ನಾನು ಅಕ್ಷರ ಕಲಿಯುವ ಮೊದಲೇ ನಮ್ಮ ತಂದೆ ನನಗೆ ಕನ್ನಡ ಜೈಮಿನಿ ಭಾರತದ ಮೊದಲ ಪ್ರಾರ್ಥನಾ ಪದ್ಯ ಕಲಿಸಿದ್ದರು. ಮನೆಯಲ್ಲಿ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಓದುತ್ತಿದ್ದರು. ಅದನ್ನು ಕೇಳುತ್ತಿದ್ದ ನನಗೂ ವಾಚನ ಮಾಡುವ ಅಭ್ಯಾಸವಾಯಿತು ಎನ್ನುವ ಲಕ್ಷ್ಮಿದೇವಿ ದಾಸಪ್ಪ ಅವರ ಮಹಾನ್ ಚೇತನಗಳಿಗೆ ನಮನಗಳು ಕವನ ಸಂಕಲನದ ೨೩ ಕವಿತೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಸರಳ ಭಾಷೆಯಲ್ಲಿ ಹೆಣೆದ ಕವಿತೆಗಳಲ್ಲಿ ಹಳಗನ್ನಡದ ಕಂಪಿದೆ.
ಕುಮಾರವ್ಯಾಸ ನನ್ನ ಮೆಚ್ಚಿನ ಕವಿ. ನನ್ನ ಮೆಚ್ಚಿನ ಕಾವ್ಯ ಕರ್ಣಾಟ ಭಾರತ ಕಥಾಮಂಜರಿ. ನನಗೆ ತುಂಬಾ ಬೇಸರವಾದಾಗ ಈ ಕಾವ್ಯದ ಯಾವುದಾದರೂ ಸ್ವಾರಸ್ಯಕರ ಸನ್ನಿವೇಶವನ್ನು ಓದಿದರೆ ಸಾಕು ನನ್ನ ಮನಸ್ಸು ನಿರಾಳವಾಗುತ್ತದೆ. ಆ ಶಕ್ತಿ ಕಾವ್ಯಗಳಿಗಿದೆ. ನಾನು ಬೇಕಾದಷ್ಟು ಕಥೆ ಕಾದಂಬರಿ ಓದಿದ್ದರೂ ಗದ್ಯಕ್ಕಿಂತ ಪದ್ಯವೇ ನನಗೆ ಹೃದ್ಯವಾಗಿ ತೋರುತ್ತದೆ. ಅದರಲ್ಲೂ ಹಳಗನ್ನಡ, ನಡುಗನ್ನಡ ಸಾಹಿತ್ಯದ ಪದ್ಯಗಳಲ್ಲಿರುವ ಅಲಂಕಾರಗಳು, ಉಚಿತ ಪದ ಪ್ರಯೋಗ, ಲಯ, ಪ್ರಾಸಗಳು ನನ್ನನ್ನು ಅತೀವವಾಗಿ ಆಕರ್ಷಿಸುತ್ತವೆ.. ಎನ್ನುವ ಇವರ ಕವಿತೆಗಳಲ್ಲಿ ಹಳಗನ್ನಡ ಪ್ರಭಾವವಿದೆ. ಕನ್ನಡ ಸಾಹಿತ್ಯದ ಖ್ಯಾತ ಚಂಪೂಕವಿಗಳು, ಷಟ್ಪದಿ ಕವಿಗಳು, ವಚನಕಾರರು, ಹರಿದಾಸರ ಕುರಿತ ಕಾವ್ಯಗಳಿವೆ. ಮೊದಲ ಕವಿತೆ ಆದಿಕವಿಗೆ ನಮನದಲ್ಲಿ ಪಂಪನಿಗೆ ನಮಿಸಿ
ವರುಷ ಸಾವಿರ ಉರುಳಿ ಶತಮಾನ ಕಳೆದರೂ
ಹರಡಿಹುದು ನಾಡಿನಲಿ ನಿನ್ನ ಕೀರ್ತಿಯ ಕಂಪು
ಪಂಪನೆಂಬಾ ಪೆಂಪಿನ ಪೆಸರಾಂತು
ಎಂದೆಂದು ಕನ್ನಡಕ್ಕೊರ್ವನೆ ಒಡೆಯನಾದೆ..
