ಬೀದರ: ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ನಾಯಕರ ಕಣ್ಣು ಕಲ್ಯಾಣ ಕರ್ನಾಟಕ ಭಾಗದ ಮೇಲೆ ಬಿದ್ದಿದ್ದು ಇತ್ತೀಚೆಗೆ ಈ ಭಾಗದ ಬಗ್ಗೆ ಕಾಳಜಿ ಹೆಚ್ಚಾಗಿದೆಯೆನ್ನಬಹುದು.
ಬಸವಣ್ಣನವರ ಕರ್ಮಭೂಮಿ ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ಗೊರ್ಟಾ ಗ್ರಾಮಕ್ಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಗೊರ್ಟಾ ಗ್ರಾಮ ಮದುಮಗನಂತೆ ಸಿಂಗಾರಗೊಂಡಿದ್ದು, ಗ್ರಾಮದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಜಿಲ್ಲೆ ಬೀದರ್‌ಗೆ ಎರಡನೆ ಬಾರಿಗೆ ಆಗಮಿಸಿದ್ದಾರೆ. ಶನಿವಾರ (ಮಾ.25) ಸಂಜೆ ಬೀದರ್ ಏರ್ ಬೇಸ್‌ಗೆ ಅವರು ಆಗಮಿಸಿ ರಾತ್ರಿ ಏರ್ ಫೋರ್ಸ್ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಿಗ್ಗೆ 10-10ಕ್ಕೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮಕ್ಕೆ ತೆರಳಲಿದ್ದಾರೆ. ಬೆಳಗ್ಗೆ 10-30 ರಿಂದ ಮಧ್ಯಾಹ್ನ 12-30 ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಗೋರ್ಟಾ ಗ್ರಾಮದ ಲಕ್ಷ್ಮಿ ದೇವಸ್ಥಾನದ ಎದುರು ನಿಜಾಮರ ಆಡಳಿತದಲ್ಲಿ ನಡೆದ ಹತ್ಯಾಕಾಂಡದ ಸ್ಥಳದಲ್ಲಿ ಗೊರ್ಟಾ ಗ್ರಾಮದ ಹಿರಿಯ ನಾಯಕರ ಜೊತೆ ಸಂವಾದ ನಡೆಸುತ್ತಾರೆ.
ಅಲ್ಲಿಂದ 103 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, 35 ಅಡಿ ಎತ್ತರದ ಹುತಾತ್ಮದ ಸ್ಮಾರಕ, 1100 ಕೆ.ಜಿ. ತೂಕದ 11 ಅಡಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡುತ್ತಾರೆ.
ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿ ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡ, ನಿಜಾಮರ ಆಡಳಿತ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯ ನಾಯಕರು ಉಪಸ್ಥಿತರಿರಲಿದ್ದಾರೆ.
ಬಳಿಕ ಮಧ್ಯಾಹ್ನ 1.45ಕ್ಕೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿಗೆ ತೆರಳಿ 4,283 ಸಾವಿರ ಕೋಟಿ ರೂಪಾಯಿ ವೆಚ್ಚದ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಸೇರಿ 200 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಸೇರುವ ನಿರೀಕ್ಷೆ ಇದೆ.
ನಂತರ ಸಂಜೆ 6.30ಕ್ಕೆ ಗಂಟೆಗೆ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿ ʼಬೆಂಗಳೂರು ಹಬ್ಬʼದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ವಿಧಾನ ಸೌಧದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ರಾತ್ರಿ 8.30ಕ್ಕೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಅದಾದ ನಂತರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ, ಮಾ.27 ರಂದು ಬೆಳಗ್ಗೆ ನವ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