ಪ್ರತಿಮಾ ಹೆಜ್ಜೆ ಗುರುತು ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ. ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಟ್ರಸ್ಟ್ ವತಿಯಿಂದ, ಚನ್ನರಾಯಪಟ್ಟಣದ ಹೇಮಾವತಿ ಪಾರ್ಕಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ವಿಶೇಷ ಏನೆಂದರೆ ಈಗ ನೇರೆಲೆ ಹಣ್ಣಿನ ಕಾಲ. ಆದ ಕಾರಣ ಬಂದ ಎಲ್ಲಾ ವೇದಿಕೆಯ ಗಣ್ಯರಿಗೆ ಮತ್ತು ಪ್ರೇಕ್ಷಕರಿಗೆ ಒಂದೊಂದು ನೇರಳೆ ಹಣ್ಣು ತಿನ್ನಲು ಕೊಟ್ಟು, ಬೀಜವನ್ನು ನೆಲಕ್ಕೆ ಹಾಕಿ ಮಣ್ಣು ಮುಚ್ಚುವುದು. ಜೊತೆಗೆ ಗಿಡಗಳನ್ನು ನೆಡುವುದು.
ಉಮೇಶ್ ತೆಂಕನಹಳ್ಳಿ ಚನ್ನರಾಯಪಟ್ಟಣ ರವರು ಈ ವರದಿ ಗ್ರೂಪ್ ನಲ್ಲಿ ಹಾಕಿದ್ದರು. ಇದು ಓದಿ
ನನಗೆ ನೆನಪಾಗಿದ್ದು ನಮ್ಮೂರು ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ನೇರಳೆ ಮರ, ಮಾವಿನ ಮರ, ಹತ್ತಿ ಹೆಣ್ಣಿನ ಮರ.. ಇವುಗಳನ್ನೆಲ್ಲಾ ಯಾರು ನೆಟ್ಟು ಬೆಳೆಸಿದ್ದರೋ..!
ಆದರೆ ಮಳೆಗಾಲದಲ್ಲಿ ನೇರಳೆ ಮರದಿಂದ ಉದುರಿ ಬಿದ್ದ ನೇರಳೆ ಹಣ್ಣುಗಳು ಮುಖ್ಯ ರಸ್ತೆಯಲ್ಲಿ ಸಂಚರಿಸುವ ಬಸ್ಸು ಲಾರಿ ಕಾರುಗಳ ಚಕ್ರಕ್ಕೆ ಸಿಕ್ಕಿ ಇಡೀ ರಸ್ತೆಯಲ್ಲಾ
ನೀಲಿ ಬಣ್ಣವಾಗಿರುತ್ತಿತ್ತು. ನಾವು ರಸ್ತೆಯಲ್ಲಿ ಬಿದ್ದ ನೇರಲೆ ಹಣ್ಣುಗಳನ್ನು ಆರಿಸಿಕೊಂಡು ತಿನ್ನುತ್ತಿದ್ದವು. ಆಗ ನಮ್ಮ ನಾಲಿಗೆಯೂ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು. ಹಳ್ಳಿಗಳಿಂದ ರೈತರು ಚಿಕ್ಕ ಚಿಕ್ಕ ವ್ಯಾಪಾರಿಗಳು ನೇರಲೆ ಹಣ್ಣು ಕುಕ್ಕೆಯಲ್ಲಿ ಹೊತ್ತು ತಂದು ಕೂಗಿ ಮಾರುತ್ತಿದ್ದರು. ಕಾಲಕ್ರಮೇಣ ಈ ಮರಗಳೆಲ್ಲಾ ಒಣಗಿ ಮುರಿದು ಬಿದ್ದವು. ವಿದ್ಯುತ್ ಕಂಬಗಳಿಗಾಗಿ ಮರದ ಕೊಂಬೆಗಳನ್ನು ಕಡಿದರು. ಒಣಗಿದ ಮರಗಳು ಮಳೆ ಗಾಳಿ ಹೊಡೆತಕ್ಕೆ ರಸ್ತೆ ಬದಿ ಬಿದ್ದವು.