ಪಂಪ (ಕ್ರಿ.ಶ.೯೪೦) ಕನ್ನಡದ ಆದಿಕವಿ. ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಇವನ ಕೃತಿ ರತ್ನಗಳು. ವೃಷಭನಾಥನನ್ನು ಕುರಿತ ಆದಿಪುರಾಣ ಜೈನಧಾರ್ಮಿಕ ಸಂಗತಿಗಳಿಂದ ತುಂಬಿ ಅತ್ಯಂತ ಚೇತೋಹಾರಿ ಮಹೋನ್ನತ ಕಲ್ಪನೆಗಳಿಂದ ದರ್ಶನಧೀಧಿತಿಯಿಂದ ಸತ್ವಸಂಪನ್ನ ಕಾವ್ಯ.
ಪುರುದೇವ ಬಾಹುಬಲಿ ಪಾತ್ರದೊಳ್
ಎರಕ ಹೊಯ್ದಿಹೆ ವೈರಾಗ್ಯದುನ್ನತಿಯ..
ಸನ್ನಿವೇಶ ನಿರ್ಮಾಣ ಪಾತ್ರ ಪರಿಪೋಷಣೆ ರಸನಿರ್ಭರತೆ ಪರಂಪರೆಯ ಪ್ರಜ್ಞೆಯೊಂದಿಗೆ ಮಿಳಿತ ಗಾಢ ಸಮಕಾಲೀನ ದೃಷ್ಟಿ ಪರಿಣಿತ ಭಾಷಾ ಪ್ರಯೋಗ ಚಾತುರ‍್ಯಗಳಿಂದ ಕೂಡಿದೆ ಪಂಪ ಭಾರತ.
ಬಾದರಾಯಣ ಬರೆದ ಭಾರತಕೆ ಮರುಹುಟ್ಟು
ಪಂಪಭಾರತವು ಉಡುಗೆ ಬದಲಾದೊಡೇಂ
ರೂಪಮೊಂದಲ್ತೆ.
ಎಂಬುದು ತುಂಬಾ ಅರ್ಥಪೂರ್ಣ ಸೊಗಸಾದ ಮಾತು ಎನಿಸಿತು ಆದರೆ
ವ್ಯಾಸಕಥೆಯಂ ಮೀರಿಹಾಸು ಬೀಸಲಿ
ನಡೆದು ತತ್ತರಿಸಿದಾ ಬಗೆಯು
ಪಂಪ ಪ್ರತಿಭಾ ಪ್ರಭಾಕರ ಪ್ರಖರತೆಯಿದಿರೊಳ್
ಮಸುಕಾಯ್ತು ಮಿಣುಕು ದೀಪದಂತೆವೋಲ್..
ಎಂಬ ಅಭಿಪ್ರಾಯ ಒಪ್ಪುವುದು ಸಾಧ್ಯವಿಲ್ಲ ಎಂದಿದ್ದಾರೆ ಕೆ.ಆರ್.ಕೃಷ್ಣಯ್ಯನವರು.
ಪಂಪನ ಹಾದಿಯಲ್ಲೇ ನಡೆದ ರನ್ನ (ಕ್ರಿ.ಶ.೯೯೩) ಅಜಿತ ತೀರ್ಥಂಕರ ಪುರಾಣವೆಂಬ ಆಗಮಿಕ ಗ್ರಂಥ ಸಾಹಸ ಭೀಮವಿಜಯ ಎಂಬ ಲೌಕಿಕ ಗ್ರಂಥ ಬರೆದಿದ್ದಾನೆ. ಪಂಪನ ವಿಕ್ರಮಾರ್ಜುನ ವಿಜಯದ ೧೩ನೇ ಆಶ್ವಾಸದ ಬುನಾದಿಯ ಮೇಲೆ ಕಟ್ಟಿದ ಸಾಹಸ ಭೀಮವಿಜಯ ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತ ಕಥೆಯನ್ನು ಸಂಕ್ಷಿಪ್ತವಾಗಿ ದರ್ಶನ ಮಾಡಿಸುತ್ತದೆ.
ರಸಘಟ್ಟಂ ಗದಾಯುದ್ದ ಕಾವ್ಯದೊಳ್
ದುರ್ಯೋಧನ ವಿಲಾಪಂ..
ಮರುಗುವ ಆಕ್ರಂದನಗೈವ
ಚಿತ್ರಣಂ ಅನಾದೃಶ್ಯಂ ಕಾವ್ಯದೊಳ್..
ರಸಘಟ್ಟಿಯೆನಿಸಿದ ಗದಾಯುದ್ಧದ ಭೀಮನ ಚಿತ್ರಣವು ರನ್ನನ ಭಾಷೆಗೆ ಸರಿಹೊಂದುವಂತೆ ಓಜಸ್ಸನ್ನು ತುಂಬಿಕೊಂಡಿದೆ.
