spot_img
spot_img

ಯೋಗ ಮಾಡುವವರೆಲ್ಲ ಯೋಗಿಗಳಲ್ಲ, ಮಾಡದಿರುವವರೆಲ್ಲ ರೋಗಿಗಳಲ್ಲ

Must Read

- Advertisement -

ಆಧ್ಯಾತ್ಮದ ಪ್ರಕಾರ ಯೋಗ ಎಂದರೇನು? ಯೋಗಿಗಳ ದೇಶವನ್ನ ಯೋಗಿಗಳೇ ನಡೆಸಬೇಕಾದರೆ,ಮಾನವ ಯೋಗಿಯಂತಿರಬೇಕು. ಯೋಗ್ಯತೆಗೆ ತಕ್ಕ ಅಧಿಕಾರ ಪಡೆದು ಯೋಗ್ಯರೀತಿಯಲ್ಲಿ ದುಡಿದು ಜೀವನ ಮಾಡಿದವರಿಗೆ ಯೋಗ ಬರುತ್ತದೆ. ಅಂದರೆ ಇಲ್ಲಿ ಮಾನವನಿಗೆ ಆರೋಗ್ಯ ಹೆಚ್ಚಾಗಲು ಯೋಗ್ಯತೆಗೆ ತಕ್ಕಂತೆ ಜೀವನ ನಡೆಸಬೇಕು.

ನಮ್ಮ ಯೋಗ್ಯತೆ ನಮ್ಮ ಮೂಲ ಶಿಕ್ಷಣದಿಂದಲೇ ಕಂಡು ಹಿಡಿದು ಅದಕ್ಕೆ ತಕ್ಕಂತೆ ವೃತ್ತಿ ಶಿಕ್ಷಣ ನೀಡುತ್ತಿದ್ದ ಕಾಲವಿತ್ತು. ಒಳಗೊಂದು ಶಕ್ತಿ ಹೊರಗೊಂದು ಶಕ್ತಿ ಕೂಡಿಕೊಂಡು ಎರಡೂ ವಿರುದ್ದ ದಿಕ್ಕಿನಲ್ಲಿ ನಡೆದಾಗಲೆ ಯೋಗ ಕೂಡಿ ಬರದೆ ಸಂಕಷ್ಟ ಹೆಚ್ಚುವುದು.

ದೈಹಿಕ ಆರೋಗ್ಯ ಮಾನಸಿಕ ಆರೋಗ್ಯವನ್ನು ಅವಲಂಬಿಸಿದೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಎಷ್ಟೇ ಕೆಲಸಮಾಡಿದರೂ, ಓದಿ ತಿಳಿದರೂ ಒಳಗಿನ ಶಕ್ತಿಗೆ ವಿರುದ್ದವಾಗಿರುವಾಗ ಅದೊಂದು ದಿನ ರೋಗವಾಗಿ ಮಾನವನಿಗೆ ಕಾಡುತ್ತದೆ.

- Advertisement -

ಜ್ಞಾನವಿಜ್ಞಾನದ ಅಂತರದಲ್ಲಿ ಬೆಳೆದಿರುವ ಅಜ್ಞಾನದಿಂದ ಮಾನವನಿಗೆ ಅರ್ಧಸತ್ಯದ ವಿಚಾರಗಳಷ್ಟೆ ತಿಳಿಯುವಂತಾಗಿದೆ. ಈಗ ಪೂರ್ಣಸತ್ಯ ತಿಳಿಯುವುದಕ್ಕೂ ಯೋಗವಿರಬೇಕು.

ಅಧ್ಯಾತ್ಮದ ಯೋಗದ ಪ್ರಕಾರ ಜ್ಞಾನಯೋಗ,ರಾಜಯೋಗ, ಭಕ್ತಿ ಯೋಗ,ಕರ್ಮಯೋಗ. ಇವುಗಳನ್ನು ಯೋಗಾಸನ ಮಾಡಿ ತಿಳಿಯಲಾಗಿಲ್ಲ. ಯೋಗಾಸನವು ಎಲ್ಲಾ ದೇಶದವರೂ ಒಂದೆ ಸಮನಾಗಿ ಮಾಡಬಹುದು.ಆದರೆ ಮೇಲಿನ ಯೋಗವನ್ನರಿಯಲು ನಮ್ಮಲ್ಲಿ ಜ್ಞಾನವಿರಬೇಕೆನ್ನುತ್ತಾರೆ.

