spot_img
spot_img

ಸಾಪೇಕ್ಷ ಸಿದ್ಧಾಂತಕ್ಕಿಂದು‌ 106 ವರುಷಗಳ ಸಂಭ್ರಮ; ಎಂದೂ ಮರೆಯದ ಐನ್‌ಸ್ಟೈನ್

Must Read

- Advertisement -

ಎಂದೂ ಮರೆಯದ ಐನ್‌ಸ್ಟೈನ್

1915. ಒಂದನೂರಾ ಆರು ವರ್ಷಗಳ ಹಿಂದಿನ ಮಾತು. ಇದು ವಿಜ್ಞಾನಕ್ಕೇ ವಿಶೇಷವಾದ ವರ್ಷ. ಇಂತಹ ಪ್ರಖರ ಪ್ರತಿಭಾವಂತ ಇನ್ನೊಬ್ಬನಿಲ್ಲ ಎನಿಸಿದ್ದ ಯೂರೋಪಿನ ಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್‍ ಐನ್‌ಸ್ಟೈನ್ (1879 – 1955) ಜನರ ನಂಬಿಕೆಗಳನ್ನೇ ಅಲ್ಲಾಡಿಸಿದ್ದು ಇದೇ ವರ್ಷ. ಹಾಗಾಗಿ ಮಾನವಜನಾಂಗದ ಇತಿಹಾಸದಲ್ಲಿ ಈ ವರ್ಷಕ್ಕೆ ಬಹಳ ಮಹತ್ವವಿದೆ.

ಈ ಅತಿ ಮಹತ್ವದ ಅವರ ‘ವಿಶೇಷ ಸಾಪೇಕ್ಷ ಸಿದ್ಧಾಂತ’ 1905ರಲ್ಲಿಯೇ ಹೊರಬಂದಿತ್ತು. ಕೇವಲ ಒಂದು ವರ್ಷದಲ್ಲಿ ಐದು ಪೇಪರುಗಳನ್ನು ಪ್ರಕಟಿಸಿದ್ದರು.ಆಗ ಅವರ ವಯಸ್ಸು ಕೇವಲ 26. ಈ ಪೇಪರುಗಳಲ್ಲಿ ಒಂದು ‘ವಿಶೇಷ ಸಾಪೇಕ್ಷ ಸಿದ್ಧಾಂತ’ಕ್ಕೆ (Special Theory of Relativity) ಸಂಬಂಧಿಸಿದ್ದಾದರೆ, ಮತ್ತೊಂದು ಫೋಟೋ ಎಲೆಕ್ಟ್ರಿಕ್‌ ಕ್ರಿಯೆಗೆ ಸಂಬಂಧಿಸಿದ್ದು.

ಅದು ಮುಂದೆ ಅವರಿಗೆ ನೊಬೆಲ್ ಬಹುಮಾನ ತಂದುಕೊಟ್ಟಿತು.ಮತ್ತೊಂದು ಪೇಪರ್ ಪ್ರಖ್ಯಾತ ‘e=mc2’ ಸಮೀಕರಣವನ್ನು ಹೊರತಂದು ಅವರನ್ನು ಬಾಂಬ್ ಜೊತೆ ಅನಗತ್ಯವಾಗಿ ಶಾಮೀಲಾಗುವಂತೆ ಮಾಡಿತು.

- Advertisement -

‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ ಜನರ, ವಿಜ್ಞಾನಿಗಳ ಬೆರಗಿಗೆ ಕಾರಣವಾಯಿತು. ದೇಶವಾಗಲೀ (Space), ಕಾಲವಾಗಲೀ (Time) ಯಾವುದೂ ನಿರಪೇಕ್ಷವಾದುವುಗಳಲ್ಲ (Absolute); ಎರಡೂ ಸಾಪೇಕ್ಷ ಎಂದು ದಿಟ್ಟವಾಗಿ ಹೇಳಿತ್ತು ಆ ಸಿದ್ಧಾಂತ. ಇದರ ಅರ್ಥವೇನು ಎಂಬುದನ್ನು ಸ್ವಲ್ಪ ಆಲೋಚಿಸೋಣ. ನಿಮ್ಮ ಮನೆಯ ಮುಂದಿರುವ ರಸ್ತೆಯ ಉದ್ದ 300 ಮೀಟರ್‍ ಎಂದು ಇಟ್ಟುಕೊಳ್ಳಿ.

