ಮೂಡಲಗಿ – ಕಲಿತ ಮಹಾವಿದ್ಯಾಲಯದಲ್ಲಿಯೇ ಪ್ರಾಧ್ಯಾಪಕರಾಗಿವಸೇವೆ ಸಲ್ಲಿಸುವ ಸುಯೋಗ ಚಂದ್ರಶೇಖರ ಅಕ್ಕಿಯವರದು. ಕೇವಲ ಕಲಿಸುವ ಗೋಜಿಗೆ ಹೋಗದೆ ವಿದ್ಯಾರ್ಥಿಗಳಿಗೆ ಸಾಹಿತ್ಯದ ರುಚಿ ಹತ್ತಿಸಿದವರು. ಸಾಹಿತ್ಯದಲ್ಲಿ ಮುಂದೆ ಬಂದು ಕೃತಿ ರಚಿಸಿದವರಿಗೆ ಮುನ್ನುಡಿ, ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿ ಹುರಿದುಂಬಿಸಿದರು. ಪ್ರೊ. ಅಕ್ಕಿಯವರ ಕುರಿತಾಗಿ ಗೋಕಾಕದ ಇನ್ನೊಬ್ಬ ಸಾಹಿತಿ ಮಹಾಲಿಂಗ ಮಂಗಿಯವರು ಸಿರಿಗಂಧ ಎಂಬ ಕೃತಿಯನ್ನೇ ಬರೆದಿದ್ದು ಅಕ್ಕಿಯವರ ಸಾರ್ಥಕ ಬದುಕನ್ನು ತೆರೆದಿಟ್ಟಿದ್ದಾರೆ ಎಂದು ಶಿಕ್ಷಕ ರಮೇಶ ಮಿರ್ಜಿ ಹೇಳಿದರು.
ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಅಕ್ಕಿಯವರ ಬದುಕು- ಬರಹ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಕಿಯವರೆಂದರೆ ಅವಿಭಜಿತ ಗೋಕಾಕ ತಾಲೂಕಿನ ಗುರುಗಳೆನ್ನಬಹುದು. ಯಾಕೆಂದರೆ, ಗೋಕಾಕ ತಾಲೂಕಿನ ಎಲ್ಲಿಯೇ ಹೋದರೂ ಅಲ್ಲಿ ಅಕ್ಕಿ ಸರ್ ಅವರ ಶಿಷ್ಯರು ಸಿಗುತ್ತಾರೆ. ಮಹಾಲಿಂಗ ಮಂಗಿ, ದಿ. ಟಿ ಸಿ ಮೊಹರೆ ಮುಂತಾದ ಸಾಹಿತಿಗಳು ಅಕ್ಕಿಯವರನ್ನು ಕೊಂಡಾಡಿ ಅನೇಕ ಸಾಹಿತ್ಯ ರಚಿಸಿದ್ದಾರೆ. ಅಕ್ಕಿಯವರ ಕಸಿ ಕಥಾ ಸಂಕಲನ ತುಂಬಾ ಖ್ಯಾತಿ ಪಡೆದಿದೆ ಎಂದು ಹೇಳಿ ಪ್ರೊ. ಅಕ್ಕಿಯವರ ಅನೇಕ ಕೃತಿಗಳ ಉಲ್ಲೇಖ ಮಾಡಿದರು. ಗೋಕಾಕದ ಪರಿಸರದಲ್ಲಿ ಯಾವುದೇ ವಿದ್ವತ್ ಗೋಷ್ಠಿ ಇದ್ದಲ್ಲಿ ಅಕ್ಕಿಯವರು ಇರಲೇ ಬೇಕು ಎನ್ನುವಂತೆ ಅವರು ಬದುಕಿದ್ದಾರೆ ಎಂದರು.
ಪ್ರೊ. ಅಕ್ಕಿಯವರ ಬದುಕಿನ ಮಜಲುಗಳನ್ನು ಮಿರ್ಜಿಯವರು ಬಿಡಿಸಿಟ್ಟರು.
ಸಮಾರಂಭದಲ್ಲಿ ಆಶಯ ನುಡಿಗಳನ್ನು ಮುಖ್ಯೋಪಾಧ್ಯಾಯ ಸುರೇಶ ಲಂಕೆಪ್ಪನವರ ಹೇಳಿದರು.
ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ವಹಿಸಿದ್ದರು.
ವೇದಿಕೆಯ ಮೇಲೆ, ಬಿಇಓ ಅಜಿತ ಮನ್ನಿಕೇರಿ, ಬಿ ವೈ ಶಿವಾಪೂರ, ಶಾಸಕರ ಆಪ್ತ ಸಹಾಯಕ ಯಕ್ಸಂಬಿ, ಮಲ್ಲಿಕಾರ್ಜುನ ಢವಳೇಶ್ವರ, ಮರೆಪ್ಪ ಮರೆಪ್ಪಗೋಳ
ಪ್ರೇಮಾ ಕಾವಲ್ದಾರ ಸ್ವಾಗತಿಸಿದರು.
ನಿರೂಪಣೆಯನ್ನು ಶಿಕ್ಷಕ ಮುತ್ತುರಾಜ ಬಂಬಲವಾಡ ಮಾಡಿದರು. ಅಡ್ವಿನ್ ಪರಸನ್ನವರ ವಂದಿಸಿದರು