ಯೋಗ್ಯ ರೀತಿಯಲ್ಲಿ ಜೀವನ ನಡೆಸೋದೆಂದರೆ ವಿಜ್ಞಾನ ಜಗತ್ತು ಬೇರೆ ತಿಳಿಸುತ್ತದೆ ಹಾಗೆಯೇ ಆಧ್ಯಾತ್ಮ ಜಗತ್ತು ಬೇರೆ ತಿಳಿಸುತ್ತದೆ.ಇವುಗಳ ಮಧ್ಯೆ ನಿಂತ ಮಾನವನಿಗೆ ಯಾವುದು ಯೋಗ ಎಂದು ತಿಳಿಯುವ ಸಾಮಾನ್ಯಜ್ಞಾನ ವಿದ್ದರೆ ತನ್ನೊಳಗೇ ಇರುವ ಯೋಗ್ಯತೆಯನ್ನು  ಶಿಕ್ಷಣದಿಂದ ಬೆಳೆಸಿಕೊಂಡು ಸ್ವತಂತ್ರ ಯೋಗಿಯಾಗಬಹುದು.

- Advertisement -

ಒಟ್ಟಿನಲ್ಲಿ ಯೋಗ ಎಂದರೆ ಸೇರುವುದು ಎಂದರ್ಥ. ಮನಸ್ಸು ಆತ್ಮ ಎರಡೂ ಸೇರಿ ಯೋಗ. ಜೀವಾತ್ಮ ಪರಮಾತ್ಮನ ಸೇರುವಿಕೆಯಿಂದ ಮುಕ್ತಿಗೆ ಯೋಗ. ದೇಶ ಹಾಗು ದೇಹದೊಳಗಿನ ಜ್ಞಾನ ಒಂದೆ ಆದಾಗ ಯೋಗಿ.

ಪೋಷಕರ ಜ್ಞಾನ ಮಕ್ಕಳ ಜ್ಞಾನ ಒಂದಾದಾಗ ಯೋಗ್ಯ ಜೀವನ. ಎಲ್ಲಿಯವರೆಗೆ ಒಂದನ್ನು ಬಿಟ್ಟು ಇನ್ನೊಂದು ನಡೆಯುವುದೋ ಅದರಿಂದ ಆರೋಗ್ಯ ಕೆಟ್ಟು ಅತಂತ್ರಸ್ಥಿತಿಗೆ ತಲುಪಿ ಅಯೋಗ್ಯರ ಸಂಖ್ಯೆ ಬೆಳೆಯುತ್ತದೆ. ದೇಶದೊಳಗೆ ಇರುವ ಎಲ್ಲಾ ಯೋಗಿಗಳಿಂದ ದೇಶದ ಯೋಗ್ಯತೆ ಹೆಚ್ಚುತ್ತದೆ.

ಯೋಗದ ಹೆಸರಲ್ಲಿ ಅಯೋಗ್ಯರನ್ನು ಎತ್ತಿ ಏಣಿಗೇರಿಸಿದರೆ ಅಯೋಗ್ಯರ ಸಾಮ್ರಾಜ್ಯ. ಇದಕ್ಕೆ ಪ್ರಜೆಗಳಿಗೆ ಪ್ರಜಾಪ್ರಭುತ್ವದಲ್ಲಿ ಯೋಗ ಶಿಕ್ಷಣದ ಅಗತ್ಯವಿದೆ. ಯೋಗ ಕಲಿತವರೆಲ್ಲರೂ ಯೋಗಿಗಳಲ್ಲ. ಆರೋಗ್ಯ ರಕ್ಷಣೆಗಾಗಿ ಕಲಿತ ಯೋಗ ದೈಹಿಕವಾಗಿ ಬಲ ಕೊಟ್ಟಿದ್ದರೂ ಅದರೊಳಗೆ ರಾಜಕೀಯ ವ್ಯವಹಾರವಿದ್ದರೆ ರೋಗ ತಪ್ಪಿದ್ದಲ್ಲ.