ನಮ್ಮ ನಂಬಿಕೆಯ ಪ್ರಕಾರ ಸಕಲ ಜನರಿಗೂ ನಮ್ಮೂರ ರಸ್ತೆ ಅಷ್ಟೇ ಉದ್ದ. ಆದರೆ ಈ ನಂಬಿಕೆ ತಲೆಕೆಳಗಾಯಿತು. ಸಾಪೇಕ್ಷ ಸಿದ್ಧಾಂತದ ಪ್ರಕಾರ ಅದು ನಿಮಗೆ ಅಂದರೆ ಸ್ಥಿರವಾಗಿ ನಿಂತ ಜನಕ್ಕೆ ಮಾತ್ರ 300 ಮೀಟರ್. ಆದರೆ ನೀವು ಬಹುವೇಗದಲ್ಲಿ ಚಲಿಸುವ ಕ್ಷಿಪಣಿಯೊಂದರಲ್ಲಿ ಕುಳಿತು ರಸ್ತೆಯ ಉದ್ದವನ್ನು ಅಳೆದರೆ ಅದು ಕಡಿಮೆಯಾಗಿ ಕಾಣುತ್ತದೆ. ನಿಮ್ಮ ವೇಗ ಸೆಕೆಂಡಿಗೆ 2 ಲಕ್ಷ ಕಿಲೋಮೀಟರ್‍ ಆದಾಗ ರಸ್ತೆಯ ಉದ್ದ 222 ಮೀಟರ್‍ ಆಗುತ್ತದೆ.

ಒಂದು ಪಕ್ಷ ನೀವು ಬೆಳಕಿನ ವೇಗದಲ್ಲಿ, ಅಂದರೆ ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಚಲಿಸಿದ್ದೇ ಆದರೆ ರಸ್ತೆಯ ಉದ್ದ ಸೊನ್ನೆ ಆಗುತ್ತದೆ. ಅಂದರೆ ಯಾವುದೇ ವಸ್ತುವಿನ ಉದ್ದ ಅದನ್ನು ಅಳೆಯುವವರ ವೇಗವನ್ನು ಅವಲಂಬಿಸಿರುತ್ತದೆ. ಕಾಲದ ಕತೆಯೂ ಇದೇ. ನಮಗೆ 15 ನಿಮಿಷ ಎನಿಸಿದ್ದು ಎಲ್ಲರಿಗೂ 15 ನಿಮಿಷ ಎಂಬ ಭಾವನೆ ಇದೆ ಅಲ್ಲವೇ? ಆದರೆ ಕ್ಷಿಪಣಿಯಲ್ಲಿ ವೇಗವಾಗಿ ಚಲಿಸುತ್ತಾ ಕಾಲವನ್ನು ಅಳೆದರೆ ಅದು ಕಡಿಮೆಯಾಗಿ ಕಾಣುತ್ತದೆ.

- Advertisement -

ನೀವು ಬೆಳಕಿನ ವೇಗದಲ್ಲಿ ಚಲಿಸಿದರೆ ಕಾಲ ಸವೆಯುವುದೇ ಇಲ್ಲ. ಇದು ‘ವಿಶೇಷ ಸಾಪೇಕ್ಷ ಸಿದ್ಧಾಂತ’ದ ಸಾರಾಂಶ. ಆದರೆ ಇವು ಯಾವುವೂ ಸಾಮಾನ್ಯವಾಗಿ ನಮ್ಮನ್ನು ತಗುಲುವುದಿಲ್ಲ. ಕಾರಣ ನಾವು ಸ್ಥಿರವಾಗಿರುತ್ತೇವೆ ಅಥವಾ ನಾವು ಚಲಿಸಿದರೂ ನಮ್ಮ ವೇಗ ಬೆಳಕಿನ ವೇಗದ ಕಿಂಚಿತ್ ಭಾಗ ಮಾತ್ರ.

ಈ ಸಿದ್ಧಾಂತವನ್ನು ಕೊಟ್ಟಾಗ ಐನ್‌ಸ್ಟೈನ್ ಬೆರ್ನ್ ನಗರದಲ್ಲಿ ಪೇಟೆಂಟ್‌ ಕಚೇರಿಯ ಗುಮಾಸ್ತನ ಹುದ್ದೆಯಲ್ಲಿದ್ದರು. ಅವರ ಖ್ಯಾತಿ ಹರಡಿದಂತೆ ಅವರಿಗೆ ಉತ್ತಮ ಪದವಿಗಳು ದೊರೆತವು. ಕೊನೆಗೆ ಅವರು ಬರ್ಲಿನ್ ನಗರದಲ್ಲಿ ಪ್ರಾಧ್ಯಾಪಕರಾದದ್ದಲ್ಲದೆ, ‘ಪ್ರಷ್ಯಾ ಅಕಾಡೆಮಿ’ಯ ಅಧ್ಯಕ್ಷರೂ ಆದರು. ಪ್ರತಿವಾರ ಬರ್ಲಿನ್‌ನ ಸರ್ಕಾರೀ ಪುಸ್ತಕ ಭಂಡಾರದಲ್ಲಿ ವಿಜ್ಞಾನಿಗಳ ವಿದ್ವತ್‌ ಸಭೆ ಜರುಗುತ್ತಿತ್ತು.

