spot_img
spot_img

ವಚನಾನುಸಂಧಾನ

Must Read

- Advertisement -

ಬಸವಣ್ಣನವರ ವಚನ

ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.

ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ,

- Advertisement -

ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾ ಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ.

ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾ ಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ.

ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾ ಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ.

- Advertisement -

ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.

ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,

ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ, ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.

ಬಸವಣ್ಣನವರು

ವಚನ ಅನುಸಂಧಾನ

‘ನಂಬಿಕೆ’ ಎಂಬುದು; ಬಹಳ ಮುಖ್ಯವಾದ ಪದ.
‘ನಂಬಿ ಕರೆದರೆ; ಓ ಎನ್ನನೇ ಆ ಶಿವನು?’ ಎಂದು
ಹೇಳುವ ಮೂಲಕ ಶರಣರು ಆ ಶಿವ ಓ ಎನ್ನುವ ಎಂದು ಗ್ಯಾರಂಟಿಯನ್ನೇ ನೀಡುವರು! ಅಂತೆಯೇ ಅನೇಕ ಮಹಾತ್ಮರು ಕೂಡಾ ನಂಬಿಕೆ ಕುರಿತಂತೆ ಅದ್ಭುತವಾದ ಮಾತುಗಳನ್ನಾಡಿದ್ದಾರೆ. ಹಾಗಾಗಿ ನಂಬಿಕೆ ಎನ್ನುವ ಪದವು ತುಂಬಾ ಬೆಲೆ ಬಾಳುವ ಪದಾರ್ಥಭಾವವನ್ನು ಹೊಂದಿದೆ ಎನ್ನುವುದೇ ಆ ನಂಬಿಕೆ ಎಂಬ ಪದದ ಹೆಗ್ಗಳಿಕೆಯಾಗಿದೆ. ಆದರೆ, ಬಹುತೇಕ ಜನಮಾನಸವು ಈ ನಂಬಿಕೆ ಎನ್ನುವುದನ್ನು ಅಷ್ಟು ಸುಲಭವಾಗಿ ನಂಬುವುದೇ ಇಲ್ಲ!? ಅಲ್ಲಿ ಸಂಶಯವು ಹೊಗೆಯಾಡಿ ಮನದ ದೃಢತೆ ಯನ್ನು ಡೋಲಾಯಮಾನ ಮಾಡಿ ಬಿಡುವುದು. ಇದರಿಂದಾಗಿ ನಂಬಿಕೆ ಎಂದೆನ್ನುವ ಆ ಕಟ್ಟಡವೇ ಕುಸಿದು ಬೀಳುತ್ತದೆ. ಹಾಗಾಗಿ ಈ ನಂಬಿಕೆಯನ್ನು ಧಾರಣ ಮಾಡಿಕೊಳ್ಳಲು ಮನಸ್ಸಿನ ದೃಢತೆಯು ಅತ್ಯಗತ್ಯವಾಗಿದೆ ಎಂದೆನ್ನುವ ನಿಲುವಿನ ಬೆನ್ನಲ್ಲೇ ಈ ಮೇಲಿನ ಅಪ್ಪ ಬಸವಣ್ಣನವರ ವಚನದ ಬಗ್ಗೆ ಅನುಸಂಧಾನ ಮಾಡುವತ್ತ ಚಿಂತಿಸೋಣ.

