ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

Must Read

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್

ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ ಬದುಕಿದಾತ ಎಂದರ್ಥ. ಅದನ್ನೇ ಬಸವ ತತ್ವದಲ್ಲಿ “ಶರಣ” ಎನ್ನಲಾಗಿದೆ.

ವಾಲ್ಮಿಕಿ ರಾಮಾಯಣದ ಉತ್ತರಾ ಖಂಡದಲ್ಲಿ ಅಧ್ಯಾಯ ೭, (೭೩-೭೬) ರಲ್ಲಿ ಶಂಬೂಕ ಮಹರ್ಷಿಯನ್ನು ಕೊಲೆಗೈದ ಪ್ರಸ್ತಾಪ ಇದೆ. ಆತ ಶೂದ್ರನಾದ ಏಕೈಕ ಕಾರಣಕ್ಕೆ ಸ್ವತಃ ಶ್ರೀರಾಮನೆ ನಿರ್ದಯದಿಂದ ಕೊಲೆಗೈದ ಎಂದು ಉಲ್ಲೇಖಿಸಿದೆ. ಅದು ನಿಜನಾ? ಆ ಕೊಲೆಗೆ ಕಾರಣವೇನಿತ್ತು? ಆ ಕೃತ್ಯದ ಹಿಂದೆ ಯಾರಿದ್ದರು?

ಒಂದಿನ ವಯೋವೃದ್ಧ ಬ್ರಾಹ್ಮಣ, ತನ್ನ ಅಪ್ರಾಪ್ತ ಮೃತ ಮಗನ ಶವ ಹೊತ್ತು ಅಯೋದ್ಯೆ ನಗರದ ಅರಮನೆಗೆ ಬಂದ. ಅರಮನೆಯ ಮಹಾದ್ವಾರದಲ್ಲಿ ನಿಂತು ರೋಧಿಸ ತೊಡಗಿದ. “ನಾನ್ಯಾವ ಪಾಪ ಕೃತ್ಯ ಎಸಗಿದ್ದೆನೆ? ನನ್ನ ದುರ್ದೈವ. ನೀ ಹೋದ ಬಳಿಕ ನಾ ಇರಲಾರೆ. ಈ ರಾಜ್ಯದಲ್ಲಿ ನಿನ್ನಂತೆ ಅನೇಕ ಅಮಾಯಕರು ಅಕಾಲಿಕ ಮೃತ್ಯು ಕಾಣುತ್ತಿದ್ದಾರೆ. ಮೃಗ ಸ್ವಭಾವದ ರಾಜನ ವರ್ತನೆಯಿಂದ ಸಾಮ್ರಾಜ್ಯದಲ್ಲಿ ಅಪ್ರಾಪ್ತರ ಸಾವು ಸಹಜವಾಗಿದೆ. ಹೀಗಾಗಿ ರಾಮ ರಾಜ್ಯದಲ್ಲಿ ಪ್ರಜೆಗಳು ಅಕಾಲಿಕ ಮೃತ್ಯುವಿನ ಭೀತಿಯಿಂದ ಬಳಲುತ್ತಿದ್ದಾರೆ”, ಎಂದು ಸಿಂಹಾಸನದ ಮೇಲೆ ಆಸೀನವಾದ ಶ್ರೀರಾಮನಿಗೆ ಕೇಳುವಂತೆ ದ್ವಾರಬಾಗಿಲಿನಿಂದ ರೋಧಿಸುತ್ತಿದ್ದ. ಈ ಶೋಕವನ್ನು ತಿಳಿದ ಅಯೋಧ್ಯೆಯ ಇತರೆ ಬ್ರಾಹ್ಮಣರು ರಾಜನ ಮುಂದೆ ನಿಂತು ಶೋಕಾಚರಣೆ ಗೈದರು.
ತಕ್ಷಣ ವಶಿಷ್ಟ ಮುನಿಯ ನೇತೃತ್ವದಲ್ಲಿ ಮಾರ್ಕಂಡೇಯ, ಮೌದ್ಗಜ, ವಾಮದೇವ, ಕಶ್ಯಪ, ಕಾತ್ಯಾಯನ, ಗೌತಮ ಮತ್ತು ನಾರದ ಒಳಗೊಂಡ ಅಷ್ಟ ಬ್ರಾಹ್ಮಣ ಋಷಿಮುನಿಗಳ ಸಭೆ ಜರುಗಿತು.