ಸುಮಾರು ಐವತ್ತು ಮಂದಿ ಅಲ್ಲಿ ಚರ್ಚೆ ನಡೆಸುತ್ತಿದ್ದರು. 1915ರ ನವೆಂಬರಿನಲ್ಲಿ ಐನ್‌ಸ್ಟೈನ್ ಗುರುತ್ವದ ತಮ್ಮ ಸಂಶೋಧನೆಯ ಬಗ್ಗೆ ನಾಲ್ಕು ದಿನ ಮಾತನಾಡಿದರು. ಆಲಿಸಿದ ವಿಜ್ಞಾನಿಗಳು ಬೆಚ್ಚಿಬಿದ್ದರು ಎಂದರೆ ಅತಿಶಯವಲ್ಲ. ಇಲ್ಲಿ ಮಂಡಿಸಲಾಗಿದ್ದು ಐನ್‌ಸ್ಟೈನ್‌ರ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (General Theory of Relativity). ಇಲ್ಲಿ ಗುರುತ್ವಕ್ಕೆ ಯಾರೂ ಊಹಿಸಲಾಗದ ಅರ್ಥವನ್ನು ನೀಡಲಾಗಿತ್ತು.ವಿಜ್ಞಾನಿಗಳಿಗೂ ಇದು ಕಬ್ಬಿಣದ ಕಡಲೆಯಾಗಿತ್ತು. ಮುಂದೆ ಬಂದ ವರ್ಷದಲ್ಲಿ ಅದು ಪಂಡಿತ ಪ್ರಬಂಧವಾಗಿ ಪ್ರಕಟವಾಯಿತು.

1905ರಲ್ಲಿ ‘ವಿಶೇಷ ಸಾಪೇಕ್ಷ ಸಿದ್ಧಾಂತ’ದಲ್ಲಿ ಐನ್‌ಸ್ಟೈನ್ ಒಂದು ನಿರ್ದಿಷ್ಟ ವೇಗದಲ್ಲಿ ಮುಂದುವರೆಯುವ (Uniform Motion) ಚಲನೆಯನ್ನು ಪರಿಗಣಿಸಿದ್ದರು. ಈಗ ಅವರು ತಮ್ಮ ಸಿದ್ಧಾಂತವನ್ನು ವೇಗೋತ್ಕರ್ಷಕ್ಕೆ (Accelerating Systems) ಒಳಗಾದ ಚಲನೆಗೆ ವಿಸ್ತರಿಸಿದ್ದರು. ಈ ಸಿದ್ಧಾಂತದ ನೂರಾ ಆರನೆಯ ಹುಟ್ಟುಹಬ್ಬ ಈ ವರ್ಷ. ಜಗತ್ತಿನ ವಿಜ್ಞಾನ ವಲಯಗಳಲ್ಲಿ ವಿಶೇಷ ಆಚರಣೆಗಳು, ವಿದ್ವತ್‌ ಗೋಷ್ಠಿಗಳು ಈ ವರ್ಷದ ಉದ್ದಕ್ಕೂ ನಡೆಯುತ್ತಿವೆ.

