ಆತ್ಮೀಯರೆ, ಚಿತ್ರಕಲೆ ಎನ್ನುವುದು ಕಲಾತ್ಮಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮಗಳಲ್ಲಿ ಒಂದು. ಇದು ವಿವಿಧ ತಂತ್ರಗಳ ಮೂಲಕ ಭಾವನೆಗಳು, ಕಥೆಗಳು, ಪರಿಕಲ್ಪನೆಗಳು ಮತ್ತು ನಿಸರ್ಗದ ಸೌಂದರ್ಯವನ್ನು ಚಿತ್ರಿಸುವ ಕಲೆ. ಚಿತ್ರಕಲೆಯು ಮನುಷ್ಯನ ಅತಿಹಳೆಯ ಕಲಾ ಪ್ರಕಾರಗಳಲ್ಲಿ ಒಂದು ಆಗಿದೆ.
ನಾ ಯಾಕೆ ಹೀಗೆ ಹೇಳುತ್ತಿರುವೆ ಅಂತ ನಿಮಗೆ ಅನ್ಸಿರಬೇಕು..! ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿಷ್ಠಿತ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ( ಪ್ರೌಢ ಶಾಲಾ ವಿಭಾಗ ) ದಲ್ಲಿ ಚಿತ್ರಕಲಾ ಸೇವೆಯಲ್ಲಿ ಸುಮಾರು 29 ವರ್ಷಗಳನ್ನು ಮುಗಿಸಿ, ಮೂವತ್ತರ ವಸಂತಕ್ಕೆ ಕಾಲಿಟ್ಟಿರುವ ಎಸ್. ಎಸ್. ಕುರಣೆ ಎಂಬ ಕರುನಾಡು ಕನ್ನಡರತ್ನ ದ ಬಗ್ಗೆ ಹೇಳುತ್ತಿರುವೆ.
ಶ್ರೀಯುತರು ಒಂದನೇ ಜೂನ್ 1973 ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅಡಹಳ್ಳಿಯಲ್ಲಿ ಶೆಟ್ಟೆಪ್ಪ ಮತ್ತು ಯಮುನಾಬಾಯಿ ಎಂಬ ಬಡ ದಂಪತಿಗಳ ಉದರದಲ್ಲಿ ಜನಿಸಿ ಕಡು ಬಡತನವನ್ನೇ ನೆಚ್ಚಿಕೊಂಡ ಇವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸವನ್ನು ಅಥಣಿ ಹಾಗೂ ಧಾರವಾಡ ( ಆರ್ಟ್ ಗ್ಯಾಲರಿ ) ದಲ್ಲಿ ( ಕಲಾ ಶಿಕ್ಷಣ )ಮುಗಿಸಿದರು.
ನಾನು ಕಂಡಂತೆ ಈ ಕುವರ ಮಗು ಮನಸ್ಸಿನ ಮನ್ಮಥ, ಸರಳ ವ್ಯಕ್ತಿತ್ವದ ಸರದಾರ, ಯಾರ ಮನಸ್ಸಿಗೂ ನೋವನ್ನುಂಟು ಮಾಡದ ಮಗಧೀರ. ಚಿತ್ರಕಲೆಯಲ್ಲಿ ತಮ್ಮ ಕೈಚಳಕವನ್ನು ತೋರಿಸುವ ಇವರು ಅಕ್ಷರದಲ್ಲಿ ಅದ್ಭುತವಾದ ಚಿತ್ರಗಳನ್ನು ಬಿಡಿಸುವ ಇವರು ಇದರಲ್ಲಿಯೇ ಹೆಸರುವಾಸಿ…ಅದರಲ್ಲಿ ಪ್ರಮುಖವಾದವುಗಳೆಂದರೆ, ಸರ್ಕಾರದ ಹಲವಾರು ಯೋಜನೆಗಳಾದ ಖಾತ್ರಿ ಶಿಕ್ಷಣ ಶಾಲೆ, ಕಲಿ-ನಲಿ, ನಲಿ – ಕಲಿ, ಶಾಲಾ ಶೈಕ್ಷಣಿಕ ಗುಣವರ್ಧನಾ ವರ್ಷ,ಸರ್ವ ಶಿಕ್ಷಣ ಅಭಿಯಾನ, ಅಕ್ಷರ ದಾಸೋಹ, ಚಿಣ್ಣರ ಅಂಗಳ ಕೇಂದ್ರ, ಬೀದಿಯಿಂದ ಶಾಲೆಗೆ – ಕೂಲಿಯಿಂದ ಶಾಲೆಗೆ, ಚಂದ್ರಯಾನ -೩ ಯಶಸ್ವಿ ಭಾರತ ಐತಿಹಾಸಿಕ ಸಾಧನೆ. ಇವುಗಳ್ಳಲ್ಲದೆ, ಜನರಲ್ಲಿ ಜಾಗೃತಿ ಮೂಡಿಸಲು ನಮ್ಮಮತ – ನಮ್ಮ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ,ನಿಮ್ಮ ಮತ ಗೌಪ್ಯವಿರಲಿ,ಮತ ಮಾರಿಕೊಳ್ಳಬೇಡಿ…..ಮುಂತಾದವು
ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿಕ್ಷಕರ ದಿನಾಚರಣೆಯ ಶುಭಾಶಯಗಳು,ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹೊಸ ವರುಷದ ಶುಭಾಶಯಗಳು,ಮಹಾತ್ಮಾ ಗಾಂಧಿ ಜಯಂತಿಯ ನಿಮಿತ್ತ ಭಾರತ ಬಿಟ್ಟು ತೊಲಗಿ, ಅಂಬೇಡ್ಕರ್ ರವರ ಜಯಂತಿ ನಿಮಿತ್ತ ದಲಿತ ರಕ್ಷಕ ಡಾ. ಬಿ.ಆರ್.ಅಂಬೇಡ್ಕರ್, ಬಸವ ಜಯಂತಿ ನಿಮಿತ್ತ ಜಗದಣ್ಣ ಬಸವಣ್ಣ, ಓಂ ನಮಃ ಶಿವಾಯ ಇತ್ಯಾದಿ ಚಿತ್ರಗಳೆಲ್ಲವೂ ಅವರ ಅಕ್ಷರ ಕಲೆಯಲ್ಲಿ ಅರಳಿದ ಸಂದೇಶಗಳು.