ಆ ಸಭೆಯಲ್ಲಿ ಶ್ರೀರಾಮ ಪ್ರವೇಶಿಸಿ ಎಲ್ಲರನ್ನು ವಿಧೇಯತೆಯಿಂದ ಕೈ ಜೋಡಿಸಿ ನಮಿಸಿದ. ಅವನ ಆಗಮನವನ್ನು ಮಂತ್ರಿವರ್ಯರು, ರಾಜ ಭಟರು ಗೌರವದಿಂದ ಆಮಂತ್ರಿಸಿದರು. “ಅನಿರೀಕ್ಷಿತವಾದ ಈ ಸಭೆ ಸೇರಿದ ಉದ್ದೇಶ ಮತ್ತು ಯಾರನ್ನು ದಂಡಿಸಬೇಕಿದೆ” ಎಂದು ಶ್ರೀರಾಮ ಪ್ರಶ್ನಿಸಿದ.

ಆಗ ನಾರದ ಮುನಿ ಎದ್ದು ನಿಂತು,”ರಾಜನೆ ಕೇಳು, ಈ ಅಪ್ರಾಪ್ತ ಪುತ್ರನ ಸಾವಿಗೆ ಕಾರಣವೇನು? ನಿನ್ನ ಕರ್ತವ್ಯ ಮತ್ತು ಜವಾಬ್ಧಾರಿಗಳೇನು? ಕೃತ ಯುಗದಲ್ಲಿ ಕೇವಲ ಬ್ರಾಹ್ಮಣರು ಮಾತ್ರ ತಪಸ್ಸು ಆಚರಿಸುತ್ತಿದ್ದರು. ನೀ ನಿಜವಾದ ಬ್ರಾಹ್ಮಣನಲ್ಲ. ನಿನಗದು ತಿಳಿದಿಲ್ಲ. ಆ ಯುಗಾಂತ್ಯಕ್ಕೆ ಎಲ್ಲರೂ ಬ್ರಾಹ್ಮಣರಾದರು. ಅವರಲ್ಲಿ ಐದು ಬ್ರಾಹ್ಮಣರು ಮಾತ್ರ ದೈವಿವಶಾತ್ ಪುನರ್ಜನ್ಮ ಪಡೆದರು. ಅವರ‍್ಯಾರು ವೃದ್ಧಾಪ್ಯದವರೆಗೆ ಮೃತ್ಯು ಹೊಂದಲಿಲ್ಲ”.

“ತ್ರೇತಾ ಯುಗದಲ್ಲಿ ಮನುವಿನ ನಾಲ್ಕು ಪುತ್ರರು ಜನಿಸಿದರು. ಅವರು ತಪಸ್ಸಿನಿಂದ ಬ್ರಾಹ್ಮಣರಾದರು. ರಾಜ್ಯಭಾರಕ್ಕೆ ಅವರೆ ಅರ್ಹರೆನಿಸಿದರು. ಮನುವಿನ ಪ್ರಕಾರ ಬ್ರಾಹ್ಮಣರೆ ಸರ್ವಾಧಿಕಾರಿಗಳಾಬೇಕು. ಅವರ ಸುಪರ್ದಿಯಲ್ಲಿ ಸಾಮ್ರಾಜ್ಯ ನಿರ್ವಹಿಸಬೇಕು. ಅವರಿಗೆ ರಕ್ಷಣೆ ಒದಗಿಸುವುದಕ್ಕಾಗಿ ಕ್ಷತ್ರಿಯರನ್ನು ಸೃಷ್ಟಿಸಲಾಗಿದೆ. ಆ ಯುಗದಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯರೆ ಪ್ರಜಾ ಪಾಲಕರಾಗಿದ್ದರು. ಅದಕ್ಕೆಂದೆ ಚತುರ್ಜಾತಿಗಳು ಸೃಷ್ಟಿಯಾದವು. ತ್ರೇತಾಯುಗದ ಅಂತ್ಯಕ್ಕೆ ಕ್ಷತ್ರಿಯರು ಕ್ರಮೇಣ ಬ್ರಾಹ್ಮಣರಂತೆ ತಪಸ್ಸು ಆಚರಿಸ ತೊಡಗಿದರು. ಅವರಿಗೆ ಸೇವೆ ಒದಗಿಸುವದಕ್ಕಾಗಿ ವೈಶ್ಯ ಮತ್ತು ಶೂದ್ರ ಕುಲಗಳನ್ನು ಸೃಷ್ಟಿಸಲಾಯಿತು. ಅದರಲ್ಲಿ ಶೂದ್ರರು ಆ ಮೂರು ಜಾತಿಯವರಿಗೆ ಸೇವಕರಾಗಿರಬೇಕೆಂದು ಮನುವಿನ ಧರ್ಮ ಸಾರುತ್ತದೆ”.

