spot_img
spot_img

ಬಾಲಚಂದ್ರ ಜಾರಕಿಹೊಳಿಯವರಿಗೊಂದು ಬಹಿರಂಗ ಪತ್ರ

Must Read

- Advertisement -

ನೀವು ಶಾಸಕರು ಅಕ್ರಮಗಳನ್ನು ತಡೆಯಬೇಕಲ್ಲವೆ ?; ಜನರು ಅಹವಾಲುಗಳನ್ನು ತಿಳಿಸಿದಾಗ ಸಿಡಿಮಿಡಿಗೊಳ್ಳುವುದು ಎಷ್ಟು ಸರಿ ?

ಪೀಠಿಕೆ – ನಮ್ಮ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಜನಪ್ರಿಯ ಶಾಸಕರು. ಬೇರೆ ಎಲ್ಲ ಶಾಸಕರಿಗಿಂತಲೂ ಹೆಚ್ಚಿನ ಜನರು ಇವರ ಹತ್ತಿರ ಅಹವಾಲುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮೊನ್ನೆ ನಾವು ಅಧಿವೇಶನ ಸಮಯದಲ್ಲಿ ಶಾಸಕರ ಹತ್ತಿರ ನಮ್ಮ ಸಮಸ್ಯೆಯೊಂದನ್ನು ತೆಗೆದುಕೊಂಡು ಹೋಗಿದ್ದೆವು. ಅವರು ಅಧಿವೇಶನ ಮುಗಿಸಿಕೊಂಡು ಬರುವವರೆಗೂ ಅಂದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಬೆಳಗಾವಿ ನಗರದ ಸಂಕಮ್ ಹೊಟೇಲಿನಲ್ಲಿ ಕಾಯ್ದೆವು. ನಾವಷ್ಟೇ ಅಲ್ಲದೆ ನೂರಾರು ಜನರು ಬಾಲಚಂದ್ರ ಜಾರಕಿಹೊಳಿಯವರಿಗಾಗಿ ಕಾಯುತ್ತಿದ್ದರು. ಹಾಗೆ ನೋಡಿದರೆ ಅಲ್ಲಿ ಬಂದು ಹೋಗುತ್ತಿದ್ದ ಬೇರೆಲ್ಲ ಶಾಸಕರ ಕಡೆಗೆ ಅಹವಾಲು ತಂದವರ ಸಂಖ್ಯೆ ತುಂಬಾ ಕಡಿಮೆ. ಆ ಬಗ್ಗೆ ನಮ್ಮ ಕ್ಷೇತ್ರದ ಶಾಸಕರ ಬಗ್ಗೆ ನಾವು ಹೆಮ್ಮೆಯಿಂದ ಮಾತನಾಡಿಕೊಂಡೆವು. ಆದರೆ ಬೆಳಿಗ್ಗೆಯಿಂದ ಕಾದು ಕಾದು ಭೇಟಿಯಾದ ನಮಗೆ ಶಾಸಕರು ಒಂದೇ ಮಾತಿನಲ್ಲಿ ನಿರಾಶೆ ಮೂಡಿಸಿದರು.