ಈ ಸಿದ್ಧಾಂತಕ್ಕೆ ಏಕೆ ಇಂತಹ ಮನ್ನಣೆ? ಐನ್‌ಸ್ಟೈನ್‌ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರೆಂದು, ಅವರ ಮೆದುಳಿನಲ್ಲಿ ಏನೋ ವಿಶೇಷ ಇದೆ ಎಂದೆಲ್ಲಾ ಜನ ನುಡಿಯುವುದಕ್ಕೆ ಕಾರಣವೇನು? ಮೊದಲಿಗೆ ಅವರು ಕಾಲ ದೇಶದ ಬಗ್ಗೆ ಇದ್ದ ನಮ್ಮ ನಂಬಿಕೆಯನ್ನು ಅಲ್ಲಾಡಿಸಿದರು. ನಂತರ ಅವರು ಗುರುತ್ವದ ಬಗ್ಗೆ ಬೆಳಕು ಚೆಲ್ಲಿದರು. ಗೆಲಿಲಿಯೋ ಮತ್ತು ಇನ್ನೊಬ್ಬ ಪ್ರಚಂಡ ವಿಜ್ಞಾನಿ ಐಸಾಕ್‌ ನ್ಯೂಟನ್ ನಾಲ್ಕುನೂರು ವರ್ಷಗಳ ಹಿಂದೆ ಗುರುತ್ವವನ್ನು ಅರಿಯುವ ಪ್ರಯತ್ನ ಮಾಡಿದರು.

ಇಲ್ಲಿ ವಿಜಯಿಯಾಗಿದ್ದು ನ್ಯೂಟನ್. ಮರದಿಂದ ಸೇಬಿನ ಹಣ್ಣು ಕೆಳಕ್ಕೆ ಬೀಳುವುದಕ್ಕೆ ಕಾರಣ ಭೂಮಿ ಅದರ ಮೇಲೆ ತನ್ನ ಗುರುತ್ವವನ್ನು ಹೇರುವುದರಿಂದ ಎಂದು ನ್ಯೂಟನ್ ಹೇಳಿದ. ಅಲ್ಲಿಗೆ ನಿಲ್ಲಲಿಲ್ಲ ಅವನ ಪ್ರತಿಭೆ. ಮುಂದುವರೆದು ಅವನು ಹೇಳಿದ, ‘ಸೇಬು ಮತ್ತು ಭೂಮಿಯ ನಡುವೆ ವರ್ತಿಸುವ ಗುರುತ್ವ ಬಲ ಭೂಮಿ ಮತ್ತು ಚಂದ್ರರ ನಡುವೆಯೂ ವರ್ತಿಸುತ್ತದೆ. ಚಂದ್ರ ಮತ್ತು ಇತರೆ ಬಾಹ್ಯಾಕಾಶ ವಸ್ತುಗಳು ತಂತಮ್ಮ ಕಕ್ಷೆಗಳಲ್ಲಿ ಸುತ್ತುವುದಕ್ಕೆ ಗುರುತ್ವವೇ ಕಾರಣ’. ನ್ಯೂಟನ್ನನ ಸಿದ್ಧಾಂತದ ಪ್ರಕಾರ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ. ಈ ವಿವರಣೆ ಎಲ್ಲರ ಸಮ್ಮತಿ ಪಡೆದು ಜಾರಿಯಲ್ಲಿತ್ತು.

ಐನ್‌ಸ್ಟೈನ್‌ ಇದಕ್ಕೆ ಭಿನ್ನವಾದ ವಿವರಣೆ ನೀಡಿದರು. ಅದು ಗಣಿತದಿಂದ ಮೂಡಿಬಂದದ್ದು. ಅವರ ಪ್ರಕಾರ ನಮ್ಮ ವಿಶ್ವವನ್ನು ನಾವು ನಾಲ್ಕು ಆಯಾಮಗಳ ಚೌಕಟ್ಟಿನಲ್ಲಿ ನಮೂದಿಸಬಹುದು. ಇವೆಂದರೆ ದೇಶಕ್ಕೆ ಸಂಬಂಧಿಸಿದ x,y, z ಮತ್ತು ಕಾಲಕ್ಕೆ ಸಂಬಂಧಿಸಿದ t. ಇವರ ಸಿದ್ಧಾಂತದ ಪ್ರಕಾರ ವಿಶ್ವ ಈ ದೇಶ-ಕಾಲದ ಜಾಲದಲ್ಲಿ ತನ್ನ ಅಸ್ತಿತ್ವ ತಾಳಿದೆ. ನಾವು ಮೂರು ಆಯಾಮಗಳನ್ನು ಸುಲಭವಾಗಿ ಗ್ರಹಿಸಬಹುದು; ನಾಲ್ಕು ಆಯಾಮಗಳನ್ನು ಊಹಿಸುವುದು ಕಷ್ಟವೇ. ಆದರೆ ಗಣಿತದಲ್ಲಿ ಈ ಸಮಸ್ಯೆ ತಲೆದೋರುವುದಿಲ್ಲ. ಅಲ್ಲಿ ಎಷ್ಟು ಆಯಾಮಗಳಾದರೂ ಸರಿಯೇ.