ಹೀಗೇ ನಾವು ನಮ್ಮ ಯೋಗ ಶಕ್ತಿಯನ್ನು ಎರಡೂ ರೀತಿಯಲ್ಲಿ ಬೆಳೆಸಿ ಕೊಂಡಾಗಲೇ ಭಾರತ ಯೋಗಿಗಳ ದೇಶ.ಇಲ್ಲವಾದರೆ ಭೋಗಿಗಳ ದೇಶ ರೋಗಿಗಳ ದೇಶವಾಗುತ್ತದೆ. ಈಗಿನ ಸ್ಥಿತಿಗೆ ಕಾರಣವೆ ಯೋಗವಿಲ್ಲದ ಶಿಕ್ಷಣ. ಅಯೋಗ್ಯರ ರಾಜಕೀಯ.

ವಿದೇಶಿಗಳು ಆಚಿರಿಸುವ ಯೋಗದ ದಿನ ಯೋಗಿಗಳಿಂದ ತುಂಬಿದ್ದ ಭಾರತ ಆಚರಣೆಗೆ ತರಲು ಕಾರಣವೆ ನಾವೇ ನಮ್ಮೊಳಗಿದ್ದ ಯೋಗಿಗಳನ್ನು ಮರೆತು ವಿದೇಶದೆಡೆಗೆ ನಡೆದಿರೋದಲ್ಲವೆ? ಈಗ ತಿರುಗಿ ಬರಲು ನಮಗೇ ಕಷ್ಟವಾಗಿದೆ. ವಿದೇಶಿಗಳಿಗೆ ಅರ್ಥವಾಗಿದೆ.

ಯೋಗಿಗಳ ದೇಶವೀಗ ಭೋಗದೆಡೆಗೆ ನಡೆದು ರೋಗಕ್ಕೆ ತುತ್ತಾಗಿದೆ. ಇದನ್ನು ಯೋಗ ಮಾಡೋದ ರಿಂದ ಸರಿಪಡಿಸಬಹುದು. ಆದರೆ,ಇದು ಒಂದು ದಿನದ ಕಾರ್ಯಕ್ರಮ ಕ್ಕೆ ಬದಲು ದಿನನಿತ್ಯದ ಕಾರ್ಯ ಆದರೆ ಸರಿ. ಒಂದು ದಿನದ ಮಟ್ಟಿಗೆ ಹಲವಾರು ಸಂಘ ಸಂಸ್ಥೆಗಳು ಒಂದಾಗಿ ಯೋಗಾಭ್ಯಾಸ ನಡೆಸಿರುವುದು ಉತ್ತಮ ಬೆಳವಣಿಗೆ.

ಇದು ವರ್ಷಪೂರ್ಣ ಆಚರಣೆಯಲ್ಲಿರಬೇಕಾದರೆ ಯೋಗಶಿಕ್ಷಣ ಪ್ರತಿಯೊಂದು ಶಿಕ್ಷಣಸಂಸ್ಥೆಯಲ್ಲಿ ಕಡ್ಡಾಯಗೊಳಿಸಿ ಮಕ್ಕಳನ್ನ. ಯೋಗದಿಂದ ಯೋಗ್ಯ ರೀತಿಯಲ್ಲಿ ನಡೆಸಬಹುದು. ಆದರೆ,ನಮ್ಮಲ್ಲಿ ಕೇವಲ ಪ್ರಚಾರಮಾಡಲು ಕಾರ್ಯಕ್ರಮಗಳಿವೆ. ಅದನ್ನೇಆಚರಣೆಗೆ ತರುವವರ ಸಂಖ್ಯೆ ಕಡಿಮೆ. ಹೀಗಾಗಿದೇಶದ ಸಂಪತ್ತಾದ ಜ್ಞಾನ.