ಜಗಳಾ ಬಿಡಸಾಕ ನಾ ಎಮ್ಎಲ್ಎ ಆದಂಗಾಗೇತಿ……

- Advertisement -

ನಾವು ಶಾಸಕರ ಕಡೆಗೆ ಒಯ್ದ ಸಮಸ್ಯೆಯೆಂದರೆ ಮೂಡಲಗಿ ಪುರಸಭೆಯಲ್ಲಿ ನಡೆದ ಅಕ್ರಮವೊಂದರ ಬಗ್ಗೆ. ಮೂಡಲಗಿ ಗೋಕಾಕ ರಸ್ತೆಗೆ ಅಂಟಿಕೊಂಡಿರುವ ನಿವೇಶನವೊಂದರ ಬಗ್ಗೆ. ಅಲ್ಲಿ ಅನ್ಯಾಯವಾಗಿದ್ದು ಹಲವು ಜನರಿಗೆ. ೨೮ ಗುಂಟೆ ಜಾಗದ ಪೈಕಿ ಅರ್ಧದಷ್ಟು ರಸ್ತೆಗೆ ಹೋಗಿದೆಯೆಂದು ಹೇಳುತ್ತಿರುವ ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿ ಆ ಬಗ್ಗೆ ದಾಖಲೆ ನೀಡುತ್ತಿಲ್ಲ ಅಲ್ಲದೆ ಅದೇ ನಿವೇಶನದಲ್ಲಿ ಅಕ್ರಮವಾಗಿ ಲೇ ಔಟ್ ನಿರ್ಮಾಣವಾಗಿರುವ ಬಗ್ಗೆ ಖಂಡಿತವಾಗಿ ಏನನ್ನೂ ಹೇಳದೆ ಕೆಲವು ಹಣವಂತರಿಗೆ ಪ್ಲಾಟ್ ದಾಖಲು ಮಾಡಿಕೊಟ್ಟಿದ್ದಾರೆ. ಈ ಅಕ್ರಮವನ್ನು ನಾವು ಮಾನ್ಯ ಶಾಸಕರ ಮುಂದೆ ಹೇಳಲು ಹೊರಟರೆ ಎಲ್ಲವೂ ಗೊತ್ತಿದ್ದ ಅವರು ನಮಗೇ ಸಿಟ್ಟು ಮಾಡಿ, ನಿಮ್ಮ ಜಗಳಾ ಬಗಿ ಹರಸಾಕ ನಾ ಎಮ್ಎಲ್ಎ ಆದಂಗಾಗೇತಿ ಎಂದು ಮುಖ ಗಂಟು ಹಾಕಿದ್ದು, ಸಿಡುಕಿನಿಂದ ಮಾತನಾಡಿದ್ದು ಎಷ್ಟು ಸರಿ ? ಒಬ್ಬ ಎಮ್ಎಲ್ಎ ಆಗಿ ಪುರಸಭೆಯ ಮುಖ್ಯಾಧಿಕಾರಿಯನ್ನು ಪ್ರಶ್ನೆ ಮಾಡುವ ಜವಾಬ್ದಾರಿ ಇವರಿಗಿಲ್ಲವೆ ?

ಬಾಲಚಂದ್ರ ಜಾರಕಿಹೊಳಿಯವರು ಅಂದು ಹಾಗೆ ಸಿಡುಕಿದ್ದರಿಂದ ನಾವು ಹೇಳಬೇಕಾದ ಮಾತುಗಳು ಅರ್ಧದಲ್ಲಿಯೇ ನಿಂತುಹೋದವು. ಹೀಗಾಗಿ ಅವರಿಗೊಂದು ಬಹಿರಂಗ ಪತ್ರ

ಮಾನ್ಯರೆ,

- Advertisement -

ತಾವು ಶಾಸಕರು, ತಮ್ಮ ಕ್ಷೇತ್ರದಲ್ಲಿ ಅಕ್ರಮ ನಡೆದಾಗ ತಮ್ಮ ಗಮನಕ್ಕೆ ತಂದರೆ ತಾವು ಸಿಡಿಮಿಡಿಗೊಳ್ಳುವುದು ಎಷ್ಟು ಸರಿ ?