ಗುರುತ್ವದ ಬಗ್ಗೆ ಐನ್‌ಸ್ಟೈನ್‌ರ ಕೊಡುಗೆಯನ್ನು ಅರ್ಥಮಾಡಿಕೊಳ್ಳಲು ಹಾಸಿಗೆಯೊಂದನ್ನು ತೆಗೆದುಕೊಳ್ಳೋಣ. ಇಲ್ಲಿ ನಾಲ್ಕು ಆಯಾಮಗಳಿಲ್ಲ. ಆದರೂ ತೊಂದರೆಯಿಲ್ಲ. ಈ ಹಾಸಿಗೆಯೇ ದೇಶ-ಕಾಲದ ಜಾಲ. ಇದರ ಮೇಲೆ ನಮ್ಮ ವಿಶ್ವವಿದೆ. ಹಾಸಿಗೆಯ ಮೇಲೆ ಭಾರವಾದ ವಸ್ತುವನ್ನು ಇರಿಸಿದರೆ ಏನಾಗುತ್ತದೆ? ಹಾಸಿಗೆ ಜಜ್ಜಿ ಹೋಗಿ ವಕ್ರತೆಯನ್ನು ಪಡೆದುಕೊಳ್ಳುತ್ತದೆ. ಈ ವಕ್ರತೆಯೇ ಗುರುತ್ವ ಎಂದರು ಐನ್‌ಸ್ಟೈನ್‌. ಈ ಪ್ರದೇಶದಲ್ಲಿ ಯಾವುದಾದರೂ ವಸ್ತು ಪ್ರವೇಶಿಸಿದರೆ ಅದು ವಕ್ರತೆಯನ್ನು ಅನುಸರಿಸಿ ಸಾಗುತ್ತದೆ.

ಮರದ ಮೇಲಿನಿಂದ ಕಳಚಿಕೊಂಡ ಸೇಬು ಭೂಮಿಯ ಸುತ್ತಾ ಇರುವ ದೇಶ–ಕಾಲದ ವಕ್ರ ಪ್ರದೇಶವನ್ನು ಸೇರಿತು. ಅದನ್ನು ಅನುಸರಿಸಿ ಕೆಳಗೆ ಬಿತ್ತು. ಇನ್ನು ಚಂದ್ರನ ಪಾಡೂ ಅಷ್ಟೆ. ಮಿಕ್ಕ ಗ್ರಹಗಳ ಪಾಡೂ ಇದೇ ಆಗಿದೆ. ಅಂದರೆ ನ್ಯೂಟನ್‌ಗೆ ಗುರುತ್ವ ಎರಡು ವಸ್ತುಗಳ ನಡುವಿನ ಆಕರ್ಷಣೆ ಆಯಿತು. ಐನ್‌ಸ್ಟೈನ್‌ರಿಗೆ ಎರಡು ವಸ್ತುಗಳ ಅಗತ್ಯ ಇರಲಿಲ್ಲ. ಪ್ರತಿ ವಸ್ತುವೂ ತನ್ನ ಸುತ್ತಾ ತನ್ನ ಗುರುತ್ವವನ್ನು ನಿರ್ಮಿಸಿಕೊಳ್ಳುತ್ತದೆ. ವಸ್ತುವಿನ ದ್ರವ್ಯರಾಶಿ ಹೆಚ್ಚಾದರೆ ವಕ್ರತೆ ಹೆಚ್ಚು, ಕಡಿಮೆಯಾದರೆ ವಕ್ರತೆ ಕಡಿಮೆ.

ಒಬ್ಬ ಮನುಷ್ಯನ ಸುತ್ತಾ ಉಂಟಾಗುವ ವಕ್ರತೆ ತೀರಾ ಕಡಿಮೆ. ಆದ್ದರಿಂದ ನಾವು ಸೇಬು ಭೂಮಿಗೆ ಬಿದ್ದಂತೆ ಮತ್ತೊಬ್ಬರತ್ತ ಧಾವಿಸುವುದಿಲ್ಲ. ಒಂದು ಪಕ್ಷ ಹಾಗೆ ಧಾವಿಸಿದರೆ ಅದಕ್ಕೆ ಗುರುತ್ವ ಕಾರಣವಲ್ಲ; ಮತ್ತಾವುದೋ ಸೆಳೆತ ಇರಬೇಕು! ಭೂಮಿಯ ದ್ರವ್ಯರಾಶಿ ಅಪಾರ. ಹೀಗಾಗಿ ಭೂಮಿಯ ಗುರುತ್ವದ ಶಕ್ತಿಯೂ ಅಪಾರ. ಸೂರ್ಯನದೂ ಹೀಗೆಯೇ.