“ಹೀಗಿದ್ದಾಗ್ಯೂ, ಈ ದ್ವಾಪಾರ ಯುಗ ಅಸತ್ಯದಿಂದ ಕೂಡಿದೆ. ನಿಮ್ಮ ರಾಜ್ಯಭಾರದಿಂದ ಕೆಟ್ಟು ಹೋಗಿದೆ. ಶ್ರೇಣಿಕೃತ ವ್ಯವಸ್ಥೆ ಏರುಪೇರಾಗಿದೆ. ಪಾಪ ಕೃತ್ಯಗಳು ತಾಂಡವಾಡುತ್ತಿವೆ. ಬ್ರಾಹ್ಮಣರು ಅಕಾಲಿಕ ಮೃತ್ಯುವಾಗುತ್ತಿದ್ದಾರೆ. ಪೈಶಾಚಿಕ ಕೃತ್ಯಗಳು ಹೆಚ್ಚಾಗಿವೆ. ಮಾನವತೆ ತಲೆ ಕೆಳಗಾಗಿ, ಪಾದಗಳು ಮೇಲಾಗಿವೆ. ಶೂದ್ರರು ತಪಸ್ಸು ಆಚರಿಸುತ್ತಿರುವುದು ಧರ್ಮವೇ? ಮನುವಿನ ಧರ್ಮಸಾರದಂತೆ ಬ್ರಾಹ್ಮಣ, ಕ್ಷತ್ರಿಯ, ವೇಶ್ಯ ಎಂಬ ಕೇವಲ ಮೂರು ಜಾತಿಯವರು ಮಾತ್ರ ತಪಸ್ಸಿಗೆ ಅರ್ಹರು. ಶೂದ್ರರು ಅರ್ಹರಲ್ಲ!
ದ್ವಾಪರ ಯುಗದಲ್ಲಿ ಸ್ವತಃ ರಾಜಕುಮಾರನಿಗೂ ತಪಸ್ಸು ಗೈಯ್ಯಲು ಅವಕಾಶ ಇರುವುದಿಲ್ಲ. ಅಂದಾಗ ಕೆಳ ಜಾತಿಯವರಿಗೆ ಆಸ್ಪದ ಇರಬೇಕೆ? ದ್ವಾಪರ ಯುಗದಲ್ಲಿ ಶೂದ್ರರು ತಪಸ್ಸು ಗೈಯ್ಯುವುದು ಮಹಾ ಅಪರಾಧ. ಪ್ರಸಕ್ತ ತಮ್ಮ ಸಾಮ್ರಾಜ್ಯದಲ್ಲಿ ಅದೇ ಸಂಭವಿಸಿದೆ. ಶೂದ್ರನೋರ್ವ ತಪಸ್ಸು ಗೈದಿದ್ದಕ್ಕೆ ಬ್ರಾಹ್ಮಣರ ಮಗನ ಸಾವಾಗಿದೆ. ಇದಕ್ಕೆ ಮಹಾರಾಜನೆ ಹೊಣೆ. ಅನ್ಯಾಯದ ಆಡಳಿತವೆ ಈ ಸಾವಿಗೆ ಕಾರಣ. ಹೀಗಾದ್ರೆ ಅಯೋಧ್ಯೆಯ ಬ್ರಾಹ್ಮಣ ಪ್ರಜೆಗಳನ್ನು ರಕ್ಷಿಸುವುದು ಹೇಗೆ”?

