ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿ
ಮೂಡಲಗಿ – ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ ಅನ್ನದಾನೇಶ್ವರ ಶ್ರೀಗಳ ಪಾರ್ಥಿವ ಶರೀರ ಬೆಳಗಾವಿಯಿಂದ ಶನಿವಾರ ರಾತ್ರಿ ಬಂಡಿಗಣಿ ಶ್ರೀ ಮಠಕ್ಕೆ ಆಗಮಿಸಿತು.
ವೀರಶೈವ ಸಂಪ್ರದಾಯದ ವಿಧಾನಗಳೊಂದಿಗೆ ಶ್ರೀಮಠದ ಆವರಣದಲ್ಲಿ ಅನ್ನದಾನೇಶ್ವರ ಶ್ರೀಗಳ ಅಂತ್ಯ ಸಂಸ್ಕಾರವು ಶನಿವಾರ ಸಂಜೆ ನೆರವೇರಿತು.
ಬೆಳಗ್ಗೆಯಿಂದ ಶ್ರೀಮಠದ ಆವರಣದಲ್ಲಿ ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಂಜೆ 4 ಗಂಟೆಗೆ ಅಂತ್ಯ ಸಂಸ್ಕಾರ ಪ್ರಾರಂಭವಾಗಬೇಕಿತ್ತು, ಸಮಾಧಿ ಅಗೆಯುವಾಗ ಬಂಡೆಗಲ್ಲು ಅಡ್ಡಬಂದ ಕಾರಣ, ಅಂತ್ಯಸಂಸ್ಕಾರ ವಿಳಂಬವಾಯಿತು. ರಾತ್ರಿ 7.30ರ ಸಮಯಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿ ನಾಡಿನ ಅನೇಕ ಹರ ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನವಾದರು.
ಶ್ರೀಶೈಲ ಜಗದ್ಗುರುಗಳು ಮಾತನಾಡಿ, ಅನ್ನದಾನೇಶ್ವರ ಶ್ರೀಗಳು ದಾಸೋಹಕ್ಕೆ ಹೆಸರುವಾಸಿಯಾಗಿದ್ದರು. ಕರ್ನಾಟಕ, ಮಹಾರಾಷ್ಟ್ರ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನದಾಸೋಹ ನೆರವೇರಿಸಿ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ದಾಸೋಹ ರತ್ನ, ಸೇರಿ ಸಾಕಷ್ಟು ಪ್ರಶಸ್ತಿ ಪಡೆದವರಾಗಿದ್ದರು. ಕಬೀರದಾಸರು ಹೇಳಿದಂತೆ ಮಗು ಹುಟ್ಟುವಾಗ ಅಳುತ್ತಿದ್ದರೆ ನಾವೆಲ್ಲರೂ ನಗುತ್ತಿರುತ್ತೇವೆ. ಆದರೆ ಇಂದು ಸಮಾಜಕ್ಕೆ ಏನಾದರೊಂದು ಸಾಧನೆ ಮಾಡಿ ನಗುತ್ತಾ ಹೋದರೆ ಜನರು ಅಳುತ್ತಿರಬೇಕು ಹಾಗೆ ಬಂಡಿಗಣಿ ಶ್ರೀಗಳು ಭಕ್ತರ ಮನದಲ್ಲಿ ದಾಸೋಹ ಚಕ್ರವರ್ತಿ ಎಂಬ ಬಿರುದು ಪಡೆದುಕೊಂಡು ಹೋದರು. ಅವರು ಇರುವಾಗ ಪರಮಾತ್ಮನ ಸ್ವರೂಪಿಗಳಾಗಿದ್ದರು. ಈಗ ಅವರೇ ಪರಮಾತ್ಮರಾಗಿ ಹೋಗಿದ್ದಾರೆ ಎಂದರು.
ಬಂಡಿಗಣಿ ಗ್ರಾಮದ ಅನ್ನದಾನೇಶ್ವರ ಶ್ರೀಗಳ ಅಂತಿಮ ಯಾತ್ರೆ ವೇಳೆ ಶ್ರೀಶೈಲ ಜಗದ್ಗುರು ಮಾತನಾಡಿದರು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಬಬಲಾದಿ ಚಿಕ್ಕಯ್ಯ ಅಜ್ಜನವರು, ಹಿಪ್ಪರಗಿ ಪ್ರಭು ಬೆನ್ನಾಳ ಮಹಾರಾಜರು, ಶಿವಾಪೂರ ಅಡವಿ ಸಿದ್ದರಾಮ ಮಹಾಸ್ವಾಮಿಗಳು, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಸಾರವಾಡ ಪೂಜ್ಯರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಪಿ. ರಾಜು, ವಿ.ಪ. ಸದಸ್ಯ ಹಣಮಂತ ನಿರಾಣಿ, ಸರ್ವೋತ್ತಮ ಜಾರಕಿಹೊಳಿ, ಮುಖಂಡ ಸಿದ್ದು ಕೊಣ್ಣೂರ ಸೇರಿ ರಾಜ್ಯ-ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು. ಮುಖಂಡರು ಪಾಲ್ಗೊಂಡಿದ್ದರು.
ಭಕ್ತರ ಅಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಸಂಸ್ಕಾರಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ಸ್ವತಃ ಭಕ್ತರು ಅನ್ನ ದಾಸೋಹ ಏರ್ಪಡಿಸಿದ್ದರು. ಕುಡಿಯುವ ನೀರು, ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.