  • ಯಾವನೋ ಒಬ್ಬ ಪಿಡಿಒ ಬಹಿರಂಗವಾಗಿ ಲಂಚ ಬೇಡುತ್ತಾನೆ ಆದರೂ ತಾವು ಮೌನವಾಗಿದ್ದೀರಿ
  • ಗುರ್ಲಾಪೂರ ರಸ್ತೆ ರಿಪೇರಿಯಲ್ಲಿ ೪೫ ಲಕ್ಷ ರೂ.ಗಳ ಅವ್ಯವಹಾರ ನಡೆದಿರುವ ಬಗ್ಗೆ ತಾವು ಮೌನ. ಈಗ ಆ ರಸ್ತೆಯ ರಿಪೇರಿ ಕಾರ್ಯ ನಿಂತುಹೋಗಿದೆ ಆದರೂ ತಾವು ಮೌನ.
  • ಮೂಡಲಗಿ ತಾಲೂಕಾದ ನಂತರ ಹದಿನೈದು ದಿನಗಳಲ್ಲಿಯೇ ಎಲ್ಲಾ ಕಚೇರಿಗಳು ಆಗುತ್ತವೆ ಎಂದಿರಿ, ಆಗಿಲ್ಲ. ನವೆಂಬರ್ ನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಆಗುತ್ತದೆ ಎಂದಿರಿ, ಆಗಿಲ್ಲ…
  • ಪುರಸಭೆಯಲ್ಲಿ ಅಕ್ರಮ ಕಟ್ಟಡಗಳ ಬಗ್ಗೆ ತಮ್ಮ ಗಮನಕ್ಕೆ ತಂದರೂ ತಾವು ಮೌನವಹಿಸಿದರೆ ನಾವೆಲ್ಲಿಗೆ ಹೋಗಬೇಕು?
  • ಅಕ್ರಮ ಎಸಗಿದವರು ರಾಜರಂತೆ ತಿರುಗುತ್ತಿದ್ದರೆ, ಜಾಗ ಕಳೆದುಕೊಂಡ ನಾವು ಕೋರ್ಟು ಕಚೇರಿ ಅಲೆದಾಡುತ್ತಿದ್ದೇವೆ. ತಾವೂ ಕೂಡ ಕೋರ್ಟಿಗೆ ಹೋಗಿ ಎಂದು ನಮಗೆ ಹೇಳಬೇಕಾದರೆ, ಕನಿಷ್ಠ ಅಕ್ರಮದ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರವೂ ತಮಗೆ ಇಲ್ಲವೆ ?
  • ಒಂದು ಕೇಸು ಕೋರ್ಟಿನಲ್ಲಿದ್ದಾಗ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡುತ್ತಾರೆ, ಪೊಲೀಸರು ತಡೆಯುವುದಿಲ್ಲ, ಪುರಸಭೆಯವರು ತಡೆಯುವುದಿಲ್ಲ, ತಮಗೆ ಹೇಳಿದರೆ ತಾವು ನಮ್ಮನ್ನೇ ಝಾಡಿಸುತ್ತೀರಿ……ಅವರು ಉಣ್ಣುತ್ತ ಬಡಿದಾಡುತ್ತಾರೆ ನಾವು ಉಪವಾಸ ಇದ್ದು ಬಡಿದಾಡಬೇಕು…..ನ್ಯಾಯ ಎಲ್ಲಿದೆ ?
  • ರಾಜಾರೋಷವಾಗಿ ಒಬ್ಬ ಮುಖ್ಯಾಧಿಕಾರಿ ಕೋರ್ಟಿನಲ್ಲಿ ಸುಳ್ಳು ಸಾಕ್ಷಿ ಹೇಳುತ್ತಾರೆ. ನಂತರ ನೀವು ಎಲ್ಲಿ ಬೇಕಾದರೂ ಹೋಗಿ ಯಾರೂ ನನ್ನ …..ಹರಿಯಂಗಿಲ್ಲ ಎನ್ನುತ್ತಾರೆ. ಇವರಿಗೆ ನಿಮ್ಮ ಬೆಂಬಲ ಇದೆಯಾ ?
  • ಕೋರ್ಟ್ ಆದೇಶದ ಪ್ರಕಾರ ಅಗಲ ೨೨×೧೦೦ ಅಡಿ ಎಂದು ಈರಪ್ಪ ಪತ್ತಾರ ಎಂಬಾತನ ಜಾಗ ದಾಖಲ ಮಾಡಿಕೊಂಡು ಆತನಿಗೆ ಅಗಲ ೪೦ ಅಡಿ ಶೆಡ್ ಹಾಕಿಕೊಳ್ಳಲು ಪರವಾನಿಗೆ ನೀಡಿ ಕರೆಂಟ್ ಕೂಡ ನೀಡಿದ್ದಾರೆ. ಆತನಿಂದ ಪುರಸಭೆಯವರಿಗೆ ಎಷ್ಟು ದುಡ್ಡು ಹೋಗಿರಬೇಕು ? ಇದೇ ರೀತಿ ಜಾಗವೇ ಇಲ್ಲದ ವೈದ್ಯರೊಬ್ಬರು ಮೂರು ಮಹಡಿಯ ದವಾಖಾನೆ ಕಟ್ಟಿದ್ದಾರೆ ಅದಕ್ಕೂ ಪುರಸಭೆಯವರ ಕುಮ್ಮಕ್ಕು ಇದೆ. ಇದು ಶಾಸಕರಾದ ತಮ್ಮ ಗಮನಕ್ಕೆ ಬಂದಿಲ್ಲವೆಂದರೆ ಯಾರು ನಂಬಬೇಕು ?
  • ದಕ್ಷಿಣೋತ್ತರ ೧೦೦ ಅಡಿ ಇರುವ ಪ್ಲಾಟ್ ಅರ್ಧದಷ್ಟು ರಸ್ತೆಗೆ ಹೋಗಿದೆಯೆನ್ನುವ ಮುಖ್ಯಾಧಿಕಾರಿ ಕೆಲವರಿಗೆ ೫೩ ಅಡಿ ಉತಾರ ಕೊಟ್ಟರೆ, ಕೆಲವರಿಗೆ ಪೂರಾ ೧೦೦ ಅಡಿ ಉತಾರ ಕೊಡುತ್ತಾರೆ, ಕೆಜೆಪಿ ಇಲ್ಲದೆ ಕಂಪ್ಯೂಟರ್ ಉತಾರ ಸಿಗುವುದಿಲ್ಲ ಎನ್ನುತ್ತಾರೆ ಆದರೂ ಕೊಡುತ್ತಾರೆ. ಶಾಸಕರಾದ ತಮ್ಮ ಗಮನಕ್ಕೆ ಇದೂ ಇಲ್ಲವೆ ?
  • ಸದರಿ ಜಾಗದ ರಿ.ಸ.ನಂ. ೪೯೮/೩.ಬ೨ ಇದರ, ಕೆಜೆಪಿ ಇಲ್ಲ, ಬಿನ್ ಶೇತ್ಕಿ ಇದೆ ಆದರೆ ದಾಖಲೆ ಕಣ್ಮರೆಯಾಗಿದೆ, ಉತ್ತರದ ಕಡೆಗೆ ಪುರಸಭೆಯವರೇ ಒಂದು ಲೇಔಟ್ ತಯಾರಿಸಿ ಹನ್ನೆರಡು ಪ್ಲಾಟ್ ಗಳನ್ನು ತಯಾರಿಸಿ ಹಣವಂತರಿಗೆ ದಾಖಲು ಮಾಡಿದ್ದಾರೆ ಅರ್ಧ ಜಾಗ ಕಳೆದುಕೊಂಡ ನಾವು ಬಾಯಿ ಬಾಯಿ ಬಿಡುತ್ತಿದ್ದೇವೆ.
  • ಮಾನ್ಯ ಶಾಸಕರೆ, ಸದರಿ ಜಾಗದ ಬಗ್ಗೆ ಇಪ್ಪತ್ತು ವರ್ಷಗಳಿಂದಲೂ ವ್ಯಾಜ್ಯವಿದೆ. ನ್ಯಾಯಯುತವಾದ ಬೇಡಿಕೆಗಳಿಗೆ ಕೋರ್ಟಿನಲ್ಲಿ ನ್ಯಾಯ ಸಿಗುತ್ತದೆ. ಆದರೆ ಮೇಲ್ನೋಟಕ್ಕೆ ಕಂಡುಬರುವ ಅನ್ಯಾಯದ ಬಗ್ಗೆ ಕ್ಷೇತ್ರದ ಜನರ ಜಗಳಗಳನ್ನು ತಾವೇ ತಿದ್ದಬೇಕು. ತಪ್ಪು ಮಾಡಿದವರನ್ನು ಕನಿಷ್ಠ ಒಂದು ಮಾತಾದರೂ ಬೈಯುವ ಕೆಲಸ ಮಾಡಬೇಕು. ತಮಗೆ ಅಧಿಕಾರವಿದೆ. ತಮ್ಮಿಂದ ನ್ಯಾಯ ಸಿಗುವುದೆಂಬ ಭರವಸೆಯಿಂದ ನಾವು ಬಂದಿರುತ್ತೇವೆ. ಕ್ಷೇತ್ರದಲ್ಲಿ ಅಧಿಕಾರಿಗಳು ಭ್ರಷ್ಟರಾಗಿದ್ದರೆ ತಮಗೇ ಕೆಟ್ಟ ಹೆಸರು ಬರುತ್ತದೆ.