“ಓ, ಮಂತ್ರಿವರ್ಯರೆ, ಅಯೋಧ್ಯೆಯಲ್ಲಿರುವ ಇತರೆ ಬ್ರಾಹ್ಮಣರ ಮೇಲೆ ಇನ್ನೂ ಏನೇನು ಸಂಭವಿಸುತ್ತಿವೆ? ಅವೆಲ್ಲವುಗಳನ್ನು ತನಿಖೆಗೊಳಪಡಿಸಿ. ಶ್ರೀರಾಮನೆ, ಏನಾದ್ರೂ ಗೈದು ಮೃತ ಬಾಲಕನನ್ನು ಮತ್ತೆ ಜೀವಂತವಾಗಿಸು”, ಎಂದು ನಾರದ ಮುನಿ ನೆರೆದ ಸಭೆಯಲ್ಲಿ ಏರು ಧ್ವನಿಯಿಂದ ಗದರಿಸಿದ. ಅದಕ್ಕೆ ಗದ್ಗದಿತನಾದ ಶ್ರೀರಾಮ, ತಕ್ಷಣವೇ ಎದ್ದು ನಿಂತು, “ಏಯ್ ಭಟರೆ, ಪುಷ್ಪಕ ವಿಮಾನ ತಯ್ಯಾರು ಮಾಡಿ. ನಾನು ಈಗಲೆ ದಂಡಾರಣ್ಯಕ್ಕೆ ತೆರಳುವೆ. ಆ ಶೂದ್ರ ತಪಸ್ವಿಯನ್ನು ಶೋಧಿಸುವೆ. ಅವನ ಕೊಲೆಗೈದು, ಈ ಬ್ರಾಹ್ಮಣ ಪುತ್ರನನ್ನು ಬದುಕಿಸುವೆ”, ಎಂದನು. ತಕ್ಷಣವೇ ಶ್ರೀರಾಮ ಮತ್ತು ಲಕ್ಷ್ಮಣ ಇಬ್ಬರೂ ಪುಷ್ಪಕ ವಿಮಾನ ಏರಿದರು. ಸಭೆಯಲ್ಲಿ ಆಸೀನರಾದ ಎಲ್ಲ ಋಷಿಮುನಿಗಳಿಗೆ ಹಾಗೂ ಮಂತ್ರಿವರ್ಯರಿಗೆ ತಮ್ಮ ಎರಡೂ ಕೈ ಜೋಡಿಸಿ ನಮಿಸಿದರು. “ತಾವು ಈ ಅಯೋಧ್ಯೆ ಅರಮನೆಗೆ ಮರಳಿ ಬರುವವರೆಗೆ ಯಾವುದೇ ಕಾರಣಕ್ಕೂ ತಾವ್ಯಾರೂ ಕದಲಬಾರದೆಂದು ವಿನಂತಿಸಿಕೊಂಡರು. ರಾಮ-ಲಕ್ಷ್ಮಣ ಇಬ್ಬರೂ ವೈರಿ ಸಂಹಾರಕ್ಕಾಗಿ ತಮ್ಮ ಭುಜಕ್ಕೆ ಬಿಲ್ಲು ಬಾಣಗಳನ್ನು ಹೊತ್ತರು. ಕೈಯಲ್ಲಿ ಥಳ-ಥಳ ಹೊಳೆಯುವ ಖಡ್ಗ ಝಳಪಿಸುತ್ತ ಸಾಗಿದರು. ಅರಮನೆ ತೊರೆಯುವ ಮುನ್ನ ಭರತ ಮತ್ತು ಸೌಮಿತ್ರೆಯರಿಗೆ ರಾಜ್ಯಭಾರ ವಹಿಸಿ ಹೋದರು.