ಶಾಲಾ ಹಂತದಲ್ಲಿ ರಂಗೋಲಿ ( SSLC ವಿದ್ಯಾರ್ಥಿಗಳಿಗೆ ವಿಷಯಾಧಾರಿತ ) ಸ್ಪರ್ಧೆ,ಅನೇಕ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಚಿತ್ರಕಲಾ ಸಮ್ಮೇಳನಗಳಲ್ಲಿ ಚಿತ್ರಕಲಾ ಪ್ರದರ್ಶನವನ್ನು ಮಾಡಿದ್ದಾರೆ ಮತ್ತು ಇನ್ನೂ ಮಾಡುತ್ತಿದ್ದಾರೆ.ಸರ್ವರ ಜೊತೆ ಸತ್ಸಂಗದಿಂದ ಇರುವ ಅಕ್ಷರದಲ್ಲಿ ಚಿತ್ರಬಿಡಿಸುವ ಕಲೆಯಿಂದ ಖ್ಯಾತರಾದ ಇವರನ್ನು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಉತ್ತಮ ಸಂಘಟನಾಕಾರ, ಸ್ವಾಭಿಮಾನಿ ಕಲಾವಿದ, ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ, ಆದರ್ಶ ಶಿಕ್ಷಕ ಪ್ರಶಸ್ತಿಗಳು ಬೆನ್ನಟ್ಟಿ ಬಂದಿವೆ.
ಇನ್ನೂ ಪ್ರಮುಖವಾದವುಗಳೆಂದರೆ, ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ ) ಬೆಂಗಳೂರು, ಇವರು ಕೊಡಮಾಡುವ “ಕಲಾರತ್ನ ರಾಜ್ಯ ಪ್ರಶಸ್ತಿ ” ಯನ್ನು ಹಾಗೂ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ( ರಿ ),ಬ್ಯಾಕೂಡ ಇವರು ಕೊಡಮಾಡುವ ” ಕನ್ನಡರತ್ನ ರಾಜ್ಯ ಪ್ರಶಸ್ತಿ” ಚೇತನ ಫೌಂಡೇಶನ್ ( ರಿ ) ಕರ್ನಾಟಕ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಧಾರವಾಡ, ಕರ್ನಾಟಕ ಸೋಶಿಯಲ್ ಕ್ಲಬ್ ಧಾರವಾಡ, ಇವರು ಕೊಡಮಾಡುವ ರಾಷ್ಟ್ರ ಮಟ್ಟದ ‘ “ಭಾರತ ಸೇವಾ ರತ್ನ ಪ್ರಶಸ್ತಿ ” ಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇವರ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇಷ್ಟೆಲ್ಲಾ ಪ್ರಶಸ್ತಿ ಗಳಿಂದ ಅಲಂಕೃತವಾದ ಶೃಂಗಾರದ ದಿನಕರ ಎಂದೇ ಹೇಳಬಹುದು.
ಚಿತ್ರಕಲೆ ಕೇವಲ ಕಲಾವಿದನ ಅಭಿವ್ಯಕ್ತಿಯ ಸಾಧನವಾಗಿರದೇ, ಸಮಾಜದ ಮನೋಭಾವ, ಸಂಸ್ಕೃತಿ, ಮತ್ತು ಐತಿಹಾಸಿಕ ಘಟನಾವಳಿಗಳನ್ನು ಪ್ರತಿಬಿಂಬಿಸುವ ಒಂದು ಶಕ್ತಿಯುತ ಮಾಧ್ಯಮವಾಗಿದೆ.
ಏನೇ ಆಗಲಿ ಅವರನ್ನು ನಮ್ಮ ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರಶಸ್ತಿಗಳ ಸರದಾರ, ನಮ್ಮ ಸಂಸ್ಥೆಯ ಹೆಮ್ಮೆ ಎಂದೇ ಕರಿಯಬಹುದು. ಇನ್ನೂ ಶ್ರೀಯುತರು ಹತ್ತು, ಹಲವಾರು ಪ್ರಶಸ್ತಿಗಳನ್ನು ತೆಗೆದುಕೊಂಡು ಇವರ ಸಾಧನೆಯ ನಾಗಾಲೋಟದ ಕುದುರೆ ಆಕಾಶದೇತ್ತರಕ್ಕೆ ಹಾರಲಿ ಎಂದು ಹಾರೈಸೋಣ
ಸಾಧನೆ ಎಂಬುದು ಸಾಧಕನ ಸ್ವತ್ತೆ ಹೊರತು, ಸೋಮಾರಿಯ ಸ್ವತ್ತಲ್ಲ
ರಮೇಶ. ಎಸ್. ಬಿರಾದಾರ
ಶಿಕ್ಷಕರು
ಎಸ್. ಎಸ್. ಆರ್. ಪ್ರೌಢ ಶಾಲೆ, ಮೂಡಲಗಿ.