ಐನ್‌ಸ್ಟೈನ್‌ ವಿಶ್ಲೇಷಣೆಗೆ ತಲೆದೂಗಿದರಷ್ಟೆ ವಿಜ್ಞಾನಿಗಳು. ಅರ್ಥವಾದದ್ದು ಕೆಲವರಿಗೆ ಮಾತ್ರ. ಸಿದ್ಧಾಂತದ ಬಗ್ಗೆ ಎಲ್ಲೆಲ್ಲೂ ವಿಶೇಷ ಪ್ರಚಾರ ಸಿಕ್ಕಿತು. ಐನ್‌ಸ್ಟೈನ್‌ ತಮ್ಮ ಕೊಠಡಿಯಿಂದ ಹೊರಬಂದು ಜನಪ್ರಿಯರಾದರು. ದೇಶ ವಿದೇಶಗಳ ರಾಜ, ರಾಣಿಯರು, ಚಲನಚಿತ್ರ ನಟ, ನಟಿಯರು ಅವರ ಸ್ನೇಹ ಬಯಸಿದರು, ಪಡೆದರು. ಐನ್‌ಸ್ಟೈನ್‌ ಮನೆಮಾತಾದರು. ಅವರ ಹಸ್ತಾಕ್ಷರಕ್ಕೆ, ಅವರೊಡನೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಹಣ ತೆತ್ತರು ಜನ.

ರುಜುವಾತು

ಪ್ರಯೋಗಗಳ ಮೂಲಕ ರುಜುವಾತಾಗದ ಸಿದ್ಧಾಂತ ಕೇವಲ ಸಿದ್ಧಾಂತ. ವಿಜ್ಞಾನಿ ತನ್ನ ಕೋಣೆಯಲ್ಲಿ ಕುಳಿತು ಸಮೀಕರಣಗಳನ್ನು ಬರೆದು ಸಿದ್ಧಾಂತಗಳನ್ನು ನಿರೂಪಿಸಬಹುದು. ಆದರೆ, ಪ್ರಯೋಗ ಅವನ್ನು ದೃಢಪಡಿಸಬೇಕು. 1919ರಲ್ಲಿ ಐನ್‌ಸ್ಟೈನ್‌ರ ಸಿದ್ಧಾಂತ ಪರೀಕ್ಷೆಗೆ ಒಳಪಟ್ಟಿತು.

ಸಿದ್ಧಾಂತದ ಪ್ರಕಾರ ಬಲಿಷ್ಟ ಗುರುತ್ವದ ಮೂಲಕ ಹಾದುಹೋಗುವ ಬೆಳಕಿನ ಕಿರಣ ಬಗ್ಗುತ್ತದೆ* ಇದನ್ನು ಪರೀಕ್ಷಿಸಬಹುದು ಎಂದು ಇಂಗ್ಲೆಂಡಿನ ಖ್ಯಾತ ವಿಜ್ಞಾನಿ ಸರ್‍ ಆರ್ಥರ್‍ ಎಡಿಂಗ್ಟನ್‍ ಅವರಿಗೆ ತೋರಿತು. ಸೂರ್ಯನ ದ್ರವ್ಯರಾಶಿ ಹೆಚ್ಚು; ಆದ್ದರಿಂದ ಅದರ ಸುತ್ತಿನ ವಕ್ರತೆ ಅಥವಾ ಗುರುತ್ವವೂ ಹೆಚ್ಚು. ದೂರದ ನಕ್ಷತ್ರದಿಂದ ಇತ್ತ ಬಂದ ಕಿರಣ ಬಾಗಬೇಕು. ಇದನ್ನು ಅಳೆದು ನೋಡುವುದು ಸಾಧ್ಯವೇ? ಅಲ್ಲೊಂದು ಸಮಸ್ಯೆ ಇದೆ.

ಸೂರ್ಯನ ಬಳಿ ಬಂದ ಕಿರಣವನ್ನು ನೋಡುವುದಾದರೂ ಹೇಗೆ? ಸೂರ್ಯನ ಬೆಳಕೇ ಅಷ್ಟಿರುವಾಗ? ವಿಜ್ಞಾನಿಗಳು ಲೆಕ್ಕಹಾಕಿದರು. ಪೂರ್ಣ ಸೂರ್ಯಗ್ರಹಣ ಇದ್ದಾಗ ಪ್ರಯೋಗ ನಡೆಸುವುದು ಲೇಸು. ಸೂರ್ಯನ ಬೆಳಕು ಮುಚ್ಚಿಹೋಗಿರುತ್ತದೆ. ಅಂತಹ ಅವಕಾಶ ದೊರಕಿತು.

