Homeಸುದ್ದಿಗಳುಲೇಖನ : ದಕ್ಕುವುದು ಪ್ರಯತ್ನಕ್ಕೆ ತಕ್ಕದ್ದು

ಲೇಖನ : ದಕ್ಕುವುದು ಪ್ರಯತ್ನಕ್ಕೆ ತಕ್ಕದ್ದು

ಜೀ ವನದಲ್ಲಿ ಎಲ್ಲವೂ ದೈವೀದತ್ತವಾಗಿದೆ. ನೂರಾರು ಕನಸುಗಳ ಹೊತ್ತ ಕಂಗಳಿಗೆ ಪ್ರಯತ್ನ ಮಾತ್ರ ನಮ್ಮದೇ ಆಗಬೇಕು. ಪುಟ್ಟ ಮಗುವಾಗಿ ನಡೆಯುವುದನ್ನು ಕಲಿಯುವುದರಿಂದ ಹಿಡಿದು ಇತರರಿಗೆ ಚೈತನ್ಯ ನೀಡುವ ಪ್ರೇರಣದಾಯಕವಾಗುವ ಸ್ಪೂರ್ತಿ ತುಂಬುವ ಜಗವ ಪೊರೆವ ದೇವತಾ ಸ್ವರೂಪ ಆಗುವವರೆಗೆ ಪ್ರಯತ್ನ ಜಾರಿಯಲ್ಲಿರಬೇಕು. ನಿತ್ಯದ ಗೊಡವೆ ಕೊಡವಿ ಸದಾ ಕಾರ್ಯೋನ್ಮುಖರಾಗಬೇಕು. ಅಣ್ಣ ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಅಮೃತವಾಣಿಯನ್ನು ಬದುಕಿನಲ್ಲಿ ಪಾಲಿಸಬೇಕು. ಅತ್ಯದ್ಭುತವೆನಿಸುವ ಮಹತ್ಕಾರ್ಯಗಳಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತದೆ.

ಸಿಗ್ಮಂಡ್ ಫ್ರೈಡ್‌ನ ಸಿದ್ಧಾಂತದ ಪ್ರಕಾರ ಸುಪ್ತಮನಸ್ಸಿನಲ್ಲಿ ಅದುಮಿಟ್ಟ ಬಯಕೆಗಳು ಅನುಭವಗಳು ಜಾಗೃತ ಮನಸ್ಸಿನೊಳಗೆ ನುಗ್ಗಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ ಪ್ರಯತ್ನದ ಅನುಮತಿ ಸಿಗದೆ ಹಿಂದೊತ್ತಲ್ಪಡುತ್ತದೆ. ಕನಸಾಗಿ ಪ್ರಕಟವಾಗುವ ಮೊದಲು ಕನಸಿನ ಪರಿಶೀಲನೆಯ ಅನುಮತಿ ಬೇಕು. ಎಚ್ಚರದ ಸ್ಥಿತಿಯಲ್ಲಿ ಈಡೇರದ್ದು ಈಗ ಒತ್ತಡದ ಅನುಮತಿ ಪಡೆದು ನಿದ್ರೆಯಲ್ಲಿ ಕನಸಿನ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ದೊಡ್ಡ ಕನಸು ಕಾಣುವುದು ನಿಜ ಜೀವನದಲ್ಲಿ ಸಾಹಸಗಳಿಗೆ ಕಾರಣವಾಗಬಹುದು. ಅಸಾಮಾನ್ಯ ಸ್ಥಳಗಳಿಗೆ ಕರೆದೊಯ್ಯಬಹುದು. ಆದ್ದರಿಂದ ಅಸಾಧ್ಯವಾದ ಕೆಲಸಗಳನ್ನು ಮಾಡಲು ಪ್ರೇರೇಪಿಸಿಕೊಳ್ಳಬೇಕು.

ಪ್ರಯತ್ನದ ಸತ್ವವನ್ನು ತಿಳಿಯದೇ ಇದ್ದರೆ ಜೀವನದ ಸೌಂದರ್ಯವನ್ನು ತಿಳಿಯಲು ಸಾಧ್ಯವೇ ಇಲ್ಲ. ಪ್ರಯತ್ನದ ಸತ್ವದ ಜೊತೆ ಸೇರಿಕೊಂಡಾಗ ಭವಿಷ್ಯದ ಕಲ್ಪನೆಯನ್ನು ಅಂದಾಜಿಸಬಹುದು. ಆದರೆ ಆಧುನಿಕ ವಿದ್ಯಮಾನದ ಇವತ್ತಿನ ದಿನಗಳಲ್ಲಿ ನಮ್ಮ ಯೋಚನಾ ಕ್ರಮದಲ್ಲಿ ಎಲ್ಲೋ ಎಡವಟ್ಟನ್ನು ತಂದೊಡ್ಡುವ ಒತ್ತಡವನ್ನು ಮುಂದಿಟ್ಟು ಪ್ರಯತ್ನದ ಹಾದಿಯನ್ನು ತುಳಿಯುತ್ತಿಲ್ಲ. ಪ್ರಯತ್ನದ ಪರಂಪರೆಯನ್ನು ಕಳಚಿಬಿಡುವ ಬಿಸಾಕಿ ಬಿಡುತ್ತಿದ್ದೇವೆಯೋ ಎನ್ನುವ ಸಂದರ್ಭ ಇವತ್ತು ನಮ್ಮ ಕಣ್ಮುಂದೆ ರಾರಾಜಿಸುತ್ತಿದೆ. ಸ್ವಯಂ ಪ್ರಯತ್ನದಿಂದ ನಮ್ಮ ಯಶಸ್ಸು ಸಾಧ್ಯವಾಗುತ್ತದೆ.