ನಾನು ನೋಡು ನೋಡುತ್ತಲೇ ಅವುಗಳನ್ನು ನಮ್ಮೂರ ಮಂದಿ ಕೊಡಲಿ ತಂದು ಕಡಿದುಕೊಂಡು ಹೋದರು. ನಾನು ಇದನ್ನೆಲ್ಲಾ ನೋಡುತ್ತಾ ಬೆಳೆದಂತೆ ಬೆಳೆದ ಮರಗಳೆಲ್ಲಾ ಬಿದ್ದು ನಾಶವಾದವು. ಮತ್ತೆ ಆ ಜಾಗದಲ್ಲಿ ಯಾರು ಮರ ನೆಡಲಿಲ್ಲ. ಹಾಗೇ ನೋಡಿದರೆ ಗೊರೂರುನಿಂದ ಹಾಸನ ರಸ್ತೆಯುದ್ಧಕ್ಕೂ ಸಾಲು ಸಾಲು ಮರಗಳಿದ್ದವು. ರಸ್ತೆ ವಿಸ್ತರಣೆಗಾಗಿ ಅವುಗಳನ್ನು ಕಡಿದರು. ಮತ್ತೆ ನೆಡಲಿಲ್ಲ. ಬಹುಶಃ ಇದು ಎಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ಬಾಲ್ಯದಲ್ಲಿ ನಾವು ಕಂಡ
ಮರದ ದೃಶ್ಯಗಳು ಈಗ ಅಷ್ಟಾಗಿ ಕಾಣುತ್ತಿಲ್ಲ. ಬಸ್ಸಿನಲ್ಲಿ ಪ್ರಯಣಿಸುವಾಗ ಬಿಸಿ ಗಾಳಿ. ರಸ್ತೆ ಬದಿ ಮರ ನೆಡುವ ಕೆಲಸಗಳು ನಡೆಯಬೇಕಿದೆ. ಹಿಂದೆಲ್ಲಾ ಕಾರು ಶ್ರೀಮಂತರ ಸ್ವತ್ತಾಗಿ ಬಸ್ಸುಗಳು ವಿರಳವಾಗಿರುವಾಗ ನಾವು ನೆಡದೆ ಹೋಗುತ್ತಿದ್ದೆವು. ಜೇಬಲ್ಲಿ ದುಡ್ದಿಲ್ಲದ ದಿನಗಳಲ್ಲಿ 7 ಕಿ.ಮೀ ದೂರದ ಅರಕಲಗೂಡಿಗೆ ನಡೆದುಕೊಂಡೇ ಹೋಗಿ ಯೋಗ ಟಾಕೀಸ್ ನಲ್ಲಿ ಜೇಡರ ಬಲೆ, ದಾರಿ ತಪ್ಪಿದ ಮಗ ಸಿನಿಮಾ ನೋಡಿ ಶನಿವಾರ ಸಂಜೆ ಒಳಗೆ ದಾರಿ ತಪ್ಪದೇ ಮನೆಗೆ ಬರುತ್ತಿದ್ದವು. ಆಗೆಲ್ಲಾ ನಮಗೆ ಈ ರಸ್ತೆ ಬದಿಯ ಮರಗಳೇ ನೆರಳಾಗಿ ನಮಗೆ ಪ್ರಯಣದ ಆಯಾಸವಾಗುತ್ತಿರಲಿಲ್ಲ.
ಹಾಸನದ ಮಂಗಳವಾರದ ಸಂತೆಯಲ್ಲಿ ನಮ್ಮ ತಂದೆ ಹೋಲ್ ಸೇಲ್ ದರದಲ್ಲಿ ಮೆಣಸಿನ ಕಾಯಿ ಚೀಲ ಖರೀದಿಸಿ ಗಾಡಿಗೆ ಹಾಕಿ ಪಿಕ್ಟರ್ ಪ್ಯಾಲೇಸ್ ನಲ್ಲಿ ಮ್ಯಾಟ್ನಿ ಶೋ ನೋಡಿಕೊಂಡು ಸಂಜೆ ವೇಳೆಗೆ ಮನೆಗೆ ಬರುತ್ತಿದ್ದರು. ನಮ್ಮ ಅಂಗಡಿ ಶ್ರೀಕಾಂತ್ ಚಿಲ್ಲರೆ ಅಂಗಡಿಗೆ ಬೇಕಾದ ಬೇಳೆ, ಬೆಲ್ಲ ಇತ್ಯಾದಿ ದಿನಸಿ ಸಾಮಾನುಗಳನ್ನು ಇದೇ ಗಾಡಿಗೆ ಹಾಕುತ್ತಿದ್ದರು. ಕೋಟೆ ರಾಜನಿಗೆ ಮಂಗಳವಾರ ಸಂತೆ ವಾರದ ಉಪ್ಪು ಎಣ್ಣಿ ಊಟದ ಖರ್ಚಿನ ಸಂಪಾದನೆ. ಮರಗಳ ನೆರಳಿನಲ್ಲಿ ಎತ್ತುಗಳು ಆಯಾಸವಿಲ್ಲದೇ ತಂಪಿನಲ್ಲಿ ಗಾಡಿ ಎಳೆದುಕೊಂಡು ರಾತ್ರಿ ಏಳು ಗಂಟೆ ಹೊತ್ತಿಗೆ ಸರಿಯಾಗಿ ಗೊರೂರಿಗೆ ಬರುತ್ತಿದ್ದವು. ರೈತರು ಜಾತ್ರೆ, ಸಂತೆಗೆ ಎತ್ತುಗಳನ್ನು ಮಾರಾಟ ಮಾಡಲು ನೆಡದೇ ಹೋಗುತ್ತಿದ್ದರು.. ಈಗ ಎತ್ತು ಮಾರುವವರು ಕೊಳ್ಳುವವರು ಲಾರಿಯಲ್ಲೇ ಸಾಗಿಸುತ್ತಿದ್ದಾರೆ. ಹಿಂದೆಲ್ಲಾ ಲೋಕೋಪಯೋಗಿ ಇಲಾಖೆ ನಿರ್ವಹಣೆಯ ರಸ್ತೆಗಳ ಎರಡು ಬದಿ ಮರ ನೆಟ್ಟವರು ಯಾರೋ? ಬಹುಶಃ ಇದೇ ಇಲಾಖೆಯೇ ನೆಟ್ಟಿರಬೇಕು. ಈಗ ಏಕೆ ಇದು ಸಾಧ್ಯವಾಗುತ್ತಿಲ್ಲ..?
—
ಗೊರೂರು ಅನಂತರಾಜು,
ಹಾಸನ
ಮೊಬೈಲ್: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್,
ಹಾಸನ – 573201