ಎಡಿಂಗ್ಟನ್ ಪೋರ್ಚುಗಲ್‌ನಲ್ಲಿ ಗ್ರಹಣವಾದಾಗ ಫೋಟೋಗಳನ್ನು ತೆಗೆದು ಸಾರಿದರು– ‘ಐನ್‌ಸ್ಟೈನ್‌ರ ಸಿದ್ಧಾಂತ ಶೇಕಡಾ 100 ರಷ್ಟು ಸಮರ್ಪಕ’ ಎಂದು. ಮತ್ತೊಬ್ಬ ನ್ಯೂಟನ್ ಜನಿಸಿದ ಎಂದು ವಿಜ್ಞಾನಿಗಳು ಹಿಗ್ಗಿದರು. ಇದಲ್ಲದೆ ಕಳೆದ ನೂರು ವರ್ಷಗಳಲ್ಲಿ ಇನ್ನೂ ಉತ್ಕೃಷ್ಟ ಎನ್ನಬಹುದಾದ ಪ್ರಯೋಗಗಳನ್ನು ನಡೆಸಲಾಗಿದೆ. ಪ್ರತಿಯೊಂದರಲ್ಲೂ ಐನ್‌ಸ್ಟೈನ್‌ ಸಿದ್ಧಾಂತ ಜಯಶಾಲಿಯಾಗಿದೆ.

ಪರಿಣಾಮಗಳು

ಸಾಪೇಕ್ಷ ಸಿದ್ಧಾಂತದ ಪರಿಣಾಮಗಳು ಅನೇಕ. ಇದರ ಪರಿಣಾಮವಾಗಿ ವಿಶ್ವವಿಜ್ಞಾನ (Cosmology) ಎಂಬ ಪ್ರಭೇದವೇ ಪ್ರಾರಂಭವಾಯಿತು. ಇರಬಹುದಾದ ಕೋಟ್ಯಂತರ ಸೂರ್ಯರನ್ನೊಳಗೊಂಡ ಬ್ರಹ್ಮಾಂಡ ಇದರ ವ್ಯಾಪ್ತಿ; ಕೇವಲ ನಮ್ಮ ಸೌರವ್ಯೂಹವಲ್ಲ. ಈ ಬ್ರಹ್ಮಾಂಡ ದಿನೇದಿನೇ ಉಬ್ಬುತ್ತಿದೆ; ಇದು ಸ್ಥಿರ ಗಾತ್ರದ ಬ್ರಹ್ಮಾಂಡವಲ್ಲ ಎಂಬುದು ಈ ಅಧ್ಯಯನಗಳಿಂದ ಹೊರಬಂದಿದೆ.

ನಮ್ಮ ಬ್ರಹ್ಮಾಂಡ ನಿನ್ನೆ ಇವತ್ತಿಗಿಂತ ಚಿಕ್ಕದಾಗಿತ್ತು, ಮೊನ್ನೆ ಇನ್ನೂ ಚಿಕ್ಕದು. ಹೀಗೆ ಹಿಂದಕ್ಕೆ ಹೋಗುತ್ತಾ ಇದ್ದರೆ ಒಮ್ಮೆ ಅದು ಕೇವಲ ಒಂದು ಬಿಂದುವಾಗಿತ್ತು ಅಲ್ಲವೇ? ಹೌದು, ಅದು ನಿಜ. 13.7 ಬಿಲಿಯನ್ ವರ್ಷಗಳ ಹಿಂದೆ ಉಂಟಾದ ಒಂದು ಆಸ್ಫೋಟದಿಂದ ನಮ್ಮ ಬ್ರಹ್ಮಾಂಡದ ಉದಯವಾಯಿತು ಎನ್ನಲಾಗಿದೆ (Big Bang theory).

ಸೂರ್ಯನಲ್ಲಿ ಅಪಾರ ಪ್ರಮಾಣದ ಬೈಜಿಕ ಕ್ರಿಯೆ (Nuclear Reaction) ನಡೆಯುತ್ತಿದ್ದು ಅದೇ ನಮಗೆ ಬೆಳಕನ್ನು ಕೊಡುತ್ತಿದೆ. ಅಲ್ಲದೆ ಸೂರ್ಯನಲ್ಲಿ ಗುರುತ್ವವೂ ಅಪಾರ. ಇವೆರಡೂ ಒಂದು ಬಗೆಯ ಸಮತೋಲನವನ್ನು ಸಾಧಿಸಿವೆ.