ಬಾಳಿನುದ್ದಕ್ಕೂ ಗದ್ದಲದಲ್ಲೇ ಬದುಕಿ ಅಂತಿಮ ಕ್ಷಣದಲ್ಲಿ ಪ್ರಯತ್ನದ ಮಹತ್ವ ತಿಳಿದರೆ ಏನು ಉಪಯೋಗ? ಕೆಲವರು ಮಾತ್ರ ನಿಃಶಬ್ದವಾಗಿ ಪ್ರಯತ್ನದ ಜಾಡನ್ನು ಹಿಡಿದು ಅದ್ಭುತ ಸಾಧಕರಾಗುತ್ತಾರೆ. ತಮ್ಮ ಛಾಪನ್ನು ಎಲ್ಲೆಲ್ಲೂ ಮುದ್ರಿಸುತ್ತಾರೆ. ಅನೇಕರು ಬದುಕಿನಲ್ಲಿ ಅಸ್ತಿತ್ವಕ್ಕೆ ಮಾಡುವ ಒದ್ದಾಟ ಪರದಾಟಗಳೇ ಹೆಚ್ಚಾಗಿ ಕನಸು ನನಸಾಗಿಸುವ ಪ್ರಯತ್ನ ಹಿಂದಕ್ಕೆ ಬೀಳುತ್ತವೆ. ಇಂಥವರಿಗೆ ಬದುಕಿನಿಂದ ಏನು ಸಿಗುತ್ತದೆ ಎನ್ನುವುದೇ ಮುಖ್ಯವಾಗಿರುತ್ತದೆ. ಇವರಿಗೆ ಪಡೆಯುವುದಷ್ಟೇ ಗೊತ್ತು. ಕೊಡುವುದಕ್ಕೆ ಏನೂ ಇರುವುದಿಲ್ಲ. ಇಂಥವರ ಬದುಕು ತಮ್ಮ ಪ್ರಯೋಜನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲಿ ಅಮೂಲ್ಯ ಬದುಕು ಕಳೆದುಹೋಗುತ್ತದೆ. ನಮ್ಮನ್ನು ನಾವು ಪ್ರಯತ್ನದ ತಾಲೀಮಿನಲ್ಲಿ ತೊಡಗಿಸಿಕೊಳ್ಳದಿದ್ದರೆ ಚೆಂದದ ಅರ್ಥಪೂರ್ಣ ಬದುಕು ತೀರಾ ಕಷ್ಟ.

ಏನನ್ನಾದರೂ ಪಡೆಯಲು ಕಲಿಯಲು ಪ್ರಯತ್ನದ ಅವಶ್ಯಕತೆಯುಂಟು. ಬದುಕಿನಲ್ಲಿ ನಾನಾ ಕಾರಣಗಳಿಗೆ ಪ್ರಯತ್ನದ ರಸ್ತೆಯಲ್ಲಿ ನಡೆಯಲು ಕಿರಿಕಿರಿ ಮಾಡಿಕೊಂಡರೆ ಬದುಕಿನಿಂದ ಮತ್ತೇನನ್ನೂ ಪಡೆದುಕೊಳ್ಳಲು ಆಗುವುದಿಲ್ಲ. ಜತೆಗೆ ಬದುಕಿಗೆ ಮತ್ತೇನನ್ನೂ ನೀಡಲೂ ಆಗುವುದಿಲ್ಲ. ನಮ್ಮೆಲ್ಲ ನೆಪಗಳನ್ನು ನಿಲ್ಲಿಸಬೇಕು. ಸಮಯ ವ್ಯರ್ಥದ ಭಾವಗಳ ಕೊಂಡಿಗಳನ್ನು ಹಿಂತೆಗೆದುಕೊಳ್ಳಬೇಕು. ಏಕಾಂಗಿಯಾಗಿ ಮೌನವಾಗಿ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯವೆಂದು ಪ್ರಯತ್ನದ ಹಾದಿ ಹಿಡಿಯಬೇಕು. ಒಳ ನುಗ್ಗುವ ಧೂಳನ್ನು ತಡೆದರೆ ಮನೆ ಸ್ವಚ್ಛವಾಗಿರುವಂತೆ ನಮ್ಮ ಒಳಗನ್ನು ಪ್ರೇರೇಪಿಸುವ ಹೊರಗನ್ನು ಗೆದ್ದರೆ ಅಂತರAಗದ ನಿಯಂತ್ರಣ ಬಹಳ ಸುಲಭವಾಗುತ್ತದೆ. ಬಯಸಿದ್ದು ಮತ್ತು ಪಡೆಯುವುದರ ನಡುವಿನ ಅಂತರ ತಿಳಿದು ಪ್ರಯತ್ನಿಸಬೇಕು. ಪ್ರಯತ್ನಕ್ಕೆ ತಕ್ಕದ್ದು ಖಂಡಿತ ದಕ್ಕುವುದು.

ಜಯಶ್ರೀ ಅಬ್ಬಿಗೇರಿ                                       ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group