ರಸ್ತೆಗಳು ಕೆಟ್ಟಿದ್ದರೂ ತಮಗೇ ಕೆಟ್ಟ ಹೆಸರು ಬರುತ್ತದೆ. ಏನೇ ಆದರೂ ತಮಗೇ ಬರುತ್ತದೆ. ಆದರೆ ನ್ಯಾಯ ಬಗೆ ಹರಿಸುವಾಗ ತಾವು ಕೇವಲ ಓಟುಗಳನ್ನು ನೋಡದೆ ನ್ಯಾಯ ಬಗೆಹರಿಸಬೇಕು ಎಂಬುದು ನಮ್ಮ ಬೇಡಿಕೆ.

ಜಾಗ ಖರೀದಿಸಿ ೩೫ ವರ್ಷಗಳಾದರೂ ಕೆಲವು ದುಷ್ಟ, ಭ್ರಷ್ಟರಿಂದಾಗಿ ದಕ್ಕಿಸಿಕೊಳ್ಳಲಾಗದೆ ಪ್ರೇತಗಳಂತೆ ಅಲೆಯುತ್ತಿದ್ದೇವೆ. ಇದು ನಿಮಗೂ ಶ್ರೇಯಸ್ಕರವಲ್ಲ. ನಿಮ್ಮ ಸಿಡುಕು ಕಡಿಮೆ ಮಾಡಿಕೊಳ್ಳಿ. ದಯವಿಟ್ಟು ಈ ಜಾಗದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಗಮನಹರಿಸಿ ಎಂಬ ಮನವಿಯೊಂದಿಗೆ……


ಅನ್ಯಾಯಕ್ಕೊಳಗಾದ ನಿಮ್ಮ ಕ್ಷೇತ್ರದ ಮತದಾರರ ಪರವಾಗಿ…..
ಉಮೇಶ ಬೆಳಕೂಡ
ಮೂಡಲಗಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group