ದಂಡಕಾರಣ್ಯದ ಪಶ್ಚಿಮ ಭಾಗದಲ್ಲಿ ಯಾವುದೋ ಧ್ವನಿ ಆಲಿಸುತ್ತ, ಸುಳಿವು ಹಿಡಿದು ಶೋಧಿಸಿದ ರಾಮ-ಲಕ್ಷ್ಮ ಣರು, ವೃಥಾ ಸಂಚರಿಸಿ ದಣಿದು ವ್ಯರ್ಥರಾದರು. ನಂತರ ದಟ್ಟಾರಣ್ಯದ ಉತ್ತರ ಭಾಗಕ್ಕೆ ಅಲೆದರು. ಹಾಗೆ ಹಿಮಾಲಯ ಪರ್ವತ ಶ್ರೇಣಿಯತ್ತ ಮುನ್ನುಗ್ಗಿ ಶೋಧಿಸಿದರು. ಯಾರೂ ಸಿಗಲಿಲ್ಲ. ಪೂರ್ವ ದಿಕ್ಕಿನತ್ತ ವಾಲಿದರು. ಅವರ ಚಿನ್ನ ಖಚಿತ ರಥದ ಹೊಳಪಿಗೆ ಯಾವ ಋಷಿಮುನಿಯೂ ಕಾಣಲಿಲ್ಲ. ದಕ್ಷಿಣಕ್ಕಿರುವ ಶೈವಜ್ಞ ಪರ್ವತದ ಕಡೆಗೆ ಮುಖ ಮಾಡಿದರು. ಅಲ್ಲಿ ಮಹಾ ಸರೋವರ ಗೋಚರಿಸಿತು. ಆ ಸರೋವರದ ತೀರದಲ್ಲಿ ಋಷಿ ಮುನಿಯೋರ್ವ ತಪಸ್ಸು ಆಚರಿಸುತ್ತಿರುವುದನ್ನು ಗಮನಿಸಿದರು. ಅವನ ಬಳಿ ಸಾಗಿದ ರಾಮ-ಲಕ್ಷö್ಮಣರು, “ನೀ ಯಾರು? ನಿನಗೆ ತಪಸ್ಸು ಗೈಯ್ಯಲು ಯಾರು ಹೇಳಿದ್ದು? ನೀ ಬ್ರಾಹ್ಮಣನೆ? ನಿನ್ನ ಕುಲ ಯಾವುದು? ಯಾವ ಜಾತಿಯವನು? ಯಾವ ಉದ್ದೇಶಕ್ಕಾಗಿ ತಪಸ್ಸಿಗೆ ನಿರತನಾಗಿದ್ದು? ನಿನಗೆ ಈ ಸ್ವಾತಂತ್ರ್ಯ ಕೊಟ್ಟವರು ಯಾರು?” ಎಂದೆಲ್ಲ ಪ್ರಶ್ನಿಸಿ, ಅವನ ಮೇಲೆ ರೇಗಾಡಿದರು.

