎಂದು ಸ್ಮರಿಸಿದರು. ಸಣಕಲ್ ಅವರ ಬಗೆಗೆ ಹೇಳುತ್ತಾ, ಅವರು ಎಂದೂ ತಮ್ಮ ಸಿದ್ಧಾಂತಕ್ಕೆ ರಾಜಿ ಮಾಡಿಕೊಳ್ಳಲಿಲ್ಲ, ಸ್ವಾಭಿಮಾನ ಬಿಟ್ಟು ಬದುಕಲಿಲ್ಲ, ಅವರೊಬ್ಬ ಯೋಗಪಟು, ಅತ್ಯುತ್ತಮ ಸೃಜನಶೀಲ ಕವಿ ಎಂದು ನಮ್ಮೊಂದಿಗೆ ಹಂಚಿಕೊಂಡರು.
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಶರಣೆ ಪ್ರೇಮಕ್ಕ ಅಣ್ಣಿಗೇರಿ ಅವರ ಸ್ವಾಗತ, ಶರಣೆ ಬಬಿತಾ ಅವರ ವಚನ ಮಂಗಳ, ಶರಣೆ ಶಾಂತಾ ಧುಳoಗೆ ಅವರ ಶರಣು ಸಮರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಮಾಪ್ತಿಯಾಯಿತು. ಶರಣೆ ಶೈಲಜಾ ಪವಾಡಶೆಟ್ಟರ ಅವರು
ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಿಕೊಟ್ಟರು.
ಸುಧಾ ಪಾಟೀಲ್
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