ವಿಶೇಷ ವರದಿ: ಪಂಡಿತ ಯಂಪೂರೆ.
ಸಿಂದಗಿ; ಆಲಮೇಲ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ಮೇಲೆ 2016 ಏಪ್ರಿಲ್ 24 ರಂದು ಪ್ರಥಮ ಅವಧಿಗೆ ಒಟ್ಟು 19 ಜನ ಸದಸ್ಯರ ಸಂಖ್ಯಾಬಲದಿಂದ ಮೊದಲ ಚುನಾವಣೆ ನಡೆದಿತ್ತು. ಕಳೆದ ಜು 05 ರಂದು ಸದಸ್ಯರ ಅವಧಿ ಮುಗಿದಿತ್ತು, ಅಲ್ಲಿಂದ ಈವರೆಗೂ ಆಡಳಿತಾಧಿಕಾರಿಗಳು ಅಧಿಕಾರ ನಡೆಸಿದ್ದು ಈಗ ಚುನಾವಣೆ ನಡೆಸಲು ಸರಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ್ದು ಆಕಾಂಕ್ಷಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದ್ದು ಚುನಾವಣೆ ದಿನಾಂಕ ನಿಗದಿಗಾಗಿ ಸರಕಾರದ ಆದೇಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ಪಟ್ಟಣ ಪಂಚಾಯತಿಗೆ ಜು,05ಕ್ಕೆ ಅವಧಿ ಮುಗಿದು ಸುಮಾರು 9 ತಿಂಗಳು ಕಳೆದಿವೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೆ ರಾಜ್ಯ ಸರಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು, ಆದರೆ ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ಇತ್ತೀಚೆಗಷ್ಟೆ ಹೈಕೋರ್ಟ ಡಿ,30ರ ಒಳಗಾಗಿ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಸಬೇಕು ಎಂದು ಆದೇಶ ಹೊರಡಿಸಿರುವದರಿಂದ ಈಗ ಮತ್ತೆ ಮರು ಮೀಸಲಾತಿ ಪಟ್ಟಿ ಬಿಡುಗಡೆಯಾಗಿದೆ ಹೀಗಾಗಿ ಈ ಬಾರಿ ಚುನಾವಣೆ ನಡೆಯುವದು ಬಹುತೇಕ ಖಚಿತವಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಕಳೆದ ಬಾರಿ ಒಟ್ಟು 19 ಜನ ಸದಸ್ಯರ ಬಲದ ಆಡಳಿತದಲ್ಲಿ ಬಿಜೆಪಿ 10, ಕಾಂಗ್ರೆಸ್ 7 ಹಾಗೂ ಪಕ್ಷೇತರ 2 ಸ್ಥಾನಗಳಲ್ಲಿ ಅಭ್ಯರ್ಥಿಗಳು ಗೆಲವು ಸಾಧಿಸಿ ಬಿಜೆಪಿ ಅಧಿಕಾರ ಹಿಡಿದಿತ್ತು ಆದರೆ ಈ ಬಾರಿ ಇಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತಲೂ ಬಲಿಷ್ಠವಾಗಿದ್ದು ಪೈಪೋಟಿ ಒಡ್ಡುವ ಎಲ್ಲಾ ಸಾಧ್ಯತೆಗಳಿವೆ ಬಿಜೆಪಿಯು ಕೂಡ ಶಾಸಕರ ಬಲದಿಂದ ಮತ್ತೆ ಅಧಿಕಾರ ಹಿಡಿಯುವುದು ಖಚಿತ ಎನ್ನುವುದು ಕೆಲ ಪ್ರಜ್ಞಾವಂತರ ಮಾತಾಗಿದೆ.