“ನಾನು ಶ್ರೀರಾಮ, ದಶರಥ ಮಹಾರಾಜನ ಪುತ್ರ. ಈ ಸಾಮ್ರಾಜ್ಯದ ದೊರೆ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು”, ಎಂದು ತಪಸ್ಸು ನಿರತ ವ್ಯಕ್ತಿಗೆ ಪೀಡಿಸತೊಡಗಿದ. ಆದಾಗ್ಯೂ ತಪಸ್ಸು ಭಂಗಗೊಳ್ಳದೆ, ಅವರೊಂದಿಗೆ ಮಾತನಾಡದೆ ತಪಸ್ಸಿನಲ್ಲಿ ಮಗ್ನನಾಗಿದ್ದಕ್ಕೆ ರಾಮ-ಲಕ್ಷö್ಮಣರು ಅವನ ಮೇಲೆ ಎರಗಿದರು. ಕಾಡಿನ ಮಧ್ಯೆ ಮರದ ಕೊಂಬೆಗೆ ತಲೆ ಕೆಳಗಾಗಿಸಿ, ಕಾಲು ಮೇಲಾಗಿಸಿ ಅವನನ್ನು ನೇತು ಹಾಕಿದರು. “ಈಗ ಹೇಳು, ಸತ್ಯ ಬಾಯ್ಬಿಡು”, ಎಂದು ಸ್ವತಃ ಶ್ರೀರಾಮ ಖಡ್ಗ ಪ್ರದರ್ಶಿಸಿದ ಅವಾಗ ಪ್ರಾಣ ಭೀತಿಗೆ ಬಾಯ್ಬಿಟ್ಟ ತಪಸ್ವಿ, “ಪ್ರಭು ಶ್ರೀರಾಮನೆ, ನಾನು ಸತ್ಯವನ್ನೇ ಹೇಳುತ್ತೇನೆ. ನಾ ಹುಟ್ಟಿನಿಂದ ಶೂದ್ರ. ಹೆಸರು ಶಂಬೂಕ. ಅಸ್ಪೃಶ್ಯ ಪ್ರದೇಶದಿಂದ ಬಂದಿದ್ದೇನೆ. ಶೋಷಣೆಯಿಂದ ಬೇಸತ್ತು, ನನ್ನ ಈ ಶರೀರವನ್ನು ಭಗವಂತನಲ್ಲಿ ಲೀನಗೊಳಿಸುವ ಉದ್ದೇಶಕ್ಕಾಗಿ ಮಾತ್ರ ನಾನು ತಪಸ್ಸಿನಲ್ಲಿ ನಿರತನಾಗಿದ್ದೇನೆ. ಮತ್ಯಾವ ದುರುದ್ದೇಶ ಇಲ್ಲ, ಎಂದನು. ಅವನು ಇನ್ನೂ ಹೇಳುತ್ತಿದ್ದಂತೆ, ಶ್ರೀರಾಮ ತನ್ನ ಥಳ-ಥಳ ಹೊಳೆಯುವ ಖಡ್ಗದಿಂದ ಶಂಬೂಕ ಮಹರ್ಷಿಯ ರುಂಡ ಚಂಡಾಡಿದ!! ತಕ್ಷಣ ಅಗ್ನಿ ದೇವತೆಗಳು ಕಿರುಚುತ್ತಾ ಪ್ರತ್ಯಕ್ಷವಾದವು. ಹತ್ಯೆಯಾದ ಶಂಬೂಕ ಮಹರ್ಷಿಯನ್ನು ಅಗ್ನಿಗೆ ಅಹುತಿ ಮಾಡಿದವು.


ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕರು
ಅಂಚೆ: ಕೋಳೂರು, ತಾ: ಮುದ್ದೇಬಿಹಾಳ
ಜಿ: ವಿಜಯಪುರ-೫೮೬೧೨೯ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨.                                    ಇಮೇಲ್ : satishitagi10@gail.com

Latest News

ಸೇವೆಯ ಮೌಲ್ಯಗಳಿಗೆ ಸಮರ್ಪಿತ ಬದುಕಿನ ದಾಖಲೆಯಾಗಿ ‘ನಿಸ್ಸ್ವಾರ್ಥ ಸಿರಿ’

ಬೆಂಗಳೂರು: ಮೌಲ್ಯಾಧಾರಿತ ಬದುಕು ಮತ್ತು ಸಮಾಜಮುಖಿ ಸೇವೆಯ ಮೂಲಕ ನಾಡಿನ ಗೌರವಕ್ಕೆ ಪಾತ್ರರಾಗಿರುವ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅವರ ವಜ್ರಪೂರ್ಣ ಸೇವಾ ಬದುಕಿನ ಸ್ಮರಣಾರ್ಥವಾಗಿ ‘ನಿಸ್ಸ್ವಾರ್ಥ...

More Articles Like This

error: Content is protected !!
Join WhatsApp Group