ನಾನು ಕನಸು ಮನಸಿನಲ್ಲೂ ಊಹಿಸಿರದ ಘಟನೆ. ಕಲ್ಪನೆಯಲ್ಲೂ ಕಲ್ಪಿಸದ ಸಂಗತಿ. ರಾಮನಗರದ ಕೇಂದ್ರ ಕಾರಾಗೃಹದಲ್ಲಿ ಶಾಲು, ಹಾರ.. ಆತ್ಮೀಯ ಅವಿಸ್ಮರಣೀಯ ಪುರಸ್ಕಾರ.. ಇದು ಅಕ್ಷರವೆಂಬ ಮಾಯಾದೀಪದ ಮೋಡಿ. ಅಕ್ಷರಬಂಧವೆಂಬ ಅದ್ಭುತ ಬಂಧದ ಗಾರುಡಿ.
ಇದು ನಡೆದದ್ದು ಮೊನ್ನೆ ಮೈಸೂರಿನಿಂದ ರಾಜ್ಯ ಅನಿಕೇತನ ಪ್ರಶಸ್ತಿ ಪಡೆದು ಬರುವಾಗ. ಇದಕ್ಕೆ ಕಾರಣವಾಗಿದ್ದು ಅಂಬರೀಶ್ ಪೂಜಾರ್ ಎಂಬ ಖಾಕಿಯೊಳಗಿನ ಸಂತ. ಅಪಾರ ಕಾವ್ಯದೊಲವಿನ ಕವಿಹೃದಯದ ಧೀಮಂತ.
ಅಂಬರೀಶ್ ಪೂಜಾರರು ಕಳೆದ 7-8 ವರ್ಷಗಳಿಂದ ಆತ್ಮೀಯರು. ಮುಖಪುಸ್ತಕ – ವಾಟ್ಸಪ್ ಬಳಗಗಳ ಮೂಲಕ ಪರಿಚಿತರಾಗಿ, ಅತ್ಯಾಪ್ತ ಅಕ್ಷರ ಬಂಧುವಾದ ಅಪರೂಪದ ಸಹೃದಯರು. ನಿತ್ಯ ನನ್ನೆಲ್ಲ ಕವಿತೆಗಳನ್ನು ಓದಿ, ಮೆಚ್ಚಿ, ಹಾರೈಸುವ ಹಾಗೂ ಸ್ವತಃ ಪ್ರತಿಭಾವಂತ ಕವಿಗಳಾದ ಅಂಬರೀಶರನ್ನು ನಾನು ಒಮ್ಮೆಯೂ ಮುಖಾಮುಖಿಯಾಗಿರಲಿಲ್ಲ.
ಬಿಜಾಪುರ, ಬೆಳಗಾವಿ, ಗೋಕಾಕ ಹೀಗೆ ಅವರು ಕರ್ತವ್ಯ ನಿರ್ವಹಿಸಿದ ನಗರಗಳಿಗೆಲ್ಲಾ ನನ್ನನ್ನು ಅತ್ಯಂತ ಪ್ರೀತಿಯಿಂದ ಆಮಂತ್ರಿಸುತ್ತಲೇ ಇದ್ದರು. ಅದೇಕೋ ಅವರನ್ನು ಭೇಟಿಯಾಗುವ ಸುವರ್ಣ ಕ್ಷಣ ಕೂಡಿಬಂದಿರಲೇ ಇಲ್ಲ. ದೂರವಾಣಿ ಕರೆ, ವಾಟ್ಸಾಪು ಸಂದೇಶಗಳಲ್ಲೇ ನನ್ನ ಅವರ ಗೆಳೆತನದ ಅನುಬಂಧ, ಅಕ್ಷರಬಂಧ ನಿತ್ಯ ನಿರಂತರವಾಗಿತ್ತು.
ಕೆಲವು ತಿಂಗಳುಗಳ ಹಿಂದೆ ಶ್ರೀಯುತ ಪೂಜಾರರು ರಾಮನಗರದ ಕೇಂದ್ರ ಕಾರಾಗೃಹದ ಮುಖ್ಯಸ್ಥರಾಗಿ ಕಲಬುರ್ಗಿಯಿಂದ ವರ್ಗಾವಣೆಯಾಗಿದ್ದರು. ಮೊನ್ನೆ ನಾನು ಮೈಸೂರಿನಿಂದ ರಾಜ್ಯ ಅನಿಕೇತನ ಪ್ರಶಸ್ತಿ ಪಡೆದು ಬೆಂಗಳೂರಿಗೆ ಮರಳುವಾಗ ಅಂಬರೀಶರ ಆತ್ಮೀಯ ಕರೆ.. ರಾಮನಗರದಲ್ಲಿ ಇಳಿದು ಅವರನ್ನು ಭೇಟಿ ಮಾಡಿಯೇ ಹೋಗಬೇಕೆಂಬ ಪ್ರೀತಿಪೂರ್ವಕ ಆಗ್ರಹ. ಅಕ್ಕರೆಯ ಒತ್ತಾಯ. ಜಿಲ್ಲಾ ಜೈಲ್ ಸೂಪರಿಂಟೆಂಡೆಂಟರ ಆದೇಶಕ್ಕೆ ಎದುರಾಡುವುದುಂಟೆ..??