ಪ್ರಸ್ತುತ ಈ ವಚನವು; ಹೇಳಬೇಕಾದುದನ್ನು ಅತಿ ಸರಳವಾಗಿ, ಸುಸೂತ್ರವಾಗಿ, ಸೂತ್ರ ಬದ್ದವಾಗಿ, ಹಣ್ಣಿನ ತೊಳೆಯನ್ನು ಬಿಡಿಸಿ ಬಿಡಿಸಿ ತೋರಿದಂತೆ ತನ್ನೊಳಗಿನ ಘನವಾದ ಆಶಯವನ್ನ ಮೇಲಿಂದ ಕೆಳಗೆ ಸುಧೆಯನ್ನು ಧಾರೆಯಾಗಿ ಸುರಿಯುವಂತೆ ಅತ್ಯಂತ ಆಪ್ತವಾಗಿ ತಾಯಿ ಮಗುವಿಗೆ ಮೊಲೆ ಯನ್ನು ಉಣಿಸಿದಂತೆ ಒಂದು ಓದಿಗೇನೇ ಓದುಗ ನಿಗೆ ಈ ಎಲ್ಲಾ ಅನುಭವ ಸಹಜವಾಗಿ ದಕ್ಕಿದಂಥ ಭಾಸವಾಗುತ್ತದೆ. ಅಷ್ಟು ಸರಳವಾಗಿದೆ ಅಪ್ಪ ಬಸವಣ್ಣನವರ ಈ ಮೇಲಿನ ವಚನ. ಹಾಗಾಗಿ ಇಷ್ಟೊಂದು ಸರಳವಾದ ವಚನದಲ್ಲಿ ಅವರು ಮುಖ್ಯವಾಗಿ ಹೇಳಿರುವುದು ಅತ್ಯಂತ ಮಹತ್ವದ ಶರಣ ತತ್ವದ ವಿಷಯವಾದಂಥಾ ‘ಇಷ್ಟಲಿಂಗ’ದ ಉತ್ಪತ್ತಿಯ ಕುರಿತಂತೆ ಸ್ವತಃ ಅಪ್ಪ ಬಸವಣ್ಣನವ ರೇ ಖುದ್ದಾಗಿ ಸುಂದರವಾಗಿ ನಿರೂಪಿಸಿ ಹೇಳಿರು ವುದನ್ನು ಈಗ ನಂಬದಿರಲು ಯಾರಿಗಾದರೂ ಸಾಧ್ಯವಿದೆಯೇ?

ಆದ್ದರಿಂದ ಇಷ್ಟಲಿಂಗದ ಜನಕ ಅಪ್ಪ ಬಸವಣ್ಣ ನವರೇ ಎನ್ನುವ ಮಾತಿಗೆ ಈ ವಚನಕ್ಕಿಂತಲೂ ಹೆಚ್ಚಿನ ಪುರಾವೆ ಬೇಕೆ? ಈಗದೆಲ್ಲಾ ಒಂದು ಕಡೆ ಇರಲಿ. ಈ ಇಷ್ಟಲಿಂಗ; ತನುವಿನೊಳಗಿನ ತದ್ಗತ ವಾದ ಆತ್ಮಚೈತನ್ಯದ ಜೊತೆಗೆ ಪರಮಚೈತನ್ಯವು ಸಂಯೋಗ ಹೊಂದಿ ರೂಪಗೊಂಡಿದೆ ಎನ್ನುವ ಮಾತು ಇಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಸತ್ಯವ ನ್ನು ಸುಲಲಿತವಾಗಿಯೇ ತಿಳಿಸಿ ಹೇಳುತ್ತದೆ.