ಆದರೆ ಕಾಲಕ್ರಮೇಣ ಬೈಜಿಕ ಕ್ರಿಯೆ ಕಡಿಮೆ ಆಗುತ್ತದೆ, ನಂತರ ನಿಂತೂ ಹೋಗುತ್ತದೆ. ಹೀಗಾದಾಗ ಗುರುತ್ವ ಮಿತಿಮೀರಿ ಸೂರ್ಯನ ಗಾತ್ರ ಕುಗ್ಗುತ್ತದೆ. ಆಗ ಹತ್ತಿರ ಬಂದ ಯಾವ ವಸ್ತುವನ್ನಾದರೂ ಅದು ಹೀರಿಕೊಳ್ಳುತ್ತದೆ. ನಂತರ ಆ ವಸ್ತು ಹೊರಬರಲಾಗದು. ಬೆಳಕಿನ ಕಿರಣ ಕೂಡ ಒಳಹೋದರೆ ಹೊರಬರದು. ಸೂರ್ಯನ ಈ ಅವಸ್ಥೆಯೇ ಕಪ್ಪುಕುಳಿ (Black Hole).

ಇವಲ್ಲದೆ ಇನ್ನೂ ಅನೇಕ ಅಧ್ಯಯನಗಳಿಗೆ ಐನ್‌ಸ್ಟೈನ್‌ರ ಸಾಪೇಕ್ಷ ಸಿದ್ಧಾಂತ ದಾರಿಮಾಡಿಕೊಟ್ಟಿದೆ. ನಮಗಂಟಿ ಬಂದ ಹಲವಾರು ನಂಬಿಕೆಗಳನ್ನು, ಕಾಮನ್ ಸೆನ್ಸ್‍ ಎಂದು ನಾವು ನಂಬುತ್ತಿದ್ದ ವಿಷಯಗಳನ್ನು, ನಮಗೆ ತೀರಾ ಸಹಜ ಎನ್ನಿಸುವ ‘ಸತ್ಯ’ಗಳನ್ನು ಪ್ರಶ್ನಿಸಿ ಐನ್‌ಸ್ಟೈನ್‌ ತಮ್ಮದೇ ದಾರಿಯನ್ನು ಹಿಡಿದರು. ಆದ್ದರಿಂದಲೇ ಅವರು ಹೊಸ ಸತ್ಯಗಳನ್ನು ಕಂಡರು. ಅವರಿವರ ವೃಥಾ ಖಂಡನೆಗೆ ಕಿವಿಗೊಡಲಿಲ್ಲ. ಇಂತಹ ವ್ಯಕ್ತಿಯ ಸಿದ್ಧಾಂತದ ಶತಮಾನೋತ್ಸವ ಇದು.

“ಹೊರಟ ಹೊರಟೇ ಹೊರಟ, ಹೊರಟನೆತ್ತೋ, ಸಾಹಸಿಯ ಗೊತ್ತು ಗುರಿ ಇವಗೂ ಗೊತ್ತೋ” ಎನ್ನುವ ಬುದ್ಧನ ಬಗೆಗಿನ ಬೇಂದ್ರೆಯವರ ಅಮೃತವಾಕ್ಕು ಐನ್‌ಸ್ಟೈನ್‌ ಪಾಲಿಗೂ ಹೊಂದುತ್ತದೆ.

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಸಿಡ್ನಿ ಶ್ರೀನಿವಾಸ್‌ ಮೂಲತಃ ಬೆಂಗಳೂರಿನವರು. ಕನ್ನಡದ ಕಥೆಗಾರರು. ಸಿಡ್ನಿ ವಿಶ್ವವಿದ್ಯಾಲಯದ ‘ಏರೋಸ್ಪೇಸ್‌ ಅಂಡ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌’ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮೂರು ದಶಕ ಸೇವೆ ಸಲ್ಲಿಸಿದ್ದಾರೆ. ಕನ್ನಡ – ಇಂಗ್ಲಿಷ್‌ನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಐದು ಪುಸ್ತಕ ಪ್ರಕಟಿಸಿದ್ದಾರೆ.

ಸಂಗ್ರಹ : ಎಮ್ ವೈ ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group