ಹಿಂದುಳಿದು ವಿದೇಶಿಜ್ಞಾನ ‌ಮುನ್ನಡೆದು ಈಗ ಇಡೀ ವಿಶ್ವವೇ ಭಾರತೀಯ ಯೋಗವನ್ನ ಎತ್ತಿಹಿಡಿದ ಯೋಗವನ್ನ ಒಂದುದಿನದ ಮಟ್ಟಿಗೆ ಆಚರಿಸಲೂ ನಮ್ಮಲ್ಲಿ ರಾಜಕೀಯ ಪಕ್ಷಗಳು ಪೈಪೋಟಿ ನಡೆಸಿದರೆ,ಇದು ಕೇವಲ ತೋರುಗಾಣಿಕೆಯಾಗುತ್ತದೆ.

ನಮ್ಮಹಿಂದಿನ ಮಹಾತ್ಮರಲ್ಲಿ ಯೋಗಾಭ್ಯಾಸ ವಿಲ್ಲದೆ ಯೋಗಿಗಳಾದವರಿದ್ದರು. ಇಂದು ಯೋಗಿಗಳ ಹೆಸರಲ್ಲಿ ಭೋಗಜೀವನ ‌ನಡೆಸಿ, ರೋಗಕ್ಕೆ ಒಳಗಾದವರ ಸಂಖ್ಯೆ ಬೆಳೆದಿದೆ ಎಂದರೆ ನಾವುಯೋಗವನ್ನ ತಿಳಿದಿದ್ದೆ ಸರಿಯಿಲ್ಲವೆ ತಿಳಿಸಿದವರೆ ಸರಿಯಿಲ್ಲವೆ? ನುಡಿದಂತೆ ನಡೆಯುವುದು ಯೋಗಿಗಳ ಲಕ್ಷಣ.

ಹಿಂದಿನ ಮಹಾತ್ಮ ರಂತೆ ಇಂದು ನಡೆಯಲು ಕಷ್ಟ. ಯೋಗಾಯೋಗದಿಂದ ಪಡೆದ ಹಣ,ಅಧಿಕಾರದಲ್ಲಿ ಯೋಗಿಗಳಂತೆ ಸತ್ಯ ಧರ್ಮದಿಂದ ಬದುಕಲು ಇಂದು ಬಹಳ ಕಷ್ಟ. ಅಂತವರು ‌ ವಿದೇಶಿ ರಾಜಕೀಯ ನಡೆನುಡಿ ,ವಸ್ತ್ರ, ಒಡವೆ,ವೈಭವದಲ್ಲಿ ಬದುಕಿದರೆ ಯೋಗದ ಅರ್ಥ ಬೇರೆಯಾಗುತ್ತದೆ.

ಆದರೂ ಕೆಲವು ವಿಚಾರಗಳು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆದಿರೋದು ಉತ್ತಮ ಕಾರ್ಯ. ಯಾರೇ ಹೇಗೇ ಯೋಗಾಭ್ಯಾಸ ಮಾಡಲಿ ಅದರ ಪರಿಣಾಮ ಸಮಾಜಕ್ಕೆ ಒಳ್ಳೆಯದಾದರೆ ಒಳ್ಳೆಯದು.

ಇದು ಪ್ರತಿಯೊಬ್ಬರೂ ತಿಳಿಯಲೆಂದೆ ಯೋಗದಿನದ ಆಚರಣೆಯ ಉದ್ದೇಶ. ಏನೇ ಇರಲಿ ದಿನವೂ ಇರೋ ಯೋಗಾಯೋಗ ಮಾನವನಿಗೆ ಉತ್ತಮ ಭವಿಷ್ಯ,ಆಯಸ್ಸು,ಆರೋಗ್ಯ ನೀಡುತ್ತಿದ್ದರೂ ಸತ್ಯಧರ್ಮದ ವಿಚಾರಗಳನ್ನು ಬದಿಗಿಟ್ಟು ಯೋಗಾಸನವನ್ನೇ ವ್ಯವಹಾರ,ವ್ಯಾಪಾರ ಬಂಡವಾಳವಾಗಿಟ್ಟುಕೊಂಡು ಪ್ರಚಾರ ಮಾಡದೆ, ನಮ್ಮ ಆರೋಗ್ಯ ನಮ್ಮಜ್ಞಾನದ ಮೂಲದಲ್ಲಿದೆಯೆಂದು ತಿಳಿದರೆ ನಾವು ಯೋಗಿಗಳೆ ಯೋಗ ಮಾಡೋರೆಲ್ಲಾ ಯೋಗಿಗಳಲ್ಲ.ಮಾಡದಿರೋರೆಲ್ಲಾ ರೋಗಿಗಳಲ್ಲ.