ಹಾಗಾಗಿ ಪ್ರಸ್ತುತ ಈ ವಚನದ ಅನುಸಂಧಾನವ ಯಥಾಪ್ರಕಾರ ಮಾಡದೇ ಮೊದಲ ಓದಿಗೇನೇ ವಚನವು ಬಹಳಷ್ಟು ಅರಿವಿಗೆ ದಕ್ಕುತ್ತದೆ ಎನ್ನುವ ಕಾರಣಕ್ಕೆ ವಿಸ್ತರಣೆ ಮಾಡಲು ಇಚ್ಛಿಸಿರಲಿಲ್ಲ ನಿಜ ಆದರೆ ಸರಳವಾಗಿ ಹೇಳುವುದಾದರೆ; ಇಲ್ಲಿ ಅಪ್ಪ ಬಸವಣ್ಣನವರು ತಮ್ಮ ಅರಿವನ್ನೇ ಗುರುವೆಂದು ಸಂಬೋಧಿಸಿ, ತಮ್ಮೊಳಗೆ ತದ್ಗತವಾಗಿರುವಂಥಾ ಚಿದ್ಬೆಳಗನ್ನ ಹಸ್ತಮಸ್ತಕ ಸಂಯೋಗದ ಮೂಲಕ ಮಹಾಬೆಳಗನ್ನಾಗಿ ಮಾಡಿ ಬೆಳಗಿದಿರೆಂದು ತಮ್ಮ ಆನಂದವನ್ನು ತೋಡಿಕೊಂಡಿದ್ದಾರೆ. ಆ ಬೆಳಗನ್ನ ತಂದು ಭಾವದಲ್ಲಿಟ್ಟಿರಿ. ಅದನ್ನೇ ತಂದು ಮನಸ್ಸಿ ನಲ್ಲಿ ಇಂಬಿಟ್ಟಿರಿ. ಆ ಬೆಳಗನ್ನ ತಂದು ಕಣ್ಣಲ್ಲಿಟ್ಟಿರಿ
ಕಂಗಳು ತುಂಬಿದ ಬೆಳಗನ್ನೇ ನನ್ನ ಕರಸ್ಥಲಕ್ಕೆ ತಂದಿಟ್ಟಿರಿ. ಥಳಥಳ ಹೊಳೆಯುವ ಆ ಬೆಳಗನ್ನೇ ಇಷ್ಟಲಿಂಗ ಎಂದು ನನ್ನ ಕಿವಿಯಲ್ಲಿ ಹೇಳಿದಿರಿ. ಆ ಸುಮಂತ್ರದ ಬೋಧನೆಯಲ್ಲಿ ನೀವು ನಿಮ್ಮ ಘನ ಮಹತ್ವವನ್ನೇ ಹುದುಗಿಸಿದಿರಲ್ಲಾ ಎನ್ನ ಪರಮ ಗುರುವಾದ ಕೂಡಲಸಂಗಮದೇವರೇ ನೀವು ನನ್ನೊಳಗೇ ಇರುವುದನ್ನು ಈ ರೀತಿಯಲ್ಲಿ ನೀವು ಕಾಣಿಸಿದಿರಲ್ಲಾ ಎಂದು ಪ್ರತಿಯೊಂದು ಜೀವಿಯ ಒಳಗೆ ದೇವರು ಹುದುಗಿರುವನು ಎನ್ನುವುದನ್ನು ಅಪ್ಪ ಬಸವಣ್ಣನವರು ಈ ಮೂಲಕ ಸಾರುವುದರ ಸಂಗಡವೇ ಇಷ್ಟಲಿಂಗದ ಹುಟ್ಟಿಗೆ ನಿಶ್ಚಿತವಾಗಿ ಅಪ್ಪ ಬಸವಣ್ಣನವರೇ ಕಾರಣ ಎನ್ನುವ ಮಾತನ್ನ ಈ ವಚನದಲ್ಲಿ ಸಾಕ್ಷೀಕರಿಸಿದ್ದಾರೆ.

ಆದರೆ ನಾನು ‘ನಂಬಿಕೆ’ ಕುರಿತು ಮೊದಲಲ್ಲೇ ಮಾತನಾಡಿದ್ದು ಯಾಕೆಂದರೆ; ಈಗ ಇಷ್ಟಲಿಂಗದ ಹುಟ್ಟಿನ ಬಗ್ಗೆ ಸಂಶಯ ಪಡುವ ಮನಸ್ಸುಗಳಿಗೆ ಈ ವಚನವನ್ನ ಓದಿದ ಮೇಲೆಯಾದರೂ ಅಂಥವರಿಗೆ ನಂಬಿಕೆ ಖಂಡಿತಾ ಮೂಡಲಿ ಮತ್ತು ಶರಣರ ವಚನಗಳು ಬೀರುವ ನಿತ್ಯ ಸತ್ಯದ ಮಹಾಬೆಳಗ ಕಂಡುಂಡು ನಿಸ್ಸಂಶಯವಾಗಿ ನಂಬಿಕೊಂಡು, ಅಷ್ಟೇ ಅಲ್ಲದೆ ತಮ್ಮ ತನು ಮನಗಳನ್ನೂ ಪುಷ್ಕಳವಾಗೇ ಬೆಳಗಿ ಕೊಂಡು ಅದರಂತೆಯೇ ನಡೆದು ಬಾಳಿ ಬೆಳಗಲಿ ಎಂದು ಈ ಮೂಲಕ ಹೇಳಲು ಇಚ್ಛಿಸುತ್ತೇನೆ.

ಅಳಗುಂಡಿ ಅಂದಾನಯ್ಯ

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group