ಹೊಯ್ಸಳರ ಆಳ್ವಿಕೆಯಲ್ಲಿ ಬಾಳಿದ ಜನ್ನ (೧೧೯೦) ಇಮ್ಮಡಿ ವೀರಬಲ್ಲಾಳನಿಂದ ಕವಿ ಚಕ್ರವರ್ತಿ ಬಿರುದು ಪಡೆದವನು. ಅನಂತನಾಥ ಪುರಾಣ ಯಶೋಧರ ಚರಿತೆ, ಅನುಭವ ಮುಕುರ ಎಂಬ ಕೃತಿಗಳನ್ನು ರಚಿಸಿರುವ ಈತ ಶಾಸನ ಕವಿಯೂ ಹೌದು. ಯಶೋಧರ ಚರಿತೆಯ ರಾಣಿ ಅಮೃತಮತಿಯ ಸಾರ ಸಂಗ್ರಹ ಕವಿತೆಯಲ್ಲಿ ಪಡಿಮೂಡಿದೆ.
ರಾಣಿ ಅಮೃತಮತಿ ಯಶೋಧರ ನೃಪನ
ಸತಿ ಮಾವುತನ ಗಾನಮಂ ಕೇಳ್ದು ಮನಸೋತು
ಅಷ್ಟಾವಂಕ ಪೆಸರ್ಗನ್ವರ್ಥನಂ ಬದಗನಂ..
ಕನ್ನಡದ ಮೇರು ಕವಿ ಕುಮಾರವ್ಯಾಸನ ಕುರಿತ ಕವಿತೆಯಲ್ಲಿ ಅಭಿಮನ್ಯು ಪ್ರಸಂಗವನ್ನು ಸೊಗಸಾಗಿ ಚಿತ್ರಿಸಿ ಕವಿ ಚೇತನಕೆ ನಡುಬಾಗಿ ನಮಿಸುತ್ತಾರೆ.
ಈ ಮಹಾಕವಿ ಚೇತನಕೆ ಮುಡಿಬಾಗಿ
ನಡುಬಾಗಿ ಕರ ಮುಗಿದು ನಮಿಸುವೆನು..
ಹೀಗೆ ಕನ್ನಡ ಸಾಹಿತ್ಯದ ಮೇರು ಶಿಖರ ಕವಿಗಳನ್ನು ಸ್ಮರಿಸಿ ಅವರ ಕೃತಿಗಳನ್ನು ಅವುಗಳ ಕಿರು ಸಾರಂಶ ಬಣ್ಣಿಸುತ್ತಾರೆ. ಪಂಪನಿಂದ ಕುವೆಂಪು ವರೆಗಿನ ಮಹತ್ವದ ಕವಿಗಳು ಇವರ ಕಾವ್ಯದಲ್ಲಿ ಚಿತ್ರಿಸಲ್ಪಟ್ಟಿದ್ದಾರೆ. ಅಕ್ಕಮಹಾದೇವಿ, ಬಸವಣ್ಣರ ಕುರಿತ ಕವಿತೆಗಳಲ್ಲಿ ಬಸವಣ್ಣರ ಕಥೆ ಕಿರಿದಾಗಿ ಅಕ್ಕನ ಜೀವನಗಾಥೆ ತುಸು ವಿಸ್ತಾರವಾಗಿದೆ. ಹರಿಹರ, ರಾಘವಾಂಕ, ಅಂಡಯ್ಯ, ಕುಮಾರವ್ಯಾಸ, ಲಕ್ಮೀಶ
ಪುರಂದರದಾಸರು, ಕನಕದಾಸರು, ಕವಿ ಮುದ್ದಣ, ಡಿವಿಜಿ, ಬೇಂದ್ರೆ ಒಳಗೊಂಡ ಕವಿಗಳು ಹಾಗೂ ತಮ್ಮ ಸಾಧನೆಗಳಿಂದ ಜನರಿಗೆ ಪ್ರಿಯರಾದ ಸಾಧಕರು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಡಾ. ಬಿ.ಆರ್.ಅಂಬೇಡ್ಕರ್, ಡಾ.ರಾಜಕುಮಾರ್ ಕಡೆಯಲ್ಲಿ ಪುನೀತ್ ರಾಜಕುಮಾರ್ ಹೀಗೆ ಕವಿಗಳು ಮತ್ತು ಮಹಾನ್ ಸಾಧಕರು ಇವರ ಕವಿತೆ ಓದುತ್ತಿರಲು ಪುನರಪಿ ನೆನೆಪಾಗುವರು.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.