ಬೀದರ– ಲಿಂಗಾಯತ ಸಮುದಾಯದ ಮನ ಗೆಲ್ಲಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಸವಕಲ್ಯಾಣಕ್ಕೆ ಭೇಟಿ ನೀಡುವ ದಿನಾಂಕ ಫಿಕ್ಸ್ ಆಗಿದ್ದು ಅವರು ದಿ.26 ರಂದು ಬಂದರೆ ಬೀದರ್ ಜಿಲ್ಲೆ ಶರಣರ ನಾಡು ಬಸವಕಲ್ಯಾಣಕ್ಕೆ ಒಂದೇ ತಿಂಗಳಲ್ಲಿ ಎರಡನೇ ಬಾರಿ ಭೇಟಿ ನೀಡಿದಂತಾಗುತ್ತದೆ.
ಇದೆ ಮಾರ್ಚ್ 3 ರಂದು ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ಧ ಅಮಿತ್ ಶಾ ಇದೀಗ ಮತ್ತೆ ದಿ.26 ರಂದು ಆಗಮಿಸಿ ಈ ಚುನಾವಣೆ ಹೊಸ್ತಿಲಲ್ಲಿ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗೊರ್ಟಾ ಗ್ರಾಮದ ಸರ್ದಾರ್ ವಲ್ಲಭಭಾಯ್ ಪಟೇಲರ ಸ್ಮಾರಕ ಕಾಮಗಾರಿ ಗೆ ಚಾಲನೆ ನೀಡಲಿದ್ದಾರೆ.
2015ರಲ್ಲಿ ಗೊರ್ಟಾ ಹುತಾತ್ಮರ ಸ್ಮಾರಕ ನಿರ್ಮಾಣ ಮಾಡಲು ಕಾಮಗಾರಿಗೆ ಶಂಕು ಸ್ಥಾಪನೆ ನೆರವೆರಿಸಿದ್ಧರು ಅಮಿತ್ ಶಾ ಆದರೆ ನೆನೆಗುದಿಗೆ ಬಿದ್ದು ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು ಇದೀಗ ಕಾಮಗಾರಿಗೆ ವೇಗ ಸಿಕ್ಕಿ ಇದೇ ಮಾರ್ಚ್ 26 ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮಾರಕ ಅನಾವರಣಗೊಳ್ಳಲಿದೆ.
ಗೊರ್ಟಾ ಗ್ರಾಮದ ಇತಿಹಾಸ:
ಬೀದರ್ ನಿಜಾಮರ ಆಡಳಿತದಿಂದ ಹೈದರಾಬಾದ್-ಕರ್ನಾಟಕದ ವಿಮೋಚನೆಗೂ ಮುನ್ನ ರಜಾಕಾರರ ದಾಳಿಯಿಂದಾದ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಬಿದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮ ಈಗ ಚರ್ಚೆಯಲ್ಲಿದೆ.
ಹೌದು ಇಡೀ ದೇಶದ ಜನತೆಗೆ 1947 ಆಗಸ್ಟ್ 15 ಬ್ರಿಟಿಷರಿಂದ ಮುಕ್ತಿ ಪಡೆದ ಸಂಭ್ರಮ. ಆದರೆ, ಹೈದರಾಬಾದ್-ಕರ್ನಾಟಕ ಭಾಗದ ಜನ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡರೂ ನಿಜಾಮರ ಆಡಳಿತದಿಂದ ಮುಕ್ತಿ ಪಡೆಯಲು 13 ತಿಂಗಳು ಹೋರಾಟ ಮಾಡಬೇಕಾಯಿತು. ಇದರ ಫಲವೆಂಬಂತೆ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮಕ್ಕೀಗ ರಾಜಕಳೆ ಬಂದಿದೆ.
ಗೋರ್ಟಾ ಹತ್ಯಾಕಾಂಡದಲ್ಲಿ ಮಡಿದವರ ಸವಿನೆನಪಿಗಾಗಿ ಈ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ರ ಪ್ರತಿಮೆ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ಗೊರ್ಟಾ ಗ್ರಾಮದ ಹೊರವಲಯದಲ್ಲಿರುವ 4 ಎಕರೆ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ, 30 ಅಡಿ ಪಂಚಲೋಹದ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿ, ಧ್ವಜ ಸ್ತಂಭ, ಥೀಮ್ ಪಾರ್ಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ದೇಶದ ಗೃಹ ಮಂತ್ರಿ ಅಮಿತ್ ಶಾ ಯವರಿಂದ ಉದ್ಘಾಟನೆ ಮಾಡಿಸುವ ಇಚ್ಛೆಯನ್ನ ಬಿಜೆಪಿ ಹೊಂದಿದೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳುತ್ತಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿಗೆ ಬೆಲೆ ಸಿಗುತ್ತಿದೆ. ಹಾಗೆಯೇ ಇಂಗ್ಲೆಂಡ್ ನಲ್ಲಿ ಬಸವಣ್ಣನವರ ಪ್ರತಿಮೆ ಇದೆ ಮುಂದೊಂದು ದಿನ ಅಮೇರಿಕದ ವ್ಹೈಟ್ ಹೌಸ್ ಎದುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದರು.
ವರದಿ: ನಂದಕುಮಾರ ಕರಂಜೆ, ಬೀದರ