ಸಿಂದಗಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಶಿಕ್ಷಣ ಪಡೆಯುವುದಕ್ಕಾಗಿಯೇ ದೊಡ್ಡ ಹೋರಾಟ ಮಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮತದಾನದ ಹಕ್ಕು ನೀಡಿ, ಪ್ರಜಾಪ್ರಭುತ್ವ ಉಳಿಸಿದ ಧೀಮಂತ ನಾಯಕರು ಅಂತವರು ಬರೆದ ಸಂವಿಧಾನ ಅಡಿಯಲ್ಲಿ ನಾವೆಲ್ಲರು ಜೀವಿಸುತ್ತಿರುವುದು ಪುಣ್ಯವೆ ಸರಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಡಾ. ಅಂಬೇಡ್ಕರ್ ಪರಿನಿರ್ವಣ ನಿಮಿತ್ತ ಗೌರವ ಸಮರ್ಪಿಸಿ ಮಾತನಾಡಿ, ಅವರ ಮುಂದಾಲೋಚನೆ, ತತ್ವ ಸಿದ್ಧಾಂತ ಇಡೀ ಮಾನವ ಕುಲಕ್ಕೆ, ಭಾರತ ದೇಶಕ್ಕೆ ಸಂದೇಶ. ರಾಜಕೀಯ, ಸಾಮಾಜಿಕ ನ್ಯಾಯ, ದೇಶದ ಅಭಿವೃದ್ಧಿ, ದೀನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಇರುವ ಕಳಕಳಿ ಅವರ ಬರೆದ ಸಂವಿಧಾನದಲ್ಲಿವೆ. ಈ ಮೂಲಕ ದೇಶವನ್ನು ಮುನ್ನಡೆಸಬೇಕು ಅನ್ನೋ ಅವರ ಕನಸು, ದೇಶಕ್ಕಾಗಿ ಇಡೀ ಬದುಕನ್ನು ಮೀಸಲಿಟ್ಟ ನಾಯಕನನ್ನು ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಿದ್ದೇವೆ ಎಂದರು.
ತಹಶಿಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಡಾ. ಅಂಬೇಡ್ಕರರು ಬರೆದ ಸಂವಿಧಾನದಿಂದಲೇ ಆಡಳಿತ ನಡೆಯುತ್ತಿದೆ ಅವರು ನೀಡಿದ ಮೂಲಭೂತ ಹಕ್ಕುಗಳನ್ವಯ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಲೇಬೇಕು ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ವೈ.ಸಿ ಮಯೂರ ಮಾತನಾಡಿ, ನಾನು, ನನ್ನ ಅವಸಾನದ ನಂತರ ನಾನು ನಿಮ್ಮಿಂದ ಕಣ್ಮರೆಯಾಗಿದ್ದೇನೆ ಎಂದು ಭಾವಿಸಬೇಡಿ. ನಾನು ಬರೆದಿರುವಂತಹ ಸಂವಿಧಾನದಲ್ಲಿ ಜೀವಂತವಾಗಿದ್ದೇನೆ. ಅಂತಹ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಆದ್ಯಕರ್ತವ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. ದೇಶದಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಅನ್ನೋದು ಬರಲಿ ಅನ್ನೋ ಅವರ ಕನಸು ಈಡೇರಲಿ ಎಂದು ಹೇಳುತ್ತಾ ಅವರ ಪರಿನಿರ್ವಣದಂದು ಗೌರವ ಸಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಜಯಶ್ರೀ ಹದನೂರ, ಮಹಾನಂದಾ ಬಮ್ಮಣ್ಣಿ, ಬಸವರಾಜ ಕಾಂಬಳೆ, ರಾಜಣ್ಣಿ ನಾರಾಯಣಕರ, ಪರಸುರಾಮ ಕಾಂಬಳೆ, ಭೀಮು ವಾಲೀಕಾರ, ರವಿ ಹೋಳಿ, ಹಾಸೀಂ ಆಳಂದ, ರಾಜು ಖೇಡ, ಪ್ರತಿಭಾ ಚಳ್ಳಿಗಿ, ಶಶಿಕಲಾ ಅಂಗಡಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

