ಲೇಖನ : ನೆಮ್ಮದಿಯ ಬದುಕಿಗೆ ಕೃತಜ್ಞತೆ

0
195

ಮನುಷ್ಯನ ಗುಣವೇ ವಿಚಿತ್ರ ತನಗೆ ತೊಂದರೆ ಕೊಟ್ಟವರನ್ನೇ ಪದೇ ಪದೇ ನೆನಪಿಸಿಕೊಳ್ಳುತ್ತಾನೆ. ಕೈಯಲ್ಲಿರುವ ಕ್ಷಣ ಅದೆಷ್ಟೇ ಸುಂದರವಾಗಿದ್ದರೂ ಸಂತಸವಾಗಿರುವುದನ್ನು ಮರೆಯುತ್ತಾನೆ. ಕೆಟ್ಟ ಗಳಿಗೆಯನ್ನು ನೆನೆನೆನೆದು ಕಣ್ಣೀರು ಹಾಕುತ್ತಾನೆ. ತನ್ನ ಸಂತೋಷಕ್ಕೆ ತಾನೇ ಕಲ್ಲು ಹಾಕಿಕೊಳ್ಳುತ್ತಾನೆ. ನೆಮ್ಮದಿಗೆ ಮನುಷ್ಯನ ಮನಸ್ಸು ಮತ್ತು ಆಲೋಚನೆಗಳನ್ನು ಹದಗೊಳಿಸಲೇಬೇಕು. ಮನಸ್ಸನ್ನು ಒಳ್ಳೆಯದರತ್ತ ಎಳೆದು ತಂದು ಕಟ್ಟಬೇಕು. ಎಲ್ಲಾ ಇರುವ ವಾತಾವರಣದಲ್ಲಿ ಅಂದುಕೊಂಡಂತೆ ಬದುಕುವುದು ಸುಲಭವಲ್ಲ. ಹಾಗಿದ್ದಾಗ್ಯೂ ನೆಮ್ಮದಿಯ ಜೀವನಕ್ಕೆ ನಿಮ್ಮಲ್ಲಿರುವುದಕ್ಕೆ ಕೃತಜ್ಞರಾಗಿರಿ; ನೀವು ಹೆಚ್ಚಿನದನ್ನು ಹೊಂದುವಿರಿ. ನಿಮ್ಮ ಬಳಿ ಇಲ್ಲದಿರುವುದರ ಮೇಲೆ ಗಮನಹರಿಸಿದರೆ, ನಿಮಗೆ ಎಂದೂ ಸಾಕಾಗುವುದಿಲ್ಲ. ನೆಮ್ಮದಿಯ ಜೀವನ ನಡೆಸಲು ಸರಳ ಮಾರ್ಗಗಳಿವೆ. ಅದರಲ್ಲೊಂದು ಮುಖ್ಯವಾದುದು ಎಂದರೆ ಕೃತಜ್ಞತೆಯನ್ನು ಮೇಲಂಗಿಯಂತೆ ಧರಿಸಿ ಮತ್ತು ಅದು ನಿಮ್ಮ ಜೀವನದ ಪ್ರತಿಯೊಂದು ಮೂಲೆಯನ್ನು ಪೋಷಿಸುತ್ತದೆ. ಎಂದಿದ್ದಾರೆ ರೂಮಿ.

ಕಾಮ ಕ್ರೋಧ ಮದಗಳು ನರಕದ ಹಾದಿಗಳು. ಇವು ಯಾವಾಗಲೂ ನಮ್ಮ ಬೆಂಬತ್ತಿ ಕಾಡುತ್ತವೆ. ಇವುಗಳ ಗೆಳೆತನ ಬಿಡಬೇಕು. ನೆಮ್ಮದಿಯ ಬದುಕಿಗೆ ಪ್ರಮುಖವಾಗಿ ಬೇಕಿರುವುದು ಕೃತಜ್ಞತೆ. ನಮ್ಮ ಬಳಿ ಇರುವ ಎಲ್ಲದಕ್ಕೂ ನಾವು ಕೃತಜ್ಞರಾಗಿರಬೇಕು. ಆಗ ಮನಸ್ಸು ಪ್ರಪುಲ್ಲವಾಗುತ್ತದೆ. ನೆಮ್ಮದಿ ಬಳಿ ಬರುತ್ತದೆ. ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ, ಅತ್ಯುನ್ನತ ಮೆಚ್ಚುಗೆಯ ಪದಗಳನ್ನು ಹೇಳುವುದಲ್ಲ. ಆದರೆ ಅಂಥ ಶ್ರೇಷ್ಠ ಪದಗಳಿಂದ ಬದುಕುವುದು. ಎಂಬುದನ್ನು ನಾವು ಎಂದಿಗೂ ಮರೆಯಬಾರದು ಎಂದಿದ್ದಾರೆ ಅಮೇರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ.

ಕೃತಜ್ಞತೆಯು ನಮ್ಮ ಭೂತಕಾಲದ ಅರ್ಥವನ್ನು ನೀಡುತ್ತದೆ. ಇಂದಿನ ಶಾಂತಿಯನ್ನು ತರುತ್ತದೆ. ನಾಳೆಯ ದೃಷ್ಟಿಯನ್ನು ತರುತ್ತದೆ. ನಮಗೆ ಬರುವ ಪ್ರತಿಯೊಂದು ಒಳ್ಳೆಯ ವಿಷಯಕ್ಕೂ ಕೃತಜ್ಞರಾಗಿರುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಕೃತಜ್ಞತೆಯು ಸದ್ಗುಣಗಳಲ್ಲಿ ಶ್ರೇಷ್ಠವಾದದ್ದು. ಮಾತ್ರವಲ್ಲ ಇತರ ಎಲ್ಲ ಒಳ್ಳೆಯದರ ಮೂಲವಾಗಿದೆ. ಕೃತಜ್ಞತೆಯನ್ನು ಅಭ್ಯಾಸ ಮಾಡಿದಾಗ ಇತರರ ಕಡೆಗೆ ಗೌರವ ಭಾವನೆ ಇರುತ್ತದೆ. ಜೀವನದಲ್ಲಿ ಎಲ್ಲವನ್ನೂ ನಕಲಿಸಬಹುದು ಆದರೆ ನೆಮ್ಮದಿಯನ್ನಲ್ಲ. ನೆನಪಿರಲಿ ಕೃತಜ್ಞತೆಯಿಂದ ಮಣ್ಣು ಕೂಡ ಮಾಣಿಕ್ಯವಾಗುವ ಸಂಭವ ಹೆಚ್ಚಿದೆ.
=======================================

ಜಯಶ್ರೀ.ಜೆ. ಅಬ್ಬಿಗೇರಿ. ಬೆಳಗಾವಿ
ಇಂಗ್ಲೀಷ್ ಉಪನ್ಯಾಸಕರು
೯೪೪೯೨೩೪೧೪೨