ಟಿಕೆಟ್‍ಗಾಗಿ ಕಸರತ್ತು:
ಕಳೆದ ಬಾರಿ ಸ್ಪರ್ಧೆ ಮಾಡಿ ಆಯ್ಕೆಯಾದ ಸದಸ್ಯರು ಹಾಗೂ ಸಮೀಪದ ಪ್ರತಿಸ್ಪರ್ಧಿಗಳು ಟಿಕೆಟ್‍ಗಾಗಿ ಭಾರಿ ಕಸರತ್ತು ನಡೆಸಿದ್ದರು ಕಳೆದ ಬಾರಿಯ ಟಿಕೆಟ್ ವಂಚಿತರು ಈ ಬಾರಿಯಾದರೂ ನಮಗೆ ಟಿಕೆಟ್ ಕೊಡಿ ಎಂದು ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆಂಬುದು ಒಂದು ರಾಜಕೀಯ ನೋಟ. ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಗಲು ಇರುಳು ಶ್ರಮಿಸಿದ್ದರಿಂದ ಕೆಲವು ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವ ಭರವಸೆ ಸಿಕ್ಕಂತಾಗಿದೆ. ಒಂದೊಂದು ವಾರ್ಡಗಳಲ್ಲಿ 5 ರಿಂದ 6 ಜನ ಆಕಾಂಕ್ಷಿಗಳು ತಯಾರಿ ನಡೆಸಿದ್ದರಿಂದ ಎರಡೂ ಪಕ್ಷದ ನಾಯಕರಿಗೆ ತಲೆ ನೋವಾಗಿದ್ದು ಮಾತ್ರ ಕಟು ಸತ್ಯ.
ಮೀಸಲಾತಿ ಪ್ರಕಟ:
ವಾರ್ಡ1; ಪ.ಜಾ, ವಾರ್ಡ2; ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ3; ಸಾಮಾನ್ಯ ಮಹಿಳೆ, ವಾರ್ಡ 4; ಸಾಮಾನ್ಯ ಮಹಿಳೆ, ವಾರ್ಡ 5; ಹಿಂದುಳಿದ ವರ್ಗ ಎ, ವಾರ್ಡ 6; ಪರಿಶಿಷ್ಟ ಜಾತಿ,(ಮಹಿಳೆ) ವಾರ್ಡ 7; ಸಾಮಾನ್ಯ ಮಹಿಳೆ, ವಾರ್ಡ 8; ಹಿಂದುಳಿದ ವರ್ಗ ಬಿ, ವಾರ್ಡ 9; ಸಾಮಾನ್ಯ, ವಾರ್ಡ 10, ಸಾಮಾನ್ಯ ಮಹಿಳೆ, ವಾರ್ಡ 11; ಹಿಂದುಳಿದ ವರ್ಗಎ, ವಾರ್ಡ 12; ಪರಿಶಿಷ್ಟ ಪಂಗಡ, ವಾರ್ಡ 13; ಸಾಮಾನ್ಯ ಮಹಿಳೆ, ವಾರ್ಡ 14; ಸಾಮಾನ್ಯ, ವಾರ್ಡ 15; ಸಾಮಾನ್ಯ, ವಾರ್ಡ 16; ಪರಿಶಿಷ್ಟ ಜಾತಿ ಮಹಿಳೆ, ವಾರ್ಡ 17; ಪ.ಜಾ, ವಾರ್ಡ 18; ಸಾಮಾನ್ಯ, ವಾರ್ಡ 19; ಸಾಮಾನ್ಯ, ಹೀಗೆ ಮೀಸಲಾತಿ ಪಟ್ಟಿ ಹೊರಬಿದ್ದಿದೆ.
ಇತ್ತೀಚೆಗಷ್ಟೇ ಉಪಚುನಾವಣೆ ಮುಗಿಸಿ ನಿಟ್ಟುಸಿರುವ ಬಿಟ್ಟಿರುವ ನಾಯಕರಿಗೆ ಈಗ ಪಟ್ಟಣ ಪಂಚಾಯತಿ ಚುನಾವಣೆ ಮತ್ತಷ್ಟು ಒತ್ತಡ ತಂದಿದೆ. 2023ರ ಸಾರ್ವತ್ರಿಕ ಚುನಾವಣೆಗೆ ಮುನ್ನುಡಿ ಹಾಡುವ ರೀತಿಯಲ್ಲಿ ಯಾರು ಯಾರಿಗೆ ಟಿಕೆಟ್ ನೀಡಿದರೆ ಒಳಿತು ಎನ್ನುವ ಯೋಚನೆ ರಾಜಕೀಯ ನಾಯಕರಾದ್ದಾಗಿದ್ದರೆ, ಒಟ್ಟಾರೆ ಶಾಂತಿಯುತವಾಗಿ ಚುನಾವಣೆ ನಡೆದರೆ ಸಾಕಪ್ಪ ಎನ್ನುವುದೇ ಜನಾಭಿಪ್ರಾಯವಾಗಿದೆ.