ಮಾನವ. ತನ್ನ ಧರ್ಮ ಕರ್ಮಕ್ಕೆ ತಕ್ಕಂತೆ ಸತ್ಯಜ್ಞಾನ ಪಡೆದರೆ ಯೋಗಿ.ಅದಕ್ಕೆ ‌ವಿರುದ್ದ ನಡೆದರೆ ರೋಗಿ. ಯೋಗ ಮಾನವನಿಗೆ ಹುಟ್ಟುವಾಗಲೇ ಇರುತ್ತದೆ. ಅದು ಒಳ್ಳೆಯದಾಗಿದ್ದರೆ ಸಂತೋಷ, ಕೆಟ್ಟದಾಗಿದ್ದರೆ ದು:ಖ.

ಸುಖ ದು:ಖಗಳನ್ನ ಸರಿಸಮನಾಗಿ ತಿಳಿದು ನಡೆದವನೇ ಸರ್ವಜ್ಞ. ಇದಕ್ಕೆಯೋಗಾಸನದ ಜೊತೆಗೆ ಯೋಗಿಗಳ ನಡೆನಡಿಗಳನ್ನ ಅನುಸರಿಸಿದರೆ ಉತ್ತಮ.ಯೋಗಾಸನವು ಇದರ ಒಂದು ಮೆಟ್ಟಿಲು.  ನಿಜವಾದ ಯೋಗಿಗಳಿಗೆ ರಾಜಕೀಯ ನಡೆಸಲು ಕಷ್ಟ ಶ್ರೀ ರಾಮ,ಶ್ರೀಕೃಷ್ಣ ರಂತಹ ದೇವಮಾನವರಿಗೇ ಭೂಮಿಯಲ್ಲಿ ರಾಜಕೀಯ ನಡೆಸಲು ಕಷ್ಟವಾಯಿತು.

ಇಂದಿನ ರಾಜಕಾರಣಿಗಳನ್ನ ನಿಜವಾದ ಯೋಗಿಗಳು ಧರ್ಮಗುರುವಾಗಿ ನಡೆಸಬಹುದೇ ವಿನ: ತಾವೇ ರಾಜಕಾರಣಕ್ಕಿಳಿದರೆ ಕಷ್ಟ ನಷ್ಟವೇ ಸರಿ. ಸತ್ಯಜ್ಞಾನದಿಂದ ಮಾತ್ರ ಪೂರ್ಣಸತ್ಯ ತಿಳಿಯಬಹುದು.ಪೂರ್ಣಸತ್ಯ ಅದ್ವೈತ. ಏಕತೆ, ಸಮಾನತೆ, ಮಾನವೀಯತೆ, ಶಾಂತಿ, ಸಮಾಧಾನ, ತೃಪ್ತಿ ಯನ್ನೊಳಗೊಂಡಿದೆ.

ದೇವನೊಬ್ಬನೆ ನಾಮ ಹಲವು.ಯೋಗಿಗಳ ಬದುಕಲ್ಲಿ ಒಮ್ಮತ ಅಗತ್ಯ. ಇದು ನಮ್ಮ ದೇಶವನ್ನು ಉಳಿಸಿ, ವಿದೇಶಕ್ಕೆ ಮಾದರಿಯಾಗುತ್ತದೆ. ಇದಕ್ಕೆ ಸತ್ಯಕ್ಕೆ ಬೆಲೆಕೊಟ್ಟು ಮುನ್ನಡೆಯಬೇಕು. ಪರಮಾತ್ಮನೊಡನೆ ಜೀವಾತ್ಮ ಸೇರಲು ಯೋಗವಿರಬೇಕು. ಯೋಗವೆಂದರೆ ಸೇರುವುದಾಗುತ್ತದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group