ರಾಮನಗರದಲ್ಲಿ ಅತ್ಯಂತ ಅಕ್ಕರೆ, ಅಮಿತ ಪ್ರೀತಿ ಸಂಭ್ರಮಗಳಿಂದ ನನ್ನನ್ನು ಬರಮಾಡಿಕೊಂಡ ಶ್ರೀಯುತ ಅಂಬರೀಶ್ ಪೂಜಾರ್, ಕೇಂದ್ರ ಕಾರಾಗೃಹದ ತಮ್ಮ ಕಛೇರಿಗೆ ಕರೆದೊಯ್ದು ಉಪಚರಿಸಿದ ಪರಿ ಶಬ್ದಾತೀತ. ಅವರ ಆ ಅಕ್ಕರೆ, ಕಕ್ಕುಲತೆ, ಹೃದಯವಂತಿಕೆ ವರ್ಣನಾತೀತ. ಅದಕ್ಕೆ ನಾನು ಮೊದಲೇ ಹೇಳಿದ್ದು.. ಅವರು ಖಾಕಿಯೊಳಗಿನ ಸಂತ. ಉಕ್ಕಿನ ಶರೀರದಲ್ಲೊಂದು ಮಿಡಿವ ತುಡಿವ ಕವಿಹೃದಯದ ಧೀಮಂತ. ಅವರ ಮಮತೆ, ವಾತ್ಸಲ್ಯಧಾರೆಗೆ ನಾನು ಅಕ್ಷರಶಃ ಮಂತ್ರ ಮುಗ್ಧನಾಗಿದ್ದೆ. ಅವರ ಇಡೀ ಸಿಬ್ಬಂದಿಯ ಸಮ್ಮುಖದಲ್ಲಿ ಅನನ್ಯ ಪ್ರೀತಿ ಅಭಿಮಾನ ಗೌರವಗಳಿಂದ ನನ್ನನ್ನು ಶಾಲು ಹಾರಗಳೊಂದಿಗೆ ಪುಸ್ತಕ ತಾಂಬೂಲ ನೀಡಿ ಪುರಸ್ಕರಿಸಿದ ಕ್ಷಣ.. ನನ್ನ ಜೀವಮಾನದ ಅವಿಸ್ಮರಣೀಯ ಅಪೂರ್ವ ಕ್ಷಣ..
ಸಾಹಿತ್ಯ, ವರ್ತಮಾನ, ಕಾವ್ಯ, ಹೀಗೆ ಹಲವು ವಿಚಾರಗಳ ವಿಚಾರ ವಿನಿಮಯ. ಅವರ ಸಹ ಅಧಿಕಾರಿಗಳ ಪರಿಚಯ. ಬಂಧೀಖಾನೆಯ ಪ್ರದಕ್ಷಿಣೆ, ಕಾರ್ಯಚಟುವಟಿಕೆಗಳ ವೀಕ್ಷಣೆ. ನಂತರ ಮನೆಗೂ ಕರೆದುಕೊಂಡು ಹೋಗಿ ಮಕ್ಕಳು, ಶ್ರೀಮತಿಯವರನ್ನು ಪರಿಚಯಿಸಿ, ಉಪಚರಿಸಿದ ರೀತಿ ಪ್ರೀತಿಗೆ ನನ್ನ ಹೃನ್ಮನ ತುಂಬಿ ಬಂದಿತ್ತು. ರಾಮನಗರದಲ್ಲಿ ಕಳೆದ ಆ ಎರಡು ಗಂಟೆಯ ಅವಧಿ ಚಿರಸ್ಮರಣೀಯ..
ಅಪೂರ್ವ ಅಕ್ಷರಬಂಧು ಅಂಬರೀಶರಿಗೊಂದು ನಿಮ್ಮ ಅಭಿನಂದನೆಯಿರಲಿ. ಇಂತಹ ಅದ್ಭುತ ಕ್ಷಣಗಳನ್ನು ನೀಡುತ್ತಾ ನಮ್ಮ ನಿಮ್ಮೆಲ್ಲರನ್ನು ಚಿರಂತನವಾಗಿ ಬೆಸೆಯುತ್ತಲೇ ಇರುವ ಈ ಅಕ್ಷರಬಂಧವೆಂಬ ದಿವ್ಯಬಂಧಕ್ಕೆ ಅಂತರಾಳದ ಅನಂತ ನಮನಗಳಿರಲಿ.
ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.